ಭಾಗ 347
ಭರತೇಶ್ ಶೆಟ್ಟಿ, ಎಕ್ಕಾರ್

ಕೃಷ್ಣನೂ ಭೀಷ್ಮಾಚಾರ್ಯರನ್ನು ನೋಡುತ್ತಿದ್ದಾನೆ. ಕಣ್ಣೋಟದಲ್ಲಿ ಇವರೀರ್ವರು ಅದೇನು ಸಂವಹನ ಮಾಡಿಕೊಂಡರೋ ಅವರಿಬ್ಬರಿಗಷ್ಟೆ ವೇದ್ಯ ವಿಚಾರ. ಆ ಬಳಿಕ ಪಿತಾಮಹ “ಸರಳ ಮಂಚದಲ್ಲಿ ಒರಗಿರುವ ನಾನು ನನ್ನ ಶಿರಸ್ಸನ್ನು ಆಧರಿಸಿ ಹಿಡಿಯಲಾಗುತ್ತಿಲ್ಲ” ಎಂದಾಗ ಅರ್ಜುನ ಎರಡು ಶರಗಳನ್ನು ಭೂಮಿಗೆ ಪ್ರಯೋಗಿಸಿ ಕವಲಾಗಿ ನಿಲ್ಲುವಂತೆ ಮಾಡಿ ಆಚಾರ್ಯರ ಶಿರವನ್ನು ಶರಗಳ ಮಧ್ಯೆ ವಿಶ್ರಾಂತವಾಗುವಂತೆ ಮಾಡಿದನು. ದಣಿದು ಬಸವಳಿದು ಹೋಗಿರುವ ಮಹಾಮಹಿಮನ ರುಧಿರ ಕುರುಕ್ಷೇತ್ರದ ಪವಿತ್ರ ಮಣ್ಣಿಗೆ ಬಸಿದು ಇಳಿಯುತ್ತಿದೆ. ಶರೀರವೂ ನಿರ್ಜಲವಾಗುತ್ತಿತ್ತೋ, ಗಂಟಲು ಒಣಗಿತೋ… ತೃಷೆಯ ಅಪೇಕ್ಷೆಯನ್ನು ಸಂಜ್ಞೆಯಲ್ಲಿ ಪಾರ್ಥನಿಗೆ ಸೂಚಿಸಿದಾಕ್ಷಣ, ಅರ್ಜುನ ಮಂತ್ರ ಶರವನ್ನು ಭೂಮಿಗೆ ಪ್ರಯೋಗಿಸಿದ. ಸಂಕಲ್ಪದಂತೆ ಅಂತರ್ಗಂಗೆ ಚಿಲುಮೆಯಾಗಿ ಚಿಮ್ಮಿ ಗಾಂಗೇಯನ ಬಾಯಾರಿಕೆ ನೀಗಿಸಿತು. ಅತುಲ ವೇದನೆಗಳಿದ್ದರೂ ಒಮ್ಮೆಗೆ ಮಾತೆ ಗಂಗೆಯೇ ಬಂದು ಶುಶ್ರೂಷೆ ಮಾಡಿದಂತೆ ಹಿತವೆಣಿಸಿತು.
ಭೀಷ್ಮಾಚಾರ್ಯರು ಶರತಲ್ಪದಲ್ಲಿರುವ ಈ ಕ್ಷಣ ಎರಡಾಗಿ ಭಾಗವಾಗಿದ್ದ ಚಂದ್ರವಂಶ ಒಂದಾಗಿ ಕುಲದ ಹಿರಿಯನನ್ನು ಕಂಡು ಮರುಗುತ್ತಿದ್ದಾರೆ. ಸಂಕಟದಿಂದ ಮರುಕಕ್ಕೊಳಗಾಗುತ್ತಿದೆ. ಆ ಸೇರಿಕೆಯನ್ನು ಕಂಡು ಹಿತವೆಣಿಸಿ, ತನ್ನ ಕೊನೆಯ ಆಸೆ ಎಂಬಂತೆ ದುರ್ಯೋಧನನನ್ನು ಬಳಿ ಕರೆದರು. “ಕಂದಾ! ಹಸ್ತಿನೆಯ ಭದ್ರಪೀಠದ ಸುಭದ್ರತೆಯ ರಕ್ಷಕನಾಗಿ ಬದುಕಿದ್ದ ನಾನಿಂದು ಬಿದ್ದು ಬಿಟ್ಟೆ. ಪೀಠಭದ್ರನಾಗುವ ಹಠ ಹೊಂದಿರುವ ನೀನು, ಈಗಲಾದರೂ ಅರ್ಥಮಾಡಿಕೊಳ್ಳಬೇಕು. ಇನ್ನು ಇಚ್ಚಾಮರಣಿಯಾದರೂ ಮರಣವನ್ನೇ ಇಚ್ಚಿಸುವ ಸ್ಥಿತಿ ನನಗೊದಗಿದೆ. ವ್ಯರ್ಥ ವೈಷಮ್ಯ ಬೇಡ. ಸಂಧಿಯ ಮುಖೇನ ದಾಯಾದ್ಯ ಕಲಹ ಪರಿಹರಿಸಿಕೊಳ್ಳಲು ಮನಸ್ಸು ಮಾಡು. ಅದೇ ನಿನಗೆ ಶ್ರೇಯಸ್ಕರ. ಈಗಾಗಲೇ ಬಹುಲಕ್ಷ ಕ್ಷತ್ರಿಯರ ವಿನಾಶವಾಗಿದೆ. ನೀನು ಛಲ ತೊರೆಯದಿದ್ದರೆ ಸರ್ವನಾಶಕ್ಕೆ ಕಾರಣನಾಗುವೆ. ನಿನ್ನ ಇಚ್ಚೆಯೂ ಕೈಗೂಡದೆ ನಾಶವನ್ನು ಹೊಂದುವೆ. ಅನರ್ಥವಾಗಲು ಬಿಡಬೇಡ. ಸಂಧಾನ ಮುಖೇನ ಇತ್ಯರ್ಥ ಮಾಡಬಹುದಾದ ಸಮಸ್ಯೆಯನ್ನು ವೃದ್ಧಿಸಿ ಅಳಿಯದೆ ಉಳಿದಿರುವ ಬಂಧುಗಳೆಲ್ಲರ ಹತ್ಯೆಗೆ ಅವಕಾಶ ಒದಗಿಸಿ ಕೊಡಬೇಡ. ಒಮ್ಮತದಿಂದ ನಿನಗೆ ಕ್ಷೇಮವೇ ಆಗಲಿದೆ.” ಎಂದು ತನ್ನ ಜೀವನ್ಮರಣ ಹೋರಾಟದ ಕ್ಷಣದಲ್ಲಿ ಬುದ್ದಿಮಾತನ್ನು ನೊಂದು ಬೇಡಿಕೊಂಡಂತೆ ಹೇಳಿದರು. ಆದರೂ ಕೌರವ ತನ್ನ ಪಟ್ಟು ಸಡಿಲಿಸುವ ಯೋಚನೆಯನ್ನು ಹೊಂದಿಲ್ಲ. ಪಿತಾಮಹನ ಒತ್ತಾಯ ಆತತಾಯಿಗೆ ಅಪಥ್ಯವೇ ಆಗಿ ಹೋಯಿತು. ಏನು ಉತ್ತರ ನೀಡುವುದು! ನಿರುತ್ತರನಾಗಿ ಅಲ್ಲಿ ನಿಲ್ಲಲಾಗದೆ ಹೊರ ನಡೆದು ಬಿಟ್ಟನು ದುರ್ಯೋಧನ.
ಭೀಷ್ಮಾಚಾರ್ಯರು ಕಣ್ಣೆತ್ತರಿಸಿ ನೋಡಿ “ಕೃಷ್ಣಾ! ನನಗೂ ಭ್ರಾಂತಿ. ಈ ಸಮಯದಲ್ಲೂ ಶಾಂತಿ ಬಯಸಿದೆ. ಆತನ ಬುದ್ದಿ ಗೊತ್ತಿದ್ದೂ, ಬೋರ್ಗಲ್ಲ ಮೇಲೆ ನೀರೆರೆದಂತೆ ಆಯಿತು ನನ್ನ ಬೇಡಿಕೆ. ಸಾಯುವ ಸಮಯಕ್ಕಾದರೂ ಚಂದ್ರಾನ್ವಯದ ಸಮಗ್ರತೆ ಕಾಣುವ ಆಸೆಯಾದ ಕಾರಣ ಮತ್ತೊಮೆ ಕಿರು ಆಸೆಯಿಂದ ಕೇಳಿಕೊಂಡೆನು. ಅಸಹಾಯಕನಾದೆ, ದುಷ್ಕರ್ಮಿಗಳು ಕರ್ಮ ಫಲ ಅನುಭವಿಸಲೇ ಬೇಕು ಎಂಬುವುದೇ ನಿಯಮವಾದರೆ ಕೌರವ ನನ್ನ ಕೋರಿಕೆ ಒಪ್ಪಿ ನಡೆಯುವುದು ಅಸಾಧ್ಯ. ಆಗಲಿ ಧರ್ಮ ಸಂಸ್ಥಾಪನೆಗಾಗಿ ನೀನೇ ಸಂಸ್ಥಾಪನಾಚಾರ್ಯನಾಗಿ ನಿಂತಿರುವಾಗ ಅದು ಆಗಿಯೇ ಆಗಲಿದೆ ಎಂಬುವುದು ಸತ್ಯ. ನನ್ನ ಪಾಲಿನಲ್ಲೂ ಏನಾದರೂ ಪ್ರಾರಬ್ಧ ಕರ್ಮವಿದ್ದರೆ ಈ ಶರಶಯನದ ಮುಖೇನ ಕರ್ಮಫಲ ಅನುಭವಿಸಿ ಪೂರೈಸುವೆ” ಎಂದು ಮನಸಾ ನಮಿಸಿದರು.
ಧರ್ಮರಾಯ ಮಹಾಮಹಿಮರ ಬಳಿಬಂದು ಮಂಡಿಯೂರಿ ಕುಳಿತು “ಪಿತಾಮಹ ನನಗೇನಾದರೂ ಹೇಳಲಿಕ್ಕಿದೆಯೇ? ಹೇಳಿದರೆ ಆಜ್ಞೆ ಎಂದು ಈ ಕ್ಷಣವೆ ಪೂರೈಸುವ ಪ್ರಯತ್ನ ಮಾಡುವೆ. ಸಲಹೆ ಇದ್ದರೆ ಜೀವನ ಪರ್ಯಂತ ಅನುಸರಿಸುವೆ. ಈವರೆಗೆ ನಿಮ್ಮ ಒಂದಕ್ಷರವನ್ನೂ ಮೀರಿ ನಡೆದವರಲ್ಲ ನಾವು. ನಿಮ್ಮ ಈ ವೇದನೆ ನಮಗೂ ಅಸಹನೀಯವಾಗಿದೆ. ಇನ್ನು ಮುಂದೆ ನೀವು ನೀಡುತ್ತಿದ್ದ ರಕ್ಷಣೆ, ಮಾರ್ಗದರ್ಶನವಿಲ್ಲದೆ ನಮ್ಮ ಬದುಕು ಅನಾಥವಾಗಲಿದೆ. ಹೇಗೆ ಸಾಗಲಿದೆಯೋ? ಎಂಬ ಭಯವೂ ಮನಮಾಡಿದೆ” ಎಂದು ನುಡಿದು ಕಂಬನಿಗರೆದನು.
“ವತ್ಸಾ! ಧರ್ಮವನ್ನು ಅನುಸರಿಸಿ ನೀನು ಬದುಕಿರುವೆ. ಎಂತಹ ಜೀವನ ಪರೀಕ್ಷೆ ಎದುರಾದರೂ ಯಾವ ತ್ಯಾಗಕ್ಕೂ ಹಿಂಜರಿಯದೆ ಧರ್ಮಪಥದಲ್ಲಿ ಸಾಗಿದ ಆದರ್ಶ ಬದುಕು ನಿನ್ನದ್ದು. ಹಾಗಾಗಿ ಭಯ ಪಡಬೇಡ, ಧರ್ಮವೇ ಶ್ರೀರಕ್ಷೆಯಾಗಲಿದೆ. ಎಲ್ಲಿ ಧರ್ಮ ಇದೆಯೋ ಅಲ್ಲಿ ಜಯ ಸ್ಥಿತವಾಗಲಿದೆ. ಶ್ರೀಕೃಷ್ಣ ನಿಮ್ಮ ಜೊತೆಯಲ್ಲಿ ಇರುವಾಗ ಭಯ ಪಡಬೇಡ. ಆತನ ಮಾರ್ಗದರ್ಶನ ನಿಮ್ಮನ್ನು ಮುನ್ನಡೆಸಲಿದೆ. ಸರ್ವತ್ರ ವಿಜಯ ಸಾಧಿಸಿ ಚಂದ್ರವಂಶದ ಮಹಾರಾಜನಾಗು. ಧರ್ಮಸಂಗ್ರಾಮದಲ್ಲಿ ಧರ್ಮಕ್ಕೆ ಜಯವಾಗುವುದನ್ನು ಕಾಣ ಬಯಸಿರುವೆ. ಗೆದ್ದು ಅಭಿಷಿಕ್ತನಾಗಿ ಸಿಂಹಾಸನ ಏರಿದ ಬಳಿಕ ಮಹಾರಾಜನಾಗಿ ನನ್ನ ಬಳಿ ಬಾ. ನಿನಗೆ ಏನು ಹೇಳಬೇಕೋ ಆ ಎಲ್ಲವನ್ನೂ ಆಗ ಉಪದೇಶಿಸುವೆ. ಈಗ ದಕ್ಷಿಣಾಯಣ ಸಮಯ, ಇಚ್ಚಾಮರಣದ ಯೋಗವಿರುವ ಕಾರಣ ಉತ್ತರಾಯಣ ಕಾಲ ಬರುವವರೆಗೆ ಕಾದು ಆ ಬಳಿಕ ಮುಕ್ತಿ ಇಚ್ಚಿಸುವೆ. ಅಷ್ಟರವರೆಗೆ ನನ್ನ ದೃಷ್ಟಾದೃಷ್ಟ ಪಾಪ ದೋಷಗಳಿದ್ದರೆ ಈ ಯಾತನೆಯ ಅನುಭವಿಸುವಿಕೆಯಿಂದ ಪರಿಹೃತವಾಗಲಿ. ನೀನು ಅಂಜಿಕೆ ಅಳುಕು ತೊರೆದು ಧರ್ಮಕ್ಕಾಗಿ ಹೋರಾಡು. ಧರ್ಮಕ್ಕೆ ಜಯವಾಗಲಿ” ಎಂದು ಹರಸಿ ಆಶೀರ್ವದಿಸಿದರು.
ಹತ್ತನೆಯ ದಿನ ಮಧ್ಯಾಹ್ನದವರೆಗೆ ಯುದ್ದ ಭೀಕರವಾಗಿ ಸಾಗಿತ್ತು. ಆ ಬಳಿಕ ಶಿಖಂಡಿಯ ಪ್ರವೇಶ, ಭೀಷ್ಮಾಚಾರ್ಯರ ಶರಶಯ್ಯೆ ಆಗಿ ಕದನ ವಿರಾಮವಾಗಿತ್ತು. ಇನ್ನೂ ದಿನಾಂತ್ಯಕ್ಕೆ ಸಮಯವಿದ್ದರೂ, ಎರಡೂ ಪಕ್ಷ ಸಮರ ಮುಂದುವರಿಕೆಗೆ ಮನ ಮಾಡದೆ ಆ ದಿನದ ಯುದ್ದ ನಿಲ್ಲಿಸಲ್ಪಟ್ಟಿದೆ. ಇಕ್ಕೆಲಗಳ ಸೇನೆಗಳು ಬಿಡಾರ ಸೇರಿದವು.
ಭೀಷ್ಮಾಚಾರ್ಯರ ಸ್ಥಿತಿಯ ವಿಚಾರ ತಿಳಿದು ಮರುಗಿದ ರಾಧೇಯ ಕರ್ಣ. ಯಾಕೋ ಅಪರಾಧಿ ಪ್ರಜ್ಞೆ ಆತನ ಮನದಲ್ಲಾವರಿಸಿ, ತನ್ನ ಮಿತ್ರ ಕೌರವನಿಗಾಗಿ ಮಹಾತ್ಯಾಗ ಮಾಡಿದ ಆಚಾರ್ಯರನ್ನು ಕಾಣಲು ಏಕಾಂಗಿಯಾಗಿ ರಣಕ್ಷೇತ್ರದತ್ತ ಹೊರಟನು.
ಮುಂದುವರಿಯುವುದು…






