23.9 C
Udupi
Saturday, January 31, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 312

ಭರತೇಶ ಶೆಟ್ಟಿ, ಎಕ್ಕಾರ್

ದ್ವಾರ ಪಾಲಕನಿಂದ ವಿಚಾರ ತಿಳಿದ ದೂತನು ಭೀಷ್ಮಾಚಾರ್ಯರ ಬಳಿ ಬಂದು ದುರ್ಯೋಧನನ ಆಗಮನದ ವಿಚಾರ ತಿಳಿಸಿದನು. ಭೀಷ್ಮಾಚಾರ್ಯರಿಗೆ “ಇವನೇಕೆ ಈಗ ಬಂದಿದ್ದಾನೆ? ಏನು ಅವಘಡವಾಗಿದೆ? ಅವಸರವಾಗಿ ಈ ರೀತಿ ಯಾಕೆ ಬಂದಿದ್ದಾನೆ!” ಎಂದೆನ್ನುತ್ತಾ ಒಳ ಬರ ಹೇಳುವ ಬದಲು ತಾನು ಬಾಗಿಲ ಬಳಿ ಬಂದರು. ಮೊಮ್ಮಗ ಸುಯೋಧನನನ್ನು ಕಂಡು “ಕ್ಷೇಮವೇ?” ಎಂದು ಕೇಳಿ ಒಳ ಬರ ಮಾಡಿ ಕೊಂಡರು. ದುರ್ಯೋಧನ ಪಿತಾಮಹರ ಪಾದ ಪದ್ಮಗಳಿಗೆ ನಮಿಸಿ ಅತಿವಿನಯದಿಂದ ವರ್ತಿಸಿದನು. “ಶ್ರೇಯೋವಂತನಾಗು” ಎಂದು ಹರಸಿ ಜೊತೆಯಲ್ಲಿ ಅವನೊಬ್ಬನನ್ನು ಕರಕೊಂಡು ಒಳ ಬಂದರು. ತನ್ನ ಮಂಚದಲ್ಲಿ ಒತ್ತಿನಲ್ಲಿ ಕುಳ್ಳಿರಿಸಿದರು. “ದುರ್ಯೋಧನಾ ವಿನಾ ಕಾರಣ ನೀನು ನನ್ನ ಮನೆಗೆ ಬರುವವನಲ್ಲ. ಈ ತನಕ ಹಾಗೆ ಬಂದುದೂ ಇಲ್ಲ. ಇಂದು ಬಂದಿರುವೆ ಎಂದಾದರೆ ಏನೋ ಮಹತ್ತರ ಉದ್ದೇಶದಿಂದಲೆ ಬಂದಿರಬೇಕು. ಅಜ್ಜನನ್ನು ಕಾಣುವ ಮೊಮ್ಮಗನಾಗಿ ಬಂದ ಹಾಗಿಲ್ಲ. ಕೈಯಲ್ಲಿ ಆಯುಧ ಧಾರಣೆ ಮಾಡಿರುವೆ. ರಕ್ಷಣಾ ಪಡೆ ಜೊತೆಯಲ್ಲಿದೆ. ಸೈನಿಕರ ತುಕಡಿಯೂ ಹಿಂಬಾಲಿಸಿ ಬಂದಿದೆ. ಅಂದರೆ ನೀನು ಸಂಬಂಧಿಯಾಗಿ ಬಂದವನಲ್ಲ. ಅಜ್ಜನನ್ನು ಕಾಣ ಬರುವ ಮೊಮ್ಮಗ ಈ ರೀತಿ ಬರುವ ಅಗತ್ಯವಿಲ್ಲವಲ್ಲ. ಏನು ಮಗನೇ ಈ ನಡು ರಾತ್ರಿಯಲ್ಲಿ, ಬೆಳಗಿನವರೆಗೂ ಕಾಯದೆ ಬಂದಿರುವೆ? ಯಾಕೆ? ಏನಾಯಿತು?” ಎಂದು ಪ್ರಶ್ನಿಸತೊಡಗಿದರು.

“ಅಜ್ಜಾ! ಪಾಂಡವರು ಆ ಯಾದವ ಕೃಷ್ಣನ ಮುಂದಾಳತ್ವದಲ್ಲಿ ತಮ್ಮ ಸಕಲ ಸೈನ್ಯ ಸೇರಿಸಿಕೊಂಡು ಬಂದು ಕುರುಕ್ಷೇತ್ರದಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿ ಕಾರ್ಯನಿರತರಾಗಿದ್ದ ನಮ್ಮ ಕಾವಲು ಪಡೆಯ ರಕ್ಷಕರನ್ನೆಲ್ಲಾ ಕೃಷ್ಣಾರ್ಜುನರು ಬಡಿದೋಡಿಸಿದ್ದಾರೆ. ಪಾಂಡವರ ಸೇನೆಯಲ್ಲಿ ಏಳು ಅಕ್ಷೋಹಿಣಿ ಸೇನೆ ಸಮಾಹಿತವಾಗಿದೆಯಂತೆ. ಕತ್ತಲಾಗುವ ಸಮಯ ಈ ವಾರ್ತೆ ಓಡಿ ಬಂದ ರಕ್ಷಣಾ ಸೈನಿಕರಿಂದ ತಿಳಿದು ಬಂತು. ಆ ಕಾರಣದಿಂದ ಯುದ್ದ ಸಿದ್ದತೆಗಾಗಿ ಅವಸರದ ಸಭೆಯನ್ನು ನಡೆಸಿದೆ. ನಮ್ಮದಾದ ಸೇನೆಗೆ ಅಕ್ಷೋಹಿಣಿ ಪತಿಗಳನ್ನೂ ನೇಮಕ ಮಾಡಿದ್ದೇನೆ. ಮಾತ್ರವಲ್ಲ ಕುರುಕ್ಷೇತ್ರದಲ್ಲಿ ನಮಗೆ ಬೇಕಾಗಬಹುದಾದ ಸಕಲ ಸಿದ್ದತೆಗಳನ್ನು ಪ್ರಾರಂಭಿಸಲು ಆಜ್ಞೆ ಮಾಡಿದ್ದೇನೆ. ಈ ಬಗ್ಗೆ ಮುಂದಿನ ಯುದ್ದ ಪರಿಕ್ರಮದ ತಯಾರಿ, ಯೋಜನೆಗಳನ್ನು ರೂಪಿಸಬೇಕಾಗಿದೆ. ಸಮರ್ಥ ಸೇನಾಪತಿಯನ್ನು ನಿರ್ಣಯಿಸಿ ಯುದ್ದದ ಹೊಣೆಗಾರಿಕೆ ವಹಿಸಬೇಕಾಗಿದೆ. ಸೇನಾಪತಿಗೆ ನಾಳೆ ಬೆಳಿಗ್ಗೆ ಮೂರ್ಧಾಭಿಷೇಕವನ್ನೂ ಮಾಡಬೇಕಾಗಿದೆ. ಹಾಗಾಗಿ ಸಮಯದ ಸಂದಿಗ್ಧತೆ ಇರುವ ಕಾರಣ, ಈ ನಡು ರಾತ್ರಿಯಲ್ಲಿ ನಿಮ್ಮನ್ನು ಕಾಣುವುದಕ್ಕೆ ಬರಬೇಕಾಯಿತು. ಉಭಯ ಪಕ್ಷದ ಗುರುಗಳೂ, ಹಿರಿಯರೂ ಆದ ದ್ರೋಣಾಚಾರ್ಯರು ಅವರ ಅಭಿಮತವಾಗಿ ಕುರು ಸೇನೆಗೆ ನೀವೇ ಸೇನಾಪತಿ ಆಗಬೇಕು ಎಂದು ಹೇಳಿರುವರು. ಅಜ್ಜಾ ನೀವೇ ನಮ್ಮ ಸೇನಾಪತಿಯಾಗಿ ಯುದ್ದವನ್ನು ಗೆದ್ದು ಕೊಡಬೇಕೆಂಬುದು ನನ್ನ ಅಭಿಲಾಷೆಯೂ ಆಗಿದೆ. ಆ ಕುರಿತಾಗಿ ಚರ್ಚಿಸುವುದಕ್ಕಾಗಿ ಬಂದಿದ್ದೇನೆ” ಎಂದು ವಿಜ್ಞಾಪಿಸಿಕೊಂಡನು.

ಭೀಷ್ಮಾಚಾರ್ಯರು “ಸುಯೋಧನಾ! ಯುದ್ದವೇ ಬೇಡ ಎಂದು ಸಾಧ್ಯವಿರುವುದಕ್ಕಿಂತಲೂ ಹೆಚ್ಚಿನ ಪ್ರಯತ್ನ ಮಾಡಿ ಹೇಳುವಾಗ ನಮ್ಮ ಯಾರ ಮಾತೂ ಕೇಳದೆ ಯುದ್ದವೇ ಅನಿವಾರ್ಯ ಎಂದು ತುದಿಗಾಲಲ್ಲಿ ನಿಂತವನು ನೀನು. ಈಗ ನನ್ನ ಬಳಿ ಬಂದು ನೀವು ಸೇನಾಪತಿಯಾಗಿ ಯುದ್ದ ಗೆಲ್ಲಿಸಿಕೊಡಬೇಕೆಂದು ಹೇಳುತ್ತಿರುವೆ. ಸರ್ವ ಶಕ್ತನಾದ ಶ್ರೀ ಕೃಷ್ಣನೇ ಬಂದು ಸಂಧಾನಕ್ಕಾಗಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ರೀತಿಯಲ್ಲಿ ಸಂಧಿಗಾಗಿ ಪ್ರಯತ್ನಿಸುವಾಗಲೂ ನಿನಗೆ ನಮ್ಮ ಯಾರ ಮಾತೂ ಕೇಳುವ ವ್ಯವಧಾನ ಇರಲಿಲ್ಲ. ಪಾಂಡವರು ಸಂಬಂಧದಲ್ಲಿ ನಿನ್ನ ಚಿಕ್ಕಪ್ಪನ, ರಾಜಕೀಯವಾಗಿ ಅಭಿಷಿಕ್ತ ಚಕ್ರವರ್ತಿಯ ಮಕ್ಕಳು. ಈ ಸಾಮ್ರಾಜ್ಯದ ಮೇಲೆ ಸರ್ವ ವಿಧದಿಂದಲೂ ನಿನಗಿಂತ ಹೆಚ್ಚಿನ ಹಕ್ಕುಳ್ಳವರು. ಜೇಷ್ಠತೆ, ಸಾಮರ್ಥ್ಯ, ಧರ್ಮಪಾಲನೆ, ಪರಾಕ್ರಮ ಈ ಯಾವ ವಿಭಾಗದಲ್ಲೂ ಅವರು ಹಿಂದುಳಿದಿಲ್ಲ. ಅಂತಹ ಸರ್ವ ಸಮರ್ಥರ ಜೊತೆ ಒಪ್ಪಂದದಿಂದ ಬಗೆಹರಿಸಿಕೊಳ್ಳಬಹುದಾಗಿದ್ದ ಸರಳ ಸಮಸ್ಯೆಯನ್ನು ಜಟಿಲಗೊಳಿಸಿ ಯುದ್ದ ನಿರ್ಣಯಗೊಳಿಸಿದವನು ನೀನು. ಈಗ ಸೇನಾಧಿಪತ್ಯಕ್ಕೆ ನನ್ನನ್ನು ಒಪ್ಪಿಸಲು ಬಂದಿರುವೆಯಾ? ಬಂಧುಗಳಾದ ಪಾಂಡವರ ಜೊತೆ ಕಲಹ ಮಾಡುವುದೇ ಮಹಾಪಾಪ. ಮಾತ್ರವಲ್ಲ ಕುಲನಾಶಕವೂ ಆಗಿದೆ. ಸಹಿಷ್ಣುಗಳೂ, ಧರ್ಮಪಾಲಕರೂ ಆದ ಪಾಂಡವರು ನಿರ್ದೋಷಿಗಳು. ಅಂತಹವರ ಮೇಲೆ ಅಕಾರಣವಾಗಿ ಯುದ್ದ ಮಾಡುವುದು ಅಪರಾಧ. ರಾಜಕೀಯವಾಗಿಯೂ ಅವರ ನಡೆ ಸರ್ವ ರೀತಿಯಲ್ಲೂ ಸಮರ್ಥನೀಯವಾಗಿದ್ದು ಚಂದ್ರಾನ್ವಯದ ಶ್ರೇಯಸ್ಸಿಗಾಗಿ ಮಹಾತ್ಯಾಗಕ್ಕೂ ಸಿದ್ದನಾದ ಯುಧಿಷ್ಠಿರ ಕೇಳಿದ್ದು ಯಕಶ್ಚಿತ್ ಐದು ಗ್ರಾಮ. ಯಾವುದಾದರು ಯಾಗ ಯಜ್ಞಗಳನ್ನು ಮಾಡಿಸಿದಾಗ ಸಾಮ್ರಾಟರಾದ ನಾವು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಭೂಭಾಗವನ್ನು ಬ್ರಾಹ್ಮಣೋತ್ತಮರಿಗೆ ದಾನವಾಗಿ ನೀಡಿದ್ದೇವೆ. ಇಲ್ಲಿ ನ್ಯಾಯಯುತ ದಾಯಭಾಗ ನೀಡ ಬೇಕಾದ ಜವಾಬ್ದಾರಿ ಇದ್ದಾಗ್ಯೂ ನೀನು ಹಸುವಿನ ಗೊರಸಿನಡಿಯಷ್ಟೂ ಭೂಮಿ ನೀಡಲಾರೆ ಎಂದು ನಿಷ್ಠುರವಾದಿಯಾಗಿ ಹಠ ಸಾಧಿಸಿರುವೆ. ಪಾಂಡವರಿಗೆ ಪುಣ್ಯ ಬಲ, ಧರ್ಮ ಬಲ, ಶ್ರೀಕೃಷ್ಣನೇ ಸಾಕ್ಷಾತ್ ಜೊತೆಗಿದ್ದು ದೈವಬಲವೂ ಅವರಲ್ಲಿ ಸನ್ನಿಹಿತವಾಗಿದೆ. ಬಾಹುಬಲ ಪರಾಕ್ರಮದಲ್ಲೂ ಅವರೇನು ಕಡಿಮೆಯಿಲ್ಲ. ಆದರೆ ನೀನೀಗ ಮಾಡ ಬಾರದುದೆಲ್ಲವನ್ನೂ ಮಾಡಿರುವ ಧರ್ಮದ್ರೋಹಿ – ಮಹಾ ಅಧರ್ಮಿಯಾಗಿ ಪಾತಕವನ್ನು ಹೊತ್ತಿರುವೆ. ದೈವಬಲದ ಬದಲಾಗಿ ದೋಷ – ಪಾಪಗಳ ಹೊರೆ ನಿನ್ನ ಹೆಗಲೇರಿ ಕುಳಿತಿದೆ. ಇಹ ಪರ ಎರಡನ್ನೂ ಕೆಡಿಸಿ ಬಿಟ್ಟಿರುವೆಯಲ್ಲಾ ಮಗನೇ? ಇಂತಹ ಕುಲನಾಶಕ ದುರ್ಬುದ್ದಿ ನಿನಗೆಲ್ಲಿಂದ ಬಂತು? ದುಷ್ಟರ ಸಂಸರ್ಗದ – ಸಹವಾಸ ದೋಷದಿಂದಲೆ ನೀನು ಈ ರೀತಿ ದುರ್ಮಾರ್ಗಿಯಾದೆ ಎಂಬುವುದು ನಿಸ್ಸಂಶಯ. ನಿನ್ನ ಮೇಲೆ ಧೃತರಾಷ್ಟ್ರನಿಗೆ ಇದ್ದ ವ್ಯಾಮೋಹ ನಮ್ಮನ್ನೂ ಸೈರಿಸಿಕೊಳ್ಳುವಂತೆ ಮಾಡಿತು. ನಾವೂ ಇಂದಲ್ಲದಿದ್ದರೆ ನಾಳೆ, ಅಲ್ಲಾ ನಾಡಿದ್ದಾದರೂ ಸುಧಾರಿಸಿಕೊಳ್ಳುವ ಪ್ರಬುದ್ಧತೆ ನಿನಗೆ ಬರಬಹುದು ಎಂದು ಅಪೇಕ್ಷಿಸಿದ್ದೆವು. ನಮ್ಮ ನಂಬಿಕೆ ಆಶಯ ಎಲ್ಲವೂ ನಿನ್ನಿಂದಾಗಿ ಮಣ್ಣು ಪಾಲಾಯಿತು. ಒಂದು ಸಂದರ್ಭ ಹಸ್ತಿನೆಯಲ್ಲಿ ಓರ್ವ ಉತ್ತರಾಧಿಕಾರಿಯೂ ಇಲ್ಲದೆ ಪರಿತಪಿಸುವ ಸಮಯ ನಮಗೊದಗಿತ್ತು. ಅನಿವಾರ್ಯವಾಗಿ ನಿಯೋಗ ಪದ್ದತಿಯಿಂದ ನಿನ್ನಪ್ಪ ಮತ್ತು ಪಾಂಡು ಚಕ್ರವರ್ತಿಯ ಹುಟ್ಟಾಯಿತು. ಆದರೆ ಈಗ ನೂರಾರು ಉತ್ತರಾಧಿಕಾರಿಗಳಿದ್ದರೂ ಸಾಮ್ರಾಜ್ಯಕ್ಕೆ ರಕ್ಷಣೆ ಇಲ್ಲದೆ ನಿಮ್ಮಿಂದಲೆ ಕುಲದ ಸರ್ವನಾಶಕ್ಕೆ ಮುಹೂರ್ತ ನಿಶ್ಚಯಿಸಲ್ಪಟ್ಟಿರುವುದು ದುರಂತವೆ ಸರಿ. ಹಿರಿಯರಿಂದ ಉಳಿಸಿ ಬೆಳೆಸಲ್ಪಟ್ಟ ಸಮೃದ್ಧ ಸಾಮ್ರಾಜ್ಯವನ್ನು ಹಾಳು ಮಾಡಿ ವಿನಾಶದ ಬಾಗಿಲು ತೆರೆದು ನಿಲ್ಲಿಸಿರುವೆಯಲ್ಲಾ! ಸತ್ಕೀರ್ತಿ ಸಂಪಾದಿಸಿದ್ದ ಹಿರಿಯರ ಸಾಧನೆಗೆ ಅಪಕೀರ್ತಿ ತರುವುದಕ್ಕಾಗಿಯೆ ನೀನು ಹುಟ್ಟಿದೆಯಾ? ಏನು ಮಾಡಲಿ ನಾನೀಗ? ನಮಗೆ ಭಾಗ್ಯವಿಲ್ಲ – ನಿನಗೆ ಯೋಗ್ಯತೆ ಇಲ್ಲ. ಈಗ ನಾನು ಸೇನಾಪತಿಯಾಗಿ ಹೋರಾಡಬೇಕೋ? ಯಾರ ಜೊತೆ ಹೋರಾಡಬೇಕು? ನಾನು ಹೋರಾಡಲು ನನಗೆ ಹಗೆಗಳಾರು? ನನ್ನ ವಿಚಾರ ಬಿಡು ಹಸ್ತಿನೆಯ ಚಂದ್ರವಂಶಕ್ಕೆ ಪಾಂಡವರಿಂದ ಏನು ಅಪರಾಧ – ಅಪಚಾರ ಆಗಿದೆಯೆಂದು ದಂಡಿಸಬೇಕು? ಅಪರಾಧಿಯಾಗಿ ನೀನೇ ಇಲ್ಲಿ ನನ್ನ ಸಮಕ್ಷಮದಲ್ಲಿ ಇರುವಾಗ ನಡೆಯಬೇಕಾದ ಧರ್ಮಯುದ್ದ ಯಾರ ಜೊತೆ ಮಾಡಬೇಕು? ನನಗೆ ಕೌರವ – ಪಾಂಡವ ಎಂಬ ಭೇದವಿದೆಯೆ? ಇತ್ತಂಡಗಳೂ ನನ್ನ ಮೊಮ್ಮಕ್ಕಳಾಗಿ ಸಮಾನರು ಆಗಿರುವಿರಿ. ಪಾಂಡು ಮತ್ತು ಧೃತರಾಷ್ಟ್ರನ ಮಕ್ಕಳೆಂಬ ವ್ಯತ್ಯಾಸ ನನಗಿಲ್ಲ. ಎಲ್ಲರೂ ನನಗೆ ವಾತ್ಸಲ್ಯ ಪೂರ್ಣರು ಆಗಿದ್ದೀರಿ. ಸ್ವಯಂ ನಾನು ಎತ್ತಿ ಆಡಿಸಿ ಬೆಳೆಸಿದ ಮಕ್ಕಳಲ್ಲವೇ ನೀವು. ಪಾಂಡು ಪುತ್ರರೂ ಧೃತರಾಷ್ಟ್ರ ಪುತ್ರರೂ ಹೊಡೆದಾಡುತ್ತಾರೆ ಎಂದು ಕೇಳಿಸಿಕೊಂಡಾಗಲೆ ಆತಂಕಿತನಾಗಿದ್ದ ನಾನೀಗ ಸೇನಾನಾಯಕನಾಗಿ ನಿನ್ನ ಅಕ್ಷಮ್ಯ ಅಪರಾಧಗಳನ್ನು ಬೆಂಬಲಿಸಿ ಪಾಂಡವರ ವಿರುದ್ಧ ಹೋರಾಡಬೇಕೋ? ನನಗೆ ದುಃಖ ಒತ್ತರಿಸಿ ಬರುತ್ತಿದೆ, ತಡೆದುಕೊಳ್ಳಲಾಗುತ್ತಿಲ್ಲಾ ಮಗನೇ! ಇನ್ನು ನನ್ನನ್ನು ಒಂದು ಭಾಗದ ಪಕ್ಷದಲ್ಲಿ ವಿಭಜಿಸಿ ಹೊಡೆದಾಡಿಸಿ ಅದರ ಅಂದ ಚಂದ ನೋಡುವ ವಿಕೃತ ಮನಸ್ಸು ನಿನ್ನದ್ದಾಗಿ ಹೋಯಿತೆ! ಹೇಗೆ ಯುದ್ದ ಮಾಡಲಿ ದುರ್ಯೋಧನಾ! ನಿಷ್ಕಲ್ಮಶ, ಸದ್ಗುಣಶೀಲ, ಧರ್ಮಾತ್ಮರು, ಕಾರುಣ್ಯ ಮೂರ್ತಿಗಳಾದ ಧರ್ಮರಾಯ ಮತ್ತು ಅವನ ತಮ್ಮಂದಿರಲ್ಲಿ ಹೇಗೆ ಕಾದಾಡಲಿ. ಮಹಾ ಪಾತಕಗಳನ್ನು ಕಟ್ಟಿಕೊಂಡಿರುವ ಕೌರವರ ಪರವಾಗಿ ಸಮಾನಬಂಧುವಾದ ನಾನು ರಣಕಣದಲ್ಲಿ ಕಾಣಿಸಿಕೊಂಡರೆ ಲೋಕಕ್ಕೆ ಏನು ಸಂದೇಶ ಹೋದೀತು? ಭೀಷ್ಮಾಚಾರ್ಯರಿಗೂ ಬುದ್ದಿ ಇರಲಿಲ್ಲವೇ ಎಂಬ ಅಪವಾದಕ್ಕೆ ಗುರಿಯಾಗಲಾರೆನೇ? ಬೇಡ ಮಗನೇ! ನಿಲ್ಲಿಸು, ಈ ಅನರ್ಥಕ್ಕೆ ಮುಂದಾಗಬೇಡ. ಪಾಂಡವರ ಧರ್ಮ ಅವರನ್ನು ಗೆಲ್ಲಿಸುತ್ತದೆ. ಶಕ್ತಿಯಿಂದ ಅವರು ಹೋರಾಡಿ ಗೆಲ್ಲಬೇಕಾಗಿಲ್ಲ. ನಿನ್ನನ್ನು ನಾಶಗೊಳಿಸಬಲ್ಲಷ್ಟು ಪಾತಕ ನಿನ್ನ ಬೆನ್ನೇರಿದೆ. ನೀನು ಹೊಂದಿರುವ ಸಾಮರ್ಥ್ಯ ಅದು ಲೆಕ್ಕಕ್ಕೆ ಮಾತ್ರ. ಅದು ಮಹಾಯಾಗದಲ್ಲಿ ಹೋಮಿಸಲ್ಪಡುವ ಸಮಿಧೆಯಂತಾಗಲಿದೆ. ಸತ್ಯವರಿತು, ಸರಿದಾರಿಗೆ ಈಗಲಾದರೂ ಬರುವ ಮನಸ್ಸು ಮಾಡು ಮಗನೆ. ಪಾಂಡವರ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ, ಕರೆದು ನಾನೊಂದು ಮಾತು ಹೇಳಿದರೆ ಧರ್ಮರಾಯ ಒಂದು ಹೆಜ್ಜೆಯೂ ಮೀರಿ ನಡೆಯುವವನಲ್ಲ. ನೀನೊಬ್ಬ ಒಪ್ಪಿದರೆ ಈ ಲೋಕ ವಿಧ್ವಂಸಕ ಕಾರ್ಯ ನಿಲ್ಲಿಸಲ್ಪಡುತ್ತದೆ. ಲೋಕಕ್ಕೂ ಕ್ಷೇಮ. ನೀನು ಬದುಕಿ ಬಾಳುವುದಕ್ಕೆ ಅವಕಾಶ ಒದಗುತ್ತದೆ. ಯುದ್ದ ಬೇಡವೇ ಬೇಡ. ನೀವೂ ಪಾಂಡವರೂ ಒಂದಾಗಿ ಬಾಳಿ. ಯಾವ ಕಾಲಕ್ಕೂ ಪಾಂಡವರಿಂದ ನಿಮಗೆ ವಿದ್ರೋಹ ಆಗಬಹುದೇನೋ ಎಂಬ ಕನಿಷ್ಠ ಕಲ್ಪನೆಯನ್ನೂ ನೀನು ಮಾಡಬೇಕಾಗಿಲ್ಲ. ನೀನೊಬ್ಬ ಮನ ಪರಿವರ್ತನೆಗೊಳಿಸಿ ಉಚಿತಾನುಚಿತ ಅರಿತು ನಿರ್ಣಯ ಕೈಗೊಂಡರೆ ಎಲ್ಲರಿಗೂ ಕ್ಷೇಮವಾಗಲಿದೆ. ನನ್ನ ಮಾತು ಕೇಳು ಮಗನೇ, ಯುದ್ದವನ್ನು ತೊರೆದು, ಈವರೆಗೆ ಚಂದ್ರ ವಂಶದ ಅಭ್ಯುದಯಕ್ಕಾಗಿ ಜೀವನ ಸವೆಸಿದ ನನ್ನ ಆಸೆ ಈಡೇರಿಸುವವನಾಗು. ನನಗಾಗಿ ಇಷ್ಟು ಮಾಡುವ ದೊಡ್ಡ ಮನಸ್ಸು ಮಾಡು ಮಗಾ. ನಿನಗೂ ಇದೇ ಕ್ಷೇಮವಾದುದು” ಎಂದು ಪರಿ ಪರಿಯಾಗಿ ವಿವರಿಸಿ ದೀನನಾಗಿ ಅಜ್ಜ ಭೀಷ್ಮಾಚಾರ್ಯರು ಬುದ್ಧಿಯ ಮಾತುಗಳನ್ನು ಹೇಳುತ್ತಾ ಬೇಡಿಕೊಂಡರು.

ಆದರೆ ದುರ್ಯೋಧನ “…..

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page