ಭಾಗ 282
ಭರತೇಶ್ ಶೆಟ್ಟಿ ,ಎಕ್ಕಾರ್

ಹಸ್ತಿನಾವತಿಯ ಮಹಾರಾಜ ನೀನು ಹೌದು. ಸಂಬಂಧದಲ್ಲಿ ನನಗೆ ಅಣ್ಣನೂ ಹೌದು. ಆದುದರಿಂದ ಸಂಬಂಧಿಯಾಗಿ ನಿನಗೊಂದು ಕಥೆಯನ್ನು ಹೇಳಬಯಸುತ್ತೇನೆ. ಕೇಳು ನೀನು ಎಂದು ಹೇಳಿ ವಿದುರ ಆರಂಭಿಸಿದ “ಕೇಶಿನಿ ಎಂಬವಳು ಅತಿ ಚೆಲುವೆ ಹೆಣ್ಣು. ಸದ್ಗುಣಶೀಲೆಯೂ ಹೌದು. ಆಕೆಯನ್ನು ವರಿಸುವುದಕ್ಕಾಗಿ ಮಹಾರಾಜ ಪ್ರಹ್ಲಾದನ ಪುತ್ರ ವೀರೋಚನ ಮತ್ತು ಅಂಗೀರಸ್ಸು ಎಂಬ ಬ್ರಾಹ್ಮಣೋತ್ತಮನ ಪುತ್ರನ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಇಬ್ಬರೂ ತಾನು ಮೇಲು ತಾನು ಮೇಲು ಎಂದು ಶ್ರೇಷ್ಟತೆಯ ಪ್ರದರ್ಶನಕ್ಕೆ ತೊಡಗಿದ್ದರು. ವಿರೋಚನ ರಾಜ ಕುಮಾರ, ಸಕಲ ಸಂಪದ, ಸಿರಿವಂತಿಗೆ ಅಧಿಕಾರ, ಕ್ಷಾತ್ರ ವಿದ್ಯಾ ಬಲಗಳಿಂದ ಮಿಗಿಲಾದವನು. ಬ್ರಾಹ್ಮಣ ಕುಮಾರ ಜ್ಞಾನ, ಕುಲ, ವರ್ಣ ಇತ್ಯಾದಿಗಳಿಂದ ಔನ್ನತ್ಯ ಪ್ರತಿಪಾದಿಸುತ್ತಿದ್ದನು. ವಿರೋಚನ ರಾಜಪುತ್ರನಾಗಿದ್ದರಿಂದ ಬಾಹುಬಲದಲ್ಲೂ ಬಲಾಢ್ಯನಾದ ಕಾರಣ ಬ್ರಾಹ್ಮಣ ಪುತ್ರ ನೇರವಾಗಿ ಈ ಸಂಘರ್ಷವನ್ನು ರಾಜನ ಮುಂದೆ ತಂದು ಪ್ರಹ್ಲಾದನಲ್ಲಿ ತೋಡಿಕೊಂಡನು. ‘ರಾಜಾ ನಾವಿಬ್ಬರೂ ಒಂದೇ ಹೆಣ್ಣನ್ನು ಬಯಸಿದ್ದೇವೆ. ಶ್ರೇಷ್ಟತೆಯೆ ಪಣವಾಗಿರುವ ಈ ಪ್ರಾಪ್ತಿಯ ನ್ಯಾಯ ತೀರ್ಮಾನ ಬಯಸಿ ನಿನ್ನ ಬಳಿ ಬಂದಿದ್ದೇನೆ. ನನಗೆ ನಿನ್ನ ಮೇಲೆ ಪೂರ್ಣ ವಿಶ್ವಾಸವೂ, ನ್ಯಾಯ ತೀರ್ಮಾನಿಸುವೆ ಎಂಬ ನಂಬಿಕೆಯೂ ಇದೆ. ಕೇಶಿನಿ ಎಂಬಾಕೆಯನ್ನು ನಾನು ಪ್ರೇಮಿಸಿದ್ದೇನೆ. ನಿಮ್ಮ ಪುತ್ರನೂ ಆಕೆಯನ್ನು ಬಯಸಿದ್ದಾನೆ. ನಮ್ಮೀರ್ವರಲ್ಲಿ ಯಾರು ಶ್ರೇಷ್ಠರೆಂದು ನಿಷ್ಪಕ್ಷಪಾತವಾಗಿ ಪರಿಶೀಲಿಸಿ ನ್ಯಾಯ ನೀಡಬೇಕು’ ಎಂದು ಕೇಳಿಕೊಂಡನು. ಭಗವದ್ಭಕ್ತನೂ, ಸಾತ್ವಿಕನೂ, ಧರ್ಮಪಾಲಕನೂ ಆದ ಪ್ರಹ್ಲಾದನ ಮುಂದೆ ನ್ಯಾಯಾಕಾಂಕ್ಷಿಗಳಾಗಿ ಬಂದವರು ಓರ್ವ ತನ್ನ ಪುತ್ರ, ಮತ್ತೊಬ್ಬ ಬ್ರಾಹ್ಮಣ ಕುಮಾರ. ನ್ಯಾಯವನ್ನು ಸರಿಯಾಗಿ ತರ್ಕಿಸಿ ತೀರ್ಪು ನೀಡಿದನು. ನಿಮ್ಮೀರ್ವರ ಶ್ರೇಷ್ಠತೆ ಈಗ ನಿಮ್ಮ ಮಾತಾ ಪಿತರ ಯೋಗ್ಯತೆಯ ಆಧಾರದಲ್ಲಿ ತೀರ್ಮಾನಗೊಳ್ಳಬೇಕು. ಕಾರಣ ನೀವೀರ್ವರೂ ಇನ್ನಷ್ಟೆ ಸ್ವ ಸಾಮರ್ಥ್ಯದಿಂದ ನಿಮ್ಮದೇ ಆದ ಯೋಗ್ಯತೆ ಗಳಿಸಿಕೊಳ್ಳಬೇಕಿದೆ. ತತ್ಕಾಲಕ್ಕೆ ಮಾತಾಪಿತರ ಅವಲಂಬನೆಯಲ್ಲಿರುವ ನೀವು ಸ್ವತಂತ್ರರಲ್ಲ. ಹಾಗೆ ವಿವೇಚಿಸಿದರೆ ನಾನು ಅಧಿಕಾರ ಹೊಂದಿರುವ ಮಹಾರಾಜ. ಅದು ಇರುವಷ್ಟು ಕಾಲ ನಾನು ಈ ಸ್ಥಾನದಿಂದ ರಾಜನೆಂದು ಗುರುತಿಸಲ್ಪಡುವೆ. ಯಥಾರ್ಥದಲ್ಲಿ ಈ ಅಧಿಕಾರ ನಶ್ವರವೂ ನಷ್ಟವಾಗಬಲ್ಲುದ್ದು ಆಗಿದೆ. ಆದರೆ ವರ್ಣೋತ್ತಮರೂ, ಜ್ಞಾನ ಸಂಪನ್ನರೂ ಆಗಿರುವ ನಿಮ್ಮ ಪಿತ ಅಂಗೀರಸ್ಸು ನನ್ನ ಮುಂದೆ ಬಂದರೆ ನಾನು ಎದ್ದು ನಿಂತು ಅವರನ್ನು ಪೂಜನೀಯ ಸ್ಥಾನದಲ್ಲಿ ಗೌರವಿಸಬೇಕು. ಕಾರಣ ಅವರು ಜ್ಞಾನಿಗಳಾಗಿದ್ದು ಅವರ ಜ್ಞಾನ ನಾಶ ಹೊಂದುವಂತಹುದಲ್ಲ. ವೀರೋಚನನ ತಾಯಿ ಅಂದರೆ ನನ್ನ ಪತ್ನಿಗಿಂತ ಅಂಗೀರಸರ ಪತ್ನಿ ನಿಮ್ಮ ತಾಯಿ ಉನ್ನತ ಸ್ಥಾನ ಪಡೆಯುತ್ತಾರೆ. ಕಾರಣ ಅವರು ಬಂದಾಗಲೂ ನನ್ನ ಪತ್ನಿ ಪಾದ ಪೂಜೆಗೈದು ಪುಣ್ಯಾಕಾಂಕ್ಷಿ ಆಗಿದ್ದಳು. ಅಂತಹ ಉತ್ತಮ ಮಾತಾ ಪಿತರ ಪುತ್ರ ನೀವು ಎಂಬ ನೆಲೆಯಲ್ಲಿ ನೀವೇ ಶ್ರೇಷ್ಟತೆಯ ಸ್ಥಾನ ಪಡೆಯುವಿರಿ. ವೀರೋಚನ ರಾಜಕುಮಾರನಾದರೂ ಬ್ರಾಹ್ಮಣೋತ್ತಮರ ಪುತ್ರರಾದ ನಿಮ್ಮ ನಂತರದ ಸ್ಥಾನಿಯಾಗುತ್ತಾನೆ. ಹಾಗಾಗಿ ನೀವು ಶ್ರೇಷ್ಟರು ಎಂಬುವುದು ನನ್ನ ಅಭಿಮತ. ಹಾಗಾಗಿ ನಿಮ್ಮಲ್ಲಿ ಸ್ಪರ್ಧೆಗಿಳಿದ ನನ್ನ ಮಗ ಸೋತಿದ್ದಾನೆ. ನೀವು ಗೆದ್ದಿದ್ದೀರಿ. ಸೋತವನ ಪ್ರಾಣ ಗೆದ್ದವನ ವಶವಾಗುತ್ತದೆ. ನನ್ನ ಪುತ್ರ ವೀರೋಚನನ ಪ್ರಾಣವನ್ನು ನನಗೆ ದಾನವಾಗಿ ನೀಡಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುವೆ” ಎಂದು ಇತ್ಯರ್ಥಗೊಳಿಸಿದನು. ಈ ತೀರ್ಪು ಕೇಳಿ ಬ್ರಾಹ್ಮಣ ಕುಮಾರನಿಗೆ ಮಹದಾನಂದವೂ ರಾಜನ ಧರ್ಮ ಜ್ಞಾನ ನಡತೆಯ ಬಗ್ಗೆ ಅಪಾರ ಗೌರವವೂ ಮನಮಾಡಿತು. ತನ್ನ ಸ್ವಂತ ಪುತ್ರನೇ ನ್ಯಾಯಾಕಾಂಕ್ಷಿಯಾಗಿ ಬಂದರೂ ಪಿತನಾಗಿ ಅಧಿಕಾರ ಸ್ಥಾನದಲ್ಲಿದ್ದರೂ, ಅನ್ಯಾಯಕ್ಕೆ ಮನ ಮಾಡದೆ, ಪುತ್ರ ವ್ಯಾಮೋಹಕ್ಕೊಳಗಾಗದೆ ತೀರ್ಪು ನೀಡಿದ್ದನು. ದಂಡಧರನಾಗಿ, ನಿಷ್ಪಕ್ಷಪಾತನಾಗಿ ವ್ಯವಹರಿಸಿದ ರೀತಿ ಅತಿ ಮೆಚ್ಚುಗೆಯಾಯಿತು. ನಿನ್ನ ಅಪೇಕ್ಷೆಯಂತೆ ನಿನ್ನ ಮಗನ ಪ್ರಾಣವನ್ನು ನಿನಗೊಪ್ಪಿಸುತ್ತೇನೆ. ಆದರೆ ಒಂದು ನಿರ್ಬಂಧವಿದೆ, ಸೋತವರು ಕೇಶಿನಿಯ ಮುಂದೆ ಗೆದ್ದವರ ಪಾದ ತೊಳೆಯಬೇಕು. ಆ ವ್ಯವಸ್ಥೆ ನಿನ್ನಿಂದಾಗಬೇಕು ಎಂದು ಕೇಳಿಕೊಂಡನು. ಪ್ರಹ್ಲಾದ ಅನ್ಯಥಾ ಭಾವಿಸದೆ, ಬ್ರಾಹ್ಮಣ ಕುಮಾರಾ ನಿಮ್ಮ ಪಾದ ಪೂಜೆ ನಮಗೆ ಶ್ರೇಯಸ್ಕರ. ನೀವು ಹೇಳದಿದ್ದರೂ ನಮಗದು ಕರ್ತವ್ಯವಾಗಿದೆ. ಪುಣ್ಯಪ್ರದವಾದ ಮಹಾ ಸೇವೆಗೆ ನೀವು ಅವಕಾಶ ಕೊಡುವಿರಾದರೆ ಪೂರ್ಣ ಮನಸ್ಸಿನಿಂದ ಪಾಲಿಸಲು ನನ್ನ ಮಗ ಸಿದ್ಧನಿದ್ದಾನೆ ಎಂದು ಹೇಳಿ ಹಾಗೆಯೆ ಮಾಡಿಸಿದನು. ಬ್ರಾಹ್ಮಣ ಕುಮಾರ ಬಲು ಸಂತೋಷಿಯಾಗಿ ರಾಜಾ ಪ್ರಹ್ಲಾದನನ್ನೂ, ಆತನ ಕುವರ ವಿರೋಚನನನ್ನೂ ಮುಕ್ತ ಮನದಿಂದ ಹರಸಿ ಆಶೀರ್ವದಿಸಿದನು”.
ಅಣ್ಣಾ! ಇಲ್ಲೊಂದು ಸೂಕ್ಷ್ಮವಿದೆ. ಮಹಾರಾಜನಾಗಿ ಸರ್ವಾಧಿಕಾರವಿದ್ದರೂ ಪ್ರಹ್ಲಾದ ತನ್ನ ಅಧಿಕಾರವನ್ನು ನ್ಯಾಯ – ಧರ್ಮದ ಮಾರ್ಗದಲ್ಲಿ ವಿನಿಯೋಗಿಸಿದ. ಸ್ವಜನ ಪಕ್ಷಪಾತ ಮಾಡುತ್ತಿದ್ದರೆ ಆ ಕುಮಾರ ಅಸಹಾಯಕನಾಗಿ ದುಃಖಿಸಬೇಕಿತ್ತು. ಹೊರತು ಬೇರೇನೂ ಮಾಡಲಾಗುತ್ತಿರಲಿಲ್ಲ. ಆದರೂ ಅನ್ಯಾಯ – ಅಧರ್ಮಕ್ಕೆ ಮನ ಮಾಡದ ಪ್ರಹ್ಲಾದ ಕೀರ್ತಿವಂತನಾಗಿ ಶ್ರೇಯಸ್ಸನ್ನು ಹೊಂದಿದನು. ನೀನೂ ಕೂಡ ಈಗ ಅಂತಹುದೇ ಸ್ಥಿತಿಯಲ್ಲಿರುವೆ. ಪುತ್ರ ವ್ಯಾಮೋಹಕ್ಕೆ ಬಲಿಯಾಗಿ ನ್ಯಾಯವನ್ನು ತೊರೆಯಬೇಡ. ಚೆನ್ನಾಗಿ ವಿವೇಚನೆ ಮಾಡಿ ಯಾವುದು ನ್ಯಾಯವೋ, ಧರ್ಮವೋ ಅದನ್ನು ಅನುಸರಿಸು. ದೇವಾನುದೇವತೆಗಳು ಸಂತುಷ್ಟರಾಗಿ ನಿನ್ನ ಧರ್ಮಬುದ್ಧಿಗೆ ಅಶೀರ್ವದಿಸುವರು. ಪರಿಣಾಮ ಕ್ಷೇಮವಾಗಲಿದೆ. ಮೋಹಕ್ಕೊಳಗಾಗಿ ಅಧರ್ಮ ಪಥ ಹಿಡಿದರೆ ಖಂಡಿತವಾಗಿ ಧರ್ಮವೇ ಗೆಲ್ಲುತ್ತದೆ. ಧರ್ಮ ಎಂದೂ ಸೋಲದು ಎಂಬುವುದು ನಿತ್ಯ ಸತ್ಯ. ದುರ್ಯೋಧನ, ದುಶ್ಯಾಸನ, ಶಕುನಿ, ಕರ್ಣ ಏನು ಮಾಡುತ್ತಿದ್ದಾರೆ, ಪರಿಣಾಮದಲ್ಲಿ ಧರ್ಮಾತ್ಮರಾದ ಪಾಂಡವರ ಎದುರು ಎಂತಹ ಸ್ಥಿತಿ ಒದಗೀತು ಎನ್ನುವ ವಿಚಾರ ನಿನ್ನಿಂದ ತರ್ಕಿಸಲ್ಪಡಬೇಕು. ಮಹಾರಾಜನಾದ ನಿನಗೆ ಸೋದರ ಪಾಂಡುವಿನ ಮಕ್ಕಳೂ ನಿನ್ನ ಪುತ್ರರೇ ಆಗುತ್ತಾರೆ. ನೀನು ಭೇದ ಮಾಡದೆ ನಿನ್ನ ಮಕ್ಕಳೆಂದು ಭಾವಿಸಿ ಅವರನ್ನು ಕಾಪಾಡಬೇಕು. ಕಾರಣ ಧರ್ಮರಾಯ ಮತ್ತವನ ಸೋದರರು ಎಂತಹ ಸ್ಥಿತಿ ಬಂದರೂ ಧರ್ಮ ಒಂದನ್ನು ಮೀರಿ ಹೋದವರಲ್ಲ. ಧರ್ಮದ ಪಕ್ಷದಲ್ಲಿರುವ ಅವರು ಸುರಕ್ಷಿತರಾಗಿ ಬೆಳೆದು ಬೆಳಗುತ್ತಿದ್ದಾರೆ. ನೀನು ನಿಜ ಪ್ರೀತಿಯನ್ನು ತೋರಿ, ಅನ್ಯಾಯ ಪಥ ತೊರೆದು, ಧರ್ಮದ ನಡೆಯನ್ನು ಪಾಲಿಸುವವನಾಗಿ ಮುಂದುವರಿಯಬೇಕು. ಪಾಂಡವರ ದಾಯಭಾಗವನ್ನು ಅವರಿಗೆ ಮರಳಿ ನೀಡಿದರೆ ಸಂಭವನೀಯ ಮಹಾ ಅನರ್ಥಕ್ಕೆ ಎಡೆ ಸಿಗದು. ಈ ರೀತಿ ನಡೆದರೆ ನಿನಗೂ ಅಮರ ಕೀರ್ತಿ ಮಾತ್ರವಲ್ಲ ನಿನ್ನ ಮಕ್ಕಳಿಗೂ ಕ್ಷೇಮವೇ ಆಗಲಿದೆ. ಇತ್ತಂಡಗಳಿಂದಲೂ ಸಮಾವೇಶಿತ ಸೇನೆಗಳ ನಡುವೆ ಸಾಗಬಹುದಾದ ನಾಶಕಾರಕ ಯುದ್ದ ತಡೆಯಲ್ಪಟ್ಟು ವಿನಾಶಕಾರಿ ಕೃತ್ಯ ನಿಂತು ಎಲ್ಲರಿಗೂ ಒಳ್ಳೆಯದಾಗಲಿದೆ. ವಿವೇಚನೆ ನಿನಗೆ ಬಿಟ್ಟದ್ದು. ಅಂತಿಮ ತೀರ್ಮಾನ ನಿನ್ನದ್ದೆ ಆಗಲಿದೆ” ಎಂದು ಸವಿವರವಾಗಿ ವಿಸ್ತರಿಸಿ ಹೇಳಿದನು.
ಮುಂದುವರಿಯುವುದು…