27.6 C
Udupi
Sunday, December 28, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 391

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೯೧ ಮಹಾಭಾರತ

“ಮಹಾತ್ಮರೇ! ನಿಮ್ಮ ದರುಶನ ಭಾಗ್ಯದಿಂದ ಪುನಿತನಾಗಿದ್ದೇನೆ. ನನ್ನ ಮನದಲ್ಲಿ ಆವರಿಸಿದ್ದ ಗೊಂದಲಗಳಿಗೆ ಉತ್ತರ ಕಾಣದೆ ಗಲಿಬಿಲಿಗೊಂಡಿದ್ದೆ. ಆ ಹೊತ್ತು ನಿಮ್ಮನ್ನು ಕಾಣುವಂತಾಯಿತು, ಮನಮಾಡಿದ್ದ ಸಂದೇಹವನ್ನು ನಿಮ್ಮಲ್ಲಿ ಕೇಳಬೇಕೆಂದಿದ್ದೆ. ಆದರೆ ನೀವೇ ನನ್ನ ಮನದ ತುಮುಲವನ್ನು ಅರಿತವರಂತೆ ಪ್ರಶ್ನಿಸಿದ್ದೀರಿ. ಭಗವಾನ್! ನನ್ನಿಂದ ಪ್ರಯುಕ್ತವಾದ ದಿವ್ಯವಾದ ಈ ಆಗ್ನೇಯಾಸ್ತ್ರ ಸಾಮಾನ್ಯವಾದ ಅಗ್ನಿಯಾಗಿರಲಿಲ್ಲ. ಈ ಅಸ್ತ್ರವನ್ನು ಎದುರಿಸಿ ಅಸುರ, ಗಂಧರ್ವ, ದೇವ, ಮಾನವ, ಪಿಶಾಚ, ರಾಕ್ಷಸ, ಸರ್ಪ, ಯಕ್ಷ, ಪಕ್ಷಿ ಯಾರೊಬ್ಬರೂ ಬದುಕುಳಿಯಲು ಸಾಧ್ಯವಿಲ್ಲ. ಅಂತಹ ಮಹಾ ವಿನಾಶಕಾರಿ ಅಖಂಡನೀಯ ಮಹಾಸ್ತ್ರ ಪಾಂಡವರ ಕೇವಲ ಒಂದು ಅಕ್ಷೋಹಿಣಿ ಸೇನೆಯನ್ನಷ್ಟೇ ದಹಿಸಿ ಉಪಶಮನಗೊಂಡಿದೆ. ಈಗ ನನ್ನ ಮನದ ಗೊಂದಲ ಈ ಕೃಷ್ಣಾರ್ಜುನರು ಸೃಷ್ಟಿಯ ಯಾವ ವಿಭಾಗಕ್ಕೆ ಸೇರಿದವರು? ಆಗ್ನೇಯಾಸ್ತ್ರದಿಂದಲೂ ಭಸ್ಮಗೊಳ್ಳದೆ ಉಳಿದಿದ್ದಾರೆ ಎಂದಾದರೆ ಇವರನ್ನು ಇನ್ಯಾವ ಅಸ್ತ್ರವೂ ಏನೂ ಮಾಡಲಾಗದು ಎಂದಾಯಿತಲ್ಲವೆ? ಈ ಒಂದು ಕಾರಣದಿಂದಾಗಿ ನಾನರಿತಿರುವ ಧನುರ್ವೇದ, ಮತ್ತು ಮಹಾಸ್ತ್ರಗಳ ಬಗ್ಗೆ ನನಗೆ ಧಿಕ್ಕಾರ ಭಾವ ಮೂಡುತ್ತಿದೆ. ಪರಮ ದಾರುಣವಾದ, ಸಕಲರನ್ನೂ ಸಂಹಾರ ಮಾಡುವ ಮಹಾಸ್ತ್ರವನ್ನು ನಾನು ಪ್ರಯೋಗಿಸಿದ್ದೇನೆ. ಆದರೆ ಸಹಜವಾದ ಮರಣ ಧರ್ಮದಿಂದ ಮರ್ತ್ಯರಾದ ಕೇಶವಾರ್ಜುನರು ಮೃತರಾಗಲಿಲ್ಲ ಎಂದರೆ ಈ ಮಹಾಸ್ತ್ರ ದ್ರೋಹವೆಸಗಿತೆ? ಯಾಕಾಗಿ ಅವರನ್ನು ಸಂಹರಿಸಲಿಲ್ಲ? ನನಗೆ ಸಕಲ ವಿಚಾರ, ಪೂರ್ವಾಪರ ಜ್ಞಾನವುಳ್ಳ ನೀವು ಉತ್ತರಿಸಬೇಕು” ಎಂದು ಅಶ್ವತ್ಥಾಮ ಭಗವಾನ್ ವ್ಯಾಸರಲ್ಲಿ ಕೇಳಿಕೊಂಡನು.

“ಅಶ್ವತ್ಥಾಮಾ! ನಿನ್ನ ತಿಳುವಳಿಕೆ ಈ ವಿಚಾರವನ್ನು ಅರಿಯಲು ಏನೇನೂ ಸಾಲದು. ನಿನ್ನ ಜ್ಞಾನ ವ್ಯಾಪ್ತಿಯನ್ನು ಮೀರಿದ, ತರ್ಕಕ್ಕೆ ನಿಲುಕದ, ಅಗಾಧವಾದ ವಿಚಾರಗಳಿವೆ. ನಮ್ಮ ಪೂರ್ವಜರೆಲ್ಲರಿಗೂ ಪೂರ್ವಜನಾದ ಆದಿಯಲ್ಲಿ ಇದ್ದ ಆದಿ ನಾರಾಯಣ ಎಂಬ ದೇವರ ದೇವನು ಕಾರಣ ಜನ್ಮಿಯಾಗಿ ಧರ್ಮ ಸ್ಥಾಪಕನಾಗಿ ಅವತರಿಸಿದ್ದಾನೆ. ಈ ನಾರಾಯಣ ದೇವನು ಹಿಮವತ್ಪರ್ವತ ಪ್ರದೇಶದಲ್ಲಿ ಬಹುವಿಧ ಕಠೋರ ತಪಸ್ಸನ್ನು ಬಹು ಸಹಸ್ರ ವರ್ಷಕಾಲ ಆಚರಿಸಿದವನು. ಈ ರೀತಿಯ ಕಠಿಣ ತಪಸ್ಸಿನ ಫಲಶ್ರುತಿಯಾಗಿ ಬ್ರಹ್ಮ ಸ್ವರೂಪಿಯಾಗಿದ್ದಾನೆ. ವಿಶ್ವಕ್ಕೆ ಮಾತೃ ಸ್ವರೂಪನೂ, ಸಕಲ ಜಗತ್ತುಗಳಿಗೂ ಪತಿಯ ಸ್ಥಾನಿಯೂ, ಸರ್ವದೇವತೆಗಳಿಗೆ ಸ್ತುತ್ಯನೂ, ಅಣೋರಣಿಯನಾದ ವಿಶ್ವೇಶ್ವರನನ್ನು ಸಂದರ್ಶಿಸಿದವನಾಗಿದ್ದಾನೆ.
ದುಃಖವನ್ನು ದೂರಗೊಳಿಸುವ ರುದ್ರ, ಸಮಸ್ತ ಲೋಕಗಳಲ್ಲಿಯೂ ಶ್ರೇಷ್ಟನಾದ ಈಶಾನ, ಪಾಪಹಾರಕನಾದ ಹರ, ಕಲ್ಯಾಣಪ್ರದನಾದ ಶಂಭು, ಜಟಾಜೂಟಧರನಾದ ಕಪರ್ದಿ, ಜ್ಞಾನಿಯಾದ ಚೇಕಿತಾನ, ಸ್ಥಾವರ – ಜಂಗಮಗಳೆರಡಕ್ಕೂ ಉಗಮಸ್ಥಾನನಾದ ಪರಶಿವ ಪರಮೇಶ್ವರನ ದರುಶನ ಮಾಡಿದನು. ಯಾರಿಂದಲೂ ತಡೆಯಲು ಅಸಾಧ್ಯನಾದ, ಬಹಳ ತೀಕ್ಷ್ಣವಾದ ಕೋಪವುಳ್ಳ ಮಹಾತ್ಮನಾದ, ವಿಶ್ವಸ್ಥವಾಗಿರುವ ಸಕಲವಸ್ತುಗಳನ್ನೂ ಪ್ರಳಯಕಾಲದಲ್ಲಿ ನಾಶಗೊಳಿಸಬಲ್ಲ, ಸಂತೋಷಯುಕ್ತ ಮನಸ್ಸನ್ನು ಹೊಂದಿರುವ, ದಿವ್ಯವಾದ ಧನುಸ್ಸು ಬತ್ತಳಿಕೆ ಧರಿಸಿರುವ, ಪಿನಾಕ ಹಸ್ತನಾದ, ಪ್ರದೀಪ್ತನಾದ, ಶೂಲವನ್ನು ಹಿಡಿದಿರುವ, ಗಂಡುಗೊಡಲಿ, ಗದೆ, ದೀರ್ಘವಾದ ಕತ್ತಿ, ಮುಸಲವನ್ನು ಹೊಂದಿರುವ, ವ್ಯಾಘ್ರ ಚರ್ಮವನ್ನು ಹೊದೆದಿರುವ, ನಾಗರ ಹಾವನ್ನು ಆಭರಣವಾಗಿ ಅಲಂಕರಿಸಿಕೊಂಡಿರುವ ಮಹಾತ್ಮ ಮಹಾದೇವನನ್ನು ನಾರಾಯಣ ಕಂಡನು. ನೀರು, ದಿಕ್ಕುಗಳು, ಆಕಾಶ, ಪೃಥ್ವಿ, ಚಂದ್ರ, ಸೂರ್ಯರು, ವಾಯು, ಅಗ್ನಿ ಇವುಗಳೆಲ್ಲವನ್ನೂ ತನ್ನ ಅಂಕೆಯಲ್ಲಿಟ್ಟು ಅಳೆಯಬಲ್ಲ ಕಾಲ ಸ್ವರೂಪನಾದ, ಮೋಕ್ಷಕ್ಕೆ ಕಾರಣನಾದ, ರುದ್ರಾಕ್ಷ ಮಾಲೆಯಿಂದ ವಿಭೂಷಿತನಾದ, ಪಾರ್ವತಿ ದೇವಿಯೊಂದಿಗೆ ಸ್ಥಿತನಾಗಿರುವ, ಜಗದೀಶ್ವರನನ್ನು ನೋಡಿ ನಾರಾಯಣನು ನಮಸ್ಕರಿಸಿದನು.

“ಮಹಾದೇವಾ! ಆತ್ಮ ಸ್ವರೂಪನಾದ ನೀನು ನನಗಿಂತ ಬೇರೆಯವನಲ್ಲ ಎಂದು ತಿಳಿದಿದ್ದೂ ಗೌರವ, ಭಕ್ತಿ, ಆದರಗಳಿಂದ ತಪಸ್ಸನ್ನಾಚರಿಸಿದ್ದೇನೆ. ನಿನ್ನನ್ನು ಮನಸ್ಪೂರ್ವಕವಾಗಿ ಸತ್ಕರಿಸಬೇಕೆಂಬ ಮಹತ್ವಾಕಾಂಕ್ಷೆಯಿಂದ ಬ್ರಹ್ಮಸತ್ಯದಿಂದ ನಿನ್ನ ಸ್ತೋತ್ರ ಮಾಡಿದ್ದೇನೆ. ಸ್ತುತಿಗೆ ಸರ್ವತಾ ಶ್ರೇಷ್ಟನೂ, ಭಕ್ತಾಧೀನನೂ ಆಗಿರುವ ಮಹಾದೇವ ಪರಮೇಶ್ವರನೇ, ನೀನಿಂದು ಒಲಿದು ನನಗೆ ದರುಶನವಿತ್ತಿರುವೆ. ದೇವಾ! ನನ್ನಿಂದ ಸ್ತುತನಾದ ನೀನು ಮಾಯೆಯನ್ನು ದೂರಗೊಳಿಸಿ, ನನಗೆ ಇಷ್ಟವಾದ, ಸಹಕಾರಿಯಾಗುವ, ಬೇರೆ ಯಾರಿಂದಲೂ ಪಡೆದುಕೊಳ್ಳಲು ಅಸಾಧ್ಯವಾದ ದಿವ್ಯವರವನ್ನು ದಯಪಾಲಿಸಬೇಕು” ಎಂದು ಬೇಡಿಕೊಂಡನು.

ವ್ಯಾಸರು ಶಿವನ ಮಹಿಮಾ ವಿಶೇಷದ ಕಥೆಯನ್ನು ಮುಂದುವರಿಸುತ್ತಾ “ಅಶ್ವತ್ಥಾಮಾ! ನಾರಾಯಣ ಮಹರ್ಷಿಯಾಗಿ ಈ ರೀತಿ ಪ್ರಾರ್ಥಿಸಿದಾಗ ಅಚಿಂತ್ಯರೂಪನಾದ, ಪಿನಾಕಧರನಾದ, ನೀಲಕಂಠನಾದ ಭಗವಾನ್ ಪರಶಿವನು ದೇವಮುಖ್ಯನಾಗಿರುವ ನಾರಾಯಣನಿಗೆ ಅನೇಕ ವರಗಳನ್ನು ದಯಪಾಲಿಸಿದನು.” ಹೀಗೆ ವರಪ್ರದನಾದ ಶಿವನು “ನಾರಾಯಣಾ! ನೀನು ನನ್ನ ವರ ಬಲಾನ್ವಿತನಾಗಿ ದೇವ, ಗಂಧರ್ವ, ಅಸುರ, ಸಮಸ್ತ ಸರ್ಪ ಸಂಕುಲ, ಪಿಶಾಚ, ಯಕ್ಷ, ರಾಕ್ಷಸ ಹೀಗೆ ಯಾವುದೆ ಪ್ರಬೇಧಗಳಿರಲಿ ಅವುಗಳೆಲ್ಲಕ್ಕಿಂತಲೂ ಅಪ್ರಮೇಯವಾದ ಬಲಪರಾಕ್ರಮ ಉಳ್ಳವನಾಗು. ಶಸ್ತ್ರ, ವಜ್ರಾಯುಧ, ಅಗ್ನಿ, ವಾಯು, ವರುಣ, ಹಸಿಯಾದುದು, ಒಣಗಿದುದು, ಸ್ಥಾವರ ಜಂಗಮ, ವಿದ್ಯೆ, ವಿಶೇಷ ಇದ್ಯಾವುದೂ ನನ್ನ ವರಬಲದ ಪರಿಣಾಮ ನಿನ್ನೆದುರು ಸಾಮರ್ಥ್ಯ ಪ್ರಕಟಿಸಲಾರವು, ನಿನ್ನನ್ನು ಗಾಯಗೊಳಿಸಲೂ ಆಗದು. ಒಂದೊಮ್ಮೆಗೆ ನಾನೇ ನಿನಗೆದುರಾಗಿ ಹೋರಾಡುವ ಸಮಯ ಒದಗಿದರೂ ಆಗಲೂ ನೀನೇ ಜಯಶಾಲಿಯಾಗು‌.” ಎಂದು ಅನುಗ್ರಹಿಸಿ ಆಶೀರ್ವದಿಸಿದನು.

ಹೀಗೆ ಪರಮೇಶ್ವರ ಭಗವಾನ್ ಶಿವ ಪರಮಾತ್ಮನಿಂದ ವರ ಪಡೆದ ನಾರಾಯಣ ನಿನ್ನೆದುರು ಸಾರಥಿಯಾಗಿ ಅರ್ಜುನನ ರಥ ಪೀಠದಲ್ಲಿ ಕುಳಿತಿರುವ ಶ್ರೀಕೃಷ್ಣ. ಈ ನಾರಾಯಣನು ಮತ್ತೆ ಬಹು ಸಹಸ್ರ ವರ್ಷ ತಪಸ್ಸಿಗೆ ಕುಳಿತನು. ತಪೋಶಕ್ತಿಯಿಂದ “ನರ” ಎಂಬ ಮಹರ್ಷಿಯನ್ನು ಸೃಜಿಸಿದನು. ಈ ನರನೂ ನಾರಾಯಣನಂತೆ ಸಮಬಲವುಳ್ಳವನಾಗಿದ್ದಾನೆ. ನರನಾಗಿ ನಾರಾಯಣನ ಜೊತೆ ಅವತರಿಸಿದ್ದವನು ಈ ಅರ್ಜು‌ನ. ಆದಿಯಲ್ಲಿ ನರನಾರಾಯಣರಾಗಿದ್ದವರು ಈಗ ಕೃಷ್ಣಾರ್ಜುನರು. ಇವರೀರ್ವರು ಲೋಕದ ಪಾಲನೆಗಾಗಿ, ಯುಗಧರ್ಮ ಚಲನೆಗೆ ಪೂರಕರಾಗಿ ಯುಗಯುಗಗಳಲ್ಲೂ ಅವತರಿಸಿ ಬರುತ್ತಾರೆ.

“ಅಶ್ವತ್ಥಾಮಾ! ನೀನು ಮಹಾನ್ ಶಿವಭಕ್ತ, ಮಾತ್ರವಲ್ಲ ಪರಶಿವನ ವರಬಲಾನ್ವಿತನಾಗಿ ಹುಟ್ಟಿ ಅತಿಬಲನಾಗಿ ಬೆಳೆದವನು. ಹೇ ವಿದ್ವಾಂಸನೇ! ನರನಾರಾಯಣರ ಜನ್ಮ ಕರ್ಮ, ತಪಸ್ಸು ಮತ್ತು ಯೋಗಗಳು ಸಮೃದ್ಧವಾಗಿವೆ. ನೀನೂ ಶಿವಾಂಶ ಸಂಭೂತನಾಗಿರುವೆ. ಆದರೆ ನರನಾರಾಯಣರು ಪರಶಿವನ ಸರ್ವಸ್ವವನ್ನು ಪಡೆದವರಾಗಿದ್ದಾರೆ. ಹಾಗಾಗಿ ನಿನ್ನಿಂದ ಪ್ರಯೋಕ್ತವಾದ ಯಾವ ಶರ, ಅಸ್ತ್ರಗಳೂ ಅವರನ್ನೇನೂ ಮಾಡಲಾರವು” ಎಂದರು. ಇಷ್ಟಕ್ಕೆ ನಿಲ್ಲಿಸದೆ ಭಗವಾನ್ ಮಹೇಶ್ವರನ ಮಹಿಮಾ ವಿಶೇಷ, ಪೂರ್ಣ ಶಕ್ತಿ, ವ್ಯಾಪ್ತಿಯನ್ನು ಆದ್ಯಂತವಾಗಿ ವಿವರಿಸಿದರು. ನಂತರ ವಾಸುದೇವನ ಆದಿ, ಅವತರಣ, ಸಂಕಲ್ಪ, ಪಾಲನಾಶಕ್ತಿ, ಮಹಿಮೆಯಾದಿ ಪೂರ್ಣ ವಿಚಾರವನ್ನೂ ಉಪದೇಶಿಸಿದರು.

ಅಧಮ್ಯವೂ, ಅವ್ಯಯವೂ, ಅವ್ಯಕ್ತವೂ ಆದ ಶಿವನಾರಾಯಣರ ರಹಸ್ಯ ಕಥನವನ್ನು ತಿಳಿದಾಗುವ ಹೊತ್ತಿಗೆ ಸೂರ್ಯಾಸ್ತಮಾನವೂ ಆಗಿತ್ತು. ಅಂದಿನ ದಿನದ ಯುದ್ಧವೂ ನಿಲ್ಲಿಸಲ್ಪಟ್ಟಿತು. ಅಶ್ವತ್ಥಾಮ ಭಗವಾನ್ ವ್ಯಾಸರಿಗೆ ನಮಿಸಿ “ಮಹಾತ್ಮರೇ! ನಿಮ್ಮ ಮಾತುಗಳು ಸದಾ ಸತ್ಯವೇ ಆಗಿರುತ್ತದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಮಹಾದೇವ ರುದ್ರನಿಗೆ ನನ್ನ ಪ್ರಣಾಮಗಳು. ಶ್ರೀಕೃಷ್ಣನ ಮಹತ್ವವನ್ನೂ ಒಪ್ಪಿ ಗೌರವಿಸುತ್ತೇನೆ” ಎಂದನು. ತನ್ನ ಸೇನೆಗೆ ಶಿಬಿರ ಸೇರಲು ಆದೇಶ ನೀಡಿ ಭಗವಾನ್ ವ್ಯಾಸರ ಅನುಮತಿ ಪಡೆದು ತನ್ನ ರಥವನ್ನೂ ಶಿಬಿರದತ್ತ ನಡೆಸಲು ಸೂಚಿಸಿದನು.

ಅರ್ಜುನನು ವ್ಯಾಸರನ್ನು ಕಂಡು ನಮಿಸಿದನು. ತನ್ನ ಮನದಲ್ಲಿ ಮೂಡಿದ್ದ ಸಂದೇಹವನ್ನು ಪರಿಹರಿಸಿಕೊಳ್ಳಲು ಮನಮಾಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page