ಭಾಗ 398
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೯೮ ಮಹಾಭಾರತ
ಕೃಷ್ಣನ ಸಂಕಲ್ಪ ಏನು? ಉದ್ದೇಶವೇನು ಎಂದು ಅರಿತುಕೊಂಡ ಧನುರ್ಧರ ಧನಂಜಯ ಅಶ್ವತ್ಥಾಮನಿಗೆ ಇಲ್ಲಿಂದ ಮುಂದೆ ಸಾಗಿದ ಯುದ್ದದಲ್ಲಿ ಅವಕಾಶವನ್ನು ನೀಡಲಿಲ್ಲ. ಗುರುಪುತ್ರ ಅತಿವೇಗದಿಂದ ಶರಗಳನ್ನು ಹೂಡುತ್ತಿದ್ದರೂ, ಆತನ ಒಂದು ಶರ ಪ್ರಯೋಗವಾಗುವ ಅತಿ ಕಿರಿದಾದ ಅವಧಿಯೊಳಗೆ ಪಾರ್ಥ ಎರಡು ಶರಗಳನ್ನು ಸಂಧಾನ ಮಾಡಿಯಾಗಿರುತ್ತಿತ್ತು. ಒಂದು ನಾರಾಚ ಅಶ್ವತ್ಥಾಮ ಪ್ರಯೋಕ್ತ ಅಂಬುವನ್ನು ನಿರಸನಗೊಳಿಸಿದರೆ ಮತ್ತೊಂದು ಸಾಗಿ ಆತನ ಕಾಯ ಖಂಡನ ಗೊಳಿಸುತ್ತಿತ್ತು. ಹೀಗೆ ಅಲ್ಪ ಸಮಯದಲ್ಲಿ ಅಶ್ವತ್ಥಾಮನ ಅಂಗಾಂಗಗಳು ಹೀನಾಯವಾಗಿ ಗಾಯಗೊಂಡವು. ಇಷ್ಟಾಗುತ್ತಲೆ ಸಾರಥಿಯ ರಥ ನಿಯಂತ್ರಣ ತಪ್ಪಿಸಲು ಕುದುರೆಗಳ ವಾಘೆಯನ್ನು ಕತ್ತರಿಸಿ ಬಿಟ್ಟ ಪಾರ್ಥ, ಅಶ್ವಗಳು ಅಂಜುವಂತೆ, ಅಂಜಿ ಹೆದರಿ ಓಡುವಂತೆ ಬಾಣ ಪ್ರಯೋಗಿಸ ತೊಡಗಿದನು. ಅವುಗಳ ಮೈಮೇಲೆ ಗೀರಲ್ಪಟ್ಟ ಗಾಯಗಳೂ ಆದವು. ಬೆದರಿದ ಕುದುರೆಗಳು ಎಲ್ಲೆಂದರಲ್ಲಿ ರಥ ಎಳೆಯುತ್ತಾ, ದಿಕ್ಕೆಟ್ಟು ಓಡಿದಾಗ ಅನಿಯಂತ್ರಿತನಾದ ಅಶ್ವತ್ಥಾಮ ಯೋಚಿಸತೊಡಗಿದನು. ನಾನು ಯಾವ ಮಟ್ಟದ ಸಾಹಸ ತೋರಿದರೂ ಕೃಷ್ಣಾರ್ಜುನರನ್ನು ಮಣಿಸಲಾಗದು. ಇಂದಿನ ದಿನ ಸುಲಲಿತವಾಗಿ ನನ್ನನ್ನು ಮತ್ತೆಂದೂ ಚೇತರಿಸದಂತೆ ಮಾಡಬಹುದಾದ ಎಲ್ಲಾ ಸಾಧ್ಯತೆಗಳು ಪಾರ್ಥನಿಗಿದ್ದರೂ, ಕ್ಷಮಿಸಿದನೊ ಏನೋ ಎಂಬಂತೆ ಆತ ಜೀವದಾನವಿತ್ತು ನನ್ನನ್ನು ಬಿಟ್ಟಿದ್ದಾನೆ. ನಾನೀಗ ಉಸಿರಾಡುತ್ತಿದ್ದರೆ ಅದು ಆತನಿಂದ ನನಗೊದಗಿದ ಪ್ರಾಣಭಿಕ್ಷೆ ಎಂಬಂತೆ ಅವಲೋಕಿಸುತ್ತಾ, ತನ್ನ ಅಸಹಾಯಕ ಸ್ಥಿತಿಗಾಗಿ ಮರುಗಿದನು. ರೋಷಾವೇಷ್ಟಿತನಾದರೂ, ತಡೆದು ಸೈರಿಸಿ ಸುಮ್ಮನುಳಿಯಬೇಕಾಯ್ತು. ಕಾರಣ ಸರ್ವಾಂಗಗಳೂ ಗಾಯಗೊಂಡು ನಿಸ್ತೇಜನಾಗಿದ್ದಾನೆ. ಆ ಬಳಿಕ ರಣಾಂಗಣದಿಂದ ಸರಿದು ಮಂತ್ರೌಷಧ ಚಿಕಿತ್ಸೆಗಳಿಂದ ಮತ್ತು ದೈವಯೋಗ ಬಲದಿಂದ ಶರೀರದ ಗಾಯಗಳನ್ನು ಉಪಶಮನ ಗೊಳಿಸುತ್ತಾ ವಿಶ್ರಾಂತನಾದನು.
ಅಶ್ವತ್ಥಾಮ ತೊಲಗಿದ ಕೂಡಲೆ ಅರ್ಜುನನ ರಥ ಪ್ರವಾಹದಂತೆ ಮುನ್ನುಗ್ಗುತ್ತಿರುವ ಅಳಿದುಳಿದ ಸಂಶಪ್ತಕ ವೀರರೆಡೆ ತಿರುಗಿತು. ತನ್ನ ವೇಗವನ್ನು ಸಡಿಲಿಸದೆ ಅತ್ಯುಗ್ರನಾಗಿ ಎರಗಿ ಇನ್ನೆಂದೂ ಈ ಸಂಶಪ್ತಕರು ಕಾಲಹರಣಕ್ಕೆ ಕಾರಣರಾಗಬಾರದು ಎಂದು ಅವರೆಲ್ಲರ ಪ್ರಾಣಹರಣ ಕಾರ್ಯಕ್ಕೆ ತೊಡಗಿ ಪೂರೈಸಿ ಬಿಟ್ಟನು.
ಇಷ್ಟಾಗುತ್ತಲೆ ಮಗಧ ದೇಶದ ವಿಕ್ರಮಿಯಾದ ದಂಡಧಾರ ಮತ್ತು ದಂಡನರು ಕೃಷ್ಣಾರ್ಜುನರಿಗೆ ಎದುರಾದರು. ಗಜ ಸೇನೆಯನ್ನು ಹೊಂದಿ ಅತಿಬಲ ಸಮನ್ವಿತರಾಗಿ ಪಾಂಡವ ಸೇನೆಯನ್ನು ನಾಶಗೈಯುತ್ತಿದ್ದಾರೆ ಇವರೀರ್ವರು. ಯುದ್ಧ ಶಿಕ್ಷಣದಲ್ಲಿ ಮತ್ತು ಶತ್ರುಗಳನ್ನು ಮಥಿಸಬಲ್ಲ ಗಜಸೇನಾ ಬಲದಲ್ಲಿ ಭಗದತ್ತನಂತೆಯೆ ಪರಾಕ್ರಮಿಗಳು. ಉಭಯ ವೀರರು ಸ್ವಲ್ಪಸಮಯ ಪಾರ್ಥನಿಗೆ ಮಹತ್ತರವಾದ ಸವಾಲಾಗಿ ನಿಂತು ಹೋರಾಡಿದರು. ಅತ್ಯುತ್ಕೃಷ್ಟ ರೀತಿಯಲ್ಲಿ ಹೋರಾಡುತ್ತಿದ್ದ ಇವರೀರ್ವರೆದುರು ಅರ್ಜುನನೂ ಅಷ್ಟೆ ಉಗ್ರತರವಾದ ಕದನಕಲಿಯಾಗಿ ಕಾದಾಡಬೇಕಾಯಿತು. ಸಮದಂಡಿಗಳಾಗಿ ನಿಂತ ಇವರೀರ್ವರನ್ನೂ ಪಾರ್ಥ ಅದ್ವಿತೀಯ ಸಾಹಸ ಮೆರೆದು ವಧಿಸಿದನು.
ಮತ್ತೊಂದೆಡೆ ಧರ್ಮರಾಯನಿಗೂ ದುರ್ಯೋಧನನಿಗೂ ಸಮರ ಸಾಗುತ್ತಿದೆ. ಸೇನಾನಾಯಕರಲ್ಲದಿದ್ದರೂ ಉಭಯ ಪಕ್ಷಗಳ ನೇತಾರರು ಪರಸ್ಪರ ಎದುರಾಗಿ ಹೋರಾಡುವಾಗ, ವಿಭಿನ್ನವಾದ ಕುತೂಹಲ ಸೇನೆಯ ಮನದಲ್ಲಾಗುತ್ತಿದೆ. ಕೊನೆಗೆ ಧರ್ಮಜ ಮೆರೆಯುತ್ತಾ ವಿಜ್ರಂಭಿಸಿ ಕೌರವನನ್ನು ಪರಾಜಿತನನ್ನಾಗಿಸಿದ. ನಮ್ಮ ಅಣ್ಣ ಕೌರವ ಸೋತನೆಂದು ದುಶ್ಯಾಸನನ ಜೊತೆ ಬಹುಮಂದಿ ಕೌರವ ವೀರರೆಲ್ಲರೂ ಸೇರಿ ಧರ್ಮರಾಯನನ್ನು ಆಕ್ರಮಿಸಿದಾಗ ದೃಷ್ಟದ್ಯುಮ್ನ ಮತ್ತು ಭೀಮ ರಕ್ಷಣೆಗೊದಗಿಬಂದರು. ಕರ್ಣನು ಪರಾಜಿತನಾಗಿದ್ದ ಕಾರಣ ನಕುಲನೂ ತಿರುಗಿ ಧರ್ಮರಾಯನ ರಕ್ಷಣೆಗಾಗಿ ಬಂದನು. ಆ ಕಡೆಯಿಂದ ಸೇನಾಪತಿ ಕರ್ಣನು ಕೌರವನ ರಕ್ಷಣೆಗಾಗಿ ಧಾವಿಸಿದನು. ಕರ್ಣ ಎದುರಾಗಿ ಬಂದಾಗ ನಕುಲ ಮತ್ತೊಮ್ಮೆ ಕರ್ಣನನ್ನು ಆಹ್ವಾನಿಸಿ ಅವರೊಳಗೆ ಯುದ್ದಾರಂಭವಾಯಿತು. ಇಂದಿನ ದಿನ ಅದ್ಬುತ ಸಾಹಸಿಗನಾಗಿ ಮೆರೆಯುತ್ತಿದ್ದ ನಕುಲ ತನ್ನನ್ನೆದುರಿಸಿ ಹೋರಾಡುತ್ತಿದ್ದ ಕರ್ಣನ ರಥದ ಸಾರಥಿಯನ್ನು ಕೊಂದು ಬಿಟ್ಟನು. ರಥವನ್ನು ಸಾವರಿಸಿಕೊಂಡು ಯುದ್ದ ನಿರತನಾದ ಕರ್ಣ ನಕುಲನಿಂದ ಸುಲಭವಾಗಿ ಸೋಲಿಸಲ್ಪಟ್ಟನು. ನಕುಲ ಕ್ರೋಧಾವಿಷ್ಟತೆಯಿಂದ ಖಡ್ಗಧಾರಿಯಾಗಿ ಕರ್ಣನನ್ನು ವಧಿಸಲು ಮುಂದೊತ್ತಿ ಸಾಗಿದನು. ಆಗ ಧರ್ಮರಾಯ ನಕುಲನನ್ನು ತಡೆದು “ನೀನು ಕರ್ಣನನ್ನು ಈ ಸ್ಥಿತಿಯಲ್ಲಿ ವಧಿಸಬೇಡ.” ಕರ್ಣನ ವಧೆಗೈಯುವ ಪಾರ್ಥನ ಪ್ರತಿಜ್ಞೆಯಿದೆಯೆಂದೋ! ಇಲ್ಲ ಸಾರಥಿಯಿಲ್ಲದೆ, ಸೋತಿರುವ ವೀರರನನ್ನು ವಧಿಸ ಕೂಡದು ಎಂಬ ಧರ್ಮರಾಯನ ಧರ್ಮಪ್ರಜ್ಞೆಯ ನಿಲುಮೆಯೋ! ಯಾವುದೊ ಒಂದು ತಡೆಯಾಗಿ ಕರ್ಣ ಬದುಕುಳಿದನು. ಈ ರೀತಿ ಯೋಚಿಸಲು ಧರ್ಮಜನನ್ನುಳಿದು ಅನ್ಯರ್ಯಾರಿಗೂ ಸಾಧ್ಯವಿಲ್ಲ. ಸೂರ್ಯಾಸ್ಥಮಾನದ ಸಮಯವಾಗಿ ಇಂದಿನ ಯುದ್ಧ ನಿಲ್ಲಿಸಲ್ಪಟ್ಟಿತು.
ಕೌರವ ಶಿಬಿರದಲ್ಲಿ ಇಂದಿನ ದಿನದ ಸಮಗ್ರ ಸೋಲು ಮತ್ತು ನಾಳೆ ಹದಿನೇಳನೆ ದಿನದ ಯುದ್ಧ ಯೋಜನೆಯ ಕುರಿತಾಗಿ ಸಮಾಲೋಚನೆ ಸಾಗುತ್ತಿದೆ. ಮಹತ್ತರವಾದ ನಿರ್ಣಯ ಕೈಗೊಳ್ಳಲು ಶಲ್ಯ, ಅಶ್ವತ್ಥಾಮ, ಕೃಪ, ಕೃತವರ್ಮಾದಿಗಳು ಜೊತೆಯಾಗಿದ್ದಾರೆ.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















