32 C
Udupi
Sunday, March 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 252

ಭರತೇಶ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೫೩ ಮಹಾಭಾರತ

ಕೀಚಕನ ಕೈಯಿಂದ ತಪ್ಪಿಸಿಕೊಂಡ ದ್ರೌಪದಿ ಶೌಚಗ್ರಹ ಸೇರಿ ಸ್ನಾನಾದಿ ಶುದ್ದ ಕಾರ್ಯ ಪೂರೈಸುವುದಕ್ಕೆ ತೆರಳಿದಳು. ನೀಚ ಕೀಚಕ ಹಿಡಿದ ಕೈ, ಜಗ್ಗಿದ ಕೇಶವನ್ನು ಪರಿ ಪರಿಯಾಗಿ ತಿಕ್ಕಿ ತೊಳೆದುಕೊಂಡಳು. ಶುಚಿರ್ಭೂತಳಾಗಿ ಬಂದು ಗೋವಿಂದನ ನಾಮಸ್ಮರಣೆ ಮಾಡಿ ನೊಂದ ಮನವನ್ನೂ ತಿಳಿಗೊಳಿಸಿಕೊಂಡಳು. ಆ ದಿನ ಕಳೆದು ಉಂಡು ಮಲಗಿದ ಮಾಲಿನಿ(ದ್ರೌಪದಿ) ಗೆ ವಿರಾಟನ ಆಸ್ಥಾನದಲ್ಲಿ ಧರ್ಮರಾಯ ಒಗಟಿನಂತೆ ಹೇಳಿದ ಸೂಚ್ಯವಾಕ್ಯದ ಸೂಕ್ಷ್ಮ ಸ್ಮರಣೆಗೆ ಬಂತು. “ನೀನೂ ಇದ್ದಿಯಾ – ನಿನ್ನವರೂ ಇದ್ದಾರೆ – ಅಲ್ಲಿಗೆ ಹೋಗಿ ನಿನ್ನ ಕ್ಷೇಮವನ್ನು ಹುಡುಕಿ ಪಡೆದುಕೋ. ಹೆಣ್ಣಾದವಳಿಗೆ ಸತ್ಪತಿಯೇ ಸಂಪತ್ತು – ಅಂತಹ ಆಪತ್ಬಾಂಧವನ ಕಕ್ಷೆಯೆ ರಕ್ಷಾ ಕವಚ” ಹೌದು ನಾನು ನನ್ನವರ ಬಳಿಗೆ ಈಗ ಹೋಗಬೇಕು. ಕೀಚಕನ ನೀಚತನಕ್ಕೆ ಮದ್ದು ಅರೆಯಬಲ್ಲವರು ಯಾರು? ಕಂಕ (ಯುಧಿಷ್ಠಿರ), ಬ್ರಹನ್ನಳೆ (ಅರ್ಜುನ), ದಾಮಗ್ರಂಥಿ(ನಕುಲ), ತಂತಿಪಾಲ(ಸಹದೇವ)ರಿಂದ ಇಂದಿನ ಈ ಸ್ಥಿತಿಯಲ್ಲಿ ಕೀಚಕನನ್ನು ಮರ್ದಿಸಲು ಸುಲಭ ಸಾಧ್ಯವಲ್ಲ. ಆದರೆ ಅದು ವಲಲ(ಭೀಮ)ನೊಬ್ಬನಿಂದಲೆ ಸಾಧ್ಯ. ಏನೋ ತರ್ಕಿಸಿ ಯೋಚಿಸಿ ನಡುರಾತ್ರಿ ಮಲಗಿದ್ದಲ್ಲಿಂದ ಎದ್ದಳು.

ಎದ್ದು ಹೊರಬಂದಳು ಬೆಳದಿಂಗಳ ರಾತ್ರಿಯಲ್ಲಿ ಇಬ್ಬನಿಯ ಹನಿಗಳು ಉದ್ಯಾನದ ತರುಲತೆಗಳ ಎಲೆತುದಿಯಿಂದ ಜಾರಿ ಬೊಟ್ಟಿಕ್ಕುತ್ತಾ ಭೂಮಿಗೆ ಬೀಳುತ್ತಿದೆ. ಇತ್ತ ಕಮಲದಳ ನಯನಗಳ ಅಂಚಿದಲೂ ಭಾವಾಶ್ರುವಿಳಿದು ಭುವಿಗರ್ಪಣೆಯಾಗುತ್ತಿರುವಂತೆ ಕಂಡವು. ನೋಡಿದ ದ್ರೌಪದಿಗೆ ಈ ಗಿಡಗಳೂ ನನ್ನ ಜೊತೆ ಅಳುತ್ತಿವೆಯೋ ಎಂದೆಣಿಸಿತು. ನೇರವಾಗಿ ಬಂದು ಬೆಕ್ಕಿನಂತೆ ಸದ್ದು ಮಾಡದೆ ಭೀಮನ ಶಯನ ಸ್ಥಾನದತ್ತ ಬಂದಳು. ಕಟ್ಟಿಗೆಯ ರಾಶಿಯನ್ನು ಏರಿ ಮಂಚದಂತೆ ಸಮತಟ್ಟಾಗಿಸಿ ಚಂದ್ರವಂಶ ಕುಲತಿಲಕ, ಸಹಸ್ರಗಜತ್ರಾಣಿ, ಮಾರುತ ನಂದನ, ವೃಕೋದರ ನೆಂಬಿತ್ಯಾದಿ ನೆಗಳ್ತೆಯ ಭೀಮಸೇನ ಮಲಗಿದ್ದಾನೆ. ಅಯ್ಯೋ ದುರ್ವಿಧಿಯೇ? ನನ್ನ ಕಷ್ಟಕ್ಕಿಂತಲೂ ಈ ರೀತಿ ಬಿದ್ದುಕೊಂಡಿರುವ ಈತನ ಬದುಕು ದುಸ್ತರವೆನಿಸಿತು. ಸಮಯವಿಲ್ಲ, ವಿಳಂಬಿಸದೆ ಬಂದ ಕಾರ್ಯ ಪೂರೈಸಬೇಕು. ಯಾರಾದರು ನೋಡಿದರೆ ಕಥೆ ಕೈಲಾಸವಾದೀತೆಂದು ದುರ್ಗಮ ಕಾನನ ಗವಿಸಂದಿನಲ್ಲಿ ಪವಡಿಸಿದ ಸಿಂಹವನ್ನು ಸಿಂಹಿಣಿ ಬೇಟೆಗೆ ಎಬ್ಬಿಸಲು ಎಚ್ಚರಿಸುವಂತೆ ನುಣುಪಾಗಿ ಮೈದಡವಿ ಕಿವಿಯ ಬಳಿ ತನ್ನ ತುಟಿಗಳನ್ನು ತಂದು “ಏಳು ಎದ್ದೇಳು ಪುರುಷ ಸಿಂಹನೇ, ಸತ್ತವನಂತೆ ಏಕೆ ಮಲಗಿರುವೆ. ನಿನ್ನ ಭಾರ್ಯೆಯಾದ ನನಗಾದ ಅಪಮಾನ ಕಂಡೂ ಮಾನನಿಧಿಯ ರಕ್ಷಕನಾದ ನೀ ಹೇಗೆ ನಿದ್ರೆಗೊಳಗಾದೆ. ಆ ಪಾಪಿ ಕೀಚಕ ಇನ್ನೂ ಚಿತೆಗೇರದೆ ಉಳಿದಿರುವಾಗ ನಿನಗಿರಬೇಕಾಗಿದ್ದ ಚಿಂತೆ ಎಲ್ಲಿ ಮಾಯವಾಗಿ ಮಾಯೆಯ ನಿದ್ದೆ ಆವರಿಸಿತು?” ಎಂದು ಪಿಸು ಧ್ವನಿಯಲ್ಲೇ ಗದರಿದಳು.

ಎಚ್ಚರಗೊಂಡ ಭೀಮಸೇನ “ಹೇ! ದ್ರೌಪದಿ? ಈ ಹೊತ್ತು – ನೀನಿಲ್ಲಿ? ಯಾರಾದರು ನೋಡಿದರೆ? ಎಂದು ಅರೆ ಪ್ರಶ್ನೆ ಕೇಳುತ್ತಲೇ ಆತಂಕ ಪ್ರಕಟಿಸಿದನು.

ದ್ರೌಪದಿ ಅಳುತ್ತಳೇ ” ಅಗ್ನಿಯಿಂದಲೇ ಹುಟ್ಟಿದ ನನಗೆ ತಾಪ ಜನ್ಮದಿಂದಲೆ ಜೊತೆಯಾಗಿ ಬಂದಿದೆ. ವಿಶೇಷ ರೀತಿಯ ವಿವಾಹ – ಬಳಿಕ ಸತ್ವ ಪರೀಕ್ಷೆಯ ಬದುಕು, ನಂತರ ಪತಿಗೃಹ ಸೇರಿದರೆ ದುಷ್ಟ ಕೌರವ ಆತನ ಅಂತಃಪುರಕ್ಕೆ ಆಹ್ವಾನಿಸುವ ತನಕ ಬೆಳೆಯಿತು. ದುಶ್ಯಾಸನನಿಂದ ಮಾನಹರಣದ ಪ್ರಯತ್ನ. ಅದಾಗಿ ಕಾಡು ಪಾಲಾದರೆ ಸೋದರ ಸ್ಥಾನಿಯಾದ ವಿಕೃತ ಜಯದ್ರಥನಿಗೂ ನಾನು ಕಾಮದ ವಸ್ತುವಾಗಿ ಕಾಣಿಸಿದೆ. ಆತ ಹಿಡಿದೆಳೆದು ಅಪಹರಿಸಿಕೊಂಡು ಹೋದ. ಈಗ ಈ ದುರ್ಮತಿ ಕೀಚಕ ಕೈ ಹಿಡಿದೆಳೆದು ಅಟ್ಟಾಡಿಸಿ ರಾಜಾಸೂಯಾಧ್ವರ ಅಭಿಷಿಕ್ತ ದಿವ್ಯಕೇಶವನ್ನು ಜಗ್ಗಿ, ದೂಡಿ, ಒದ್ದು, ಮುಖ ಮೂತಿ ಒಡೆಯುವಂತೆ ಮಾಡಿದ್ದಾನೆ. ಆತ ಬಯಸುತ್ತಿರುವುದೂ ನನ್ನಿಂದ ಅದೇ ಶಾರೀರಿಕ ಸುಖ. ಎಲ್ಲಿ ಹೋದರೂ ನನ್ನ ಬಾಳ್ವೆಗೆ ದುಃಖವನ್ನು ಸರಮಾಲೆಯಾಗಿ ಸುತ್ತುವ ಹಣೆಬರಹ ಬರೆದ ವಿಧಾತ ಯಾಕಾದರೂ ಈ ಪೀಡನೆಗೊಳಗಾಗುವ ಮಾನಹರಣಕಾರಕ ಚೆಲುವನ್ನು ಕೊಟ್ಟನೋ? ವಿಧಿಯನ್ನು ದೂಷಿಸಿ ಏನು ಫಲ? ಎಲ್ಲಾ ಆಗುತ್ತಿರುವುದು ಧರ್ಮ ಧರ್ಮ ಎನ್ನುವ ಎನ್ನ ರಾಯನ ಹುಚ್ಚಿನಿಂದ. ದ್ಯೂತವಾಡಿ ಈ ಸ್ಥಿತಿ ಬಂದರೂ ಈಗಲೂ ಆ ದ್ಯೂತವೆ ಅವರಿಗೆ ಜೀವನಾಧಾರವಾಗಿ ಇಲ್ಲಿ ಒದಗಿರುವುದು ವಿಪರ್ಯಾಸವೇ ಹೌದು. ಸ್ವಾಮೀ, ಏನೇನೋ ಪ್ರಲಾಪಿಸುತ್ತಿರುವೆ, ಆ ಕೀಚಕ ನನ್ನನ್ನು ಆತನ ಹೆಂಡತಿಯಾಗಿರಲು ಬಲವಂತ – ಬಲಪ್ರಯೋಗವೆರಡನ್ನೂ ಮಾಡುತ್ತಿದ್ದಾನೆ. ಇನ್ನು ನನಗೆ ಉಳಿಗಾಲವಿಲ್ಲ. ನನ್ನ ಮಾನ ಪ್ರಾಣ ಕಾಯುವ ತ್ರಾಣ ನಿನ್ನಲ್ಲಿ ಬಿಟ್ಟರೆ ಅನ್ಯರಾರಲ್ಲೂ ಇಲ್ಲ ಪತಿದೇವಾ. ನೀನೇ ನನ್ನನ್ನು ಕಾಪಾಡಬೇಕು” ಎಂದು ರೋದಿಸತೊಡಗಿದಳು.

ಆಗ ಭೀಮಸೇನ “ಪ್ರಿಯವಲ್ಲಭೆ, ನನಗೇನೂ ಭಯ ಇಲ್ಲ, ಸಂಶಯವೂ ಇಲ್ಲ. ಆ ಕೀಚಕ ಎಂತಹ ಬಲಾನ್ವಿತನೇ ಆಗಿರಲಿ, ಆತನನ್ನು ನಾನು ಕೆಡಹಿ ಕೊಂದು ನಿನಗೆ ಸುಕ್ಷೇಮ ಕರುಣಿಸಬಲ್ಲೆ. ಆದರೆ ಅಣ್ಣ ಧರ್ಮಜನ ಮಾತು ಮೀರಿ ಈವರೆಗೆ ನಾನು ವ್ಯವಹರಿಸಿಲ್ಲ. ಈಗಲೂ ಆತನ ಅನುಮತಿಗಾಗಿಯೆ ನಾನು ಕಾತರಿಸುತ್ತಿರುವೆ. ಒಮ್ಮೆ ಅಣ್ಣ ಸಮ್ಮತಿಯಿತ್ತರೆ ಅರೆಕ್ಷಣದಲ್ಲಿ ಕೀಚಕನನ್ನು ಅಣ್ಣನ ಅಪ್ಪನಾಲಯಕ್ಕೆ (ಯಮನಾಲಯಕ್ಕೆ) ಕಳುಹಿಸುವೆ” ಎಂದನು.

ಚತುರಮತಿ ದ್ರುಪದಜೆಗೆ ಭೀಮನ ಮಂದಮತಿ ಕಂಡು ದುಃಖದಲ್ಲೂ ನಗುಬಂತು. “ಸ್ವಾಮೀ, ಕೀಚಕ ನನ್ನನ್ನು ಒದ್ದುರುಳಿಸಿದಾಗ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾ ಆಸ್ಥಾನದ ಎದುರಿನ ಹೆಮ್ಮರ ನೋಡಿ ಏನೋ ಯೋಚಿಸಿದರಲ್ಲಾ?” ಎಂದು ಕೇಳಿದಳು. “ಹೌದು, ಆ ಮರವನ್ನೇ ಕಿತ್ತು ಕೀಚಕನಿಗಪ್ಪಳಿಸಿ ಕೊಲ್ಲುವ ಯೋಚನೆ ಮಾಡಿದ್ದೆ” ಎಂದನು. “ಆಗ ನಿಮ್ಮಣ್ಣ, ಆ ಮರದಲ್ಲಿ ಆಶ್ರಯಿತ ಹಕ್ಕಿಗಳ ಬಹುಕಾಲದ ಜೀವನ, ಶ್ರಮ, ವ್ಯರ್ಥವಾಗುತ್ತದೆ. ಹಾಗೆ ಮಾಡಬೇಡ ನಿನಗೆ ಬೇಕಾದುದನ್ನು (ಉರುವಲನ್ನು ಉದಾಹರಿಸಿ) ಬೇರೆ ಕಡೆ ಹೋಗಿ ಸಾಧಿಸಿಕೋ” ಎಂದಾಗಲೇ ನಿಮಗೆ ಅನುಮತಿ ಕೊಟ್ಟಿದ್ದಾರೆ” ಎಂದು ಬಿಡಿಸಿ ಹೇಳಿದಳು. ” ಕಟ್ಟಿಗೆ ಬೇಕಿದ್ದರೆ ಈ ಮರ ಕೀಳಬೇಡ ಬೇರೆ ಕಡೆಯಿಂದ ತಂದುಕೋ ಎಂದದ್ದಲ್ಲವೇ?” ಎಂದು ಭೀಮ ಗೊಂದಲಕ್ಕೊಳಗಾದ. ಆಗ ದ್ರೌಪದಿ “ಅಯ್ಯೋ, ನೀವು ಮರ ಕೀಳಲು ಬಯಸಿದ್ದು ಕಟ್ಟಿಗೆಗೋ? ಕೀಚಕನನ್ನು ಕೊಲ್ಲುವುದಕ್ಕೋ? ಅದನ್ನೇ ನಿಮ್ಮಣ್ಣ ಹೇಳಿರುವುದು, ಈ ಮರವನ್ನು ಕಿತ್ತು ಕೀಚಕನಿಗೆ ಹೊಡೆದರೆ ಇಲ್ಲಿ ಆಶ್ರಯಿತರಾಗಿರುವ ನಮಗೆ ಆಪತ್ತು. ಅಜ್ಞಾತರಾಗಿರುವ ನಾವು ಪ್ರಕಟಗೊಳ್ಳಬೇಕಾಗುತ್ತದೆ. ಅದರ ಬದಲು ನೀನು ಬಯಸಿರುವ ಕೆಲಸವನ್ನು ಅಂದರೆ ಕೀಚಕನನ್ನು ದಂಡಿಸಲು ಬೇರೆ ಕಡೆ ಹೋಗಿ ಸಾಧಿಸಿಕೋ” ಎಂಬುವುದಾಗಿ ಎಂದಾಗ ಭೀಮನಿಗೆ ಸ್ಪಷ್ಟ ಅರ್ಥವೂ ಅನುಮತಿಯೂ ಸಿಕ್ಕಂತಾಯಿತು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    spot_imgspot_img
    RELATED ARTICLES

    LEAVE A REPLY

    Please enter your comment!
    Please enter your name here

    - Advertisment -
    Google search engine

    Most Popular

    Recent Comments

    You cannot copy content of this page