ಭಾಗ 311
ಭರತೇಶ್ ಶೆಟ್ಟಿ, ಎಕ್ಕಾರ್

ಕೌರವನ ಸೇನೆಯಲ್ಲಿ ಹನ್ನೊಂದು ಅಕ್ಷೋಹಿಣಿ ಸೈನ್ಯ ಇತ್ತು. ಒಂದು ರಥ, ಒಂದು ಆನೆ, ಮೂರು ಕುದುರೆ, ಐದು ಕಾಳಾಳುಗಳು ಸೇರಿದರೆ ಒಂದು ಪತ್ತಿ, ಮೂರು ಪತ್ತಿಗಳು ಕೂಡಿ ಒಂದು ಸೇನಾಮುಖ, ಐದು ಸೇನಾಮುಖಗಳು ಒಟ್ಟಾದರೆ ಒಂದು ಗುಲ್ಮ. ಮೂರು ಗುಲ್ಮಗಳನ್ನು ಜೊತೆ ಸೇರಿಸಿದರೆ ಒಂದು ಗಣ, ಮೂರು ಗಣಗಳು ಒಂದಾದರೆ ಒಂದು ವಾಹಿನಿ, ಮೂರು ವಾಹಿನಿಗಳು ಒತ್ತಟ್ಟಾದರೆ ಒಂದು ಪೃತನಾ ಆಗುತ್ತದೆ. ಮೂರು ಪೃತನಾಗಳಿಗೆ ಒಂದು ಚಮು, ಮೂರು ಚಮುಗಳು ಒಗ್ಗೂಡಿದರೆ ಒಂದು ಅನೀಕಿನಿ ಮತ್ತು ಹತ್ತು ಅನೀಕಿನಿಗಳು ಅಂದರೆ ಒಂದು ಅಕ್ಷೋಹಿಣಿ. ಹೀಗೆ ಒಂದು ಅಕ್ಷೋಹಿಣಿಯಲ್ಲಿ ಇಪ್ಪತ್ತೊಂದು ಸಾವಿರದ ಎಂಟು ನೂರ ಎಪ್ಪತ್ತು ಆನೆಗಳೂ, ರಥಗಳೂ,ಅರುವತ್ತೈದು ಸಾವಿರದ ಆರು ನೂರ ಹತ್ತು ಕುದುರೆಗಳೂ, ಒಂದು ಲಕ್ಷದ ಒಂಭತ್ತು ಸಾವಿರದ ಮುನ್ನೂರೈವತ್ತು ಕಾಳಾಳುಗಳೂ ಸೇರಿರುತ್ತಾರೆ. ಇಂತಹ ಹನ್ನೊಂದು ಅಕ್ಷೋಹಿಣಿ ಸೈನ್ಯ ಸಾಗರ ಕೌರವ ಪಾಳಯದಲ್ಲಿದೆ. ಹನ್ನೊಂದು ಅಕ್ಷೋಹಿಣಿ ಸೇನೆಗೆ ಒಬ್ಬೊಬ್ಬರು ನಾಯಕರಂತೆ ಕ್ರಮವಾಗಿ ದ್ರೋಣ, ಕೃಪ, ಶಲ್ಯ, ಜಯದ್ರಥ, ಸುವಕಿಣ, ಕೃತವರ್ಮ, ಅಶ್ವತ್ಥಾಮ, ಕರ್ಣ, ಭೂರಿಶ್ರವ, ಶಕುನಿ ಮತ್ತು ಬಾಹ್ಲಿಕ ನಿಯುಕ್ತರಾದರು.
ಕರ್ಣ ಮಾತ್ರ ಈ ನಿಯೋಜನೆಗಳಲ್ಲಿ ಅತಿಯಾದ ಆಸಕ್ತಿ ಹೊಂದಿ ನೇತಾರ ಪದವಿಯ ಆಕಾಂಕ್ಷಿಯಾಗಿ ಬಹಳ ಮುತುವರ್ಜಿ ತೋರುತ್ತಿದ್ದನು. ಆತನ ಉದ್ದೇಶ ಕೌರವನ ಜಯಕ್ಕಾಗಿ ಹೋರಾಡಬೇಕೆಂದಿತ್ತು ಅಥವಾ ಮೊದಲಾಗಿ ಅವಕಾಶ ಪಡೆದು ತನ್ನನ್ನು ಸಮರ್ಪಣೆಗೊಳಿಸಿ ಸಮಾಪ್ತಿ ಕಾಣುವ ಹೆಬ್ಬಯಕೆ ಇತ್ತೊ ಗೊತ್ತಾಗಲಿಲ್ಲ. ಹಾಗೆಯೆ ಆತುರ – ಅವಸರದಿಂದ ಸೇನಾನಾಯಕ ಸ್ಥಾನದ ಬಗ್ಗೆ ತನ್ನ ಆಸಕ್ತಿ ಮುಂದಿಟ್ಟು ಪ್ರಸ್ತಾಪಿಸಿದಾಗ ಹಿರಿಯರಾದ ದ್ರೋಣಾಚಾರ್ಯರಿಂದ ಆಕ್ಷೇಪಿಸಲ್ಪಟ್ಟಿತು. ದ್ರೋಣರ ಅಭಿಮತದಂತೆ ಭೀಷ್ಮಾಚಾರ್ಯರು ಸೇನಾನಾಯಕ ಪಟ್ಟಕ್ಕೆ ಸೂಕ್ತನೂ ಸಮರ್ಥನೂ ಆಗಿದ್ದಾರೆ, ಅವರಿರುತ್ತಾ ಅನ್ಯ ಯಾವ ವೀರನಿದ್ದರೂ ಪರಿಗಣಿಸಲಾಗದು ಎಂದು ಪ್ರತಿಪಾದಿಸಿದರು. ಆದರೆ ಭೀಷ್ಮಾಚಾರ್ಯರು ಮಾತ್ರ ಈ ಸಭೆಗೆ ಗೈರಾಗಿದ್ದರು. ಹಾಗಾಗಿ ಭೀಷ್ಮಾಚಾರ್ಯರ ಜೊತೆ ಸಮಾಲೋಚನೆ ನಡೆಸಿ ಅವರ ತೀರ್ಮಾನ ತಿಳಿದು ನಿರ್ಣಯ ಕೈಗೊಳ್ಳುವುದು ಯುಕ್ತ ಎಂದು ಅನುಮೋದನೆ ದೊರೆಯಿತು. ಹಾಗೆಯೆ ಆಯುಧ ಭಂಡಾರ, ಯುದ್ಧ ಸಾಮಾಗ್ರಿಗಳು, ಆಹಾರ ಪದಾರ್ಥಗಳು, ಔಷಧೋಪಚಾರದ ಸಲಕರಣೆಗಳು, ರಕ್ಷಣಾ ಪಡೆ, ಸೇನಾ ಬಿಡಾರ ಇತ್ಯಾದಿಗಳ ವ್ಯವಸ್ಥೆ ಮಾಡಲು ಕುರುಕ್ಷೇತ್ರಕ್ಕೆ ಸಕಲ ಸಾಮಾಗ್ರಿಗಳ ಸಾಗಾಣಿಕೆಗೆ ದುರ್ಯೋಧನ ಆಜ್ಞೆ ಮಾಡಿದನು. ಪಿತಾಮಹ ಭೀಷ್ಮಾಚಾರ್ಯರಲ್ಲಿ ಸೇನಾನಾಯಕನ ಕುರಿತು ಚರ್ಚಿಸುವ ಹೊಣೆಗಾರಿಕೆಯನ್ನು ಕೌರವ ತಾನೇ ವಹಿಸಿಕೊಂಡನು.
ದ್ರೋಣಾಚಾರ್ಯರ ಆಕ್ಷೇಪದಿಂದ ಕರ್ಣ ನಿರುತ್ಸಾಹಿಯಾದಂತೆ ಕಾಣುತ್ತಿದ್ದನು. ಕೌರವನಿಗೆ ಕರ್ಣ ಆಪ್ತನಲ್ಲವೆ? ಮಿತ್ರನ ಮನ ನೊಂದಿರಬಹುದೆಂದು ಭಾವಿಸಿ ಅವನನ್ನು ತನ್ನೊಡನೆಯೆ ಉಳಿಸಿಕೊಂಡು ಜೊತೆಯಲ್ಲಿಯೆ ಅರಮನೆಗೆ ಕರೆತಂದನು. ಒತ್ತಿನಲ್ಲಿಯೆ ಕುಳ್ಳಿರಿಸಿಕೊಂಡು ಸಹಪಂಕ್ತಿ ಭೋಜನವನ್ನೂ ಪೂರೈಸಿ ಸ್ವಲ್ಪ ಹೊತ್ತು ಬೇರೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸತೊಡಗಿದಾಗ ಕರ್ಣನ ಮನಸ್ಸು ವಿಕೇಂದ್ರೀಕೃತವಾಯಿತೊ ಏನೋ ಉಲ್ಲಾಸಗೊಂಡವನಂತೆ ಕಾಣಿಸಿದನು. ವ್ಯತ್ಯಾಸ ಗಮನಿಸಿ ಕೌರವ ಕರ್ಣನನ್ನು ವಿಶ್ರಾಂತಿಗಾಗಿ ಕಳುಹಿಸಿಕೊಟ್ಟನು.
ಕರ್ಣನನ್ನು ಸಂತೈಸಿ ಕಳುಹಿಸುವಾಗ ಸಮಯ ಅಪರಾತ್ರಿಯ ಹೊತ್ತಾಗಿತ್ತು. ಮಧ್ಯರಾತ್ರಿಯ ಈ ಸಮಯದಲ್ಲಿ ಅಜ್ಜ ಭೀಷ್ಮನನ್ನು ಕಾಣಲು ಹೋಗುವುದೇ? ಹೋಗದಿದ್ದರೆ ಚರ್ಚಿಸಲು ಸಮಯವಿಲ್ಲ. ಹೋಗುವ ಹೊತ್ತು ಇದಲ್ಲ. ಹೋದರೂ ಅಜ್ಜ ಮಲಗಿ ನಿದ್ರಿಸಿದ್ದರೆ ಎಬ್ಬಿಸುವುದಾದರೂ ಹೇಗೆ? ನಿದ್ರಾಭಂಗವಾಗದೆ? ಯೋಚಿಸುತ್ತಾ ತುಸು ಹೊತ್ತು ನಿಂತ ಕೌರವನ ಮನಸ್ಸಿಗೇನು ಹೊಳೆಯಿತೊ! ಇಂತಹ ಮಹಾಯುದ್ದ ನಿರ್ಣಯವಾದ ಈ ಸಮಯ ಚಂದ್ರವಂಶದ ಬೇರು ಆಗಿರುವ ಅಜ್ಜನಿಗೆ ನಿದ್ದೆ ಬಂದೀತೇ? ಬಂದಿರಲು ಸಾಧ್ಯವೇ ಇಲ್ಲ. ಹಾಗಾಗಿ ಹೋಗಿ ನೋಡೋಣ ಎಂದು ತೀರ್ಮಾನಿಸಿದನು. ಆಪ್ತರಾದ ಕೆಲವು ಅಂಗ ರಕ್ಷಕರನ್ನು ಮತ್ತು ಮಿತ ಸೈನ್ಯವನ್ನು ಕೂಡಿಕೊಂಡು ಅಜ್ಜ ಭೀಷ್ಮಾಚಾರ್ಯರ ಮನೆಯತ್ತ ಸಾಗಿದನು. ಅಜ್ಜನ ಮನೆಯ ಬಾಗಿಲ ಭಟರನ್ನು ಕಂಡು ತಾನು ಬಂದಿರುವ ವಿಚಾರ ತಿಳಿಸಿ ಅಗತ್ಯ ಕಾರ್ಯಕ್ಕಾಗಿ ಭೇಟಿಗೆ ಅವಕಾಶ ಕೇಳಲು ವಿನಂತಿಸಿ ಕಳುಹಿಸಿದನು.
ಮುಂದುವರಿಯುವುದು…



















