ಭಾಗ 336
ಭರತೇಶ್ ಶೆಟ್ಟಿ , ಎಕ್ಕಾರ್

ಈ ಕ್ಷಣದವರೆಗೆ ಕೇವಲ ಗೊಂದಲದ ಗೂಡೊಳಗೆ ಸಿಲುಕಿದ್ದ ಅರ್ಜುನ ಈಗ ಭಗವತ್ಶಕ್ತಿಯ ಅರಿವಿನ ಜ್ಞಾನ ಜ್ಯೋತಿಯಿಂದ ಸತ್ಯವನ್ನು ಕಾಣುತ್ತಿದ್ದಾನೆ. ಪಾರ್ಥ ಪರಮಾತ್ಮನ ವಿರಾಟ್ ಸ್ವರೂಪ ನೋಡ ಬಯಸಿದ್ದು ತನಗೆ ಕೃಷ್ಣ ಹೇಳಿದ ಮಾತುಗಳು ಸತ್ಯವೋ ಎನ್ನುವ ಸಂದೇಹ ಪರಿಹಾರ, ಅಥವಾ ಸಾಕ್ಷಿಗಾಗಿ ಅಲ್ಲ. ಅನಂತ, ಅಚ್ಯುತ, ಕೇಶವ, ನಾರಾಯಣ…. ಜಗನ್ನಿಯಾಮಕನ ದಿವ್ಯರೂಪವನ್ನು ತಾನು ಕಣ್ಣಾರೆ ಕಂಡು ಕೃತಾರ್ಥನಾಗಬೇಕೆಂಬ ಏಕೈಕ ಉದ್ದೇಶದಿಂದ. ಭಕ್ತನಾಗಿ ಭಾವದೃಷ್ಟಿಯಲ್ಲಿ ತುಂಬಿಕೊಂಡು ಧನ್ಯನಾಗುವ ಹೆಬ್ಬಯಕೆ ತಳೆದಿದ್ದಾನೆ.
ವಾಸುದೇವ ಶ್ರೀಕೃಷ್ಣ ಭಕ್ತವತ್ಸಲನೂ ಹೌದು. “ಅರ್ಜುನಾ! ಈ ಜಗತ್ತಿನಲ್ಲಿ ಲೋಕದ ಜನರು ಲೌಕಿಕ ಜ್ಞಾನದಿಂದ ವ್ಯವಹರಿಸುತ್ತಾರೆ. ಆದರೆ ದಿವ್ಯಜ್ಞಾನ ಸುಧೆಯನ್ನು ಹೊಂದಿದ ಕಾರಣ ನಿನಗೆ ಆತ್ಮಜ್ಞಾನದ ಸಾಕ್ಷಾತ್ಕಾರವಾಗಿ, ಪರಮಾತ್ಮನನ್ನು ಕಾಣುವ ಮನಸ್ಸಾಗಿದೆ. ಇದೆಲ್ಲವೂ ಸುಕೃತ ಫಲ ವಿಶೇಷವಾಗಿ ನಿನಗೆ ಒದಗಿ ಬಂದಿದೆ. ಬಿತ್ತನೆಗೆ ಕ್ಷೇತ್ರ ಸಿದ್ದವಾಗುವಂತೆ ಈಗ ನೀನೂ ಸುಜ್ಞಾನ ಪಡೆದು ಯೋಗ್ಯತಾವಂತನು ಆಗಿರುವೆ. ಇಷ್ಟಾದರೂ ನಿನ್ನ ಮಾನವ ದೃಷ್ಟಿಗೆ ನನ್ನ ರೂಪ ಕಾಣಿಸದು. ದಿವ್ಯ ದೃಷ್ಟಿಯನ್ನು ನಿನಗೆ ಅನುಗ್ರಹಿಸಿದ್ದೇನೆ. ಅನುಪಮವಾದ ನನ್ನ ವಿರಾಟ್ ಸ್ವರೂಪ ದರ್ಶನ ಮಾಡು” ಎಂದು ಹೇಳಿ ವಿಶ್ವರೂಪ ತಳೆದನು.
ಸಾವಿರ ಸಾವಿರ ಸೂರ್ಯರು ಏಕಕಾಲದಲ್ಲಿ ಪ್ರಜ್ವಲಿಸಿದರೆ ಯಾವ ರೀತಿಯ ಪ್ರಭೆ ಮೂಡಿ ಬರಬಹುದೊ ಅಂಥಹಾ ಬೆಳಕು ಆ ಮಹಾತ್ಮನ ಸ್ವರೂಪದಲ್ಲಿ ಬೆಳಗಿತು.
ಜ್ಞಾನ ದೃಷ್ಟಿ ಹೊಂದಿದ ಪಾರ್ಥ ಕೈ ಮುಗಿದು ದಿವ್ಯ ರೂಪಗಳನ್ನು ನೋಡುತ್ತಿದ್ದಾನೆ…. ಸಾವಿರಾರು ಲಕ್ಷೋಪಲಕ್ಷ ಬಗೆ ಬಗೆಯವು, ಹೊಳೆಯುವಂಥವು, ಹಲವು ಬಣ್ಣ, ಆಕಾರದವು.. ಜಗದಲ್ಲಿ ಏನೇನು ಸೃಷ್ಟಿಗಳಿವೆಯೋ ಅದೆಲ್ಲವೂ ಪರಮಾತ್ಮನಲ್ಲಿಯೇ ಕಾಣಿಸುತ್ತಿವೆ.
ಜಗತ್ತಿನಲ್ಲಿರುವ ಎಲ್ಲ ಆದಿತ್ಯರು(ದ್ವಾದಶಾದಿತ್ಯರು), ವಸುಗಳು (ಅಷ್ಟ ವಸುಗಳು), ರುದ್ರರು (ಏಕಾದಶ ರುದ್ರರು), ಅಶ್ವಿನಿಗಳು(ಇಬ್ಬರು), ಸಪ್ತ ಋಷಿಗಳೂ, ನವಗ್ರಹಗಳೂ, ಮರುತ್ತುಗಳು(ನಲ್ವತ್ತೊಂಬತ್ತು), ಗಂಧರ್ವ, ಕಿನ್ನರ, ಕಿಂಪುರುಷ, ನಾಗ ಉರಗ, ಪಕ್ಷಿ, ಪ್ರಾಣಿ ಹೀಗೆ ಏನೇನು ಸೃಷ್ಟಿಯಲ್ಲಿ ಇವೆಯೋ ಸರ್ವವೂ ಪರಮಾತ್ಮನಲ್ಲಿ ಇವೆ. ಅಗಣಿತವಾದ ಮುಖಗಳು, ಅಸಂಖ್ಯ ಕೈ ಕಾಲುಗಳು, ಸಮಸ್ತ ದಿವ್ಯಾಯುಧಗಳು, ಚಂದ್ರ, ನಕ್ಷತ್ರ, ಅಗ್ನಿ, ಬ್ರಹ್ಮ, ವಿಷ್ಣು, ರುದ್ರಾದಿಗಳು, ಇಂದ್ರಾದಿ ದೇವತೆಗಳು, ದಿಕ್ಪಾಲಕರೂ, ಋಷಿ, ಮುನಿ, ಮನೀಷಿಗಳು ಎಲ್ಲರೂ ಪರಮಾತ್ಮನಲ್ಲಿ ಸಾನಿಧ್ಯವಾಗಿದ್ದಾರೆ. ಅನೇಕಾನೇಕ ಪುಣ್ಯ ನದಿಗಳು, ಸಾಗರಗಳು, ಗಗನ, ದಿವ್ಯಲೋಕಗಳು, ಮಾತ್ರವಲ್ಲ ವರ್ಣಿಸಲು ಅಸದಳವಾದ ವೈಚಿತ್ರ್ಯಗಳು ಎಲ್ಲವೂ ಪರಮಾತ್ಮನಲ್ಲಿ ಅಡಕವಾಗಿವೆ. ಪಾರ್ಥ ನೋಡುತ್ತಲೆ ಇದ್ದಾನೆ ಅಮಿತವಾದ ರೂಪಗಳು, ಪಿತೃಗಳು, ಗತಿಸಿರುವ ರಾಜ ಮಹಾರಾಜರು, ಇಷ್ಟೆಯೋ!!! ಇಂದಿನ ಯುದ್ದದಲ್ಲಿ ಭಾಗಿಯಾಗುತ್ತಿರುವ ಪಿತಾಮಹ ಭೀಷ್ಮ, ಗುರು ದ್ರೋಣ, ಕೌರವರು, ಸಮಸ್ತ ಸೈನ್ಯ…. ಅರೆ! ಏನಾಶ್ಚರ್ಯ ಪಾಂಡವರೂ ಅಲ್ಲಿಯೆ ಕಾಣಿಸುತ್ತಿದ್ದಾರೆ.
ಚರಾಚರಗಳಿಂದ ಕೂಡಿದ ಇಡಿಯ ಜಗತ್ತಿನಲ್ಲಿ ಏನೇನಿದೆಯೋ ಅವೆಲ್ಲವೂ ಒಂದುಗೂಡಿದೆ.
ಸಮಸ್ತ ವಿಶ್ವ – ಬ್ರಹ್ಮಾಂಡದೊಳಗೆ ಇರುವ ಸಕಲ ಚೇತನ – ಅಚೇತನ, ಚಲಿಸುವ -ಚಲಿಸದ, ಅಣುವಿನಿಂದ ಮಹೋತ್ತವಾಗಿರುವ ಎಲ್ಲವೂ ಪರಮಾತ್ಮನಲ್ಲಿ ಅಂತರ್ಗತವಾಗಿದೆ.
ಅರ್ಜುನನಿಗೆ ಇಡೀ ರಣರಂಗವೆ ಪರಮಾತ್ಮನೊಳಗೆ ಲೀನವಾಗಿರುವುದು ಸ್ಪಷ್ಟವಾಗಿ ಗೋಚರಿಸಿತು. ತಿರುಗಿ ಕುರು – ಪಾಂಡವ ಸೇನೆಗಳನ್ನು ನೋಡಿದರೆ, ಅವುಗಳೂ ಪರಮಾತ್ಮನೊಳಗೆ ಪ್ರತಿಬಿಂಬಿಸುತ್ತಿವೆ.
“ಪ್ರಳಯ ಕಾಲದ ಅಗ್ನಿಯಂತೆ ಪ್ರಜ್ವಲಿಸುತ್ತಾ, ಕೋರೆದಾಡೆಗಳ ಅಬ್ಬರದ ನಿನ್ನ ಮೊರೆಗಳನ್ನು ಕಾಣುವಾಗ ಕಂಗೆಟ್ಟು ದಿಕ್ಕು ತೋಚದಾಗಿದೆ. ನೆಮ್ಮದಿ ಇಲ್ಲವಾಗಿದೆ. ಓ ಪರಮಾತ್ಮಾ! ಅಖಂಡ ಬ್ರಹ್ಮಾಂಡಕ್ಕೆ ಆಸರೆಯಾಗಿರುವ ಹೇ ಸರ್ವಶಕ್ತನೇ ದಯೆದೋರು. ಎಲ್ಲಕ್ಕಿಂತ ಮಿಗಿಲಾಗಿ ನರಸಿಂಹನಂತೆ ಕೋರೆ ದಾಡೆಗಳಿಂದ ಬಾಯ್ದೆರೆದು ನಿಂತಿರುವ ನಿನ್ನ ಮುಖವನ್ನು ಕಂಡು ಭಯಭೀತನಾಗಿದ್ದೇನೆ. ಕಾಲಾಂತಕನಂತೆ ವ್ಯಾಪಿಸಿರುವ ನಿನ್ನನ್ನು ಕಾಣುವಾಗ ಗಾಬರಿಯಿಂದ ನನ್ನ ಮನದ ಆನಂದವೂ ಮಾಯವಾಗುತ್ತಿದೆ. ನೆಮ್ಮದಿ ಕಳೆದುಕೊಳ್ಳುತ್ತಿದ್ದೇನೆ. ಓ ಸರ್ವ ದೇವತೆಗಳ ಒಡೆಯನೆ, ಸರ್ವಾಂತರ್ಯಾಮಿ ದೇವನೇ ನಿನ್ನ ರೂಪವನ್ನು ಪೂರ್ಣ ನೋಡುವುದಕ್ಕಾಗಲಿ, ಬಣ್ಣಿಸುವುದಕ್ಕಾಗಲೀ, ಸ್ತುತಿಸುವುದಕ್ಕಾಗಲಿ ನನಗೆ ಸಾಧ್ಯವಾಗುತ್ತಿಲ್ಲ. ಕರುಣೆ ತೋರಿ ಶಾಂತನಾಗಿ, ಮಾನವ ಶರೀರದ ವಾಸುದೇವ ಕೃಷ್ಣನಾಗಿ ಪ್ರಕಟನಾಗಿ ಉದ್ಧರಿಸಬೇಕು” ಎಂದು ಸಾಷ್ಟಾಂಗ ನಮಸ್ಕರಿಸಿ ಪಾರ್ಥ ಬೇಡಿಕೊಂಡನು.
ಮುಂದುವರಿಯುವುದು…






















































