ಭಾಗ 279
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೮೦ ಮಹಾಭಾರತ
ಸಂಜಯನು ಹಸ್ತಿನಾವತಿಯಿಂದ ಹೊರಟು ಉಪಪ್ಲಾವ್ಯ ತಲುಪುವಾಗ ಸಂಜೆಯಾಯಿತು. ಧರ್ಮರಾಯ ಹಸ್ತಿನಾವತಿಯಿಂದ ಬಂದಂತಹ ಸಂಜಯನನ್ನು ಆತ್ಮೀಯವಾಗಿ ಸತ್ಕರಿಸಿ ವಿಶ್ರಾಂತಿಗಾಗಿ ಕರೆದೊಯ್ದನು. ಮರುದಿನ ಶ್ರೀ ಕೃಷ್ಣನ ಮುಂದಾಳತ್ವದಲ್ಲಿ ಧರ್ಮರಾಯನ ಸಭೆ ಆರಂಭವಾಯಿತು. ಮೊದಲ ಆದ್ಯತೆ ಸಂಜಯನಿಗಿತ್ತು ಧರ್ಮರಾಯ ತನ್ನ ಹಿರಿಯರೆಲ್ಲರ ಕ್ಷೇಮ ಸಮಾಚಾರ ಕೇಳಿದನು. ನಂತರ ಬಂದ ಕಾರ್ಯ ಕಾರಣ ಹೇಳಬೇಕೆಂದು ವಿನಮ್ರನಾಗಿ ವಿನಂತಿಸಿದನು.
ಸಂಜಯನು “ಧರ್ಮರಾಯ ಮಹಾರಾಜ ಧೃತರಾಷ್ಟ್ರ ನಿಮ್ಮೆಲ್ಲರನ್ನು ಹರಸಿ ಆಶೀರ್ವದಿಸಿದ್ದಾರೆ. ಈಗಿನ ಸ್ಥಿತಿಯಲ್ಲಿ ಅತೀವ ವ್ಯಾಕುಲತೆ ಅವರನ್ನು ಆವರಿಸಿದೆ. ಕಾರಣ ಅವರ ಮಕ್ಕಳಾದ ಕೌರವರು ಹಿರಿಯರ ಮಾತು ಕೇಳದ ಹಠವಾದಿಗಳಾಗಿದ್ದಾರೆ. ಅಸಹಾಯಕರಾಗಿರುವ ಮಹಾರಾಜರು ನಿಮ್ಮಲ್ಲಿ ವಿಶ್ವಾಸವಿಟ್ಟು ನನ್ನನ್ನು ಕಳುಹಿಸಿದ್ದಾರೆ. ಸದಾ ಧರ್ಮಮಾರ್ಗದಲ್ಲಿ ನಡೆದು ಏನೇ ಕಷ್ಟ ಒಡ್ಡಿದರೂ ಸಹಿಸಿ ನಡೆದ ನಿಮ್ಮ ಮೇಲೆ ಅವರು ವಿಶ್ವಾಸ ಇರಿಸಿದ್ದಾರೆ. ಈ ಹಿಂದೆ ಅವರ ಮಕ್ಕಳಾದ ಕೌರವರು ನಿಮಗೆ ಬಹುವಿಧದಿಂದ ಬಾಧೆ ನೀಡಿರುವುದನ್ನು ಕ್ಷಮಿಸಿ ಮನ್ನಿಸಬೇಕೆಂದು ಕೇಳಿದ್ದಾರೆ. ಮಾತ್ರವಲ್ಲ, ತನ್ನ ಸ್ವಂತ ಮಕ್ಕಳನ್ನು ನಿಯಂತ್ರಿಸಿ ಚಂದ್ರ ವಂಶದ ಏಳಿಗೆ ಕಾಣ ಬಯಸುವ ಪ್ರಯತ್ನಗಳು ವಿಫಲವಾದ ಕಾರಣ ಸೋದರ ಪಾಂಡುವಿನ ಮಕ್ಕಳಾದ ನೀವು ಸಮಸ್ಯೆ ಪರಿಹರಿಸಬಲ್ಲ, ಕುಲಕ್ಕೆ ಶ್ರೇಯಸ್ಕರವಾದ ತೀರ್ಮಾನ ಕೈಗೊಂಡು ಮುಂದುವರಿಯಲು ಪೂರ್ಣ ಸ್ವತಂತ್ರರು ಎಂದು ಅವರ ಮುಖವಾಣಿಯಾಗಿ ಹೇಳಿ ಬರಲು ನನ್ನನ್ನು ಕಳುಹಿಸಿದ್ದಾರೆ” ಎಂದನು.
ಸಂಪೂರ್ಣವಾಗಿ ಸಂಜಯನ ಮಾತುಗಳನ್ನು ಕೇಳಿಸಿಕೊಂಡು ಧರ್ಮರಾಯ “ಸಂಜಯಾ! ನಾವು ವನವಾಸಿಗಳಾಗಿ ಹುಟ್ಟಿದವರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ತಬ್ಬಲಿಗಳೂ ಹೌದು. ಅಂತಹ ಸ್ಥಿತಿಯಲ್ಲಿದ್ದ ನಮಗೆ ಆಶ್ರಯ, ವಿದ್ಯೆ ನೀಡಿ ಸಲಹಿದವರು ನಮ್ಮ ದೊಡ್ಡಪ್ಪ ಧೃತರಾಷ್ಟ್ರ ಮಹಾಪ್ರಭುಗಳು. ಕೃತಜ್ಞತಾ ಭಾವ ಸದಾ ನಮ್ಮಲ್ಲಿ ಜಾಗೃತವಾಗಿ ಇದೆ. ಅವರು ಹೇಳಿದ ಮೇಲೆ, ಕೌರವರು ಮಾಡಿದ ಅಪರಾಧಗಳ ಬಗ್ಗೆ ನಾವು ಸಿಟ್ಟುಗೊಳ್ಳಲಾರೆವು. ನಮ್ಮ ದೊಡ್ಡಪ್ಪನ ಮಕ್ಕಳು ಅವರ ಮಾತು ಕೇಳದಿದ್ದರೂ, ನಾವು ಶಿರಸಾವಹಿಸಿ ದೊಡ್ಡಪ್ಪನ ವಚನ ಪಾಲಿಸಲು ಬದ್ದರಾಗಿದ್ದೇವೆ. ಈಗ ನನ್ನ ಮನದಲ್ಲೊಂದು ಜಿಜ್ಞಾಸೆಯಿದೆ, ಏನೆಂದರೆ ನಾವು ಏನು ಮಾಡಿದರೆ ನಮ್ಮ ದೊಡ್ಡಪ್ಪನಿಗೆ ಹಾಗು ಚಂದ್ರವಂಶಕ್ಕೆ ಒಳಿತಾದೀತು? ಅದನ್ನು ಹೇಳಬಹುದೆ?” ಎಂದು ಕೇಳಿದನು.
ಇವರಿಬ್ಬರ ಸಂವಾದ ಆಲಿಸುತ್ತಿದ್ದ ಶ್ರೀ ಕೃಷ್ಣ “ಸಂಜಯಾ! ನಿನ್ನ ಮಾತು, ಅಂತರ್ಗರ್ಭಿತ ಅರ್ಥ ಅಂದರೆ ಚಿನ್ನದ ಪಾತ್ರೆಯಲ್ಲಿ ವಿಷವಿತ್ತಂತಿದೆ. ಧರ್ಮರಾಯನ ಮತ್ತು ಅವನ ಸಹೋದರರು ಧರ್ಮಿಷ್ಟರು ಹೌದೇ ಹೌದು, ಯಾರಿಗೂ ಅನುಮಾನವಿಲ್ಲ. ಆದರೆ ಧೃತರಾಷ್ಟ್ರನ ಸ್ಥಿತಿಗೆ ಆತನನ್ನು ಆವರಿಸಿದ ಪುತ್ರ ವ್ಯಾಮೋಹ ಮಾನಸಿಕ ಕುರುಡು ಕಾರಣ. ತನ್ನ ಮಕ್ಕಳ ಎಲ್ಲಾ ಆಸೆಗಳು ಈಡೇರಬೇಕು ಎಂದು ಬಯಸಿ ಮುಂದುವರಿದದ್ದು ಕಾರಣ. ತನ್ನ ಮಕ್ಕಳು ಮಾತು ಕೇಳದ ಹಠಮಾರಿಗಳು ಎಂಬ ದೂಷಣೆ ಓರ್ವ ಮಹಾರಾಜನಾಗಿ ಆತ ಹೇಳಬಾರದಾದ ಮಾತು. ಮಕ್ಕಳ ಮನದಲ್ಲಿ ಎಳವೆಯಲ್ಲಿ ಸಚ್ಚಾರಿತ್ರ್ಯದ ಬೀಜ ಬಿತ್ತುತ್ತಿದ್ದರೆ ಈಗ ಸತ್ಫಲ ಖಂಡಿತಾ ಸಿಗುತ್ತಿತ್ತು. ವಿಷವಿತ್ತು, ಘೋರ ಸರ್ಪಗಳ ಸರೋವರಕ್ಕೆ ಎಸೆದು, ಅರಮನೆಗೆ ಅಗ್ನಿಯಿತ್ತು ಹೀಗೆ ನಾನಾ ವಿಧದಿಂದ ತನ್ನ ಸಹೋದರ ಪುತ್ರರ ಕೊಲೆ ಮಾಡುವ ಪ್ರಯತ್ನಗಳನ್ನು ಮಾಡುವುದನ್ನು ತಿಳಿದು ಸುಮ್ಮನಿದ್ದದ್ದು ಸರಿಯೆ? ಅರಗಿನಾಲಯದಿಂದ ಮತ್ತೆ ಕಾಡಾಡಿಗಳಾಗಿ ಚಕ್ರವರ್ತಿಯ ಮಕ್ಕಳಾದ ಪಾಂಡುಪುತ್ರರು ಸಿಕ್ಕ ಸಿಕ್ಕ ಗೆಡ್ಡೆ, ಹಣ್ಣು ಹಂಪಲು ತಿಂದು ಬದುಕುವ ಸ್ಥಿತಿ, ಅಗ್ರಹಾರ ಸೇರಿ ಭಿಕ್ಷಾನ್ನ ಉಣ್ಣುವ ದರಿದ್ರ ಪರಿಸ್ಥಿತಿ ಅನುಭವಿಸಿದ್ದನ್ನೂ ಮರೆಯಬಹುದು. ಸ್ವಯಂವರ ಪಣ ಭೇದಿಸಿ ಮರಳಿ ಹಸ್ತಿನೆ ಸೇರಿ, ರಾಜಸೂಯಾಧ್ವರಗೈದು ಸಾಧನೆಯಿಂದ ಚಕ್ರವರ್ತಿಯಾದ ಯುಧಿಷ್ಠಿರನನ್ನು ಮಾವ ಶಕುನಿಯ ಜೊತೆ ಸೇರಿ ಕಪಟ ದ್ಯೂತದಲ್ಲಿ ಸೋಲಿಸಿ ಸರ್ವಸ್ವವನ್ನೂ ಕದ್ದುಕೊಂಡದ್ದನ್ನು ಕಂಡವರಲ್ಲವೆ ನೀವೂ ಕೂಡಾ? ಅಷ್ಟೇ ಆಗಿದ್ದರೆ ಸರಿ ಕ್ಷಮಿಸಬಹುದಿತ್ತೋ ಏನೋ! ಆದರೆ ಕುಲವಧು ದ್ರೌಪದಿಯನ್ನು ಮೃಗೀಯವಾಗಿ ಎಳೆದುಕೊಂಡು ತಂದು ಹಿಂಸಿಸಿ ಸೆರಗಿಗೆ ಕೈಯಿಕ್ಕಿ ಮಾನಭಂಗಕ್ಕೆ ಪ್ರಯತ್ನಿಸಿ, ಕಾಮುಕರಾಗಿ ದುರ್ವಚನ ಆಡಿದ ಕೌರವರ ಮಾತು – ಕೃತ್ಯ ಕೇಳಿ – ನೋಡಿಯೂ ಅಲ್ಲಿ ಜೀವಂತ ಕುಳಿತಿದ್ದಿರಲ್ಲ! ಯಾಕೆ ನಿಮಗೆ ಆ ಕಣ್ಣೀರು ವೇದನೆ ನೀಡಲಿಲ್ಲ? ಭಗವಂತನ ಕೃಪೆಯಿಂದ ದ್ರೌಪದಿಯ ಭಕ್ತಿಯ ಶಕ್ತಿ ಆಕೆಯ ಮಾನ ಪ್ರಾಣದ ರಕ್ಷಣೆಯಾಯಿತು. ಆದರೂ ನೀವ್ಯಾರೂ ತಡೆಯುವ ಸಾಹಸಕ್ಕೆ ಮನಮಾಡಲಿಲ್ಲ. ನಂತರ ವನವಾಸ ಅಜ್ಞಾತವಾಸಕ್ಕಾಗಿ ಹೊರಟ ಪಾಂಡವರ ಜೊತೆ ರಾಜಮಾತೆ ಕುಂತಿ ಕಣ್ಣೀರ್ಗರೆಯುತ್ತಾ ಹೊರಟಾಗಲೂ ಯಾರಿಗೂ ನೋವಾಗಲಿಲ್ಲ. ಆಕೆಯನ್ನಾದರೂ ತಡೆದು ನೀನು ಹೋಗಬೇಡಮ್ಮಾ ಎಂದು ಹೇಳುವ ಯೋಚನೆ ಬರಲಿಲ್ಲ. ಒಂದೇ… ಎರಡೇ… ಮಾಡಿದ ಪಾಪಗಳಿಗೆ ಲೆಕ್ಕವಿದೆಯೆ? ಯಾವ ದೋಷವಾದರೂ ಪ್ರಾಯಶ್ಚಿತ್ತಗೊಂಡೀತು, ಆದರೆ ಅಬಲೆ ಹೆಣ್ಣಿನ ಮಾನಹರಣ ಯತ್ನ ಅಕ್ಷಮ್ಯವಾಗಿ ಉಳಿದಿದೆ. ವೃದ್ಧೆ ಕುಂತಿಯ ಅಳು, ವನಾಭಿಗಮನ, ಅಸಹಾಯಕತೆಯ ನಿರ್ಗಮನ ಮತ್ತು ಮಕ್ಕಳಿದ್ದೂ ದೂರವಾಗಿ ಬದುಕಿದ ಕ್ಷಣ ಕ್ಷಣದ ರೋದನೆಯ ಕಣ್ಣೀರ ಶಾಪ ಪರಿಹಾರ ಆದೀತೆ? ಕಪಟ ಮಾರ್ಗದಿಂದ ಸಾಧಿಸಿ, ಅನುಭವಿಸಿ ಕೊಬ್ಬಿದ ದುರುಳ ಕೌರವ ಮದಾಂಧನಾಗಿ ಇನ್ನೂ ನನಗೆ ಸಾಮ್ರಾಜ್ಯ ಬೇಕು ಎಂದು ಮತ್ತೆ ಅಧರ್ಮ ಪಥ ಹಿಡಿದರೆ ಅದನ್ನೂ ಸಹಿಸಿ ಮನ್ನಿಸಬೇಕೆ? ಹಾಗಾದರೆ ಎಲ್ಲವನ್ನೂ ಸಹಿಸಿ ಬದುಕಬಲ್ಲ ಪಾಂಡವರು ಇನ್ನೂ ಬೇಡಿ ತಿನ್ನುವ ಭಿಕ್ಷುಕರಾಗಿಯೆ ಬಾಳಿ ಅಳಿಯಬೇಕೆ? ಹೀಗೆ ಅಪರಾಧ ಪಾತಕಗಳ ಸರಮಾಲೆ ಧರಿಸಿರುವ ಕೌರವನಿಗೆ ದಂಡನೆ ನೀಡುವುದು ಬೇಡವೆ? ಧರ್ಮಿಷ್ಟರಾದ ಪಾಂಡವರಿಗೆ ಆಶೀರ್ವಾದ ಎನ್ನುವ ಧೃತರಾಷ್ಟ್ರನ ಬಯಕೆ ಈಗಲೂ ತನ್ನ ಮಕ್ಕಳಿಗೆ ಸಮಸ್ತವನ್ನೂ ಅನುಭವಿಸಗೊಟ್ಟು ಪಾಂಡುಪುತ್ರರು ಹೇಗಾದರೂ ಬದುಕಲಿ ಎಂಬ ಆಶಯವೆ? ಇದೆನ್ನೆಲ್ಲಾ ನೋಡಿ ಮೂರನೆಯವನಾದ ನನಗೂ ಸಹಿಸಲಾಗುತ್ತಿಲ್ಲ. ಈ ಪಾಂಡವರು ಮಾತ್ರ ಹೇಗೆ ಸಹಿಸಿಕೊಂಡಿದ್ದಾರೋ! ಕಾರಣ ಅವರೇನನ್ನು ಕಳಕೊಂಡರೂ, ಧರ್ಮ ಮಾರ್ಗ ಒಂದನ್ನು ಕಳೆದುಕೊಳ್ಳಲಾರರು. ಅಯ್ಯಾ ಮಹಾತ್ಮನೆ! ನೀನೇ ಯೋಚಿಸು, ನನ್ಮ ಅಭಿಮತದಂತೆ ಸಂಧಾನದಿಂದ ಪರಿಹಾರವಾಗುವ ನ್ಯಾಯ ಇದಲ್ಲ ಎಂದು ತೋರುತ್ತಿದೆ. ಹಾಗೊಮ್ಮೆ ಆಗುವುದಿದ್ದರೆ ಶತಾನಂದರ ಪ್ರಯತ್ನ ಸಫಲವಾಗ ಬೇಕಿತ್ತು. ಆದುದರಿಂದ ಕ್ಷತ್ರಿಯರೂ, ಚಕ್ರವರ್ತಿಯ ಪುತ್ರರೂ ಆದ ಪಾಂಡವರು ತಮ್ಮದಾದುದನ್ನು ತೊರೆದು ಶರಣಾಗತರಾಗಿ ಇನ್ನೂ ಬದುಕಬೇಕೆಂಬುದು ಮೂರ್ಖತನ. ಸಂಧಾನ ಅಸಾಧ್ಯ ಆಗಿರುವ ಕಾರಣ ಸಂಗ್ರಾಮವೇ ಪರಿಹಾರ. ಅಂತಹ ಯುದ್ದ ಆಗಬಾರದು ಎಂಬುವುದು ಧೃತರಾಷ್ಟ್ರನ ಬಯಕೆ ಆಗಿದೆಯಾದರೆ, ಸಂಧಿಯ ಪ್ರಸ್ತಾಪ ಈಗಲೂ ಶತಾನಂದರ ಮೂಲಕ ಹಸ್ತಿನೆಗೆ ಕಳುಹಿಸಲಾಗಿದೆ. ಧೃತರಾಷ್ಟ್ರ ವಿವೇಚಿಸಿ ಸಮಸ್ಯೆ ಪರಿಹರಿಸುವ ಪೂರ್ಣಾಧಿಕಾರ ಹೊಂದಿದ್ದಾನೆ. ಆತನೇ ಸಾಧುವಾದ, ನ್ಯಾಯಸಮ್ಮತವಾದ ಆಜ್ಞೆ ಘೋಷಿಸಲಿ” ಎಂದು ವಿವರಿಸಿ ಹೇಳಿದನು.
ಭೀಮಾರ್ಜುನರು, ದ್ರುಪದ ದೃಷ್ಟದ್ಯುಮ್ನರು ಸಂಧಾನ ಆಗುವಂತಹುದಲ್ಲ ಸಂಗ್ರಾಮವೇ ಪರಿಹಾರ ಎಂದು ನುಡಿಯ ತೊಡಗಿದರು.
ಮುಂದುವರಿಯುವುದು…