ಭಾಗ – 400
ಭರತೇಶ ಶೆಟ್ಟಿ ,ಎಕ್ಕಾರ್

ಶಲ್ಯನು ಹೊರಟು ಹೊರ ನಡೆಯುತ್ತಿರುವಾಗ ಓಡಿ ಬಂದು ಅಡ್ಡಲಾಗಿ ಕೈ ಮುಗಿದು ನಿಂತನು ಕುರು ಕುಲ ತಿಲಕ ಕೌರವ. ತಡೆದು ನಿಲ್ಲಿಸಿ, ವಿನಮ್ರನಾಗಿ “ಶಲ್ಯರಾಜ! ನೀನು ಧರ್ಮಾಧರ್ಮಗಳನ್ನು ಹೇಗೆ ತಿಳಿದಿರುವೆಯೊ ಅದು ಹಾಗೆಯೆ ಸರಿ. ನಮ್ಮಿಂದ ನಿಮಗೆ ಏನಾದರು ಅಪಚಾರವಾಗಿದ್ದರೆ ಮೊತ್ತ ಮೊದಲಾಗಿ ಕ್ಷಮೆ ಬೇಡುತ್ತೇನೆ. ಜನೇಶ್ವರಾ! ಈ ಸಮಯದಲ್ಲಿ ನನ್ನ ಅಭಿಪ್ರಾಯಗಳನ್ನು ಕೇಳಿಸಿಕೊಳ್ಳಬೇಕಾಗಿ ನಿಮ್ಮಲ್ಲಿ ಪ್ರಾರ್ಥಿಸುತ್ತಿದ್ದೇನೆ. ಮಾದ್ರೇಶ್ವರಾ! ಕರ್ಣನು ನಿನಗಿಂತ ಖಂಡಿತವಾಗಿಯೂ ಅಧಿಕನಲ್ಲ. ನಿನ್ನ ವಿಷಯದಲ್ಲಿ ನಮಗೆ ಯಾವ ಸಂದೇಹವೂ ಇಲ್ಲ. ಮಾದ್ರದೇಶಕ್ಕೆ ಸ್ವಾಮಿಯಾದ ನಿನ್ನ ಕೀರ್ತಿ, ಸಾಮರ್ಥ್ಯಗಳನ್ನು ಸುಳ್ಳಾಗಿಸುವ ಅಥವಾ ಕಡೆಗಣಿಸುವ ಕಾರ್ಯವನ್ನು ಎಂದಿಗೂ ಮಾಡಲಾರೆವು. ಪುರುಷ ಶ್ರೇಷ್ಟನಾದ ನಿಮ್ಮ ವಂಶಜರು, ಪೂರ್ವಜರೆಲ್ಲರೂ ಸತ್ಯವನ್ನು ನುಡಿಯುವವರು – ಪಾಲಿಸುವವರು. ಆ ಬಗ್ಗೆ ನೀವು ನಮ್ಮ ಪಕ್ಷ ಸೇರುವಲ್ಲಿ ನಡೆದು ಹೋದ ಪ್ರಕರಣವೂ ಸಾಕ್ಷಿಯಾಗಿದೆ. ಸತ್ಯವಚನ ಪಾಲಕರಾದ ನೀವು ಆಡಿದ ಮಾತಿಗೆ ಬದ್ದರಾಗಿ ನಮ್ಮ ಪಕ್ಷ ಸೇರಿಕೊಂಡಿದ್ದೀರಿ. ನಮಗದು ಮಹಾ ಸೌಭಾಗ್ಯವಾಗಿದೆ. ಸತ್ಯ ನಿಷ್ಟರಾಗಿರುವುದರಿಂದಲೆ ನಿಮ್ಮನ್ನು ಜಗತ್ತು ‘ಆರ್ತಾಯನಿ’ ಎಂದು ಕರೆಯುತ್ತದೆ. ಮಾನಧನ ನಿಧಿಯೆ, ನೀವು ಯುದ್ಧದಲ್ಲಿ ಶತ್ರುಗಳ ದಾರಿಗೆ ಮುಳ್ಳಿನಂತೆ ಪರಿಣಮಿಸಿ ಮುಂದೊತ್ತಿ ಹೋಗಗೊಡದ ಸಾಹಸಿಯೂ ಆಗಿ ಶಲ್ಯ (ಮುಳ್ಳು) ಎಂಬ ಅನ್ವರ್ಥ ನಾಮಕ್ಕೆ ಸಮರ್ಥನೆಯ ಉಪಾದಿಯಲ್ಲಿ ಬದುಕಿ ತೋರಿದ ಅಪ್ರತಿಮ ವೀರ ಎಂಬುವುದು ಶತಸಿದ್ಧ ಸತ್ಯ. ಭೂರಿದಕ್ಷಿಣನೆ! ಧರ್ಮ – ಧಾರ್ಮಿಕ ಆಚರಣೆಗಳಲ್ಲೂ ಪ್ರಾಮಾಣಿಕರಾಗಿದ್ದು, ಸಾಕಷ್ಟು ಯಾಗಯಜ್ಞಗಳನ್ನು ಮಾಡಿಸಿ ಹೇರಳವಾದ ಭೂರಿ ದಕ್ಷಿಣೆಗಳನ್ನಿತ್ತ ಕೀರ್ತಿ ಹೊಂದಿದವರಾಗಿದ್ದೀರಿ. ಇದೆಲ್ಲ ನಿಮ್ಮ ವ್ಯಕ್ತಿಗತ ಶ್ರೇಯಸ್ಸಿನ ವಿಚಾರಗಳಾದರೆ, ಶೌರ್ಯದಲ್ಲಿ ಕರ್ಣನಾಗಲಿ, ನಾನಾಗಲಿ ನಿಮಗೆ ಸಮಾನರಲ್ಲ. ಒಬ್ಬ ವೀರ ಮಾತ್ರ ನೀವಾಗಿರದೆ ಸಮರ್ಥ ಸಾರಥಿಯಾಗಿ ‘ರಥಕಲ್ಪ’, ‘ಅಶ್ವಹೃದಯ’ ವಿದ್ಯೆ ಪಾರಂಗತರಾಗಿರುವ ಸಮರ್ಥ ಸಾರಥಿಯೂ ಆಗಿರುವಿರಿ. ನಮ್ಮ ಪಕ್ಷದಲ್ಲಿ ರಥ ನಡೆಸಬಲ್ಲ ಸಾರಥಿಗಳು ಬಹಳಷ್ಟು ಮಂದಿ ಇದ್ದಾರಾದರೂ, ವಾಸುದೇವ ಕೃಷ್ಣನಿಗೆ ಸಮಾನರಾಗಿ ಸಾರಥ್ಯ ಮಾಡಬಲ್ಲವರು ನಿಮ್ಮನ್ನು ಬಿಟ್ಟರೆ ಯಾರೂ ಇಲ್ಲ. ಮಾದ್ರಾಧೀಶರೇ! ನಮ್ಮ ಕರ್ಣ ಅರ್ಜುನನಿಗಿಂತಲೂ ಅಧಿಕ ಗುಣಗಳನ್ನು ಹೊಂದಿದವನು ಆಗಿದ್ದಾನೆ. ಶಸ್ತ್ರಾಸ್ತ್ರ ಸಂಪಾದನೆಯಿಂದಷ್ಟೆ ಅರ್ಜುನ ತುಸು ಮಿಗಿಲಾಗಿ ಕಂಡರೂ, ಬಿಲ್ವಿದ್ಯೆಯಲ್ಲಿ ಕರ್ಣ ಅರ್ಜುನನಿಂತಲೂ ಉತ್ತಮ ಯೋಧನು ಹೌದು. ಹಾಗೆಯೆ ನೀವು ವಾಸುದೇವನಿಗಿಂತ ಸಾರಥ್ಯದಲ್ಲಿ ಅಧಿಕ ಜ್ಞಾನ ಸಂಪನ್ನರು. ಕೃಷ್ಣ ಸಾರಥ್ಯದಲ್ಲಿ ಮಿಗಿಲಾದವನು ಆಗಿದ್ದರೂ, ತಮ್ಮಂತೆ ಅಶ್ವಲಕ್ಷಣ ಬಲ್ಲವನಲ್ಲ. ಸಮಗ್ರವಾಗಿ ತುಲನೆ ಮಾಡಿ ತರ್ಕಿಸಿದರೆ ನೀವು ವಾಸುದೇವ ಕೃಷ್ಣನಿಗಿಂತಲೂ ಅಧಿಕರಾಗಿರುವಿರಿ. ಮಾತ್ರವಲ್ಲ ಅಶ್ವಜ್ಞಾನ ಮತ್ತು ಬಲ ಈ ಎರಡೂ ವಿಭಾಗದಲ್ಲೂ ಕೃಷ್ಣನನ್ನು ಮೀರಿಸಿರುವ ಶ್ರೇಷ್ಟ ಮಹಾರಥಿ ನೀವು ಎಂಬ ಸತ್ಯವನ್ನು ಲೋಕ ತಿಳಿದಿದೆ. ಹೀಗಿರುವಾಗ ಮಹಾನ್ ಬಿಲ್ಗಾರನಾದ ಕರ್ಣ ಮತ್ತು ಲೋಕೋತ್ತಮ ಸಾರಥಿಯಾದ ನೀವೀರ್ವರು ಏಕರಥದಲ್ಲಿ ಸ್ಥಿತರಾದರೆ ಕೃಷ್ಣಾರ್ಜುನರಿಗಿಂತ ಉತ್ಕೃಷ್ಟ ಜೋಡಿಯಾಗಿ ನಿಬ್ಬೆರಗಾಗಿಸುವ ಸಾಹಸಕ್ಕೆ ಕಾರಣರಾಗಬಲ್ಲಿರಿ. ಇದು ಸಾಧ್ಯವಾಗುವುದು ನೀವು ಸಾರಥಿಯಾದರೆ ಮಾತ್ರ. ನೀವಿಲ್ಲದಿದ್ದರೆ ಕರ್ಣ ಇಂದಿನ ದಿನ ಕೈ ಸೋತು ಶಿಬಿರ ಸೇರಿದಂತೆ ನಾಳಿನ ದಿನವೂ ಸೋಲುತ್ತಾನೆ ಹೊರತು ಗೆಲ್ಲಲಾರ. ಗುರುಗಳಿಂದ ತಿಳಿದಿರುವ ಒಂದು ಪುರಾಣ ಕಥಿತ ಪ್ರಕರಣವನ್ನು ಹೇಳ ಬಯಸುತ್ತೇನೆ. ಹಿಂದೆ ತ್ರಿಪುರಗಳನ್ನು ಸೃಷ್ಟಿಸಿ ರಾಕ್ಷಸತ್ರಯರು ಅಜೇಯರಾಗಿ ಮೆರೆಯುವ ಸಮಯ, ದೇವತೆಗಳ ಮೊರೆಯನ್ನಾಲಿಸಿ ತ್ರಿಪುರಾರಿಗಳ ವಧೆಗಾಗಿ ಹೊರಟು ಮಹಾದೇವ ಪರಮೇಶ್ವರ ಸಿದ್ಧನಾಗಿದ್ದನು. ಆಗ ಆತನ ರಥದ ಸಾರಥ್ಯ ಮಾಡಿರುವುದು ಸಾಕ್ಷಾತ್ ಪರಬ್ರಹ್ಮ. ಇಲ್ಲಿ ಸೂತಕಾರ್ಯ ಮಾಡಿದೆ ಎಂಬ ಕಾರಣಕ್ಕೆ ತ್ರಿಮೂರ್ತಿಗಳಲ್ಲೋರ್ವ, ಹರಿಹರ ಸಮಾನರಾದ ಅಜನು ಅಪಮಾನಿತನಾದೆ ಎಂಬಂತೆ ತಿಳಿಯಲಿಲ್ಲ. ಬದಲಾಗಿ ಅಭೇದ್ಯ ತ್ರಿಪುರ ಮಥನ ಕಾರ್ಯ ಪರಮೇಶ್ವರನಿಗೆ ಸುಲಭ ಸಾಧ್ಯವಾದದ್ದು ಬ್ರಹ್ಮ ದೇವರ ಅದ್ಬುತ ಸಾರಥ್ಯದ ಕಾರಣದಿಂದ. ಹೀಗಿರುವಾಗ ನೀವು ಸಾರಥಿಯಾದರೆ ಕರ್ಣನಿಗೆ ಬಲ ಬರುತ್ತದೆಯೆ ಹೊರತು, ಯಥಾರ್ಥದಲ್ಲಿ ಕರ್ಣ ಅನ್ಯ ಸಾರಥಿಯ ಜೊತೆ ಏನೂ ಸಾಧಿಸಲು ಸಾಧ್ಯವಾಗದು. ನಿಮ್ಮ ಚಾಕಚಕ್ಯತೆ ಮತ್ತು ವಿಶಿಷ್ಟ ಜ್ಞಾನದ ಅಗತ್ಯ ಕೌರವ ಪಕ್ಷಕ್ಕಿದೆ. ದಯೆ ತೋರಿ ಮಹಾತ್ಮರಾದ ತಾವು ತಮ್ಮ ಸೇವೆಯನ್ನು ನಮಗೊದಗಿಸಿ ಕೊಡಬೇಕು.” ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾ ಶಲ್ಯನನ್ನು ಹೊಗಳತೊಡಗಿದನು.
ಕೌರವೇಶ್ವರ ತನ್ನ ಬಗ್ಗೆ ಈ ರೀತಿ ಶ್ಲಾಘಿಸುವಾಗ ಶಲ್ಯ ಭೂಪತಿ ಉಬ್ಬಿ ಹೋದನು. ಕೋಪಿಷ್ಟನಾಗಿ ಕೆರಳಿದ್ದವನು, ಸಂತುಷ್ಟನಾಗಿ ಅರಳಿದನು. ತನ್ನ ಯೋಗ್ಯತೆಗೆ ತಕ್ಕ ಸನ್ಮಾನ, ತಾನು ಕಲಿತಿರುವ ವಿದ್ಯೆಗೆ ವೇದಿಕೆ ನೀಡುತ್ತಿದ್ದೀರಿ. ಇಲ್ಲಿ ಕರ್ಣ ಗೆದ್ದರೆ ಅದು ನನ್ನಿಂದಾಗಿ ಹೊರತು, ಕರ್ಣ ಏನೂ ಸಾಧಿಸಲಾರ ಎಂಬ ಭಾವ ಆತನ ಮನವನ್ನಾವರಿಸಿತು. ಕೌರವನನ್ನು ಉದ್ದೇಶಿಸಿ ಹೇಳ ತೊಡಗಿದ “ಹೇ ಕೌರವಾ! ನೀನು ನನ್ನ ಬಗ್ಗೆ ಸತ್ಯವನ್ನು ತಿಳಿದಿರುವೆ, ಮತ್ತು ಅದನ್ನು ಯಥಾವತ್ತಾಗಿ ಅರಿತು ಆಡಿರುವೆ. ನನಗೆ ತಕ್ಕುದಾದ ಮರ್ಯಾದೆಯನ್ನು ನೀಡಿರುವೆ. ಹೀಗಿರುವಾಗ ನಾನು ಕರ್ಣನ ಸಾರಥಿಯಾಗುವಲ್ಲಿ ಯಾವುದೆ ಆಕ್ಷೇಪ ಮಾಡಲಾರೆ. ಆದರೆ… ನನ್ನದೊಂದು ನಿಬಂಧನೆಯಿದೆ. ನಾನು ಸಾರಥ್ಯ ಪೀಠದಲ್ಲಿ ಉಪಸ್ಥಿತನಿರುವಾಗ ಮಹಾರಥಿಯಾದ ನನಗೆ ಪೂರ್ಣ ಸ್ವಾತಂತ್ರ್ಯ ಬೇಕು. ಹೇಗೆ ಅರ್ಜುನ ಆತನ ಸಾರಥಿ ಕೃಷ್ಣ ನುಡಿದಂತೆ ಒಪ್ಪಿ ನಡೆಯುತ್ತಾನೊ, ಅಂತೆಯೆ ಕರ್ಣ ನನ್ನ ಆಜ್ಞಾನುವರ್ತಿಯಾಗಿ ವ್ಯವಹರಿಸಬೇಕು. ಈ ಕರ್ಣನ ಸಾರಥಿಯಾಗಿ ಕಾರ್ಯ ಮಾಡಬೇಕಾದರೆ, ನನಗೆ ಇಚ್ಚೆ ಬಂದಂತೆ ನಾನು ಮಾತನಾಡುತ್ತಾ ಸಾರಥ್ಯ ನಿರ್ವಹಿಸುವೆ. ಆಗ ಕರ್ಣ ನನ್ನನ್ನು ಆಕ್ಷೇಪಿಸದೆ ನನ್ನ ನಿರ್ದೇಶನವನ್ನು ಪಾಲಿಸತಕ್ಕದ್ದು. ನಾನು ವಾಸುದೇವನಿಗೆ ಮಿಗಿಲಾದ ಸಾರಥಿಯಾಗಿ ಕರ್ಣನನ್ನು ಪಾರ್ಥನಿಗೆ ಸಮದಂಡಿಯಾಗಿ ಸ್ಥಾಪಿಸುವಲ್ಲಿ, ನನಗೆ ಅಧೀನನಾಗಿ ಕರ್ಣ ವ್ಯವಹರಿಸಬೇಕು. ಹೀಗಿದ್ದರೆ ನಾನು ಶ್ರೇಷ್ಟ ರಥಿಕನಾದ ಕರ್ಣನನ್ನು ವಾಸುದೇವ ಧನಂಜಯರ ದಾಳಿಯಿಂದ ಸರ್ವವಿಧವಾಗಿಯೂ ಸಂರಕ್ಷಿಸಿ ಕಾಪಾಡುತ್ತಾ ಬರುವೆ. ಪರಿಣಾಮ ಕರ್ಣ ಅಜೇಯನಾಗಿ ಯುದ್ದ ಗೆದ್ದು ಕೊಡುವಲ್ಲಿ ಪೂರ್ಣ ಸಹಕಾರಿಯಾಗುತ್ತೇನೆ. ಹಿಂದೆಂದೂ ಆಗಿರದ ರಥಿ – ಸಾರಥಿ ಸಮಾಗಮ ನಮ್ಮಿಬ್ಬರ ಹೊಂದಾಣಿಕೆಯಿಂದ ಮೂಡಿ ಬಂದು, ಲೋಕ ಲೋಕಗಳಲ್ಲೂ ಸುಪ್ರಸಿದ್ದನಾಗುವಂತೆ ನಾನು ಮಾಡಿ ತೋರಿಸುವೆ. ನನ್ನ ಈ ನಿರ್ಬಂಧವನ್ನು ಮೀರಿ ಕರ್ಣನೇನಾದರು ಉದ್ಧಟತನ ತೋರಿದರೆ, ನಾನೊಬ್ಬ ಕೇವಲ ಸಾರಥಿ, ಆತ ರಥಿಕ ಎಂಬಂತೆ ಅತಿಕ್ರಮಿಸಲು ಹೊರಟರೆ, ಆ ಕ್ಷಣ ನಾನು ರಥದ ಕುದುರೆಗಳ ವಾಘೆಯನ್ನು ಬಿಸುಟು ಇಳಿದು ಬರುತ್ತೇನೆ. ಈ ಶರ್ತ ಬದ್ಧ ಒಪ್ಪಂದಕ್ಕೆ ಕರ್ಣ ಒಪ್ಪುವುದಾದರೆ ಮಾತ್ರ ನಾನು ಸಾರಥಿಯಾಗುವೆ. ನನಗೆ ನನ್ನ ಸ್ವಪ್ರತಿಷ್ಟೆಯೂ ನಿನ್ನ ಜಯದಷ್ಟೆ ಮುಖ್ಯ ವಿಚಾರವಾಗಿದೆ” ಎಂದನು.
ಶಲ್ಯ ಭೂಪತಿಯ ಶರತ್ತು ಬದ್ಧ ಸಾರಥ್ಯದ ಒಪ್ಪಿಗೆಯನ್ನು ದುರ್ಯೋಧನ ಹಾಗೂ ಕರ್ಣ ಸಮ್ಮತಿಸಿದರು. ಕರ್ಣನೂ ಶಲ್ಯನ ಮಾತಿನಂತೆ, ಯುದ್ಧ ನಡೆಯ ಮಾರ್ಗದರ್ಶನ ಅನುಸರಿಸಿ ಯುದ್ಧ ಮಾಡಲು ಒಪ್ಪಿದನು.
ಕರ್ಣ – ದುರ್ಯೋಧನನನ್ನು ಕರೆದು “ಮಿತ್ರಾ ಕೌರವಾ! ಶಲ್ಯ ಭೂಪತಿ ನನಗೆ ಸಾರಥಿಯಾಗಿ ದೊರೆತಿರುವ ಈ ಸಮಯ ನನ್ನ ಪ್ರತಿಜ್ಞಾ ಪೂರಣೆ ಮಾಡಿ ತೋರಿಸುವೆ. ಆ ಅರ್ಜುನನ ವಧೆಗೈದು ಹಸ್ತಿನೆಯ ಸಿಂಹಾಸನ ನಿನಗೊಪ್ಪಿಸಿ ಕೊಡುವೆ. ಒಂದೋ ಅರ್ಜುನನ ವಧೆಗೈದು ಬರುವೆ. ಅದು ಅಸಾಧ್ಯವಾದ ಪಕ್ಷ ,ನಾನೇ ಆ ಅರ್ಜುನನಿಗೆ ಆಹುತಿಯಾಗಿ ಪ್ರಾಣ ತ್ಯಾಗ ಮಾಡುವೆ ಹೊರತು ಹಿಂದಿರುಗಿ ಬರಲಾರೆ” ಎಂಬ ಭೀಷಣವಾದ ಪ್ರತಿಜ್ಞೆಗೈದನು.
ಮುಂದುವರಿಯುವುದು…



















