ಭಾಗ – 306
ಭರತೇಶ್ ಶೆಟ್ಟಿ, ಎಕ್ಕಾರ್

“ಕಂದಾ, ಲೋಕಕ್ಕೆ ರಾಧೇಯನಾದರೂ, ನೀನು ಕೌಂತೇಯ ಮಗಾ… ನಾನು ನಿನ್ನ… ಹೆತ್ತ….ತಾಯಿ…” ಎಂದು ಹೇಳುತ್ತಾ ಕುಂತಿ ಇಷ್ಟು ವರ್ಷಗಳಿಂದ ತನ್ನ ಕಂದನ ಬಗ್ಗೆ ಮನದೊಳಗೆ ಹುದುಗಿಸಿ ಬಂಧಿಸಿಟ್ಟಿದ್ದ ವಾತ್ಸಲ್ಯ, ಮಮತೆ, ಪ್ರೀತಿಯ ಕಟ್ಟೆಯನ್ನು ಒಡೆದು ಕರ್ಣನ ನೆತ್ತಿಯನ್ನಾಘ್ರಾಣಿಸಿ ಮುದ್ದಾಡಿದಳು, ಮುತ್ತನಿತ್ತಳು. ಮೈ ಕೈಗಳನ್ನು ಪೂಸುತ್ತಾ ಬರಸೆಳೆದು ಅಪ್ಪಿಕೊಂಡಳು. ಕೊರಳನ್ನು ನೇವರಿಸಿ – ಗಲ್ಲವನ್ನು ಹಿಂಡುತ್ತಾ… ಬಹುರೀತಿಯಿಂದ ಮುದ್ದು ಕಂದನ ಲಲ್ಲೆಗರೆದು ಮುದ್ದಿಸಿದಳು. ಕರ್ಣನ ಮನ ಪುಳಕಗೊಳ್ಳುತ್ತಿದೆ. ಹೆತ್ತಬ್ಬೆ ಸಾಕ್ಷಾತ್ ದೇವತೆಯಲ್ಲವೇ? ಆಕೆಯ ಸ್ಪರ್ಶವೆಂದರೆ ಸಾಮಾನ್ಯವೇ! ಅದಕ್ಕಿಂತ ಮಿಗಿಲಾದ ಹಿತ ಸುಖ ಜಗದಲ್ಲಿದೆಯೇ? ಅಮ್ಮನ ಅಕ್ಕರೆಯ ಕಡಲಿನಲ್ಲಿ ಮುಳುಗೇಳುತ್ತಾ, ಆಕೆಯ ಪ್ರೇಮ ಬಂಧನದಲ್ಲಿ ತನ್ಮಯನಾಗಿ ತನ್ನ ಇರವನ್ನೇ ಮರೆತನು. ಮಾತೃವಾತ್ಸಲ್ಯದ ಮುಂದೆ ಮತ್ಯಾವುದೂ ಸರಿಸಾಟಿಯಾಗಬಲ್ಲುದೇ? ಮೊದಲ ಬಾರಿ ಕರ್ಣ ತನ್ನ ಜನ್ಮದಾತೆಯ ಪ್ರೀತಿಯನ್ನು ಅನುಭವಿಸುತ್ತಿದ್ದಾನೆ. ಆಸೆಯಾಯಿತು ಈ ಭಾಗ್ಯ ನನಗೆ ಇನ್ನೂ ಬೇಕು. ಅಮ್ಮನ ಕೈ ತುತ್ತು ಉಣ್ಣಬೇಕು. ಸೇವೆ ಮಾಡಬೇಕು. ನನ್ನ ಮನದ ಭಾವನೆಗಳು, ನೋವುಗಳನ್ನೆಲ್ಲಾ ಅಮ್ಮನಲ್ಲಿ ಹೇಳಬೇಕು. ಕೇಳಬೇಕು ಅಮ್ಮಾ ನಾನೇಕೆ ನಿನಗೆ ಬೇಡವಾದೆ? ಅಮ್ಮಾ ನಿನಗೇನಾದರೂ ಆಸೆಗಳಿವೆಯೇ? ಹೇಳಮ್ಮಾ ನಿನ್ನ ಮಗ ಕರ್ಣ ಪೂರೈಸಿ ಕೊಡಬಲ್ಲವನಿದ್ದಾನೆ. ಏನೇನೋ ಮಹದಾಸೆಗಳು ಕನಸಿನಂತೆ ಸುಳಿದಾಡಿತು. ಆಗಲೇ ಭಯ ಮನದೊಳಗಾವರಿಸಿತು. ಹುಚ್ಚು ಮನಸ್ಸು ಏನೇನೋ ಬಯಸುತ್ತಿದೆ. ಆದರೆ ಇಂದೇ ಮಾತೆಯ ಮೊದಲ ಭೇಟಿ, ಮಾತ್ರವಲ್ಲ ಇದೇ ಕೊನೆಯದ್ದೂ ಹೌದು. ಕುರುಕ್ಷೇತ್ರದ ಧರ್ಮ ಸಂಗ್ರಾಮಕ್ಕೆ ಮೊದಲು ಕರ್ಣನ ಬದುಕಿನಲ್ಲಿ ಕಡೇ ಪಕ್ಷ ಹೆತ್ತ ತಾಯಿಯನ್ನು ಕಂಡು ಆಕೆಯಿಂದ ಮುದ್ದಿಸಿಕೊಳ್ಳುವ ಯೋಗದ ಒಂದು ಅಮೃತ ಘಳಿಗೆಯಾದರೂ ಒದಗಿ ಬಂತಲ್ಲಾ! ದೇವರ ದಯೆ ಎಂದು ತಿಳಿದು ಪರಮಾತ್ಮನಿಗೆ ಕೃತಜ್ಞತಾ ಪೂರ್ವಕವಾಗಿ ನಮಿಸಿದನು. ಕುಂತಿ ಬೆಳೆದು ನಿಂತ ಮಗನನ್ನು ಮಗುವಿನಂತೆ ಮುದ್ದಾಡುತ್ತಿದ್ದಾಳೆ.
ತುಸು ಸಮಯ ಕಳೆದು ಇಬ್ಬರೂ ತಮ್ಮ ತಮ್ಮ ಹೃದಯದ ಉದ್ವೇಗಗಳನ್ನು ಕಡಿಮೆ ಮಾಡಿಕೊಂಡು ಸುಸ್ಥಿರರಾಗಲು ಪ್ರಯತ್ನಿಸಿದರು. ಕರ್ಣ, “ಅಮ್ಮಾ ನಿನ್ನ ಮಗನನ್ನು ಕಾಣಲು ಬಂದೆಯಲ್ಲಾ ಧನ್ಯನಾದೆ ತಾಯೇ ಏನಮ್ಮಾ ಇಲ್ಲಿಯವರೆಗೆ ಬಂದಿರುವೆ? ಬಹುವರ್ಷಗಳೇ ಕಳೆದು ಹೋಗಿದೆ, ಹೋಗಲಿ. ಇಂದಾದರೂ ನಿನಗೆ ಮಗನ ಮೇಲೆ ಮಮತೆ ಮೂಡಿತಲ್ಲಾ!” ಎಂದನು.
ಕುಂತಿಯು ಉಮ್ಮಳಿಸಿ ಬಂದ ದುಃಖವನ್ನು ತಡೆ ಹಿಡಿದು “ಕಂದಾ, ಅಮ್ಮನಿಗೆ ತನ್ನ ಕಂದನನ್ನು ಬಿಟ್ಟಿರುವುದು ಸುಲಭ ಸಾಧ್ಯವೇ ಹೇಳು? ನಿನ್ನನ್ನು ತೊರೆದ ನನಗೆ ಪುತ್ರನಾದ ನಿನ್ನ ಬಗ್ಗೆ ನೆನೆದು ಕೊರಗುವ ದುರ್ಗತಿ ಪ್ರಾಪ್ತವಾಗಿದೆ ಮಗನೇ. ಕರ್ಣಾ, ನೀನು ಕಾನೀನನಾಗಿ ಹುಟ್ಟಿದವನು. ಅಂದರೆ ನನ್ನ ವಿವಾಹ ಪೂರ್ವ ಸಮಯ ದೂರ್ವಾಸ ಅನುಗ್ರಹಿತ ದಿವ್ಯ ಮಂತ್ರ ಬಲದ ಪರಿಣಾಮ ಸೂರ್ಯನಾರಾಯಣ ದೇವರ ಅನುಗ್ರಹದಿಂದ ನನಗೆ ಮಗನಾಗಿ ಹುಟ್ಟಿದೆ. ಆದರೆ ಮದುವೆಯಾಗದ ಹೆಣ್ಣು ಮಗುವನ್ನು ಹೊಂದಿದ್ದಾಳೆ ಎಂದರೆ ಲೋಕಾಪವಾದವೂ, ಕುಲಕ್ಕೆ ಅಪಕೀರ್ತಿಯೂ, ಹೆಣ್ಣಾದ ನನಗೆ ಅಪಮಾನವೂ ಆಗುವುದೆಂದು ಭಯಗ್ರಸ್ಥಳಾದ ನಾನು ಅಜ್ಞಾನದಿಂದ ಬಾಲಿಶವಾದ ನಿರ್ಧಾರ ಕೈಗೊಂಡು ನಿನ್ನನ್ನು ನನ್ನ ಕೈಯಾರೆ ಗಂಗಾ ನದಿಯ ಪ್ರವಾಹದಲ್ಲಿ ತೇಲಿ ಬಿಟ್ಟೆ. ಈಗ ನೀನು ಪಾಂಡವರಿಗೆ ಜೇಷ್ಠನಾಗಿರುವೆ. ಈ ಸತ್ಯ ಸಂಗತಿಯನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೆನಾದರೂ ವಿಧಿ ಲೀಲೆಯೋ ಏನೋ ಅವಕಾಶ ಕೂಡಿ ಬರಲೇ ಇಲ್ಲ. ನನ್ನ ಹುಡುಗಾಟಿಕೆಯಲ್ಲಾದ ಮಹಾಪರಾಧ ಗೌಪ್ಯವಾಗಿಯೆ ಉಳಿಸಿಕೊಂಡು ಬಂದೆ. ಈಗ ನನ್ನ ತಪ್ಪಿಗಾಗಿ ಶಿಕ್ಷೆ ಅನುಭವಿಸುವಂತಾಗುತ್ತಿದೆ. ನಿಶ್ಚಯವಾದ ಪಾಂಡವ ಕೌರವರ ಯುದ್ದದಲ್ಲಿ ನೀನು ಕೌರವ ಪಕ್ಷದಿಂದ ಯುದ್ದ ಮಾಡಲಿರುವೆ. ಯಾವುದೋ ವಿಷಗಳಿಗೆಯಲ್ಲಿ ನಿನಗೂ ಅರ್ಜುನನಿಗೂ ಬದ್ಧ ವೈರತ್ವ ಹುಟ್ಟಿ ಬೆಳೆಯುತ್ತಿದೆ. ಪರಸ್ಪರ ಕೊಲ್ಲುವ ವಚನ ಬದ್ಧರಾಗಿದ್ದೀರಿ. ಇನ್ನು ಅದು ಹಾಗೆ ಬೆಳೆಯಬಾರದು. ಸೋದರರಾದ ನಿಮ್ಮೊಳಗೆ ಪ್ರೀತಿ ಬಾಂಧವ್ಯ ಬೆಸೆಯಬೇಕು. ಕರ್ಣಾ, ಪಾಂಡವರ ಅಂದರೆ ನಿನ್ನ ಸೋದರರ ಸಾಮ್ರಾಜ್ಯವನ್ನು ಕೌರವ ವಂಚನೆಯಿಂದ ವಶಗೈದಿದ್ದಾನೆ. ಪಾಂಡವರು ನಿನಗೆ ಒಡಹುಟ್ಟಿದ ಸಹೋದರರಾದ ಕಾರಣ ಇನ್ನು ಮುಂದೆ ಹಸ್ತಿನೆ ನಿನ್ನ ಸಾಮ್ರಾಜ್ಯ. ಮಗನೇ, ನೀನು ಕೌರವನ ಹಂಗಿನಲ್ಲಿ ಬದುಕ ಬೇಕಾದವನಲ್ಲ. ಧರ್ಮಾತ್ಮರಾದ ಪಾಂಡವರ ಜೊತೆಯಾಗು. ನಿನ್ನ ತಮ್ಮಂದಿರ ಜೊತೆ ನೀನು ಮುಂದಾಳಾಗಿ ನಿನ್ನದ್ದಾದ ರಾಜ್ಯವನ್ನು ಪಡೆದುಕೊಂಡು ಪ್ರಜಾ ಪರಿಪಾಲನೆ ಮಾಡುತ್ತಾ, ಸಾಮ್ರಾಜ್ಯ ಸುಖ ಅನುಭವಿಸು. ಪಾಂಡವರು ನಿಷ್ಠರಾಗಿ ನಿನ್ನ ಆಜ್ಞಾನುವರ್ತಿಗಳಾಗಿ ಸಹಕರಿಸುತ್ತಾರೆ. ನನ್ನೊಂದಿಗೆ ಬಾ ಮಗನೇ. ನಿನ್ನ ತಮ್ಮಂದಿರನ್ನು ಪಾಲಿಸುವ ಹೊಣೆ ನಿನ್ನದು” ಎಂದಳು ಕುಂತಿ
ಮುಂದುವರಿಯುವುದು…






















































