ಭಾಗ -250
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೨೫೧ ಮಹಾಭಾರತ
ದ್ರೌಪದಿ ಚಿನ್ನದ ಮಧು ಪಾತ್ರೆಯನ್ನು ಹಿಡಿದು ಹೊರಟಾಗ ತನು ಮನವೆಲ್ಲಾ ಕಂಪಿಸುತ್ತಿದೆ. ನನ್ನ ಬದುಕಿನಲ್ಲಿ ಯಾಕಿಂತಹ ದುಸ್ಥಿತಿಗಳ ಸರಮಾಲೆ ಅಡಿಗಡಿಗೆ ಬರುತ್ತಿದೆ? ಕೃಷ್ಣಾ! ಕಾಪಾಡು ಗೋವಿಂದಾ.. ದೇವಾನು ದೇವತೆಗಳೇ, ಈ ಅಬಲೆಯ ರಕ್ಷಣೆಗೆ ಒದಗಿ ಬನ್ನಿ ಎಂದು ಯಾಜ್ಞಸೇನಿ ಬೇಡಿಕೊಳ್ಳ ತೊಡಗಿದಳು. ಸುಡುವ ಚಿಂತೆಯನ್ನು ಹೊತ್ತು ಹೊರ ಬಂದಾಗ ಮುಸ್ಸಂಜೆಯ ಹೊಂಬಣ್ಣದ ಸೂರ್ಯ ರಶ್ಮಿಗಳು ಶರೀರದ ಮೇಲೆ ಬಿದ್ದಾಗ ಉರಿ ಬಿಸಿಲಿನಂತೆ ಭಾಸವಾಯಿತು. ದೃಷ್ಟಿ ಸೂರ್ಯನತ್ತ ತಿರುಗಿತು. ವನವಾಸ ಕಾಲದಲ್ಲಿ ಧೌಮ್ಯರಿಂದ ಸೂರ್ಯೋಪಾಸನೆಯ ದಿವ್ಯ ಮಂತ್ರ ಉಪದೇಶಿತವಾಗಿತ್ತು. ಅದರ ಫಲಶ್ರುತಿಯಾಗಿ ಅಕ್ಷಯ ಪಾತ್ರೆ ಅನುಗ್ರಹಿತವಾಗಿತ್ತು. ಈಗ ಮತ್ತೆ ಸೂರ್ಯನನ್ನು ಮನಸಾರೆ ಸ್ಮರಿಸಿ ಮಂತ್ರೋಚ್ಚಾರಣೆ ಮಾಡುತ್ತಾ ತಾನು ಹೋಗುತ್ತಿರುವ ಅಪಾಯಕರ ಕಾರ್ಯದಲ್ಲಿ ರಕ್ಷಕನಾಗಿ ಬಾ ದೇವಾ ಎಂದು ಬೇಡಿಕೊಂಡಳು. ದೈವೇಚ್ಚೆಯಂತೆ ಆಗಲಿ ಎಂದು ಮುಂದಡಿಯಿಟ್ಟಳು ದ್ರೌಪದಿ. ಧೌಮ್ಯರಿಂದ ಉಪದಿಷ್ಟವಾಗಿದ್ದ ದಿವ್ಯಮಂತ್ರದ ಪ್ರಾರ್ಥನೆಗೆ ಸೂರ್ಯದೇವ ಒಲಿದು ತನ್ನ ಕಿಂಕರನನ್ನು ಅದೃಶ್ಯ ರೂಪದಲ್ಲಿ ಅವಳ ರಕ್ಷಣೆಗೆ ಕಳುಹಿಸಿದ್ದು ಆಕೆಯ ಅರಿವಿಗೆ ಬರಲಿಲ್ಲ. ನೇರವಾಗಿ ಕೀಚಕನ ಅರಮನೆಯ ಬಳಿ ಬಂದು ನೋಡಿದರೆ ಅಲ್ಲಿ ಯಾರೂ ಇಲ್ಲ. ಆಳು, ಸೇವಕ, ಪರಿಚಾರಕ ವರ್ಗದ ಒಬ್ಬರೂ ಇಲ್ಲ. ಕೂಗಿ ಕರೆದು ಕೇಳಿದಳು, “ನಾನು ಮಾಲಿನಿ, ಸುದೇಷ್ಣಾ ದೇವಿಯ ಅಪ್ಪಣೆಯಂತೆ ಮಧುವನ್ನು ಒಯ್ಯಲು ಬಂದಿದ್ದೇನೆ. ನೀಡಿದರೆ ಕೊಂಡು ಹೋಗುತ್ತೇನೆ”. ಕೇಳಿಸಿತು ಕೀಚಕನಿಗೆ : “ಅಯ್ಯಾ ಸುಂದರಿ, ಇಲ್ಯಾರೂ ಇಲ್ಲ, ಮಧು ಹೂಜಿಯಲ್ಲಿದೆ, ಒಳ ಬಂದು ತುಂಬಿಸಿಕೊಂಡು ಹೋಗಬಹುದು” ಎಂದನು. “ನಾನು ಒಳ ಬರಲಾಗದು, ತಂದಿತ್ತರೆ ಒಯ್ಯುವೆ. ಪಾತ್ರೆಯನ್ನು ಇಲ್ಲಿ ಇಟ್ಟಿರುವೆ. ಮತ್ತೆ ಯಾರಾದರು ಬಂದು ಕೊಂಡು ಹೋಗುತ್ತಾರೆ” ಎಂದಳು ಸೈರಂಧ್ರಿ. ಆಗ ಒಳಗಿನಿಂದ ಹೊರ ಬಂದ ಕೀಚಕ, ಕನಕಪಾತ್ರೆಯನ್ನು ಒದ್ದು ಹಾರಿಸಿ, “ಮಧುವನ್ನೊಯ್ಯಲು ನೀನೇ ಆಗಬೇಕಾಗಿರಲ್ಲ. ಮಧು ಮಂಚವೇರಿ ಅದ್ಬುತ ಸುಖ ಪಡೆಯಲು ನಿನ್ನನ್ನು ಕರೆಸಿರುವುದು. ಇನ್ನೇಕೆ ನಾಚಿಕೆ? ನಿನ್ನನ್ನು ಕಂಡ ಬಳಿಕ ಮೂರು ದಿನ – ರಾತ್ರಿಗಳಿಂದ ಊಟ ನಿದ್ರೆ ಯಾವುದು ಬೇಡವಾದ ಅವಸ್ಥೆ ನನ್ನದಾಗಿದೆ. ಬಾ ಒಳಗೆ ತಡಮಾಡಬೇಡ” ಎಂದನು.
ದ್ರೌಪದಿಗೆ ತಡೆಯಲಾರದ ದುಃಖವೂ, ಭಯವೂ ಆಯಿತು. ರಕ್ಷಣೆಗೆ ಯಾರೂ ಕಾಣುತ್ತಲೂ ಇಲ್ಲ! ದುಂಖಿಸುತ್ತ ಭಯದಿಂದ ಹೇಳತೊಡಗಿದಳು “ನಾನು ದಾಸಿ – ಜಡೆ ಹೆಣೆಯುವ ಕೆಲಸದವಳು. ಮಾತ್ರವಲ್ಲ ನನಗೀಗಾಲೆ ಮದುವೆಯಾಗಿದೆ. ಸತ್ಪುರುಷನಾದ ನೀನು ಈ ರೀತಿ ನನ್ನೊಂದಿಗೆ ವ್ಯವಹರಿಸಕೂಡದು. ಪಾಪ ಕೃತ್ಯದ ಫಲ ಪಾತಕವಾಗಿ ನಿನ್ನನ್ನು ಹೀನ ಸ್ಥಿತಿಗೆ ತಳ್ಳುತ್ತದೆ. ನಾನು ಮಧುವನ್ನೊಯಲಷ್ಟೆ ಬಂದಿದ್ದೇನೆ. ನೀಡಿದರೆ ಒಯ್ಯುವೆ, ಇಲ್ಲವಾದರೆ ಹಿಂದುರಿಗಿ ಹೋಗುವೆ” ಎಂದಳು.
“ನಾನು ಹೋಗಲು ಬಿಟ್ಟರಲ್ಲವೆ ನೀನು ಹೋಗುವುದು? ನಿನ್ನ ಈ ಅತಿ ಚೆಲುವಿನ ಸವಿ ಹೀರಿದ ಬಳಿಕ ನಿನ್ನನ್ನು ಹೋಗಗೊಡುವುದು. ನಾನು ಬಯಸಿದುದನ್ನು ಪಡೆಯುವಷ್ಟು ಸಮರ್ಥನಾಗಿದ್ದೇನೆ. ಒಲಿದು ಬಂದರೆ ನಿನಗೂ ಸುಖ. ಇಲ್ಲವಾದರೆ ನಾನಾಗಿ ಪಡೆದುಕೊಳ್ಳುವೆ” ಎಂದು ಹೇಳಿದನು. ಹಿಂದಡಿಯಿಟ್ಟು ಹೋಗಲು ಸಿದ್ದಳಾಗಿದ್ದ ದ್ರೌಪದಿಯ ಕೈಯನ್ನು ತಟ್ಟನೆ ಹಿಡಿದು ಬಿಟ್ಟನು. ತನ್ನ ಸರ್ವ ಶಕ್ತಿಯನ್ನೂ ವಿನಿಯೋಗಿಸಿ ಆತನ ಹಿಡಿತದಿಂದ ತಪ್ಪಿಸಿಕೊಳ್ಳುವ ಶತ ಪ್ರಯತ್ನ ದ್ರೌಪದಿ ಮಾಡುತ್ತಿರುವಾಗ, ಕೀಚಕ ಎಳೆದುಕೊಂಡು ಅಂತಃಪುರದ ಬಾಗಿಲೊಳಗೆ ಸೆಳೆಯುತ್ತಿದ್ದಾನೆ. ರಕ್ಷಣೆಗಾಗಿ ಬಂದಿದ್ದ ಸೂರ್ಯ ಕಿಂಕರ ಅದೃಶ್ಯನಾಗಿದ್ದುಕೊಂಡು ಕೀಚಕನನ್ನು ಬಲವಾಗಿ ದೂಡಿ ಬೀಳಿಸಿದನು. ಮುಕ್ತಳಾದ ದ್ರೌಪದಿ ಹೊರ ಓಡಿದಳು. ಎದ್ದು ನಿಂತ ಕೀಚಕ ಬೆಂಬತ್ತಿ ಓಡಿ ಬೆನ್ನಟ್ಟಿ ಬಂದನು. ದುಷ್ಟ ಹಿಂಬಾಲಿಸುತ್ತಿರುವುದನ್ನು ಅರಿತ ದ್ರೌಪದಿ ರಾಜಸಭೆಗೆ ಓಡಿಬಂದಳು. ಆಸ್ಥಾನದ ಒಳ ಓಡಿ ಬರುತ್ತಿರುವಾಗ ಆಕೆಯ ಬಿಚ್ಚಿ ಹರಡಿದ್ದ ನೀಳ ಕೇಶರಾಶಿ ಗಾಳಿಯಲ್ಲಿ ಹಾರುತ್ತಿತ್ತು, ಹಿಡಿಯಲು ಬೀಸಿದ ಕೀಚಕನ ಮುಷ್ಟಿಗೆ ಸಿಕ್ಕಿತು. ಗಾಳಿಯಲ್ಲಿ ಹಾರುತ್ತಿದ್ದ ಕೂದಲನ್ನು ಹಿಡಿದು ಜಗ್ಗಿದನು. ಹಿಂದಕ್ಕೆ ವಾಲಿ ಬೀಳುವಂತಾದ ದ್ರೌಪದಿಗೆ ಒದ್ದು ಕೆಡಹಿದನು. ಬಿದ್ದ ಆಕೆಯ ಮುಖ ನೆಲಕ್ಕಪ್ಪಳಿಸಿ ರಕ್ತ ಚಿಮ್ಮತೊಡಗಿತು. ಇಷ್ಟಾಗುತ್ತಲೆ ರಕ್ಷಣೆಗೆ ಬಂದಿದ್ದ ಸೂರ್ಯ ಕಿಂಕರ ಅದೃಶ್ಯನಾಗಿದ್ದುಕೊಂಡೆ ಕೀಚಕನಿಗೆ ಹಿಗ್ಗಾ ಮುಗ್ಗ ಥಳಿಸತೊಡಗಿದನು. ಎಲ್ಲಿಂದ ಏಟು ಬೀಳುತ್ತಿದೆಯೆಂದು ಕಾಣುತ್ತಿಲ್ಲ. ಶರೀರದ ಎಲುಬು ಮುರಿಯುವಂತೆ ಅಪ್ಪಳಿಸುತ್ತಿದೆ. ಎದ್ದು ಬಿದ್ದು ಪ್ರಾಣ ಉಳಿಸಿಕೊಳ್ಳಲು ಕೀಚಕ ಹೊರ ಓಡಿದನು. ಆ ಸಭೆಯಲ್ಲಿ ವಿರಾಟರಾಯ, ಆಸ್ಥಾನ ಪ್ರಮುಖರು ಮತ್ತು (ಧರ್ಮರಾಯ) ಕಂಕ ಉಪಸ್ಥಿತರಿದ್ದರು. ಯಾವುದೊ ಕಾರ್ಯ ನಿಮಿತ್ತ ಕರೆಯಿಂದ ಬಂದಿದ್ದ (ಭೀಮ) ವಲಲನೂ ಸಭೆಯಲ್ಲಿ ನಿಂತಿದ್ದಾನೆ.
ಸೈರಂಧ್ರಿ ವಿರಾಟ ರಾಯನಿಗೆ ವಂದಿಸಿ, ಅಳುತ್ತಾ ಸುರಿವ ಕಣ್ಣೀರು ಮತ್ತು ಹರಿದಿಳಿಯುತ್ತಿರುವ – ರಕ್ತವನ್ನು ಮಿಶ್ರಗೊಳಿಸಿ ತನ್ನ ಮೊಗದಿಂದಿಳಿಸುತ್ತಾ ಕೇಳತೊಡಗಿದಳು ” ಮಹಾರಾಜಾ, ನಿಮ್ಮೆದುರಲ್ಲಿ ಓರ್ವ ಅಬಲೆಗೆ ಇಂತಹ ಸ್ಥಿತಿ ಬಂದಾಗಲೂ ಕೇಳದೆ ಅಲಕ್ಷಿಸಿ ಸುಮ್ಮನಿರುವುದು ನ್ಯಾಯವೆ? ನಿಮ್ಮ ಆಶ್ರಯದಲ್ಲಿರುವ ನಮಗೆ ರಕ್ಷಣೆಯಿಲ್ಲವೆ? ಇದೂ ಒಂದು ರಾಜನ ಸಭೆಯ ಲಕ್ಷಣವೆ? ಗೋ, ಸ್ತ್ರೀ ಬ್ರಾಹ್ಮಣರ ರಕ್ಷಣೆ ಕ್ಷತ್ರಿಯರ ಮೂಲ ಕರ್ತವ್ಯ ಎಂಬುವುದು ಮರೆತು ಹೋಯಿತೆ? ದಂಡಧರನಾದ ನಿಮ್ಮ ಆಸ್ಥಾನದಲ್ಲಿ – ಕನಿಷ್ಟ ವಿಚಾರಣೆ ಮಾಡುವ ಪದ್ದತಿ – ದೋಷಿ ಯಾರೆಂದು ತೀರ್ಮಾನಿಸಿ ಸೂಕ್ತ ಶಿಕ್ಷೆ ನೀಡುವ ಕ್ರಮವೂ ಇಲ್ಲವೆ?
ಶೂರರೂ, ಧರ್ಮಿಷ್ಟರೂ, ಸತ್ಯಸಂಧರೂ ಆಗಿರುವವರ ಧರ್ಮಪತ್ನಿಯಾದ ನನ್ನನ್ನು ಒದ್ದು ಬೀಳಿಸಿ ಅತ್ಯಾಚಾರಕ್ಕೆ ಆ ದುಷ್ಟ ಕೀಚಕ ಮುಂದಾದರೂ, ಧರ್ಮಾತ್ಮರಾದವರು ಯಾಕೆ ಮೌನ ತಳೆದರೊ? ಭಾರ್ಯಾ ಸಂರಕ್ಷಣೆಯನ್ನು ಮರೆತರೊ? ಹೇಗೆ ಸಹಿಸಿಕೊಂಡಿತೊ ಅವರ ಪುರುಷ ಧರ್ಮ!
ಅಯ್ಯಾ ಬ್ರಾಹ್ಮಣೋತ್ತಮರೆ, ನಿಮಗೂ ಸಮ್ಮತವಾಯಿತೆ? ಇಲ್ಲಿಯವರಲ್ಲದ ನಿಮ್ಮ ದೃಷ್ಟಿಗೂ ಈ ರೀತಿಯ ನಡತೆ ಹಿತವೆಣಿಸಿದೆಯೆ?” ಎಂದು ಧರ್ಮರಾಯನತ್ತ ತಿರುಗಿ ಕೇಳಿದಳು.
ಇಷ್ಟಾಗುತ್ತಲೆ ಬದಿಯಲ್ಲಿ ನಿಂತಿದ್ದ ವಲಲ ಹಲ್ಲುಗಳನ್ನು ಕಟಕಟಾಯಿಸುತ್ತ, ಮುಷ್ಟಿಗಟ್ಟಿ ಆಸ್ಥಾನದ ಹೊರಗೆ ಬೆಳೆದು ನಿಂತಿದ್ದ ಅರಳಿ ಮರವನ್ನು ದಿಟ್ಟಿಸಿ ನೋಡಿದನು. ಆತನ ನೋಟದಲ್ಲಿ ಅರ್ಥವಾಗುತ್ತಿತ್ತು – ಆ ಹೆಮ್ಮರವನ್ನು ಕಿತ್ತು ಆಯುಧವಾಗಿ ಧರಿಸಿ ಕೀಚಕನನ್ನು ಚಚ್ಚಿ ಕೊಂದು ಕಳೆಯುವೆನೆಂದು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್