ಭಾಗ – 242
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೪೩ ಮಹಾಭಾರತ
“ಮೃತ್ಯುವಿಗೆ ಅಧಿಕಾರಿ ಯಮಧರ್ಮನಾದ ನಾನಲ್ಲವೆ? ನಚಿಕೇತ ನನಗೆ ದಾನವಾಗಿದ್ದನು. ವಾಜಶ್ರವಸ್ಸ ವಿಧಿ ಇಲ್ಲದೆ ದಾನ ನೀಡಲೆ ಬೇಕಾಯಿತು. ಸಮರ್ಪಿಸಿದ ದಾನವನ್ನು ನಾನು ಅದೃಶ್ಯನಾಗಿದ್ದು ಸ್ವೀಕರಿಸಿದೆ. ಸಶರೀರಿಯಾಗಿ ನಚಿಕೇತ ನನ್ನ ಪುರ ಸೇರುವಂತಾಯಿತು. ಪೂರ್ವ ಜನ್ಮದ ಪುಣ್ಣದ ವಿಶೇಷ ಬಲ ನಚಿಕೇತ ಹೊಂದಿದ್ದರಿಂದ ಈ ಯಾನ ಆತನಿಗೆ ಸಾಧ್ಯವಾಯಿತು. ಆದರೆ ಆ ಬಾಲಕನಿಗೆ ತನ್ನನ್ನು ದಾನ ಪಡೆದವವನ್ನು ಕಾಣಬೇಕೆಂಬ ಮಹದಾಸೆ ಹಠವಾಗಿ ಬೆಳೆಯಿತು. ಆಗ ನಾರದ ಮಹರ್ಷಿಗಳು ಬಂದು ನನ್ನನ್ನು ಕಾಣಬಹುದಾದ ಯೋಗಮಾರ್ಗದ ಉಪಾಯಗಳನ್ನು ಬೋಧಿಸಿ ಉಪದೇಶ ಮಾಡಿ ಹೋದರು. ಅದನ್ನೇ ಅನುಸರಿಸಿ ನಚಿಕೇತ ನನ್ನ ದರ್ಶನ ಪಡೆದನು.”
ಧರ್ಮರಾಯನಿಗೆ ಈ ಕಥೆ ಕೇಳುತ್ತಲೆ ಕೌತುಕ ಹೆಚ್ಚಾಯಿತು, “ದೇವಾ! ಆ ಬಾಲಕ ನಿಮ್ಮನ್ನು ಕಂಡ ಬಳಿಕ ಏನೂ ಕೇಳಲಿಲ್ಲವೇ? ನೀವೇನೂ ಅನುಗ್ರಹಿಸಲಿಲ್ಲವೇ?”
“ಯುಧಿಷ್ಠಿರಾ! ನಚಿಕೇತ ಅಸಾಮಾನ್ಯ ಬಾಲಕ. ಅನುಗ್ರಹಿಸುವ ಕಾಲಕ್ಕೆ ತನಗೆ ಬೇಕಾದ ಏನಾದರೂ ಕೇಳಬಹುದಿತ್ತು. ಆದರೆ ಆತ ಬಯಸಿದ್ದು ದಿವ್ಯ ಜ್ಞಾನ. ‘ಮೃತ್ಯುವಿನ ಆಚೆಗೆ ಏನಿದೆ?’ ಎಂದು ಕೇಳಿದ. ಮಗೂ ಅದು ಹೇಳಲಾಗುವ ವಿಚಾರವಲ್ಲ. ನೀನು ಕೇಳಬಾರದು ಎಂದು ಎಷ್ಟು ತಿಳಿ ಹೇಳಿದಾದರೂ ಕೇಳಲಿಲ್ಲ. ಕೊನೆಗೆ ನಾನದನ್ನು ಅವನಿಗೆ ಹೇಳ ಬೇಕಾಗಿ ಬಂತು”.
ಧರ್ಮರಾಯನ ಕುತೂಹಲ ಇನ್ನೂ ಕೆರಳಿತು. ” ಸ್ವಾಮಿ ನಾನೂ ಅದನ್ನು ತಿಳಿಯಬಹುದೆ? ಅಂತಹ ದಿವ್ಯ ಜ್ಞಾನ ಅರಿಯಲು ನಾನು ಅರ್ಹನೆ?” ಎಂದು ನಿವೇದಿಸಿಕೊಂಡನು.
“ವತ್ಸಾ! ನೀನು ಈಗ ಕೇಳಬಹುದು. ಆದರೆ ವಾಸ್ತವ ಏನೆಂದು ನೋಡಲಾಗದು. ತಿಳಿದವರು ಅದನ್ನು ‘ಬ್ರಹ್ಮ’ ಎನ್ನುತ್ತಾರೆ. ಬ್ರಹ್ಮಜ್ಞಾನಿಗಳು ಈ ಸತ್ಯ ಅರಿತಿದ್ದಾರೆ. ಹುಟ್ಟಿನಿಂದ ಸಾವಿನ ವರೆಗೆ ಏನಾಗುತ್ತಿದೆ ಎಂದು ಸಾಮಾನ್ಯ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಸತ್ತ ಬಳಿಕ ಏನಾಗುತ್ತದೆ ಎಂಬ ಸತ್ಯ ಹುಟ್ಟಿ ಸತ್ತವರಿಗೆ ಮರೆತು ಹೋಗಿರುತ್ತದೆ. ಇದಕ್ಕೆ ಕಾರಣ ಮಾಯೆ. ಜಗತ್ತು ಮರಣದಲ್ಲಿ ಕೊನೆಗೊಳ್ಳುತ್ತದೆ ಎಂಬ ಭ್ರಮೆಗೊಳಗಾಗಿದ್ದಾರೆ. ಆತ್ಮ ಜ್ಞಾನದಿಂದ ಆ ಭ್ರಮೆ ನಿರಸನವಾದಾಗ ಅಮೃತತ್ವದ ಅನುಭವವಾಗುತ್ತದೆ. ಆತ್ಮಕ್ಕೆ ನಾಶ ಎಂಬುವುದು ಇಲ್ಲ. ಈ ಭೌತಿಕ ಹುಟ್ಟು ಸಾವುಗಳು ಕರ್ಮದ ಫಲ ಸ್ವರೂಪವಾಗಿ ಉಂಟಾಗುತ್ತದೆ. ಆದುದರಿಂದ ಇದನ್ನು ದೇಹಾಂತರ ಪ್ರಾಪ್ತಿ ಎನ್ನುತ್ತಾರೆ. ಅಂದರೆ ಯಾವ ಆತ್ಮನಿಗೆ ಯಾವ ದೇಹ ಎಂಬ ನಿರ್ಣಯವಾಗುವುದು. ಅಮೃತತ್ವದ ರಹಸ್ಯವನ್ನು ಅರಿತರೆ ಮಾತ್ರ ಶಾಶ್ವತವಾದ ‘ಬ್ರಹ್ಮದ ಅಸ್ತಿತ್ವ’ವನ್ನು ತಿಳಿಯಬಹುದು. ನಿಜವಾಗಿ ಎಲ್ಲದಕ್ಕೂ ಕಾರಣವಾದುದು, ಕರ್ತನಾಗಿರುವುದು, ಕಾರ್ಯದಲ್ಲಿ ವ್ಯಕ್ತವಾಗುವುದು ಅದು ‘ಬ್ರಹ್ಮ’. ಯೋಗ ಸಾಧನೆಯಿಂದ ಕರ್ಮದ ಕಟ್ಟನ್ನು ಸಂಪೂರ್ಣ ಕಳಚಿಕೊಂಡು, ಜ್ಞಾನ ಮಾರ್ಗ ಅನುಸರಿಸಿ ಬ್ರಹ್ಮವನ್ನು ಸಾಧಿಸಿ ಕೊನೆಗೆ ಏನನ್ನು ಬಯಸಿದ್ದರೊ, ಅದನ್ನು ಸೇರುತ್ತಾರೋ ಆ ಪರಮ ಸಾನಿಧ್ಯವೇ ಮೋಕ್ಷ. ಅಂತಹ ದಿವ್ಯ ಸ್ಥಾನವೇ ಮರ್ತ್ಯರ ಜೀವನದ ಪರಮಗುರಿ – ಪರಮ ಪುರುಷಾರ್ಥವು ಕೂಡ. ನಿನ್ನ ಜಿಜ್ಞಾಸೆಗೆ, ಜ್ಞಾನದ ಹಸಿವಿಗೆ, ದಯಾಶೀಲತೆಗೆ ನಾನು ಮನ ಮೆಚ್ಚಿದವನಿದ್ದೇನೆ. ಏನಾದರು ವರ ಬೇಕಿದ್ದರೆ ಕೇಳಿಕೋ, ಅನುಗ್ರಹಿಸುವೆ” ಎಂದನು ಯಮಧರ್ಮರಾಯ.
ಧರ್ಮರಾಯನ ವ್ಯಕ್ತಿತ್ವ ಮತ್ತು ಯೋಗ್ಯತೆಯ ಅನಾವರಣ ಆತ ಕೇಳುವ ವರಗಳಲ್ಲಿ ವ್ಯಕ್ತವಾಗುತ್ತದೆ. ಇಷ್ಟೆಲ್ಲಾ ಮಹತ್ತರವಾದ ಘಟನೆಗಳು – ತಮ್ಮಂದಿರ ಸಾವು, ಯಕ್ಷ ಪ್ರಶ್ನೆ, ಯಮನ ದರ್ಶನ, ಬ್ರಹ್ಮ ಸತ್ಯದ ತಿಳುವಳಿಕೆ ಹೀಗೆ ಎಷ್ಟೋ ವಿಷಯಾಂತರಗಳಾಗಿದ್ದರೂ, ತನ್ನ ಕರ್ತವ್ಯ ಮರೆಯದ ಜವಾಬ್ದಾರಿಯುತ ಧರ್ಮಜ ಯಮದೇವನಲ್ಲಿ ಪ್ರಾರ್ಥಿಸಿಕೊಂಡದ್ದು ಬಹಳ ವಿಶಿಷ್ಟವಾದದ್ದು. “ಭಗವಾನ್, ನಾವು ಇಲ್ಲಿಯವರೆಗೆ ಬರಲು ಕಾರಣ ಓರ್ವ ಬ್ರಾಹ್ಮಣನ ಅರಣಿ. ಜಿಂಕೆಯ ಕೋಡಿಗೆ ಸಿಲುಕಿತ್ತು. ಜಿಂಕೆ ಹಾಗೆಯೆ ಹೊತ್ತೊಯ್ದು ಓಡುತ್ತಾ ಇಲ್ಲಿಯವರೆಗೆ ಬಂದಿತ್ತು. ದಣಿದ ನಾವು ನೀರು ಕುಡಿಯಲು ಬಂದ ಬಳಿಕದ ವೃತ್ತಾಂತ ನಿಮಗೂ ವೇದ್ಯ ಸಂಗತಿ. ನಾವೀಗ ಆ ಅರಣಿಯನ್ನು ತಂದೊಪ್ಪಿಸುವ ವಚನವಿತ್ತು ಬಂದವರು. ಕೃಪೆದೋರಿ ನಮ್ಮ ಕರ್ತವ್ಯ ಪೂರೈಸುವಂತೆ ಅನುಗ್ರಹಿಸಿ.”
“ಭೇಶ್ ಮಗನೇ! ಧರ್ಮ ಮೂರ್ತಿಯ ಪ್ರತಿರೂಪ ನೀನು ಹೌದು. ಯಾರಾದರೂ ವರ ಕೇಳು ಎಂದಾಗ ಬೇಕಾದುದ್ದನ್ನು ಬೇಡಿಕೊಳ್ಳುತ್ತಿದ್ದರು. ಆಗಲಿ, ನಿಮ್ಮೆದುರು ಜಿಂಕೆಯಾಗಿ ಓಡಿ ಬಂದದ್ದು, ನಿಮ್ಮನ್ನು ಇಲ್ಲಿಯವರೆಗೆ ಬರುವಂತೆ ಸೆಳೆದದ್ದು ನಾನೆ. ಇಲ್ಲವೆಂದಾದರೆ ಒಂದು ಕಾಡ ಹರಿಣವನ್ನು ಹಿಡಿಯಲು ಮಹಾವೀರ ವಿಕ್ರಮಿಗಳಾದ ನೀವೈವರು ಬರುತ್ತಿದ್ದಿರೆ? ಬಂದಿದ್ದರೂ ಅರೆಕ್ಷಣದಲ್ಲಿ ಹಿಡಿಯುತ್ತಿರಲಿಲ್ಲವೆ? ಇಗೋ ನೀನು ಬಯಸಿದ ಅರಣಿ. ನಿನ್ನ ಕರ್ತವ್ಯ ಧರ್ಮ ಪ್ರಜ್ಞೆಗೆ ಮನಸೋತಿದ್ದೇನೆ. ನಿಮಗಾಗಿ ಏನಾದರು ಒಂದು ದಿವ್ಯ ವರ ಕೇಳಿಕೋ, ನಡೆಸಿಕೊಡುತ್ತೇನೆ.” ಎಂದನು ಯಮರಾಯ.
ಮತ್ತೆ ಧರ್ಮರಾಯ ತನ್ನ ಧರ್ಮ ಪಥದಲ್ಲಿಯೆ ಚಿಂತಿಸಿದ. ಆತನ ವಿವೇಚನೆಯ ರೀತಿ ಆತನ ಗುಣಕ್ಕೆ ಮತ್ತೊಂದು ನಿದರ್ಶನವಾಗುತ್ತದೆ. “ದೇವಾ! ಹಸ್ತಿನಾವತಿಯಿಂದ ಹನ್ನೆರಡು ವರ್ಷ ವನವಾಸ- ಒಂದು ವರ್ಷದ ಅಜ್ಞಾತವಾಸಕ್ಕೆ ಒಪ್ಪಿ ಬಂದವರು ನಾವು. ಇನ್ನೇನು ಕೆಲ ಸಮಯದಲ್ಲೇ ವನವಾಸ ಮುಗಿದು ಗುಪ್ತವಾಸ ಆರಂಭವಾಗಲಿದೆ. ಒಪ್ಪಿದ ನಿಯಮ ಪಾಲಿಸಿ ಯಶ ಕಾಣುವಂತೆ ಯಮದೇವಾ ನೀವು ಆಶೀರ್ವದಿಸಿ ಅನುಗ್ರಹಿಸಬೇಕು” ಎಂದು ಬೇಡಿಕೊಂಡನು.
“ಅರೆ! ಏನು ನಿನ್ನ ಧರ್ಮಬುದ್ದಿ? ಹಸ್ತಿನಾವತಿಯೇನು? ಅಖಂಡ ಆರ್ಯಾವರ್ತದ ಚಕ್ರವರ್ತಿ ಪೀಠವನ್ನು, ಸಂಪತ್ತನ್ನು, ಜಯವನ್ನು, ದಿವ್ಯಾಯುಧವನ್ನು ಅಥವಾ ಇನ್ಯಾವುದೋ ಮಹತ್ತರವಾದುದನ್ನು ಕೇಳಬಹುದಾಗಿದ್ದ ನೀನು, ಅವಕಾಶವಿದ್ದರೂ ಒಪ್ಪಿದ ವಚನವನ್ನು ಪಾಲನಾಧರ್ಮವೆಂದು ಶಿರಸಾವಹಿಸಿ ಅದರ ಪೂರೈಕೆಯನ್ನಷ್ಟೆ ಬಯಸಿರುವೆ. ಇದರಿಂದ ನೀನೇನು ಎಂಬುವುದರ ದರ್ಶನವಾಯಿತು. ಸತ್ಯ – ಧರ್ಮಗಳಷ್ಟೆ ನಿನಗೆ ಪ್ರಧಾನವಾಗಿ ಬೇಕಾದುದು. ಅನ್ಯವೇನಿದ್ದರೂ ಅದು ಯೋಗದಂತೆ ಒದಗಲಿ ಎಂಬ ಮನಸ್ಥಿತಿ. ಬಹಳ ಸಂತುಷ್ಟನಾದೆ ನಿನ್ನ ಸ್ಥಿತ ಪ್ರಜ್ಞತೆಗೆ. ಯುಧಿಷ್ಠಿರಾ! ನಿನ್ನ ಬಯಕೆಯಂತೆಯೆ ಆಗಲಿ. ಅಜ್ಞಾತವಾಸ ಕಾಲದಲ್ಲಿ ನೀವು ನಿಮ್ಮ ನಿಜರೂಪದಲ್ಲಿ ಇದ್ದರೂ ನಿಮ್ಮನ್ನು ಯಾರೂ ಗುರುತಿಸಲಾರರು. ಯಾವ ಲೋಪದೋಷವೂ ಇಲ್ಲದೆ ನಿನ್ನ ವಚನ ಪಾಲಿಸಲ್ಪಡುತ್ತದೆ. ಹಾಗೆಯೆ ನಿಮ್ಮ ಅಜ್ಞಾತವಾಸಕ್ಕೆ ಬೇಕಾದ ವಾಸ, ಅಶನ, ಕಾರ್ಯಗಳು ನಿಮಗೆ ನಿರಾಯಾಸವಾಗಿ ಒದಗಿ ಬರಲಿ. ನಿಮಗೆ ಶುಭವಾಗಲಿ. ಧರ್ಮರಾಯಾ! ನೀನೆನಗೆ ಬಹುವಾಗಿ ಮೆಚ್ಚಿಗೆಯಾದ ಕಾರಣ ಇನ್ನೂ ಒಂದು ವರ ಕೇಳುವ ಅವಕಾಶ ನೀಡುವೆ. ಏನಾದರು ಬೇಕಿದ್ದರೆ ಕೇಳಿಕೊ” ಎಂದನು ಯಮ.
“ದೇವಾ! ಲೋಭ, ಮೋಹ, ಕ್ರೋಧಾದಿ ಅರಿಷಡ್ವರ್ಗಗಳನ್ನು ನಾನು ಜಯಿಸುವಂತೆಯೂ, ನನ್ನ ಮನಸ್ಸು ಸದಾ ದಾನ, ತಪಸ್ಸು, ಸತ್ಯ, ಧರ್ಮ ಇವುಗಳಲ್ಲಿ ಸ್ಥಿತವಾಗಿರುವಂತೆ ಅನುಗ್ರಹಿಸು” ಎಂದು ಸಂಪ್ರಾರ್ಥಿಸಿದನು.
“ಯುಧಿಷ್ಠಿರಾ! ಇಂತಹ ವರ ನೀನಲ್ಲದೆ ಅನ್ಯರಾರೂ ಕೇಳಲಾರರು. ಹಾಗೆಂದು ನೀನು ಕೇಳಿರುವುದು ಈಗಾಗಲೆ ನಿನ್ನಲ್ಲಿ ಇದೆ. ಅದನ್ನೇ ನೀನು ಬಯಸಿ ಬೇಡಿರುವೆ. ಆಗಲಿ ಎಂತಹ ಸಂಧಿಗ್ದ ಸ್ಥಿತಿ ಬಂದರೂ ನೀನು ವಿಚಲಿತನಾಗದಂತೆ ಅನುಗ್ರಹಿಸುತ್ತೇನೆ. ಪ್ರತ್ಯಕ್ಷ ಧರ್ಮವೆ ನೀನೆಂಬ ಯಶಸ್ಸನ್ನು ಪಡೆದು ಕೃತಾರ್ಥಚರಿತನಾಗು” ಎಂದು ಅನುಗ್ರಹಿಸಿ ಜವರಾಯ ಅದೃಶ್ಯನಾದನು. ಧರ್ಮರಾಯ ಕೈ ಮುಗಿದು ನಿಂತನು.
ಮುಂದುವರಿಯುವುದು…