26.6 C
Udupi
Friday, April 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 299

ಭರತೇಶ್ ಶೆಟ್ಟಿ, ಎಕ್ಕಾರ್

ದುರ್ಯೋಧನನ ಉದ್ದಟತನದ ವರ್ತನೆ ನೋಡಿದ ವಿದುರ, ಭೀಷ್ಮ, ದ್ರೋಣಾದಿಗಳು ನೊಂದುಕೊಂಡು ವಿನಾಶ ಕಾಲ ಸಮೀಪಿಸಿದೆ ಎಂದು ಭಾವಿಸತೊಡಗಿದರು.

ಶ್ರೀ ಕೃಷ್ಣನು ಹಸ್ತಿನೆಯ ಹಿರಿ ಮುಖಗಳಲ್ಲಿ ಆವರಿಸಿದ ಕಡು ದುಃಖವನ್ನು ಗುರುತಿಸಿ, “ಒಂದು ವಂಶದಲ್ಲಿ ಎಷ್ಟು ಮಂದಿ ಒಳ್ಳೆಯವರಿದ್ದರೂ, ಅವರ ಎಲ್ಲಾ ಪರಿಶ್ರಮವನ್ನು ಹಾಳುಗೆಡವಿ ವಿಧ್ವಂಸಕ ಪ್ರವೃತ್ತಿ ತೋರುವ ಕೆಲವೇ ಕೆಲವು ಮಂದಿ ಇದ್ದರೆ ಸಮಗ್ರವಾಗಿ ಕೆಡುಕು ಆಗುತ್ತಾ ಹೋಗಿ ನಾಶ ಹೊಂದುತ್ತದೆ. ನಾನು ಹುಟ್ಟಿದ ಯದು ವಂಶದಲ್ಲೂ ಇಂತಹ ಅನುಭವ ನಮಗಾಗಿದೆ. ಈ ದುರ್ಯೋಧನನಂತೆ ಕಂಸನೂ ಧರ್ಮಾತಿಕ್ರಮಿಯೂ, ಸ್ವಾರ್ಥಿಯೂ ಆಗಿ ಮನಬಂದಂತೆ ಹಿರಿಯರನ್ನು ಧಿಕ್ಕರಿಸಿ ಎಲ್ಲರಿಗೂ ತಲೆನೋವಾಗಿ ಪರಿಣಮಿಸಿದ್ದನು. ಆತನೂ ತನ್ನ ತಂದೆಯ ಮಾತುಗಳನ್ನು ಕೇಳದೆ, ತನ್ನ ಅಧಿಕಾರ ದಾಹಕ್ಕಾಗಿ ಜನ್ಮದಾತ ಪಿತನನ್ನು ಸೆರೆಯಲ್ಲಿಡುವಷ್ಟು ಕ್ರೂರಿಯಾಗಿ ಹೋಗಿದ್ದನು. ಕಂಸ ನನಗೆ ಸಂಬಂಧದಲ್ಲಿ ಮಾವ ಆಗಿದ್ದರೂ, ಬಹುಜನರ ಕ್ಷೇಮಕ್ಕಾಗಿ, ಪ್ರಜಾವರ್ಗದ ರಕ್ಷಣೆಗಾಗಿ ಅವನೊಬ್ಬನ ಜೊತೆ ಆತನದ್ದಾದ ಆಪ್ತ ಬಳಗವನ್ನೂ ನಿಗ್ರಹಿಸಿದೆ. ಪರಿಣಾಮ ಈಗ ಯಾದವ ಕುಲ ನಿರಾತಂಕವಾಗಿ ನೆಮ್ಮದಿಯಿಂದ ಬದುಕುವಂತಾಗಿದೆ. ನೀವೂ ಕೂಡ ಈ ಕುಲ ನಾಶಕನಾದ ಓರ್ವ ಪುತ್ರನನ್ನು ಮತ್ತು ಅವನನ್ನು ಪ್ರೋತ್ಸಾಹಿಸಿ ಉತ್ತೇಜಿಸುವ ಆತನ ಸಹಚರರನ್ನು ಗುರುತಿಸಿ, ವ್ಯಾಮೋಹ ತೊರೆದು- ಒಂದೋ ಬಂಧಿಸಿ ಸೆರೆಯಲ್ಲಿಡಿ, ಅಥವಾ ಮೃತ್ಯುದಂಡವಿತ್ತು ಅಂತ್ಯಗೊಳಿಸಿದರೆ ಚಂದ್ರವಂಶಕ್ಕೆ ಕ್ಷೇಮವಾದೀತು. ಪಾಂಡವರ ಜೊತೆ ಸಖ್ಯ ಮಾಡಿ ಅವರನ್ನೂ ಕರೆಸಿಕೊಂಡರೆ ಸುಭದ್ರವೂ, ಧರ್ಮನಿಷ್ಟವೂ ಆದ ಸಾಮ್ರಾಜ್ಯ ನಿರ್ಮಾಣವಾಗುತ್ತದೆ” ಎಂದನು.

ಈ ಮಾತು ಕೇಳಿದ ಧೃತರಾಷ್ಟ್ರ ಒಮ್ಮೆಗೆ ನಡುಗಿದನು. ತಕ್ಷಣ ಎದ್ದು ಗಾಂಧಾರಿ ಇದ್ದಲ್ಲಿಗೆ ಹೋಗಿ ಪುತ್ರನನ್ನು ಕರೆದು ಬುದ್ಧಿ ಹೇಳುವಂತೆ ಕೇಳಿಕೊಂಡನು. ಹಾಗೆಯೇ ಗಾಂಧಾರಿ ಮಗನನ್ನು ಕರೆಸಿಕೊಂಡು ಬುದ್ಧಿವಾದ ಹೇಳಿದಾಗ, ಮತ್ತೆ ಕೇಳದೆ ಸಿಡುಕುತ್ತಾ ದುರ್ಯೋಧನ ಹೊರ ನಡೆದನು. ಹೊರ ಬರುತ್ತಿದ್ದಂತೆ ದುಶ್ಯಾಸನ ಓಡಿ ಬಂದು “ಅಣ್ಣಾ! ಆ ಕೃಷ್ಣ ನಿನ್ನನ್ನು ನಿನ್ನನ್ನು ಬಳಗ ಸಹಿತ ಸೆರೆಯಲ್ಲಿಡುವಂತೆ ಅಥವಾ ಕೊಲ್ಲುವಂತೆ ಉಪದೇಶ ನೀಡಿದ್ದಾನೆ. ಭೀಷ್ಮ ವಿದುರಾದಿಗಳು ಅದೇ ಸೂಕ್ತ ಎಂದು ನಿರ್ಣಯಿಸಿರುವಂತೆ ಕಾಣುತ್ತಿದೆ” ಎಂದನು.

ದುರ್ಯೋಧನ ಕೂಡಲೇ ತನ್ನವರು ಮತ್ತು ಮಿತ್ರ ರಾಜರೊಡನೆ ಕೂಡಿಕೊಂಡು ಆಸ್ಥಾನದತ್ತ ಧಾವಿಸುತ್ತಾ “ಈ ಕೃಷ್ಣ ನಮ್ಮ ಹಿರಿಯರಿಗೆ ನನ್ನನ್ನೂ, ನನ್ನ ಆಪ್ತರಾದ ನೀವೆಲ್ಲರನ್ನೂ ಬಂಧಿಸಿ ಸೆರೆಯಲ್ಲಿಡಲು ಹೇಳುತ್ತಿದ್ದಾನಂತೆ. ನಮ್ಮ ಹಿರಿಯರು ಒಪ್ಪಿ ಹಾಗೆ ಮಾಡುವ ಮೊದಲು ಆ ಕೃಷ್ಣನನ್ನು ನಾವೇ ಬಂಧಿಸಿ ಸೆರೆಯಲ್ಲಿಡೋಣ. ಈ ಕೃಷ್ಣನೇ ನಮ್ಮ ಬಂಧನದಲ್ಲಿದ್ದರೆ ಆ ಪಾಂಡವರೂ ಹಲ್ಲು ಕಿತ್ತ ಹಾವಿನಂತೆ ದುರ್ಬಲರಾಗುತ್ತಾರೆ. ನಮ್ಮ ಹಿರಿಯರೂ ಸುಮ್ಮನಾಗುತ್ತಾರೆ. ಬನ್ನಿ ಈ ಕೂಡಲೇ ಆತನನ್ನು ಬಂಧಿಸಿ, ಕಾರ್ಗತ್ತಲ ಸೆರೆಗೆ ತಳ್ಳೋಣ ” ಎಂದನು. ಆಗ ಕರ್ಣ, ಶಕುನಿ, ಜಯದ್ರಥ, ದುಶ್ಯಾಸನಾದಿಗಳು “ಹೌದು ಹಾಗೆಯೇ ಮಾಡಬೇಕು, ಆ ಕಪಟಿ ಕೃಷ್ಣನನ್ನು ಬಂಧಿಸಿ ಕೂಡಿ ಹಾಕುವುದರಿಂದ ನಮಗೆ ಕ್ಷೇಮ” ಎಂದು ಪ್ರೇರಕರಾಗಿ ಮುಂದಾದರು. ಈ ಬೆಳವಣಿಗೆಯ ಸೂಚನೆ ಅರಿತ ಸಾತ್ಯಕಿ ಕೂಡಲೆ ತನ್ನ ಅತಿಬಲ ಸೇನೆಯನ್ನು ಸಜ್ಜುಗೊಳಿಸಿ ಆಸ್ಥಾನ ಪ್ರವೇಶ ದ್ವಾರದಲ್ಲಿ ನಿಲ್ಲಲು ಆಜ್ಞೆ ಮಾಡಿದನು. ತಕ್ಷಣ ಸಾತ್ಯಕಿ ಕೃಷ್ಣನಿಗೂ ಈ ವಿಚಾರ ತಿಳಿಸಿ, ಧೃತರಾಷ್ಟ್ರನಲ್ಲಿ “ಮಹಾರಾಜಾ! ನಿನ್ನ ಮಕ್ಕಳು ಅನರ್ಥ ಕಾರ್ಯಕ್ಕೆ ಮುಂದಾಗಿದ್ದಾರೆ. ಸಂಧಾನಕ್ಕಾಗಿ ಬಂದಿರುವ ಶ್ರೀ ಕೃಷ್ಣನನ್ನೇ ಬಂಧಿಸಿ ಸೆರೆಯಲ್ಲಿಡಲು ಸಿದ್ಧರಾಗಿ ಬರುತ್ತಿದ್ದಾರೆ. ಏನು ಹುಚ್ಚಾಟ ಅವರದ್ದು? ತಮ್ಮ ಸಾವಿಗೆ ತಾವೇ ಗುಂಡಿ ತೋಡಿ ಇಡುವಂತೆ ವರ್ತಿಸುತ್ತಿದ್ದಾರೆ.” ಎಂದು ಆಕ್ಷೇಪಿಸಿದನು.

ಶ್ರೀಕೃಷ್ಣನು ಸಾತ್ಯಕಿಯತ್ತ ತಿರುಗಿ ದುಡುಕದಿರು, ಆ ದುರುಳ ದುರ್ಯೋಧನ ಏನು ಮಾಡುತ್ತಾನೋ ಮಾಡಲಿ, ತಡೆಯಬೇಡ ಎಂದು ಆದೇಶ ನೀಡಿದನು. ನಂತರ ಧೃತರಾಷ್ಟ್ರನನ್ನು ಉದ್ದೇಶಿಸಿ “ಮಹಾರಾಜ ಧೃತರಾಷ್ಟ್ರ! ನಿನ್ನ ಮಗ ಅಕ್ಷಮ್ಯ ಪಾತಕಗಳನ್ನು ಮಾಡಿದ್ದರೂ, ಆತನನ್ನು ಉಳಿಸುವ ಪ್ರಯತ್ನವಾಗಿ ಧರ್ಮರಾಯನ ಆಶಯದಂತೆ ನನಗೆ ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇನೆ. ಇನ್ನೂ ನಿನ್ನ ಮಕ್ಕಳು ಲೋಭಿಗಳಾಗಿ ಅಧಿಕಾರ ದಾಹ, ಸ್ವಾರ್ಥದಿಂದ ದುರ್ವರ್ತನೆ ತೋರುತ್ತಿದ್ದಾರೆ. ಈಗ ನನ್ನನ್ನು ಬಂಧಿಸಲು ಬಂದರೆ, ಪರಿಣಾಮ ಕೌರವನಿಗೆ ಭೀಕರ ಕೆಡುಕಾಗಿ ಪರಿಣಮಿಸಲಿದೆ, ಮಾತ್ರವಲ್ಲ ಅದರ ಪ್ರಯೋಜನ ಪಾಂಡವರ ಕಡೆಗಾಗಲಿದೆ. ಈ ತನಕ ನಿನ್ನ ಮಗನ ಉಳಿವಿಗಾಗಿ ಪ್ರಯತ್ನಿಸಿದೆ. ನಾಶವೇ ಆತನ ಪಾಲಿನ ವಿಧಿ ಲಿಖಿತವಾದರೆ ಯಾರೂ ಆತನನ್ನು ತಡೆಯಲಾಗದು” ಎಂದನು.

ಧೃತರಾಷ್ಟ್ರನು ಭೀತನಾಗಿ ವಿದುರನನ್ನು ಕರೆದು ದುರ್ಯೋಧನನ್ನು ತಡೆಯುವಂತೆ ಹೇಳಿ ಕಳುಹಿಸಿದನು. ಆತನೆಲ್ಲಿ ಕೇಳುವ ಸ್ಥಿತಿಯಲ್ಲಿದ್ದಾನೆ? ವಿದುರನ ಮಾತು ಕೇಳದೆ, ತನ್ನವರೊಡನೆ ಕ್ರೋಧಾವೇಶದಿಂದ ಆಸ್ಥಾನ ಹೊಕ್ಕನು.

ಶ್ರೀ ಕೃಷ್ಣನು ರೋಷದಿಂದ ಒಳಬಂದ ದುರ್ಯೋಧನನನ್ನು ಕಂಡು “ಹೇ! ದುರ್ಯೋಧನಾ..ನನ್ನನ್ನು ಕಟ್ಟಿ ಹಾಕಲು ಮುಂದಾಗುತ್ತಿರುವೆಯಾ? ದೂತನಾಗಿ ಬಂದ ನನ್ನನ್ನು ಕಟ್ಟಿ ಬಂಧಿಸುವುದು ಯಾವ ರಾಜನೀತಿ? ಛಿ ನಿಮಗೆಲ್ಲಿಯ ನೀತಿ? ಏಕವಸನಧಾರಿ ಅಬಲೆ ಹೆಣ್ಣೊಬ್ಬಳ ಸೆರಗಿಗೆ ಕೈಯಿಕ್ಕಿ ವಸ್ತ್ರಾಪಹಾರ ಮಾಡಿ ನಗ್ನತೆಯನ್ನು ಕಾಣಬಯಸಿದ ವಿಕೃತರ ಆಸ್ಥಾನದಲ್ಲಿ ನೀತಿಯ ಬಗ್ಗೆ ಅಪೇಕ್ಷೆ ಇಟ್ಟರೆ ಮೂರ್ಖತನವಾದೀತು. ನನ್ನನ್ನು ಬಂಧಿಸಲು ನಿನ್ನಿಂದಾದೀತೆ? ನಾನೊಬ್ಬನು ಇರುವುದು – ಏಕಾಂಗಿ ಅಬಲ ಎಂದು ಬಗೆದೆಯಾ? ನಮ್ಮವರೆಲ್ಲರೂ ನನ್ನೊಳಗೆ ಅಡಕವಾಗಿದ್ದಾರೆ” ಎಂದು ಹೇಳುತ್ತಾ ಸದಾ ಮಂದಹಾಸ ಬೀರುವ ವಾಸುದೇವ ಒಮ್ಮೆಲೇ ಜೋರಾಗಿ ಗಹಗಹಿಸಿ ಅಟ್ಟಹಾಸದಂತೆ ನಗೆಯಾಡಿದನು. ಆಸ್ಥಾನದ ಗೋಡೆಗಳಿಗೆ ಅಪ್ಪಳಿಸಿದ ನಗುವಿನ ಸ್ವರ ಪ್ರತಿಧ್ವನಿಯಾಗಿ ಮತ್ತೆ ಮತ್ತೆ ಅತ್ತಿಂದಿತ್ತ ಆಸ್ಥಾನ ಗೋಡೆಗಳಿಗೆ ಅಪ್ಪಳಿಸುತ್ತಾ ಪ್ರತಿಧ್ವನಿಸಿ ಸಹಸ್ರ ಮಂದಿ ಏಕಕಾಲದಲ್ಲಿ ಅಬ್ಬರಿಸಿ ನಕ್ಕಂತೆ ಕೇಳಿಸಿತು. ಆಗ ಶ್ರೀ ಕೃಷ್ಣನ ದೇಹದಿಂದ ಹೆಬ್ಬೆರಳ ಗಾತ್ರದ ಕಿಡಿಗಳಂತೆ ಸಿಡಿಯುತ್ತಾ ದೇವತೆಗಳು ಹೊರಬಂದರು, ಹಣೆಯಲ್ಲಿ ಬ್ರಹ್ಮನೂ, ಎದೆಯಲ್ಲಿ ರುದ್ರನೂ ಗೋಚರಿಸಿದರು. ಭುಜಗಳಲ್ಲಿ ದಿಕ್ಪಾಲಕರು, ಬಾಯಲ್ಲಿ ಅಗ್ನಿ, ತೋಳುಗಳಲ್ಲಿ ಆದಿತ್ಯರು, ಸಾಧ್ಯರು, ಸಿದ್ಧರು, ವಸುಗಳು, ಮರತ್ತುಗಳು, ವಿಶ್ವದೇವತೆಗಳೂ, ಯಕ್ಷ, ಗಂಧರ್ವ, ಕಿನ್ನರ, ಕಿಂಪುರುಷರೂ ಕಂಡರು. ಬೆನ್ನಿನಲ್ಲಿ ಬಲರಾಮ, ಅರ್ಜುನ, ಭೀಮ, ನಕುಲ, ಸಹದೇವ, ಪ್ರದ್ಯುಮ್ನ ಮುಂತಾದವರೂ, ಅಂಧಕರೂ, ವೃಷ್ಣಿಗಳೂ ಕಾಣಿಸಿದರು. ಮುಂಭಾಗದ ಕರಗಳಲ್ಲಿ ಶಂಖ, ಚಕ್ರ, ಗದೆ, ಶಕ್ತಿ, ಶಾರ್ಙ, ನಂದಕ, ಪಾಶ, ಪರಶು, ಖಡ್ಗ ಮುಂತಾದ ದಿವ್ಯಾಯುಧಗಳು ಪ್ರಕಟವಾದವು. ಕಣ್ಣು ಮೂಗುಗಳಿಂದಲೂ ಅಗ್ನಿಜ್ವಾಲೆಗಳು ಸೂಸತೊಡಗಿದವು. ಒಂದೊಂದು ರೋಮಗಳೂ ಸೂರ್ಯನಂತೆ ಪ್ರಭೆಯ ಕಿರಣಗಳಾಗಿ ಪ್ರಕಾಶಿಸತೊಡಗಿದವು. ಈ ಘೋರ, ಅತಿ ಭಯಂಕರ ರೂಪವನ್ನು ಭೀಷ್ಮ, ದ್ರೋಣ, ವಿದುರ ಮತ್ತು ಸಂಜಯರ ಹೊರತಾಗಿ ಮತ್ಯಾರೂ ನೋಡಲಾರದೆ ಕಣ್ಣನ್ನು ಮುಚ್ಚಿಕೊಳ್ಳಬೇಕಾಯಿತು. ಕಣ್ಣಿಲ್ಲದ ಕುರುಡ ಧೃತರಾಷ್ಟ್ರನಿಗೂ ಅರೆಕ್ಷಣ ಮಿಂಚಿನಂತೆ ಈ ರೂಪ ಕಾಣಿಸಿ ಕಾಣದಂತೆ ಮಾಯವಾಯಿತು. ಒಂದು ಕ್ಷಣದಲ್ಲಿ ಈ ಅದ್ಬುತ ರೂಪದರ್ಶನವಾಗಿ ಕೂಡಲೆ ಕೃಷ್ಣ ಮತ್ತೆ ತನ್ನ ಮನಮೋಹಕ ರೂಪದಲ್ಲಿ ರಾರಾಜಿಸಿದನು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page