28.8 C
Udupi
Tuesday, September 9, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 286

ಭರತೇಶ್ ಶೆಟ್ಟಿ ಎಕ್ಕಾರ್

“ಕೃಷ್ಣಾ! ನಿಯತಿಯ ನಿಯಮ ಮೀರಲು ಯಾರಿಗೂ ಸಾಧ್ಯವಿಲ್ಲ. ಉಪ್ಪು ರುಚಿಗೆ ಬೇಕು. ಹಾಗೆಂದು ಉಪ್ಪನ್ನೇ ತಿನ್ನಲು ಸಾಧ್ಯವೆ? ಬಾಯಾರಿಕೆ ಸಹಜ ದೈಹಿಕ ಪ್ರಕ್ರಿಯೆ. ಹಾಗೆಂದು ಯಾರಾದರೂ ಉಪ್ಪನ್ನೇ ತಿಂದರೆ ನೀರು ಕುಡಿದರೂ ಬಾಯಾರಿಕೆ ಹೋದೀತೆ ಹೇಳು? ಸರಿಯಾಗಿ ಹಂತ ಹಂತವಾಗಿ ನಮ್ಮ ಬದುಕನ್ನು ಅವಲೋಕನ ಮಾಡಿದರೆ, ಕಾಡಿನಲ್ಲಿ ಜನಿಸಿದ ನಾವು ಹಸ್ತಿನೆಗೆ ಬಂದಾಗ ಬಾಲಕರಾಗಿದ್ದೆವು. ಆ ಬಾಲ್ಯದಲ್ಲಿ ಕೌರವರಿಂದ ನಮಗೆ ಹಿಂಸೆಯ ಪರಿಚಯ ಆರಂಭವಾಯಿತು. ಆಗ ಹಿರಿಯರಿಗೆ ಇದು ಮಕ್ಕಳಾಟ ಎಂದು ನಗಣ್ಯವಾಗಿ ಹೋಯಿತು. ನಾವು ಬೆಳೆಯುತ್ತಾ ಪ್ರಾಯ ಪ್ರಬುದ್ಧರಾಗುವಾಗ ಹಗೆಯೂ ಬೆಳೆಯತೊಡಗಿತು. ಅಣ್ಣ ಭೀಮನಿಗೆ ವಿಷವುಣಿಸಿ, ಘಟ ಸರ್ಪಗಳ ಸರೋವರಕ್ಕೆ ಎಸೆದು ಕೊಲೆಗೈಯುವವರೆಗೂ ಸಾಗಿತು. ಅಲ್ಲೂ ಅದು ಅಕ್ಷಮ್ಯವಾಗದೆ ಕ್ಷಮಿಸಲ್ಪಟ್ಟಿತು. ಮುಂದೆ ವಾರಣಾವತದ ಅರಗಿನಾಲಯ – ಆ ಲಾಕ್ಷಾಗಾರದಲ್ಲಿ ಕುಟುಂಬ ಹತ್ಯೆಯ ಹೂರಣವಾಯಿತು. ಹಿರಿಯರು ಮರುಗಿ ದುಃಖಿತರಾಗಿ ಪಾಂಡವರು ಅಳಿದರೆಂದು ಅವರ ಕ್ರಿಯೆ ನಡೆಸಿದರು ಹೊರತು, ಕೊಲೆ ಪಾತಕಿ ಯಾರೆಂಬ ಪ್ರಶ್ನೆ ಯಾರಲ್ಲೂ ಉದ್ಭವಿಸಲಿಲ್ಲ. ಮತ್ತೆ ಅಲ್ಲಿಂದ ಕಾಡು ಪಾಲಾದ ನಾವು ಹೇಗೋ ದಿನಗಳೆದು, ಪಾಂಚಾಲದ ಸ್ವಯಂವರ ಮಂಟಪದಲ್ಲಿ ಕಾಣಿಸಿಕೊಂಡೆವು. ನಂತರದ ಬೆಳವಣಿಗೆಯಲ್ಲಿ ಮರಳಿ ಹಸ್ತಿನೆಗೆ ಬರಬೇಕಾಯಿತು. ಅಖಂಡವಾಗಿದ್ದ ಹಸ್ತಿನೆ, ವೈರತ್ವ ಬೆಳೆದ ಮನಗಳಂತೆ ಇಬ್ಬಾಗವಾಯಿತು. ಸುದೈವವಶಾತ್ ನಮಗೆ ಒದಗಿದ ಇಂದ್ರಪ್ರಸ್ಥ ಪುಣ್ಯ ಭೂಮಿಯಾಗಿ, ರಾಜಸೂಯ ಯಾಗವೂ ನಡೆದು, ನಮ್ಮಣ್ಣ ಚಕ್ರವರ್ತಿಯೂ ಆದ. ಆದರೆ ದೊಡ್ಡಪ್ಪ ಸುಹೃ ದ್ಯೂತದ ಆಮಂತ್ರಣವಿತ್ತು ಕರೆಸಿದರು. ಸ್ನೇಹ ದ್ಯೂತ ಷಡ್ಯಂತ್ರಪೂರಿತವಾಗಿ ಪಣದಲ್ಲಿ ಸರ್ವವನ್ನೂ ಒಮ್ಮೆ ಸೋತೆವು. ಆಗ ನಮಗೆ ದೊಡ್ಡಪ್ಪನಿಂದಾಗಿ ಕಳೆದುಕೊಂಡದ್ದು ಮರಳಿ ದೊರೆತರೂ, ಇಂದ್ರಪ್ರಸ್ಥದತ್ತ ತೆರಳುತ್ತಿದ್ದ ನಮ್ಮನ್ನು ಮತ್ತೆ ದ್ಯೂತಕ್ಕೆ ನಿಮಂತ್ರಣವಿತ್ತು ದೊಡ್ಡಪ್ಪ ಕರೆಸಿದರು. ಶಕುನಿಯ ತಂತ್ರದಿಂದ ಕಪಟದಾಟವಾಗಿ, ಸಕಲವನ್ನು ನಮ್ಮಣ್ಣ ಸೋತ ಬಳಿಕ, ಆ ದುಷ್ಟರು ಮಾನನಿಧಿ ದ್ರೌಪದಿಯ ಸೆರಗಿಗೆ ಕೈಯಿಕ್ಕಿ ಎಳೆದಾಗಲೂ, ಮಾನವಂತರು ಆಡಲೇ ಬಾರದಾದ ದುರ್ವಚನಗಳನ್ನು ಆಡಿದರೂ – ಆ ಮಹಾ ಪಾತಕವನ್ನು ಆಸ್ಥಾನದಲ್ಲಿ ಪ್ರತ್ಯಕ್ಷವಾಗಿ ಕುಳಿತು ನೋಡಿ ಕೇಳುತ್ತಿದ್ದ ಹಿರಿಯರು ಸುಮ್ಮನಾದರೆ ಹೊರತು ತಡೆಯಲಾಗಲಿಲ್ಲ. ಆದರೆ ಆ ಧರ್ಮಾತಿಕ್ರಮಣದ ಕ್ಷಣದಲ್ಲಿ ಅಸಹನೆಯಿಂದ ರೋಷಾವೇಶಕ್ಕೊಳಗಾದ ನಾವು ಅಧರ್ಮಿಗಳ ನಿಗ್ರಹದ ಘೋರ ಪ್ರತಿಜ್ಞೆಯನ್ನು ಮಾಡಿದ್ದೇವೆ ಎಂಬುವುದನ್ನು ಮರೆಯಾಗದು. ಪಣ ಸೋತ ನಾವು ಸತ್ಯ ವ್ರತಸ್ಥರಾಗಿ ಒಪ್ಪಿದಂತೆ ವನವಾಸ ಅಜ್ಞಾತವಾಸವನ್ನೂ ಪೂರೈಸಿ ಬಂದಿದ್ದೇವೆ. ಈಗ ಒಪ್ಪಂದಂತೆ ನಮಗೆ ನಮ್ಮ ಸರ್ವ ಸಂಪದವನ್ನು ಒಪ್ಪಂದದಂತೆ ನೀಡಬೇಕಾದದ್ದು ಕೌರವನಿಗೆ ಧರ್ಮ. ನಾವು ಧರ್ಮ ಪಾಲಕರಾಗಿ ಬದುಕಿದ್ದೇವೆ, ಮುಂದೆಯೂ ಧರ್ಮ ಪಾಲನೆಯನ್ನು ಮಾಡಲು ಬಾಧ್ಯರು. ನಮ್ಮೆದುರು ಯಾರಾದರು ಅಧರ್ಮಿಗಳಾದರೆ ಚಕ್ರವರ್ತಿ ಅಭಿಷಿಕ್ತನಾದ ಅಣ್ಣ ಧರ್ಮರಾಯ ಧರ್ಮ ಸ್ಥಾಪಿಸುವ ಹೊಣೆಗಾರ ಆಗುತ್ತಾನೆ. ಹೀಗಿರಲು ಕೌರವ ಒಪ್ಪಿ ಧರ್ಮಮಾರ್ಗ ಅನುಯಾಯಿಯಾಗಿ ದುರ್ಯೋಧನ ನಮ್ಮದಾದದ್ದನ್ನು ಮರಳಿಸಿದರೆ ಅದು ಉಚಿತ ಕಾರ್ಯ. ಅದನ್ನುಳಿದು ಉದ್ಧಟತನ ತೋರಿದರೆ ನಾವು ಸುಮ್ಮನುಳಿಯಲಾಗದು. ವಚನ ಭ್ರಷ್ಟರಾಗದೆ ಪ್ರತಿಜ್ಞೆ ಪೂರೈಸಬೇಕಾದ ಧರ್ಮ ನಮ್ಮಿಂದಾಗ ಪಾಲಿಸಲ್ಪಡಬೇಕಾಗಿದೆ. ಇದನ್ನೆಲ್ಲಾ ನಿಮಗೆ ತಿಳಿದಿಲ್ಲವೆಂದು ನೆನಪಿಸಿದ್ದಲ್ಲ. ಈಗ ಯುದ್ಧವೊಂದೇ ಧರ್ಮಪಾಲನೆಗಿರುವ ದಾರಿಯಾಗಿ ಉಳಿದಿದೆ. ಇಲ್ಲಿ ಎಲ್ಲರಿಂದ ಚರ್ಚೆಯಾಗಿರುವ ಅನ್ಯ ಸರ್ವ ವಿಚಾರಗಳು ನಾವು ಆಚರಿಸಿ ಉಸಿರಾಡುತ್ತಿರುವ ಧರ್ಮದ ಪಥದಿಂದ ವಿಮುಖವಾಗಿರುವಂತೆ ಕಾಣುತ್ತಿದೆ. ಹಾಗಾಗಿ ಆಗಬೇಕಾದದ್ದು ಯುದ್ಧ. ಅದೇ ಸರಿಯಾದ ಮಾರ್ಗ ಎಂಬುವುದು ನನ್ನ ಅಭಿಪ್ರಾಯ” ಎಂದು ಸಹದೇವ ಅಮೂಲಾಗ್ರವಾಗಿ ವಿಷಯ ವಿಸ್ತರಿಸಿ ವಿವರಿಸಿದನು.

ಸಹದೇವನ ಮಾತು ಕೇಳಿದ ಸಾತ್ಯಕಿ, ದೃಷ್ಟದ್ಯುಮ್ನ, ದ್ರುಪದಾದಿಗಳು “ಭಲೇ ಭಲೇ, ಇದು ನಿಜವಾದ ಮಾತು. ವೀರೋಚಿತವೂ, ಅನುಸರಣಿಯವೂ, ಯೋಗ್ಯವೂ ಆದ ವಿಚಾರ. ಹಾಗೇಯೆ ಆಗಬೇಕಾಗಿದೆ, ಯುದ್ದವೇ ಆಗಲಿ” ಎಂದು ಸಹಮತ ವ್ಯಕ್ತಪಡಿಸಿ ಪುಷ್ಟೀಕರಿಸಿದರು.

ಪುರುಷ ಪ್ರಧಾನವಾಗಿ ಸಾಗುತ್ತಿದ್ದ ಸಮಾಲೋಚನೆಯ ನಡುವೆ ಉಪಸ್ಥಿತಳಿದ್ದ ದ್ರೌಪದಿ ಎದ್ದು ನಿಂತು “ಮೊದಲಾಗಿ ಇಲ್ಲಿ ನೆರೆದಿರುವ ಸರ್ವರ ಕ್ಷಮಾಪ್ರಾರ್ಥಿಯಾಗಿದ್ದೇನೆ. ಕೃಷ್ಣಾ! ನಾನು ಮಾತನಾಡಬಾರದೋ, ಬಹುದೋ ನನಗೆ ತಿಳಿಯದು. ಈಗ ನಾನು ನಿಮ್ಮೆಲ್ಲರ ಮಧ್ಯೆ ನನ್ನ ಅಭಿಪ್ರಾಯ ತಿಳಿಸುವುದು ಅನುಚಿತವಾದರೆ ನನ್ನನ್ನು ಮನ್ನಿಸಬೇಕು. ನನಗೆ ಹೇಳಲೇ ಬೇಕು ಎಂಬ ಮನಸ್ಸಾದ ಕಾರಣ ಎದ್ದು ನಿಂತಿರುವೆ. ವಾಸುದೇವಾ! ಹಸ್ತಿನಾವತಿಗೆ ನೀನು ಧರ್ಮರಾಯನ ಪರವಾಗಿ ರಾಯಭಾರಿಯಾಗಿ ತೆರಳಲು ಸಿದ್ಧನಾಗಿರುವೆ. ನನ್ನದೊಂದು ಪ್ರಶ್ನೆಯಿದೆ. ನೀನು ನನ್ನನ್ನು ತಂಗಿಯೆಂದು ಸ್ವೀಕರಿಸಿದ ಅಣ್ಣನಲ್ಲವೆ? ಸೋದರಿಯಾಗಿ ತಿಳಿದೋ, ತಿಳಿಯದೆಯೋ ಈ ರೀತಿ ಕೇಳುತ್ತಿದ್ದೇನೆ. ನೀನು ಮಹಿಮಾನ್ವಿತನೇ ಹೌದು. ನಿನ್ನ ಪ್ರಭೆಯಿಂದಾಗಿ ಧೃತರಾಷ್ಟ್ರನ ಮನ ಪರಿವರ್ತನೆಯಾಗಿಯೋ, ಭೀಷ್ಮ – ದ್ರೋಣಾದಿಗಳ ಬಲವಂತದಿಂದಲೋ – ಒಂದು ಪಕ್ಷ ಕೌರವ ನಾವು ಕೇಳುತ್ತಿರುವ ಐದು ಗ್ರಾಮವನ್ನು, ಅಥವಾ ನಮ್ಮ ಸಮಸ್ತ ಸಾಮ್ರಾಜ್ಯವನ್ನು ಮರಳಿಸಿದ ಎಂದಿಟ್ಟುಕೊಳ್ಳೋಣ. ಹಾಗೂ ಇನ್ನೂ ವಿಭಿನ್ನವಾಗಿ ಯೋಚಿಸಿ ಸದಾ ಶಾಂತ ಸ್ವಭಾವದ ಧರ್ಮಜ ಶಾಂತಿಪ್ರಿಯನಾಗಿ – ಹೇಗಿದ್ದರೂ ಈ ವರೆಗೆ ಆಯಸ್ಸಿನ ಬಹುಪಾಲು ಕಾಡಲ್ಲಿ ಕಳೆದವರು. ಇನ್ನುಳಿದ ಜೀವನವನ್ನೂ ಹಾಗೆಯೆ ಪೂರೈಸೋಣ. ಬಂಧು ಹತ್ಯೆಯ ಮೂಲಕ ದೊರೆಯಲಿರುವ ಸಾಮ್ರಾಜ್ಯ ನಮಗೆ ಬೇಡ ಎಂದು ಬಯಸಿದರೆ ಅದರಲ್ಲೇನೂ ವಿಸ್ಮಯ ಪಡುವ ಸಂಗತಿಯಿಲ್ಲ. ಒಂದು ವೇಳೆ ಈ ರೀತಿ ಏನಾದರು ಎರಡರಲ್ಲೊಂದು ಆದರೆ, ಆಗ ಮಹಾ ಪಾತಕಿಗಳಾದ ಕೌರವರು ಈವರೆಗೆ ಗೈದ ಅಕ್ಷಮ್ಯ ಅಪರಾಧಗಳಿಗೆ ಶಿಕ್ಷೆ ಇಲ್ಲವೇ? ಶಿಷ್ಟ ರಕ್ಷಣೆ ಭಗವಂತನ ಕರ್ತವ್ಯ. ಹಾಗೆಂದು ದುಷ್ಟ ಶಿಕ್ಷಣವನ್ನು ಮರೆತರೆ ಹೇಗಾದೀತು? ನಾನು ಹೆಣ್ಣಾದರೂ ಎಲ್ಲರಂತಲ್ಲ, ಅಗ್ನಿಸಂಭವೆಯಾಗಿ, ಯೌವನ ಹರೆಯದವಳಾಗಿ ಆವಿರ್ಭವಿಸಿದವಳು. ಸುಡುವ ಅಗ್ನಿಯಲ್ಲಿ ನಿಂತು ಪ್ರಕಟಳಾದ ನನಗೆ ಮನುಷ್ಯ ಪ್ರಯತ್ನದಿಂದ ನೀಡಲ್ಪಟ್ಟ ಕಷ್ಟ ಬಿಸಿಯಾದೀತೆ? ಹೇಗೋ ಸಹಿಸಿಕೊಂಡೇನು. ಆದರೆ ಓರ್ವ ಸಾಮಾನ್ಯ ಹೆಣ್ಣು ಇಂತಹ ದುಷ್ಟರ ಮಧ್ಯೆ ಬದುಕಿ ಉಳಿಯಲು ಸಾಧ್ಯವಿದೆಯೇ? ಈ ಪಾತಕಿಗಳಿಗೆ ಕ್ಷಮೆ ನೀಡಿದರೆ ಧರ್ಮವಾದೀತೇ? ಮುಂದೆ ಲೋಕದ ಜನತೆಗೆ ನಾವು ಏನು ಸಂದೇಶ ನೀಡಿದಂತಾದೀತು? ಲೋಕ ಕಂಟಕರು, ದುರ್ಮಾರ್ಗಿಗಳು, ಕಪಟಿಗಳು, ಅಧಿಕಾರ ದಾಹಿಗಳೂ, ಮೃಗೀಯ ಮನಸ್ಸಿನವರೂ ಆದ ಈ ದುರುಳರಿಗೆ ಶಿಕ್ಷೆ ನೀಡದೆ ಹೋದರೆ – ಅಧರ್ಮಿಗಳನ್ನು ಪ್ರೋತ್ಸಾಹಿಸದಂತೆಯೇ ಆಗುತ್ತದೆ. ಪರಿಣಾಮ ಈ ವರೆಗೆ ಧರ್ಮ ಪಾಲನೆ ಮಾಡಿ ಬದುಕಿದ ಪಾಂಡವರು ಭೃಷ್ಟರಾಗಲಾರರೇ? ಸ್ವಾಮಿ ವಾಸುದೇವಾ! ನನ್ನ ತುರುಬು ಬಿಚ್ಚಿಕೊಂಡೇ ಇದೆ, ಅದಕ್ಕೆ ಪರಿಮಾರ್ಜನೆ ಯಾವಾಗ ಮಾಡಿಸುವೆ. ನಿನ್ನನ್ನು ಸರ್ವಶಕ್ತನೆಂದು ನಂಬಿದ್ದೇನೆ. ನಿನಗೆ ಏನು ಮಾಡಿಸಬೇಕೆಂದು ತಿಳಿದಿದೆ. ನಿನ್ನ ಕರ್ತವ್ಯವನ್ನು ಮರೆಯದೆ ಅದನ್ನು ಕೃತಿ ರೂಪಕ್ಕಿಳಿಸಬೇಕೆಂದು ನನ್ನ ಪ್ರಾರ್ಥನೆ” ಎಂದು ಬೇಡಿಕೊಂಡಳು.

ಶ್ರೀ ಕೃಷ್ಣ ಮುಗುಳ್ನಗುತ್ತಾ ದ್ರೌಪದಿಯತ್ತ ನೋಡಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page