ಭಾಗ – 371
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೩೭೧ ಮಹಾಭಾರತ
ದ್ರೋಣಾಚಾರ್ಯರಿಂದ ದಿಗ್ಬಂಧನಕ್ಕೊಳಗಾಗುತ್ತಿರುವ ಅಣ್ಣ ಧರ್ಮಜನನ್ನು ಸಹದೇವ ನೋಡುತ್ತಾನೆ. ಅಣ್ಣ ನೋಡಿದರೆ, ತಾನು ನಿರಾಯುಧ ಎಂಬಂತೆ ಕೈಯೆತ್ತಿ ನಿಂತಿದ್ದಾನೆ, ಬಂಧಿಸುವ ಯೋಜನೆ ಹೊಂದಿದ್ದ ಗುರು ದ್ರೋಣರು ಶರವರ್ಷಗೈದು ತಪ್ಪಿಸದಂತೆ ಪಂಜರ ನಿರ್ಮಿಸಿ ಬಂಧಿಸುವ ಕೈಂಕರ್ಯ ನಿರತರಾಗಿದ್ದಾರೆ. ತಕ್ಷಣ ಸಹದೇವ ಈ ಸೂಕ್ಷ್ಮವನ್ನು ಗಮನಿಸಿದನು. ಸಾತ್ಯಕಿಯೂ ಅದೇ ಸಮಯ ಅತ್ತ ಸಹದೇವನ ಜೊತೆ ಸಾಗಿ ದ್ರೋಣರ ಆಕ್ರಮಣವನ್ನು ತಡೆದು ನಿಲ್ಲಿಸಿದರು. ಈ ಮಧ್ಯೆ ಯುದ್ದಗೈಯುತ್ತಾ ಅಣ್ಣನ ಬಳಿಗೆ ರಥ ನಡೆಸಿ, ಅಣ್ಣನನ್ನು ಸೆಳೆದು ರಥವೇರಿಸಿಕೊಂಡನು ಸಹದೇವ. ಧರ್ಮರಾಯ ತನ್ನ ರಥದಲ್ಲಿ ಸ್ಥಿತನಾದ ಕೂಡಲೇ ಅನ್ಯ ಪಾಂಡವ ಪಕ್ಷ ವೀರರಿಗೆ ದ್ರೋಣರತ್ತ ಬಂದು ಯುದ್ದ ಮುಂದುವರಿಸಲು ಮಾದ್ರಿ ಪುತ್ರನಾದ ಸಹದೇವ ಆದೇಶ ರೂಪದ ಸೂಚನೆ ನೀಡಿದನು. ದ್ರೋಣಾಚಾರ್ಯರ ಗಮನ ಅವರತ್ತ ಸಾಗಿ ಬರುತ್ತಿರುವ ಪಾಂಡವ ಪಕ್ಷದ ವೀರರ ಕಡೆ ತಿರುಗಿದಾಗ ಸಹದೇವ ರಣರಂಗದಿಂದ ರಥವನ್ನು ಶಿಬಿರದತ್ತ ಹಾರಿಸಿ ಗಾಯಾಳುವಾದ ಯುಧಿಷ್ಟಿರನಿಗೆ ಚಿಕಿತ್ಸೆ ಒದಗಿಸಿದನು. ಮಾತ್ರವಲ್ಲ, ತುಸು ಹೊತ್ತು ವಿಶ್ರಾಂತಿಯ ವ್ಯವಸ್ಥೆಯನ್ನೂ ಮಾಡಿಸಿದನು. ಸಾವರಿಸಿಕೊಂಡ ಧರ್ಮಜ ಮತ್ತೆ ರಣರಂಗಕ್ಕೆ ಮರಳಿದನು.
ಶಕಟವ್ಯೂಹ ಬಲಿದು ಕುರು ಸೇನಾಪತಿ ದ್ರೋಣಾಚಾರ್ಯರು ಯಾದವ ವೀರಾಗ್ರಣಿ ಸಾತ್ಯಕಿಯ ಜೊತೆ ಯುದ್ಧ ನಿರತರಾಗಿದ್ದಾರೆ. ಸಾತ್ಯಕಿ ಶತಾಯ ಗತಾಯ ಪರಿಶ್ರಮದಿಂದ ದ್ರೋಣಾಚಾರ್ಯರನ್ನು ತಡೆ ಹಿಡಿದು ನಿಲ್ಲಿಸಿ ಯುದ್ದ ಮಾಡುತ್ತಿದ್ದಾನಾದರೂ, ಉಗ್ರ ಪ್ರತಾಪ ಮೆರೆಯುತ್ತಿರುವ ದ್ರೋಣಾಚಾರ್ಯರು ಸಾತ್ಯಕಿಗೆ ಹೆಚ್ಚಿನ ಅವಕಾಶ ನೀಡದೆ ಹೀನಾಯವಾಗಿ ಘಾಸಿಗೊಳಿಸುತ್ತಿದ್ದಾರೆ. ಆಚಾರ್ಯರಿಂದ ಪ್ರಯೋಗಿಸಲ್ಪಟ್ಟ ದಿವ್ಯಶರಗಳಿಂದ ಗಾಯಗೊಂಡು ಮೂರ್ಛಿತನಾಗಲಿದ್ದ ಸಾತ್ಯಕಿಯ ಸ್ಥಿತಿಯನ್ನು ಕಂಡ ಧರ್ಮಜ, ಆತನ ರಕ್ಷಣೆಗಾಗಿ ದೃಷ್ಟದ್ಯುಮ್ನನ ರಥವನ್ನು ಅತ್ತ ಕಳುಹಿಸಿ ಸಾತ್ಯಕಿಯನ್ನು ಮುಕ್ತಗೊಳಿಸಿದನು.
ಸಾತ್ಯಕಿಯನ್ನು ಕರೆದು, “ಅಯ್ಯಾ! ಯಾದವ ವೀರನೇ, ಮನಗುಂದಬೇಡ. ನಮ್ಮ ಪಕ್ಷದಲ್ಲಿ ನೀನೋರ್ವ ಅಪ್ರತಿಮ ಸಾಹಸಿ, ವಿಕ್ರಮಿ. ಈಗ ನಿನ್ನಿಂದ ಮಹತ್ಕಾರ್ಯವಾಗಬೇಕಾಗಿದೆ. ಇಳಿಸಂಜೆಯ ಹೊತ್ತಾದರೂ ಈವರೆಗೆ ಪಾರ್ಥನ ಪ್ರತಿಜ್ಞೆಯಂತೆ ಜಯದ್ರಥನ ವಧೆ ಸಾಧ್ಯವಾಗಿಲ್ಲ. ಹಾಗಾಗಿ ನೀನೀಗಲೆ ಬೆಂಗಡೆಯಿಂದ ಪದ್ಮ ವ್ಯೂಹ ಭೇದಿಸುತ್ತಾ ಒಳ ಹೊಕ್ಕು ಪಾರ್ಥನಿಗೆ ಸಹಕಾರಿಯಾಗಬೇಕು. ಅರ್ಜುನ ನಿನಗೆ ಆಪ್ತ ಮಿತ್ರನೂ, ಧನುರ್ವಿದ್ಯೆಯ ಸೂಕ್ಷ್ಮಗಳನ್ನು ಉಪದೇಶಿಸಿರುವ ಗುರುವೂ ಹೌದು. ಈ ಸಮಯ ನಿನ್ನ ಸಹಾಯ ಆತನಿಗೆ ಅಗತ್ಯವಿದೆ. ಪ್ರಸಕ್ತ ಕಾಲದಲ್ಲಿ ಸಕಲ ಯುದ್ದ ಪಾರಂಗತರೆಂದರೆ ಕೃಷ್ಣ, ಅರ್ಜುನ, ಭೀಷ್ಮ ಮತ್ತು ದ್ರೋಣರು. ಈ ಅತಿರಥರ ಸಾಲಿನಲ್ಲಿ ನಿಲ್ಲ ಬಲ್ಲ ವಿದ್ಯಾ ಸಂಪನ್ನತೆ ಮತ್ತು ಪೌರುಷ ಪರಾಕ್ರಮಗಳು ಸ್ಥಿತವಾಗಿರುವ ಅನ್ಯ ವೀರನಿದ್ದರೆ ಅದು ನೀನು ಮಾತ್ರ. ಯಾದವ ಶ್ರೇಷ್ಟನಾದ ಶ್ರೀಕೃಷ್ಣನು ನಮ್ಮ ರಕ್ಷಣೆಯ ಹೊಣೆಹೊತ್ತಿರುವ ಅಗ್ರಗಣ್ಯನು. ಈಗ ದ್ವಿತೀಯನಾಗಿ ನೀನು ಅಂತಹ ಸಹಕಾರ ನಮಗಿತ್ತು ಕೃತಕೃತ್ಯನಾಗಬೇಕೆಂದು ನಿವೇದಿಸಿಕೊಳ್ಳುತ್ತಿರುವೆ” ಎಂದು ಅಪೇಕ್ಷೆ ವ್ಯಕ್ತಪಡಿಸಿದನು.
ಧರ್ಮರಾಯನ ಆಶಯ ಅರಿತುಕೊಂಡ ಸಾತ್ಯಕಿ “ಮಹಾರಾಜಾ! ನಿನ್ನ ಮಾತಿನ ಅರ್ಥ ನನಗಾಗಿದೆ. ಈ ಕೂಡಲೆ ಅರ್ಜುನನ ಬೆಂಗಾವಲಿಗನಾಗಿ ನಾನು ವ್ಯೂಹದೊಳಗೆ ಪ್ರವೇಶಿಸಬಹುದು. ಅರ್ಜುನನಿಗೆ ಬಾಧಕವಾಗಿರುವ ಸೇನೆ – ವೀರರ್ಯಾರಾದರೂ ಇದ್ದರೆ ಪ್ರತಿಬಂಧಿಸಿ ನಿಂತು ಪಾರ್ಥ ಮುನ್ನುಗ್ಗಿ ಗುರಿ ಸಾಧಿಸಲು ಪೂರಕನಾಗಬಹುದು. ಆದರೆ, ನನ್ನ ಗುರುವೂ ಆಪ್ತನೂ ಆಗಿರುವ ಪಾರ್ಥ ನನಗೊಂದು ಜವಾಬ್ದಾರಿ ವಹಿಸಿದ್ದಾನೆ. ಇಂದಿನ ದಿನ ಬೆಳಿಗ್ಗೆ ಸಮಾಲೋಚನೆ ನಡೆಸುವ ಹೊತ್ತು, ಯೋಜನೆಯಂತೆ ಪಾರ್ಥ ಜಯದ್ರಥನ ವಧಾ ಕಾರ್ಯ ನಿರತನಾಗುವುದು. ನಾನು ನಿಮ್ಮನ್ನು ಬಂಧಿಸುವ ಸಂಕಲ್ಪ ಮಾಡಿರುವ ಗುರುದ್ರೋಣರಿಂದ ರಕ್ಷಿಸುತ್ತಿರಬೇಕು. ಹೀಗೆ ನಿಮ್ಮ ರಕ್ಷಣೆಯ ಹೊಣೆಹೊತ್ತಿರುವ ನಾನು ಈಗ ಅರ್ಧದಲ್ಲಿ ಬಿಟ್ಟು ಹೋದರೆ ದ್ರೋಣರಿಂದ ನಿಮ್ಮನ್ನು ರಕ್ಷಿಸುವವರ್ಯಾರು? ಅಂತಹ ಬದಲಿ ವ್ಯವಸ್ಥೆಯನ್ನು ವಿವರಿಸಿ ಸಮರ್ಥಿಸಿದರೆ ನಾನು ಅತ್ತ ಪಾರ್ಥನ ಸಹಾಯಕ್ಕೆ ತೆರಳಬಹುದು. ಈಗಲೂ ನಾನೊಂದು ತಿಳಿದ ಸತ್ಯ ವಿವರಿಸ ಬಯಸುವೆ ” ಧರ್ಮರಾಜಾ, ಪಾರ್ಥನ ವಿಚಾರದಲ್ಲಿ ವೃಥಾ ವ್ಯಥೆ ಪಡಬೇಡ. ಕ್ಷಾತ್ರ ಕುಲ ತಿಲಕನಾಗಿರುವ ಅರ್ಜುನನ ಕಾರ್ಯಸಾಧನೆಯ ಬಗ್ಗೆ ಆತಂಕ ಬೇಡ. ಕೃಷ್ಣನು ಜೊತೆಗಿರುತ್ತಾ ಆತ ಕಟಿ ಬದ್ಧನಾಗಿರುವ ಕಾರ್ಯ ಪೂರೈಸುವುದು ನಿಸ್ಸಂಶಯ” ಎಂದನು.
ಆಗ ಧರ್ಮರಾಯ “ಸಾತ್ಯಕಿ! ನಿನ್ನ ಹೊಣೆಗಾರಿಕೆಯಿಂದ ಪ್ರಸನ್ನನಾಗಿದ್ದೇನೆ. ಭೀಮಸೇನ, ಘಟೋತ್ಕಚ, ನಕುಲ ಸಹದೇವ, ದೃಷ್ಟದ್ಯುಮ್ನ ಮತ್ತು ದ್ರುಪದ ಮಹಾರಾಜರು ಸೂರ್ಯೋದಯಕ್ಕೆ ಇನ್ನುಳಿದಿರುವ ಅಲ್ಪ ಸಮಯ ನನ್ನ ರಕ್ಷಣೆ ಮಾಡುತ್ತಾರೆ. ಆ ಕುರಿತು ವಿಚಲಿತನಾಗಬೇಡ” ಎಂದು ಸ್ಪಷ್ಟತೆ ನೀಡಿದ ಬಳಿಕ ಸಾತ್ಯಕಿ ಅರ್ಜುನಿರುವ ವ್ಯೂಹ ಮಧ್ಯದತ್ತ ಸಾಗಿದನು.
ಸಾತ್ಯಕಿಯ ರಥ ಪದ್ಮವ್ಯೂಹದತ್ತ ಸಾಗುವುದನ್ನು ಗಮನಿಸಿದ ದ್ರೋಣಾಚಾರ್ಯರು ತನ್ನ ಪಕ್ಷದ ವೀರರಿಗೆ ಯಾದವವೀರನನ್ನು ತಡೆಯಲು ಆದೇಶವಿತ್ತರು. ಅದನ್ನು ಗಮನಿಸಿದ ಪಾಂಡವ ಸೇನೆ ದ್ರೋಣರ ಸೇನೆಯನ್ನು ಆವರಿಸಿ ತಡೆದು ಸಾತ್ಯಕಿಯನ್ನು ಹೋಗಗೊಟ್ಟರು. ಆದರೂ ಕೃತವರ್ಮ ನುಸುಳಿ ಬಂದು ಸಾತ್ಯಕಿಯನ್ನು ತಡೆಯಲು ಮುಂದಾದನು. ಇವರೀರ್ವರ ಮಧ್ಯೆ ತುಸು ಹೊತ್ತು ಸಂಘರ್ಷ ಏರ್ಪಟ್ಟರೂ ಸಾತ್ಯಕಿ ಕೃತವರ್ಮನನ್ನು ಗಾಯಗೊಳಿಸಿ, ಸಿಕ್ಕ ಅವಕಾಶದಲ್ಲಿ ವ್ಯೂಹದ ಒಳ ಹೊಕ್ಕು ಹೊರಟನು.
ಸಾತ್ಯಕಿ ಪಾರ್ಥನಂತೆಯೆ ಅದೇ ದಾರಿಯಾಗಿ ವ್ಯೂಹ ಭೇದಿಸುತ್ತಾ ಅರ್ಜುನಿದ್ದಲ್ಲಿಗೆ ತಲುಪಿದನು.
ಈಗ ಈರ್ವರು ಅರ್ಜುನರು ಏಕಕಾಲದಲ್ಲಿ ಹೋರಾಡುತ್ತಿರುವಂತೆ ಸಾತ್ಯಕಿಯೂ ರಣ ಭಯಂಕರನಾಗಿ ಮೆರೆಯತೊಡಗಿದನು. ಸೈಂಧವನ ಸೇನೆ, ಕರ್ಣನ ಸೈನ್ಯ ತಡೆದು ನಿಲ್ಲಲಾಗದೆ, ಜೀವಭಯದಿಂದ ಪಲಾಯನಗೈಯತೊಡಗಿದರು. ಇನ್ನೂ ಉಗ್ರವಾದ ಹೋರಾಟ ಮುಂದುವರಿಸುತ್ತಾ ಸಾತ್ಯಕಿ ಮತ್ತು ಅರ್ಜುನ ಅಂತಿಮ ಸುತ್ತಿನ ಅಸದಳ ವೀರರಾದ ಅಶ್ವತ್ಥಾಮ – ಕರ್ಣ, ಕೃಪ, ಭೂರಿಶ್ರವಸ, ವೃಷಸೇನ, ಶಲ್ಯರನ್ನು ಏಕಕಾಲದಲ್ಲಿ ಪ್ರಹರಿಸುತ್ತಾ ಮಹಾಸಂಗ್ರಾಮ ಸಾಗುತ್ತಿದೆ. ಜೊತೆಗೆ ಜಯದ್ರಥ, ದುರ್ಯೋಧನರೂ ಅಲ್ಲಿಯೆ ಇದ್ದು ವ್ಯೂಹದೊಳಗೆ ಕೌರವ ಸೇನೆ ತುಸು ಹೆಚ್ಚಿನ ಪ್ರಾಬಲ್ಯ ಹೊಂದಿರುವಂತಾಗಿದೆ. ಇಲ್ಲಿ ಯಾರಾದರೂ ಸಾಮಾನ್ಯರಿದ್ದಾರೆಯೆ? ಒಬ್ಬರಿಗಿಂತ ಒಬ್ಬರು ಮಿಗಿಲಾದವರು. ಮಹಾಸ್ತ್ರ, ಮಂತ್ರಾಸ್ತ್ರಗಳು ಕ್ಷಣವೊಂದಕ್ಕೆ ಹಲವಾರು ವಿಧಾನಗಳಿಂದ ಪ್ರಯೋಗಗೊಳ್ಳುತ್ತಾ, ಉಪಸಂಹಾರಗೊಳ್ಳುತ್ತಾ ನಿಜವಾಗಿಯು ಭಯಾನಕವಾಗಿ ಯುದ್ದ ಸಾಗುತ್ತಿದೆ.
ಹೀಗೆ ಯುದ್ದ ಮುಂದುವರಿಯುತ್ತಿರಬೇಕಾದರೆ ಧರ್ಮರಾಯ ಭೀಮನನ್ನು ಕರೆದು “ತಮ್ಮಾ! ಸಾತ್ಯಕಿ ಮತ್ತು ಅರ್ಜುನ ವ್ಯೂಹದೊಳಗಿದ್ದಾರೆ. ಇನ್ನು ಅತ್ಯಲ್ಪ ಸಮಯ ಬಾಕಿ ಉಳಿದಿದೆ. ಅಷ್ಟರ ಒಳಗೆ ಅರ್ಜುನ ಜಯದ್ರಥನ ಸಂಹಾರ ಮಾಡಬೇಕು. ನೀನು ಈ ಕೂಡಲೆ ವ್ಯೂಹ ಪ್ರವೇಶಿಸಿ ಒಳಹೋಗು. ನಾನಿಲ್ಲಿಯೆ ಇದ್ದು ಯುದ್ದ ಮುಂದುವರಿಸುವೆ” ಎಂದು ಆದೇಶ ನೀಡಿದನು.
“ಆಗಲಿ ಅಣ್ಣಾ!, ನೀನು ಯಾವುದೇ ಕಾರಣಕ್ಕೂ ಗುರು ದ್ರೋಣರ ಕೈವಶನಾಗದಂತೆ ಜಾಗ್ರತೆ ವಹಿಸು. ದೃಷ್ಟದ್ಯುಮ್ನಾದಿಗಳೇ, ನೀವು ಅಣ್ಣನ ರಕ್ಷಣೆಯ ಪೂರ್ಣ ಜವಾಬ್ದಾರಿ ವಹಿಸಿ ಹೋರಾಡುತ್ತಿರಬೇಕು” ಎಂದು ಹೇಳಿದನು. ಆಗ ಪಾಂಚಾಲದ ಯುವರಾಜ ದೃಷ್ಟದ್ಯುಮ್ನ “ಭೀಮಾ! ಆ ಹೊಣೆಗಾರಿಕೆ ನನಗಿರಲಿ. ನನ್ನ ಪ್ರಾಣವಿರುವವರೆಗೆ ನಿನ್ನ ಅಣ್ಣ ಯುಧಿಷ್ಟಿರನಿಗೇನೂ ಆಗದಂತೆ ಸಂರಕ್ಷಿಸುತ್ತೇನೆ” ಎಂದನು. ಭೀಮಸೇನ ಪಾರ್ಥನಿರುವತ್ತ ರಥ ಹಾರಿಸಿದನು.
ಈಗ ಭೀಮನೂ ಅತ್ತ ಸಾಗುವುದನ್ನರಿತ ದ್ರೋಣಾಚಾರ್ಯರು ಭೀಮನಿಗೆದುರಾಗಿ ಬಂದು ತಡೆದರು.
ದ್ರೋಣರ ತಡೆಯಿಂದ ವಿಚಲಿತನಾದ ಭೀಮಸೇನ ಅತ್ಯುಗ್ರನಾಗಿ ಹೋರಾಡತೊಡಗಿದನು. ದ್ರೋಣರೆದುರು ಕೈಸಾಗದೆ ಉಳಿದಾಗ, ತನ್ನ ರುಧಿರ ಮುಖಿ ಗದೆಯನ್ನು ಬೀಸಿ ದ್ರೋಣ ರಥದ ಮೇಲೆ ಅಪ್ಪಳಿಸಿದನು. ದ್ರೋಣಾಚಾರ್ಯರ ರಥ, ಕುದುರೆ, ಸಾರಥಿ ಸಹಿತವಾಗಿ ಪುಡಿಯಾಗಿ ಹಾರಿ ಹೋಯಿತು. ದ್ರೋಣಾಚಾರ್ಯರು ರಥದಿಂದ ಹಾರಿ ಪ್ರಾಣ ಉಳಿಸಿಕೊಂಡರು. ವಿರಥರೂ, ನಿರಾಯುಧರೂ ಆದ ಗುರು ದ್ರೋಣರ ರಕ್ಷಣೆಗೆ ಧೃತರಾಷ್ಟ್ರ ಪುತ್ರರಾದ ಹನ್ನೊಂದು ಮಂದಿ ಏಕಕಾಲದಲ್ಲಿ ಭೀಮನ ಮೇಲೆರಗಿದರು. ಭೀಮನಿಗೆ ದುರ್ಯೋಧನ ಮತ್ತು ಅವನ ಸೋದರರ ಮೇಲೆ ವಿಪರೀತ ಕ್ರೋಧಾವಿತ್ತು. ಈಗ ರುದ್ರನಂತೆ ಭೀಕರತೆಯಿಂದ ಹೋರಾಡತೊಡಗಿದನು. ಬದುಕಿ ಉಳಿದಾರೆ ಧೃತರಾಷ್ಟ್ರ ಪುತ್ರರು?
ಮುಂದುವರಿಯುವುದು…



















