ಭಾಗ – 328
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೩೩೮ ಮಹಾಭಾರತ
ಅರ್ಜುನ ಶ್ರೀಕೃಷ್ಣಾನುಗ್ರಹಿತ ದಿವ್ಯ ದೃಷ್ಟಿಯಿಂದ ವಿರಾಟ್ ರೂಪವನ್ನು ನೋಡುತ್ತಿದ್ದಂತೆಯೇ, ಅತ್ತ ಹಸ್ತಿನಾಪುರದ ಅರಮನೆಯಲ್ಲಿ ಸಂಜಯನೂ ಪರಮಾತ್ಮನ ವಿಶ್ವರೂಪ ದರ್ಶನ ಮಾಡಿದನು. ಆ ರೂಪಾತಿಶಯದ ಲಾವಣ್ಯ ವಿಶೇಷಗಳನ್ನು ಧೃತರಾಷ್ಟ್ರನಿಗೆ ವರ್ಣಿಸಿ ವಿವರಿಸುತ್ತಿದ್ದನು. ಸಂಜಯನಿಗೆ ಭಗವಾನ್ ವ್ಯಾಸರಿಂದ ಈ ದಿವ್ಯ ದೃಷ್ಟಿ ಅನುಗ್ರಹಿತವಾಗಿತ್ತು.
“ರಾಜಾ ಧೃತರಾಷ್ಟ್ರ, ರಣಧಾರುಣಿಯಲ್ಲಿ ವಾಸುದೇವ ಕೃಷ್ಣ ಧರ್ಮೋಪದೇಶ ಮಾಡುತ್ತಿದ್ದಾನೆ. ಕಾಮಧೇನುವಿನಂತೆ ಜ್ಞಾನಾಮೃತ ಸದೃಶ ಕ್ಷೀರ ಸುರಿಸುತ್ತಿದ್ದಾನೆ. ಅರ್ಜುನ ಕರುವಿನಂತೆ ಪಾನ ಮಾಡುತ್ತಿದ್ದಾನೆ.
ಮಹಾರಾಜಾ! ವಾಸುದೇವನು ಅಕ್ಷರನು. ಕ್ಷರ ಎಂದರೆ ನಾಶ – ಅಕ್ಷರ ಎಂದರೆ ನಾಶವಿಲ್ಲದ್ದು.
ಅಕ್ಷಯನು – ಕ್ಷಯವಿಲ್ಲದ್ದು, ಅನಂತನು – ಅಂತ್ಯವಿಲ್ಲದ್ದು. ಈ ವಿರಾಟ್ ರೂಪದ ಆದಿ, ಮಧ್ಯ, ಅಂತ್ಯಗಳ್ಯಾವುದನ್ನೂ ಕಾಣಲಾಗುತ್ತಿಲ್ಲ.
ಅಮಿತನು – ಈ ರೂಪವನ್ನು ಮಿತಿಯೊಳಗೆ ಚಿತ್ರಿಸಲು ಅಸಾಧ್ಯ. ಯೋನಿಜ, ಅಂಡಜ, ಜಲಚರ, ಸರೀಸೃಪ, ಸದ್ಯೋಜಾತ, ಮಾಯ, ಮರುತ್ತುಗಳು, ಯಕ್ಷಿಣಿ, ಗಂಧರ್ವ, ವಿಶ್ವದೇವತೆಗಳು, ತ್ರಿಮೂರ್ತಿಗಳು, ರುದ್ರರು, ಆದಿತ್ಯರು,ವಸುಗಳು, ಊಷ್ಮಪರು (ಪಿತೃ ದೇವತೆಗಳು) ಅಸುರರು, ದೈತ್ಯರು, ದಾನವರು, ಮಾನವರು, ಸಿದ್ಧರು, ಸಾಧ್ಯರು, ದಿಕ್ಪಾಲಕರು, ಋಷಿಗಳು, ಜಲ, ನೆಲ, ಚತುರ್ಲೋಕ ಸಹಿತ ಬ್ರಹ್ಮಾಂಡ, ಸಕಲ ಚರಾಚರ ಜೀವಾಜೀವ, ಸಕಲ ಸುವಸ್ತು, ಆಭರಣಗಳು, ಕ್ಷತ್ರೀಯರು, ರಾಜರು, ರಥಿಕರು ಸೇನೆ…… ಏನೇನು ಈ ಸೃಷ್ಟಿಯಲ್ಲಿದೆಯೋ ಸರ್ವವೂ ಭಗವಂತನಲ್ಲಿ ಸ್ಥಿತವಾಗಿದೆ.
ಈ ರೂಪ ವಿಶೇಷಣವನ್ನು ಸಹಸ್ರ ಜಿಹ್ವೆಯ ಮಹಾಶೇಷನಿಗೂ ವರ್ಣಿಸಲಾಗದು.
ಸರ್ವ ದೇವತೆಗಳೂ ಭಗವಂತನ ಅವತಾರವೋ ಎಂಬ ಭ್ರಮೆಯಾಗುತ್ತಿದೆ. ಎಲ್ಲರೂ – ಎಲ್ಲವೂ ಆತನಲ್ಲಿ ಅಡಕವಾಗಿದೆ. ಪರಮಾತ್ಮ ಧರ್ಮಸಂಸ್ಥಾಪನೆಗಾಗಿ ಅವತಾರ ಎತ್ತಿ ಬಂದಿರುವುದು ಶತಸಿದ್ಧ ಸತ್ಯ. ಎತ್ತರಕ್ಕೆ ನೋಡಿದರೆ ನಭಾದ್ಯಂತರ ವ್ಯಾಪಿಸಿದ್ದಾನೆ. ಸಮಸ್ತ ಭೂಮಂಡಲವನ್ನೂ ಮೀರಿ ಬೆಳೆದಿದೆ ಭಗವಂತನ ರೂಪ” ಹೀಗೆ ಭಕ್ತಿಯಿಂದ ಭಗವಂತನ ಕೀರ್ತಿಯನ್ನೂ, ಸರ್ವಾಂತರ್ಯ ವ್ಯಾಪ್ತ ಮೂರ್ತಿಯನ್ನೂ ವರ್ಣಿಸಿ, ಸ್ತುತಿಸಿ ಪ್ರಾರ್ಥಿಸಿದನು ವ್ಯಾಸ ಶಿಷ್ಯ ಸಂಜಯ.
ಬಳಿಕ ಸಂಭವನೀಯ ಭವಿಷ್ಯವನ್ನು ಅರಿತು ಧೃತರಾಷ್ಟ್ರನಿಗೆ ವಿವರಿಸತೊಡಗಿದನು. “ರಾಜಾ! ಈ ಯುದ್ದ ತೋರಿಕೆಯ ನೆಪ ಮಾತ್ರ. ವಾಸ್ತವ ಅಗೋಚರ ಸತ್ಯ ಭಿನ್ನವಾಗಿದೆ. ಅಧರ್ಮ ಪಥಕ್ರಮಣದಲ್ಲಿರುವ ಸರ್ವವೂ ನಾಶವಾಗಲಿದೆ. ಧರ್ಮಾಧಾರಿತವಾದುದಷ್ಟೇ ಉಳಿಯಲಿದೆ. ನಿನ್ನ ಮಕ್ಕಳು ಮರಣದ ನೆವನಕ್ಕಾಗಿ, ಭವ ಬಂಧನದ ಬಿಡುಗಡೆಗಾಗಿ ಸೂತ್ರಧಾರನ ಆಟಿಕೆಗಳಾಗಿ ವರ್ತಿಸುತ್ತಿದ್ದಾರೆ. ನೀನು ಇಲ್ಲಿಂದಲೆ ಮನಸ್ಸನ್ನು ಗಟ್ಟಿ ಮಾಡಿಕೋ. ಅಧರ್ಮಿಗಳು ಮತ್ತು ಅಧರ್ಮದ ಪಕ್ಷಪಾತಿಗಳಾದವರು ಎಲ್ಲರೂ ನಿಗ್ರಹಿಸಲ್ಪಡುತ್ತಾರೆ. ಧರ್ಮಾತ್ಮರಾದ ಪಾಂಡವರ ಗೆಲುವು ಪರಮಾತ್ಮನ ಉಪಸ್ಥಿತಿಯಲ್ಲಿ ನಿಶ್ಚಿತ. ಮುಂದೆ ಏನಾಗಲಿದೆಯೋ ಅದು ಖಚಿತವಾಗಿದೆ. ಈಗಿಂದಲೆ ಮುಂದೆ ಬರಬಹುದಾದ ಕಹಿ ಸುದ್ದಿಗಳ ನಿರೀಕ್ಷೆಯಲ್ಲಿರಬಹುದು. ಸಹಿಸಿಕೊಳ್ಳುವ ಮನಸ್ಥಿತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಧರ್ಮ ಸ್ಥಾಪನೆಗೆ ಪರಮಾತ್ಮನು ಸ್ವಯಂ ದೀಕ್ಷಿತನಾಗಿ ಮಾಡಿಸುವ ಯಜ್ಞದಲ್ಲಿ ನಿನ್ನ ಮಕ್ಕಳೂ, ಅವರ ಪಕ್ಷವೂ, ಇತರ ಅಧರ್ಮಿಗಳೆಲ್ಲರೂ ಹವಿಸ್ಸುಗಳಾಗಿ ಹೋಗಲಿದ್ದಾರೆ” ಎಂದು ಸೂಚ್ಯವಾಗಿ ವಿವರಿಸಿ ಹೇಳಿದನು.
ಧೃತರಾಷ್ಟ್ರನಿಗೆ ಪುತ್ರ ವಿಯೋಗದ ದುಃಖ ಉಮ್ಮಳಿಸಿ ಬಂದರೂ, ಅಸಹಾಯಕನಾಗಿ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂದು ಸುಮ್ಮನಿದ್ದು ಅಸದಳ ಹಿಂಸೆ ಅನುಭವಿಸತೊಡಗಿದನು.
ಗೀತೋಪದೇಶದಿಂದ ಭವಭಯ ಮುಕ್ತನಾಗಿ ಕರ್ಮಪಾಲನೆಗೆ ಸಿದ್ಧನಾದನು ಅರ್ಜುನ. ಭಗವಂತನಿಗೆ ಸರ್ವಸ್ವವನ್ನೂ ಸಮರ್ಪಿಸಿ ನಿಮಿತ್ತ ಮಾತ್ರ ತಾನು ಎಂದು ಅರಿತು, ಸಮರಾರಂಭದ ಸೂಚಕವಾಗಿ ಶ್ರೀಕೃಷ್ಣ ಪಾಂಚಜನ್ಯ ಮೊಳಗಿಸಿದಾಕ್ಷಣ ತನ್ನ ದೇವದತ್ತ ಶಂಖವನ್ನೂದಿ, ಗಾಂಡೀವದ ಹೆದೆಯೇರಿಸಿ ಬಿಗಿದು ಧನಷ್ಟಂಕಾರ ಮಾಡಿದನು.
ಮುಂದುವರಿಯುವುದು…



















































