ಭಾಗ 245
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೪೯ ಮಹಾಭಾರತ
ಇಂತಹ ಸ್ಥಿತಿಯಲ್ಲಿ ವಿರಾಟ ಮಹಾರಾಜನಾಗಿದ್ದರೂ ಕೀಚಕನು ರಾಜಕೀಯದಲ್ಲಿ ಪ್ರಭಾವಶಾಲಿಯಾಗಿ ಬೆಳೆದಿದ್ದನು. ಕೀಚಕನ ಅಕ್ಕ ಸುದೇಷ್ಣೆ ಕಿರಿಯ ರಾಣಿಯಾದರೂ ಆಕೆಯ ವರ್ಚಸ್ಸು ಅರಮನೆಯಲ್ಲಿ ಅಧಿಕವಾಗಿತ್ತು. ಹಾಗೆಂದು ಹಿರಿಯ ರಾಣಿ ಸುರಥೆ ಹಾಗು ಆಕೆಯ ಮಕ್ಕಳ ಸ್ಥಾನಮಾನ ಮರ್ಯಾದೆಗೆ ಯಾವ ಕುಂದು ಕೊರತೆಗಳು ಇರಲಿಲ್ಲ. ಉತ್ತರ ಕುಮಾರ – (ಭೂಮಿಂಜಯ) ಯುವರಾಜನಲ್ಲದಿದ್ದರೂ ಆತನಿಗೂ ಮಾನ್ಯತೆ ಇತ್ತು. ಉತ್ತರೆಯು ಮಹಾರಾಜನ ಒಬ್ಬಳೇ ಮಗಳಾಗಿದ್ದರಿಂದ ಯುವರಾಣಿಯ ಪ್ರೀತ್ಯಾದರಗಳಿಗೆ ಪಾತ್ರಳಾಗಿದ್ದಳು.
ಇಂತಹ ಮತ್ಸ್ಯದೇಶದಲ್ಲಿ ಬಂದು ಸೇರಿದ ಪಾಂಡವರು ಮತ್ತು ದ್ರೌಪದಿ ಅರಮನೆಯಲ್ಲಿ ತಮ್ಮ ತಮ್ಮ ಉದ್ಯೋಗಗಳಲ್ಲಿ ಉತ್ತಮರಾಗಿ ಗೌರವ ಪಡೆದುಕೊಳ್ಳುತ್ತಿದ್ದರು. ಯುಧಿಷ್ಠಿರನು ಪಗಡೆಯಾಟ ಮತ್ತು ಅಕ್ಷ ಹೃದಯ ವಿದ್ಯೆ ಬಲ್ಲವನಾಗಿದ್ದುದರಿಂದ ದ್ಯೂತ ಪ್ರಿಯನಾದ ಮಹಾರಾಜನೆದುರು ಸದಾ ಆಟದ ಸೂಕ್ಷ್ಮಗಳನ್ನು ನಿರ್ದೇಶಿಸುತ್ತಾ ತನ್ನ ಚಾಕಚಕ್ಯತೆ ತೋರುತ್ತಾ ಗೆದ್ದು ಆತನಿಗೆ ಆಶ್ಚರ್ಯ ಉಂಟು ಮಾಡುತ್ತಿದ್ದನು. ಕಂಕನಲ್ಲಿ ವಿರಾಟ ವಿಶ್ವಾಸ ಬೆಳೆಸಿ ರಾಜಕೀಯ ನಿರ್ಣಯಗಳಿಗೂ ಸಲಹೆ ಕೇಳಿ ಹಾಗೆಯೆ ನಡೆದುಕೊಳ್ಳುವಷ್ಟು ಆತ್ಮೀಯನಾಗಿ ಬಿಟ್ಟನು.
ಹೀಗಿರಲು ಒಂದು ದಿನ ಮತ್ಸ್ಯ ದೇಶದಲ್ಲಿ ಒಂದು ಮಹಾ ಉತ್ಸವ ಆಯೋಜನೆ ಆಯಿತು. ನೆರೆ ದೇಶಗಳಿಂದ ಸ್ಪರ್ಧಿಗಳು ಬಂದು ಸೇರಿದರು. ಜಗ ಜಟ್ಟಿಗಳ ಮಲ್ಲ ಕಾಳಗ ಅಂದಿನ ಸ್ಪರ್ಧೆಯಾಗಿತ್ತು. ವಿರಾಟನ ಮತ್ಸ್ಯ ದೇಶದಲ್ಲಿ ಬಹಳಷ್ಟು ಮಲ್ಲ ಪಟುಗಳಿದ್ದರು. ಸ್ಪರ್ಧೆ ತುರುಸಿನಿಂದ ನಡೆದು ಗೂಳಿಗಳಂತೆ ದೀರ್ಘ ದೇಹವುಳ್ಳ, ಮಹೋತ್ಸಾಹದ, ತೀವ್ರ ಪರಾಕ್ರಮವುಳ್ಳ ಮದ್ದಾನೆಗಳಂತಹ ಜಟ್ಟಿಗಳು ಕಾಳಗದಲ್ಲಿ ಸೆಣಸಾಡತೊಡಗಿದರು. ಕೊನೆಗೆ ಓರ್ವ ಮಹಾಬಲಾನ್ವಿತ ಜಟ್ಟಿ ಎಲ್ಲರನ್ನೂ ಗೆದ್ದು ಕೆಡಹಿದನು. ವಿರಾಟನ ವೀರರೆಲ್ಲ ಸೋತ ಬಳಿಕ ಇನ್ಯಾರಿದ್ದಾರೆ ಎಂದು ಸವಾಲೆಸೆಯತೊಡಗಿದನು. ಆ ಸಂದರ್ಭ ಕೀಚಕನು ಮತ್ಸ್ಯದೇಶದಲ್ಲಿ ಇರದೆ ಕಾರ್ಯನಿಮಿತ್ತ ಹೊರ ಹೋಗಿದ್ದನು. ತಕ್ಷಣ ವಿರಾಟನಿಗೆ ತನ್ನ ಪಾಕಶಾಲಾಧ್ಯಕ್ಷ ವಲಲನ ನೆನಪಾಯಿತು. ಕೆಲಸಕ್ಕೆ ಸೇರುವ ಸಮಯ ವಲಲ ತಾನು ಜಟ್ಟಿ ಕಾಳಗ ನಿಸ್ಸೀಮ ಎಂದು ಹೇಳಿ ಕೊಂಡಿದ್ದ ವಿಚಾರದ ಸ್ಮರಣೆಯಾಗಿ ಆತನನ್ನು ಕರೆಸಲು ಆಳನ್ನು ಕಳುಹಿಸಿದನು. ಭೀಮನಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಜ್ಞಾತನಾಗುತ್ತೇನೊ ಎಂಬ ಜವಾಬ್ದಾರಿಯ ಆತಂಕ ಮನ ಮಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂದನು. ಅಡುಗೆಯವ ಗೆಲ್ಲುತ್ತಾನೊ – ಸೋಲುತ್ತಾನೊ! ಬೇರೆ ಆಯ್ಕೆಗಳಿಲ್ಲದೆ ಹಠ ಬಿಡದ ವಿರಾಟ ‘ರಾಜಾಜ್ಞೆ’ ಎಂದು ಆದೇಶ ನೀಡಿದನು. ವಲಲ ನಾಗಿ ಸೇವೆ ಮಾಡುತ್ತಿದ್ದ ಭೀಮ ಸ್ಪರ್ಧಾ ಕಣಕ್ಕೆ ಆಗಮಿಸುವ ಸ್ಥಿತಿ ನಿರ್ಮಾಣವಾಯಿತು. ಆ ಸಮಯ ವಿಜೇತನಾಗಿ ಮೆರೆಯುತ್ತಿದ್ದ ರಣ ಭಯಂಕರ ಮಲ್ಲ ಕ್ರೀಡಾಂಗಣದಲ್ಲಿ ಬುಸುಗುಡುತ್ತಿದ್ದನು. ಆತ ನಿಜವಾಗಿಯೂ ಉತ್ತಮ ಕಟ್ಟು ಮಸ್ತಿನ ದೇಹ ದಾರ್ಢ್ಯತೆ, ಬಲಯುತ, ಯುದ್ದ ಪ್ರವೀಣನು ಆಗಿದ್ದ. ಭೀಮ ತನ್ನ ಕಚ್ಚೆಗೆ ಉತ್ತರೀಯವನ್ನು ಬಿಗಿದು ಕಟ್ಟಿ ಮಲ್ಲಯುದ್ದದ ನಡೆಯಲ್ಲಿ ನುಗ್ಗಿದನು. ಒಂದರೆ ಕ್ಷಣ ಭೀಮನೆದುರು ಆ ಜಟ್ಟಿ ನಿಂತನಾದರೂ, ಕ್ಷಣಾರ್ಧದಲ್ಲಿ ಆತನನ್ನೆತ್ತಿ ಗಿರಗಿರನೆ ತಿರುಗಿಸಿ ನೆಲಕ್ಕಪ್ಪಳಿಸಿದನು. ಹೀಗೆ ಭೀಮನೆದುರು ಸೋತವನು ಆ ಕಾಲದಲ್ಲಿ ನೆರೆಹೊರೆಯ ದೇಶಗಳಲ್ಲೆಡೆ ಗೆದ್ದು ಬೀಗುತ್ತಿದ್ದ ‘ಜಿಮೂತ’ ಎಂಬ ಜಟ್ಟಿ. ಇಂದು ಮತ್ಸ್ಯದೇಶದಲ್ಲಿ ಭೀಮನ ಹೊಡೆತ ತಡೆದುಕೊಳ್ಳಲಾಗದೆ ಹತ ಪ್ರಾಣನಾಗಿ ಬಿದ್ದಿದ್ದಾನೆ. ವಿರಾಟ ವಲಲನನ್ನು “ಬಲೇ” ಎಂದು ಹೊಗಳಿ ಹೇರಳವಾದ ದ್ರವ್ಯ ಧನಕನಕ ಪಾರಿತೋಷಕಾದಿಗಳನ್ನು ನೀಡಿ ಬಹುಮಾನಿಸಿದನು. ವಲಲ ಈಗಾಗಲೆ ತನ್ನ ಪಾಕ ಶಾಸ್ತ್ರದ ಕೈಚಳಕದಿಂದ ಸುಪ್ರಸಿದ್ಧನಾಗಿ ಎಲ್ಲರ ಪ್ರೀತಿ ಪಾತ್ರನಾಗಿದ್ದನು. ಜೊತೆಗೆ ಇಂದು ದೇಶದ ಮಾನವನ್ನು ಸ್ಪರ್ಧಾ ಕಣದಲ್ಲಿ ಉಳಿಸಿ ಮತ್ತಷ್ಟು ಪ್ರೀತನಾಗಿದ್ದಾನೆ.
ಸುದೇಷ್ಣೆಯ ಅಂತಃಪುರದಲ್ಲಿ ಮಾಲಿನಿ (ದ್ರೌಪದಿ) ಸೈರಂಧ್ರಿಯಾಗಿ ಕೇಶಪಾಲನೆ, ಪೋಷಣೆ, ಅಲಂಕಾರದಲ್ಲಿ ರಾಣಿಯ ಮನಗೆದ್ದು ಪ್ರಿಯ ಸ್ನೇಹಿತೆ ಆಗಿದ್ದಾಳೆ. ಬ್ರಹನ್ನಳೆಯಂತೂ (ಅರ್ಜುನ) ವಿರಾಟನ ಆಸ್ಥಾನಿಕರಾದ ನಾಟ್ಯ, ಗಾಯನ, ವಾದನ ಕಲಾವಿದರೆಲ್ಲರನ್ನೂ ಮೀರಿಸಿ ತಾನೊಬ್ಬ ಅತುಲ ಕಲಾವಿದ ಎಂದು ಶ್ಲಾಘಿಸಲ್ಪಡುತ್ತಿದ್ದಾನೆ. ಅರಮನೆಯ ಕನ್ಯಾಮಣಿಗಳಿಗೆ ಅದರಲ್ಲೂ ಉತ್ತರೆಗೆ ನಾಟ್ಯಾಚಾರ್ಯನಾಗಿ ತನ್ನ ಕಲಾ ಜ್ಞಾನವನ್ನು ಧಾರೆಯೆರೆದು ಬೆಳೆಸುತ್ತಿದ್ದಾನೆ. ಸ್ವಯಂ ವಿರಾಟರಾಯ ಬ್ರಹನ್ನಳೆಯ ಅಭಿಮಾನಿಯಾಗಿದ್ದಾನೆ.
ಇತ್ತ ನಕುಲ – ಸಹದೇವರು ಅಶ್ವ ಲಾಯ – ಗೋ ಶಾಲೆಯಲ್ಲಿ ಕ್ರಾಂತಿಯನ್ನೇ ಮಾಡತೊಡಗಿದ್ದಾರೆ. ತುರಗಲಾಯವಂತೂ ಸಮೃದ್ಧವಾಗಿ ಪೂರ್ಣ ತರಬೇತಿ ಹೊಂದಿದ ಉತ್ತಮಾಶ್ವಗಳ ಆಗರವಾಗಿದೆ. ಮತ್ಸ್ಯದೇಶದಲ್ಲಿ ಕೊಬ್ಬಿ ಸುದೃಢವಾದ, ಪರಿಣಿತ ಕುದುರೆಗಳ ಕೀರ್ತಿ ನೆರೆಯ ದೇಶಗಳಿಗೂ ಹಬ್ಬಿ ಅಲ್ಲಿಂದ ಜನಸಾಗರ ನೋಡಲು ಬಂದು ಹೋಗುವಷ್ಟು ವಿಶಿಷ್ಟವಾಗಿ ವೃದ್ಧಿಯಾಗಿದೆ. ಗೋಶಾಲೆಯೂ ಕಾಮಧೇನುಗಳಿಂದ ತುಂಬಿರುವಂತೆ ಕಾಣುತ್ತಿದೆ. ಆರೋಗ್ಯ, ಕ್ಷಮತೆ, ಹಾಲಿನ ಇಳುವರಿ, ಗೋ ಸಂಪತ್ತು ಯಥೇಚ್ಚ ಹೆಚ್ಚಳವಾಗಿ ಮತ್ಸ್ಯದೇಶದಲ್ಲಿ ಕ್ಷೀರ ಸಾಗರವೆ ತುಂಬಿಕೊಂಡಿದೆ. ದೇಶದ ಖಜಾನೆಗೂ ಹೇರಳವಾದ ಉತ್ಪತ್ತಿ ಬರಲಾರಂಭಿಸಿದೆ. ದಾಮಗ್ರಂಥಿ – ತಂತ್ರಿಪಾಲರಿಗೆ ರಾಜನಿಂದ ಧನ, ದ್ರವ್ಯ, ವಸನ ಭೂಷಣಗಳು ಬೇಕಾದಷ್ಟು ನೀಡಲ್ಪಡುತ್ತಿದೆ.
ಯಮಧರ್ಮನ ವರ ಬಲವೊ, ಪಾಂಡವರ ಪುರುಷ ಪ್ರಯತ್ನವೊ? ಅಥವಾ ಎರಡೂ ಸಮ್ಮಿಳಿತವಾಗಿ ಅಜ್ಞಾತವಾಸದ ಹತ್ತು ತಿಂಗಳುಗಳು ಕ್ಷೇಮವಾಗಿ ಯಾರಿಗೂ ತಿಳಿಯದಂತೆ ಸಾಗಿತು. ಪಾಂಡವರ ಸುಳಿವು, ಕುರುಹು ಯಾವೊಬ್ಬ ಗುಪ್ತಚಾರಕನಿಗಾಗಲಿ, ಬೇಹಿನ ಚರನಿಗಾಗಲಿ ಸಿಗಲಿಲ್ಲ. ವಿರಾಟನಿಗಂತು ಇವರು ಪಾಂಡವರಾಗಿರಬಹುದೆ ಎಂಬ ಕಿಂಚಿತ್ ಸಂಶಯವು ಮನಮಾಡಲಿಲ್ಲ.
ಹೀಗಿರಲೊಂದು ದಿನ ಸೋದರಿ ಸುದೇಷ್ಣೆಯ ಅಂತಃಪುರದ ಬಳಿ, ಮತ್ಸ್ಯ ದೇಶದ ಸೇನಾಪತಿ ಆಗಿರುವ ಕೀಚಕ ಯಾವುದೊ ಕಾರ್ಯಕ್ಕಾಗಿ ಬರುತ್ತಾನೆ. ಬಂದವನು ಸೈರಂಧ್ರಿ ಕೆಲಸ ಮಾಡುತ್ತಿದ್ದ ದ್ರೌಪದಿಯನ್ನು ಕಂಡು ಆಕೆಯ ಸೌಂದರ್ಯರಾಶಿಗೆ ನಿಬ್ಬೆರಗಾಗುತ್ತಾನೆ.
ಮುಂದುವರಿಯುವುದ