ಭಾಗ 335
ಭರತೇಶ್ ಶೆಟ್ಟಿ, ಎಕ್ಕಾರ್

“ಪಾರ್ಥಾ! ಜೀವನರಹಸ್ಯದ ಈ ತತ್ವಸಾರ ಯಾರಿಂದ ಉಪದೇಶಿಸಲ್ಪಟ್ಟಿತು ಎಂಬ ನಿನ್ನ ಪ್ರಶ್ನೆ ಮೂಲವನ್ನು ಅರಸುತ್ತಾ ಹೊರಟಿದೆ. ಅಮೂಲಾಗ್ರವಾಗಿ ತಿಳಿದುಕೊಳ್ಳುವ ಬಯಕೆ ನಿನ್ನ ಮನಮಾಡಿರುವುದು ಸಾಧುವೇ ಆಗಿದೆ. ಮೊತ್ತ ಮೊದಲಾಗಿ ನಾನು ವಯ್ಯಾಕರಣಿಯಾದ ಸೂರ್ಯ ನಾರಾಯಣನಿಗೆ ಉಪದೇಶ ಮಾಡಿದ್ದೆನು. ಸೂರ್ಯನಿಂದ ಮನುವಿಗೂ, ಮನುವಿನಿಂದ ಇಕ್ಷ್ವಾಕುವಿಗೂ ಹೇಳಲ್ಪಡುತ್ತಾ ಮುಂದುವರಿಯಿತು. ನಾರದ ಮಹರ್ಷಿಗಳು ಈ ಜ್ಞಾನಸುಧೆಯನ್ನು ಸಂಗ್ರಹಿಸಿದ್ದಾರೆ. ಆದರೆ ಆ ಬಳಿಕ ಬಹುಕಾಲದಿಂದ ದಿವ್ಯೋಪದೇಶ ಜಿಜ್ಞಾಸೆ ಯಾರ ಮಧ್ಯೆಯೂ ನಡೆದಿಲ್ಲ. ನನ್ನ ಸಖನಾಗಿರುವ ನಿನಗೆ ಉಪದೇಶ ಮಾಡುವ ಸಕಾಲ ಸದವಕಾಶವಾಗಿ ಈಗ ಒದಗಿ ಬಂದಿದೆ. ಈ ದಿವ್ಯ ಜ್ಞಾನವನ್ನು ಅನುಸರಿಸಿ ಬದುಕಿದವರು ಯಾರಾದರೂ ಇದ್ದಾರೆಯೇ? ಎಂದು ಕೇಳಿರುವೆ. ರಾಜನಾದರೂ ಋಷಿಯಾಗಿ – ಅಂದರೆ ರಾಜರ್ಷಿಯಾಗಿ ಬದುಕಿದ ಜನಕ ಮಹಾರಾಜ ಉತ್ತಮ ಉದಾಹರಣೆ.
ಅರ್ಜುನನಿಗೆ ಇದೆಲ್ಲವನ್ನೂ ಕೇಳುವಾಗ ಸಂಶಯ ಮನಮಾಡಿತು. “ವಾಸುದೇವಾ! ನನ್ನ ಮನಸ್ಸು ಸಂಪೂರ್ಣವಾಗಿ ಗೊಂದಲಕ್ಕೀಡಾಗಿದೆ. ನಿನ್ನ ಮಾತನ್ನು ನಾನು ಪೂರ್ಣ ವಿಶ್ವಾಸದಿಂದ ನಂಬುತ್ತೇನೆ. ನೀನೂ – ನಾನೂ ಸಮಕಾಲಿನರು. ನಮ್ಮಿಬ್ಬರ ಹುಟ್ಟಿನ ಮಧ್ಯೆ ಹೆಚ್ಚಿನ ಅಂತರವಿಲ್ಲ. ನಾವಿಬ್ಬರು ಸರಿಸುಮಾರು ಸಮ ಪ್ರಾಯದವರು ಆಗಿದ್ದೇವೆ. ಸೂರ್ಯದೇವ ಯುಗ ಯುಗಾಂತರದಿಂದ ಶಾಶ್ವತವಾಗಿ ನಭದಲ್ಲಿ ಜಗಚಕ್ಷುವಾಗಿ ಬೆಳಗುತ್ತಿದ್ದಾನೆ. ಇನ್ನು ಮನು, ಇಕ್ಷ್ವಾಕು, ಜನಕಾದಿಗಳು ಯುಗಾಂತರದ ಕಾಲದಲ್ಲಿದ್ದವರು. ಹೀಗಿರುವಾಗ ಅಷ್ಟು ಹಿಂದೆ ನೀನು ಸೂರ್ಯದೇವನಿಗೆ ಹೇಗೆ ಉಪದೇಶಿಸಿರುವೆ? ಆ ನಿಗೂಢ ಸತ್ಯವನ್ನು ತಿಳಿಯಬಹುದೆ?
“ಅರ್ಜುನಾ! ಈ ಕೌತುಕವನ್ನು ತಿಳಿಯಬೇಕಾದರೆ ನೀನು ವಿಶಾಲ ಮನಸ್ಕನಾಗಬೇಕು. ನಿನಗೊಂದು ನಿದರ್ಶನವನ್ನು ವಿವರಿಸುವೆ. ನಿನ್ನ ಧನುಸ್ಸು ಗಾಂಡೀವಕ್ಕೆ ಬಿಗಿದ ಹೆದೆ ಧರ್ಮವಿದ್ದಂತೆ. ಆ ಧರ್ಮವನ್ನು ಆಧಾರವಾಗಿಸಿ ಕರ್ಮ ಶರಗಳನ್ನು ಪ್ರಕ್ಷೇಪಿಸುತ್ತಾ, ಕ್ರಮೇಣ ಬಿಗಿದ ಹೆದೆಯ ಬಿಗಿತ ಸಡಿಲಗೊಳ್ಳುತ್ತದೆ. ಪರಿಣಾಮ ಧರ್ಮವೆಂಬ ಹೆದೆಯಿಂದ ಸೆಳೆದು ಚಿಮ್ಮಲ್ಪಡುವ ಬಾಣದ ಗತಿಯೂ, ಗಮನವೂ, ಕ್ರಮಣ ದೂರವೂ ಕುಂಠಿತಗೊಳ್ಳುವುದಿಲ್ಲವೆ? ಆಗ ಮತ್ತೆ ಸುಲಲಿತವಾಗಿ ಶರ ಪ್ರಯೋಗವಾಗಿ ಗುರಿ ಸೇರಬೇಕಾದರೆ ಮಗದೊಮ್ಮೆ ಹೆದೆಯೇರಿಸಿ ಬಿಗಿಯಲ್ಪಡಬೇಕು ತಾನೆ? ಹಾಗೆಯೇ, ಯಾವಾಗ ಯಾವಾಗ ಲೋಕದಲ್ಲಿ ಧರ್ಮದ ಬಲ ಸಡಿಲವಾಗಿ, ಧರ್ಮಗ್ಲಾನಿಯಾಗುತ್ತದೋ, ಅಧರ್ಮ ತಾಂಡವವಾಡುತ್ತದೋ, ಸುಜನರಿಗೆ ಸಂಕಷ್ಟವೊದಗುತ್ತದೋ, ಸಾಧು ಸಜ್ಜನರ ಬದುಕು ದುಸ್ತರವಾಗುತ್ತದೋ, ಅಂತಹ ಸಮಯ ಯುಗ ಯುಗದಲ್ಲೂ ಧರ್ಮಸಂಸ್ಥಾಪನಾರ್ಥವಾಗಿ ದುಷ್ಟರನ್ನು, ವಂಚಕರನ್ನು, ಅಧರ್ಮಿಗಳನ್ನು ಸವರುವುದಕ್ಕೆ ಪರಮಾತ್ಮನು ಸ್ವಯಂ ತನ್ನನ್ನು ತಾನು ಸಂಭವಗೊಳಿಸುತ್ತಾನೆ (ಹುಟ್ಟಿ ಬರುವಂತೆ ಮಾಡಿ ಕೊಳ್ಳುತ್ತಾನೆ). ಕಾರ್ಯ ಕಾರಣದಿಂದ ತಳೆಯುವ ಇಂತಹ ಜನ್ಮದ ಉದ್ದೇಶ ಪೂರ್ಣಗೊಂಡ ಬಳಿಕ ಜೀವನ ಸಮಾಪ್ತಿಗೊಳಿಸಿ ಅಂತರ್ಧಾನನಾಗುತ್ತಾನೆ. ಈ ಪ್ರಕ್ರಿಯೆಗೆ ಅವತಾರ ಎನ್ನುವುದು. ಈ ರೀತಿ ಜನ್ಮತಳೆದು ಬರುವ ಅವತಾರ ಪುರುಷ ಪರಮಾತ್ಮನು ಜನರ ಮಧ್ಯೆ ತಾನು ದೇವ ಆಗಿದ್ದರೂ ಕೂಡಾ ಜೀವನಾಗಿ ವ್ಯವಹರಿಸಿಕೊಂಡು ಬದುಕುತ್ತಾನೆ. ಆದರೆ ಸಾಮಾನ್ಯ ಮಾನವರ ಬದುಕು ಹಾಗಲ್ಲ, ಅವರು ಜೀವರೇ ಆಗಿದ್ದರೂ ಅವರಿಗೆ ಅವತಾರ ಪುರುಷನ ಮಾಯೆಯ ಅರಿವಾಗದು. ಯಾಕೆಂದರೆ ಜೀವರುಗಳೆಲ್ಲ ಮಾಯೆಯ ಅಧೀನರಾಗಿರುತ್ತಾರೆ. ದೇವನಿಂದ ಸುಜನರಿಗೆ ಆತ್ಮ ಪ್ರೇರಣೆ ದೊರೆಯುತ್ತದೆ. ಈ ಪ್ರೇರಣಾತ್ಮಕ ಜ್ಞಾನ ಅಸದೃಶವಾದುದು. ಸುಜ್ಞಾನ ಆತ್ಮದಲ್ಲಿ ಬೆಳಗಿದಾಗ ಷಡ್ವಿಕಾರಗಳಿಂದ ಮನಸ್ಸನ್ನು ಮುಕ್ತಗೊಳಿಸಿ, ಉದ್ದೇಶಿತ ಧರ್ಮಯಜ್ಞದಲ್ಲಿ ಅವತಾರ ಪುರುಷನಿಗೆ ಸಹಕರಿಸುತ್ತಾರೆ.
ಪಾರ್ಥಾ! ಈ ಕೌತುಕ ವಿಶೇಷಗಳನ್ನು ಬಲ್ಲ ನಾನು ಸ್ವಯಂ ಪರಮಾತ್ಮನು. ನೀನು ಹೋಮ ಮಾಡುವ ಓರ್ವ ಬ್ರಾಹ್ಮಣನಂತೆ ನಿನ್ನ ಕರ್ಮವನ್ನಷ್ಟೆ ಮಾಡು. ಹೋಮದಲ್ಲಿ ಹೋಮಿಸಲ್ಪಡುವ ದ್ರವ್ಯ, ಸುವಸ್ತುಗಳ ಬಗ್ಗೆ ಮಮಕಾರ ಭಾವ ತಳೆಯಬೇಡ. ಅವುಗಳ ಸಮರ್ಪಣೆಯಿಂದ ಯಜ್ಞವಾಗುವುದು. ಅಂತಹ ಯಾಗದ ಫಲದ ಬಗ್ಗೆಯೂ ಚಿಂತೆ ಪಡಬೇಡ. ಅಗ್ನಿಯು ಸಮಿಧೆಯನ್ನು ಸುಡುವಂತೆ ನಿನ್ನೊಳಗೆ ಜಾಗೃತವಾಗಿ ಹಬ್ಬುತ್ತಿರುವ ಸುಜ್ಞಾನ ಕರ್ಮದೋಷಗಳನ್ನು ಭಸ್ಮಗೊಳಿಸಿ ಬಿಡುತ್ತದೆ. ನಾನು ಈ ಜಗತ್ತಿನ ಪ್ರತಿಯೊಂದು ವಸ್ತು ವಿಶೇಷಗಳಲ್ಲೂ ಶ್ರೇಷ್ಟತೆಯಿಂದ ಅಡಕವಾಗಿದ್ದೇನೆ. ಭಗವದಂಶದಿಂದ ಕೂಡಿರುವ, ದಿವ್ಯತೆಗಳಿರುವ ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ನನ್ನ ಅಂಶ ವಿಭೂತಿಯಾಗಿ ಸಾನಿಧ್ಯವಾಗಿದೆ. ಇಷ್ಟೆಲ್ಲಾ ತಿಳಿದ ಬಳಿಕ ನಿನ್ನ ಮನದಲ್ಲಿ ಯಾವ ವಿಕಾರತೆಗೂ ಅವಕಾಶವಿರಕೂಡದು. ಈಶ್ವರನಿಗೆ ಪ್ರಿಯವಾಗಲಿ, ನಾನು ಕರ್ಮನ್ನಷ್ಟೆ ಮಾಡುತ್ತೇನೆ. ಫಲಾಫಲಗಳು ಈಶ್ವರಾ ನಿನ್ನ ಗಣನೆಗೆ ಬಿಟ್ಟದ್ದು. ಹೀಗೆಂದು ಧೃಢ ನಂಬಿಕೆಯಿಂದ ಸ್ವಧರ್ಮವೂ ಸ್ವಕರ್ಮವೂ ಆಗಿರುವ ನಿನ್ನ ಕಾರ್ಯದಲ್ಲಿ ತೊಡಗಿಕೋ. ಲೋಕದಲ್ಲಿ ಅನ್ಯಾಯ ಅಧರ್ಮ ತಲೆ ಎತ್ತಿರುವ ಈ ಸಮಯ, ಸ್ವಯಂ ನಾನೇ ವ್ಯಕ್ತನಾಗಿದ್ದು ನಿನಗೆ ಪ್ರೇರಣಾದಾಯಿಯಾದಂತೆ, ಅಧರ್ಮಿಗಳ ನಾಶಕ್ಕೆ ಪ್ರತಿದಿನವೂ ಸುಜನರೊಳಗೆ ಅವ್ಯಕ್ತವಾಗಿ ನಾನೇ ಆತ್ಮಚೇತನ ಸ್ವರೂಪದಲ್ಲಿ ಹೊಕ್ಕು, ಸದೃಢಗೊಳಿಸಿ ಹೋರಾಟಕ್ಕೆ ಮನಮಾಡಿಸಿ ಧರ್ಮದ ಸ್ಥಾಪನೆ ಮಾಡಿಸುತ್ತಿರುತ್ತೇನೆ. ಈಗ ನೀನು ನಿಮಿತ್ತ ಮಾತ್ರ ಎಂದಷ್ಟೇ ತಿಳಿದು ಕರ್ಮಾಕರ್ಮಗಳ ಬಾಧ್ಯತೆ ಪರಿಣಾಮಗಳನ್ನು ಪರಮಾತ್ಮನಿಗೆ ಸಮರ್ಪಿಸಿ ಸಿದ್ಧನಾಗು. ನಿನ್ನನ್ನು ಯಾವ ಕರ್ಮ ಬಂಧನವೂ ಸುತ್ತಿಕೊಳ್ಳದು.” ಎಂದು ವಾಸುದೇವ ಕೃಷ್ಣ ಪರಮಾತ್ಮ ಅನುಪಮವಾದ ಭವ್ಯ ಸತ್ಯವನ್ನೂ, ಧರ್ಮಪಾಲನೆಯ ರಹಸ್ಯವನ್ನೂ ವಿವರಿಸಿ ಹೇಳಿದ.
ಪರಮ ರಹಸ್ಯವಾದ ದಿವ್ಯಜ್ಞಾನ ಹೊಂದಿದ ಅರ್ಜುನ “ಪರಮಾತ್ಮಾ! ನಿನ್ನ ಜೊತೆಯಲ್ಲಿ ಇದ್ದು, ನಿನ್ನ ಸಖನಾಗಿದ್ದರೂ, ಜೀವನಾಗಿ ಸಹಜೀವನ ಮಾಡುತ್ತಿದ್ದರೂ ನಿನ್ನನ್ನು ಅರಿಯಲಾಗದೆ ಹೋದೆ. ಭಗವಂತಾ, ನನ್ನ ಮನದಲ್ಲಿ ಮಹತ್ತರವಾದ ಬಯಕೆಯೊಂದು ಮನಮಾಡಿದೆ. ಸೂರ್ಯನಿಗಿಂತಲೂ ಮೊದಲು ಈ ಜಗದಲ್ಲಿ ಸ್ಥಿತನಾಗಿದ್ದು ಅನಂತನಾಗಿರುವ ನಿನ್ನ ಆ ದಿವ್ಯರೂಪವನ್ನು ನಾನು ನೋಡಿ ಕೃತಾರ್ಥನೂ – ಧನ್ಯನೂ ಆಗಬೇಕೆಂಬ ಭಾವ ಜಾಗೃತವಾಗಿದೆ. ನಾನು ಆ ದರುಶನಕ್ಕೆ ಯೋಗ್ಯನಾಗಿದ್ದರೆ ಕೃಪೆದೋರಿ ನನ್ನ ಜನುಮ ಜೀವನ ಪಾಮನಗೊಳಿಸಬೇಕು ದೇವಾ…” ಎಂದು ಕೈ ಮುಗಿದು ಕೃಷ್ಣನ ಪಾದ ಮೂಲಕ್ಕೆರಗಿ ವಂದಿಸಿದನು.
ಮುಂದುವರಿಯುವುದು….



















































