ಭಾಗ – 239
ಭರತೇಶ್ ಶೆಟ್ಟಿ,ಎಕ್ಕಾರ್

ಪ್ರಶ್ನೆ : ಧನಗಳಲ್ಲಿ ಉತ್ತಮ ಧನ ಯಾವುದು?
ಉತ್ತರ : ಧನದಲ್ಲಿ ಅಂದರೆ ಸಂಪಾದನೆಯಲ್ಲಿ ಉತ್ತಮವಾದದ್ದು ವಿದ್ಯೆ. ‘ವಿದ್ಯಾಧನಂ ಸರ್ವ ಧನ ಪ್ರಧಾನಂ’ ಅನ್ಯ ಯಾವುದೆ ರೀತಿಯ ಧನ, ಆಸ್ತಿ ಪಾಸ್ತಿ ಗಳಿಸಿದರೂ ಅದು ಅನ್ಯರ ಪಾಲಾಗಬಹುದು. ವಿದ್ಯೆ ಜ್ಞಾನದಿಂದ ಕೀರ್ತಿಯನ್ನು ನೀಡುತ್ತದೆ.
ಪ್ರಶ್ನೆ : ಲಾಭಗಳಲ್ಲಿ ಉತ್ತಮ ಯಾವುದು?
ಉತ್ತರ : ಲಾಭಗಳಲ್ಲಿ ಅತ್ಯುತ್ತಮ ಲಾಭ ಆರೋಗ್ಯ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಲಾಭದ ಪರಿಣಾಮ ಜೀವಿತದ ಸುಖ. ಅದು ಸಿಗಬೇಕಾದರೆ ಅನುಭವಿಸಿ ಆನಂದಿಸುವ ಶಕ್ತಿ, ತಾಳ್ಮೆ ಬೇಕು. ಇವೆರಡೂ ಪ್ರಾಪ್ತವಾಗುವುದು ಆರೋಗ್ಯದಿಂದ. ತಿನ್ನುವ ಆಹಾರ ಪೇಯ ಮತ್ತು ಯೋಚಿಸುವ ಯೋಚನೆ ವ್ಯವಹಾರವಾಗಿ ಅದರಿಂದ ಉತ್ಪತ್ತಿಯಾಗುವ ಪರಿಣಾಮ ಲಾಭವೇ ದೈಹಿಕ ಮತ್ತು ಮನಸ್ಸಿನ ಆರೋಗ್ಯ. ಅದಕ್ಕಿಂತ ಮಿಗಿಲಾದ ಸಂತೋಷ ಇನ್ಯಾವ ಲಾಭದಿಂದಲೂ ಸಿಗಲಾರದು.
ಪ್ರಶ್ನೆ : ಅತ್ಯುತ್ತಮ ಸುಖ ಯಾವುದು?
ಸ್ವಾರ್ಥ, ದ್ವೇಷ ಮತ್ತು ಅಪೇಕ್ಷೆ ಈ ಮೂರರಿಂದ ಬೇರೂರುವ ಹಠ, ವೈರ ಮತ್ತು ಕಾಮದಿಂದ ಸುಖ ನಷ್ಟವಾಗುತ್ತದೆ. ಯಾವಾತ ಸ್ವಾರ್ಥರಹಿತನಾಗಿ, ಎಲ್ಲರಲ್ಲೂ ಪ್ರೀತಿಯುಳ್ಳವನಾಗಿ, ದಯಾಪರನಾಗಿ, ಅಹಂಕಾರ ರಹಿತನಾಗಿ, ಸುಖ ದುಃಖಗಳಲ್ಲಿ ಸಮಚಿತ್ತ ಸಾಧಿಸುವನೋ, ಕ್ಷಮಾಗುಣ ಸಂಪನ್ನನಾಗುವನೋ ಅಂತಹ ಇಂದ್ರಿಯ ನಿಗ್ರಹ ಸಾಧಕನಿಗಿಂತ ಸುಖಿ ಯಾರೂ ಇರಲಾರು. ಸರ್ವ ಸುಖಗಳಲ್ಲಿ ಇದೇ ಅತ್ಯುತ್ತಮ.
ಪ್ರಶ್ನೆ : ಮನುಷ್ಯ ಯಾವುದನ್ನು ತೊರೆದರೆ ಜನಪ್ರಿಯನಾಗುತ್ತಾನೆ? ಸುಖಿಯಾಗುತ್ತಾನೆ? ಧನಿಕನಾಗುತ್ತಾನೆ?
ಉತ್ತರ : ದುರಭಿಮಾನವನ್ನು ಬಿಟ್ಟವನು ಸರ್ವ ಪ್ರಿಯನಾಗುತ್ತಾನೆ. ತನ್ನ ಯೋಗ್ಯತೆ, ಗೌರವಾಪೇಕ್ಷೆ, ಸ್ಥಾನ, ಧನ ಮುಂತಾದ ಅಹಂಕಾರವುಳ್ಳವನು ಸಲ್ಲದ ಆತ್ಮಗೌರವ ಬಯಸುತ್ತಾನೆ. ಅದನ್ನು ಸಾಧಿಸಲು ತನ್ನನ್ನು ಹೊಗಳಿಸಿಕೊಳ್ಳುತ್ತಾನೆ. ಛಲ, ಕಪಟ, ಹಠದಿಂದಲಾದರೂ ಪ್ರಯತ್ನಿಸುತ್ತಾನೆ. ಇಂತಹ ವ್ಯಕ್ತಿಯನ್ನು ಆತನ ಸಂಪತ್ತಿಗಾಗಿಯೋ ಇಲ್ಲ ಆತನಿಂದಾಗಬೇಕಾದ ಸಹಾಯಕ್ಕಾಗಿಯೋ ಜನ ಎದುರಿನಲ್ಲಿ ಮಾತ್ರ ಮುಖಸ್ತುತಿ ಮಾಡುತ್ತಾರೆ. ಇಂತಹ ವರ್ಗ ಹೊಗಳುವವರನ್ನು ಅಭಿಮಾನಿಗಳೆಂದು ಬೆಳೆಸುತ್ತಾರೆ ಆದರೆ ನೈಜತೆ ಬೇರೆಯೇ ಆಗಿರುತ್ತದೆ. ಇಂತಹ ದುರಭಿಮಾನಿಯ ಉದ್ದೇಶ, ಕೃತಿ ಎಲ್ಲವೂ ತೋರಿಕೆಗಾಗಿ ಮತ್ತು ಪ್ರಸಿದ್ಧಿಯನ್ನು ಬಯಸಿ ಸಾಗುತ್ತದೆ. ನಿಜ ಜನಪ್ರಿಯನಾಗಬೇಕಾದರೆ ಮೊದಲು ಇಂತಹ ಎಲ್ಲಾ ಅಪೇಕ್ಷೆಗಳನ್ನು ತೊರೆದು ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ ಬಯಸದೆ, ತನ್ನ ಕೈಂಕರ್ಯಗಳನ್ನು ಅಂತರಂಗದ ಭಾವವೇ ಶುದ್ಧಿಯಾಗಿದ್ದು ಸಮರ್ಪಣಾ ಭಾವದಿಂದ ಮಾಡಬೇಕು. ಭಗವತ್ಪ್ರೀತ್ಯರ್ಥ ನಿಸ್ವಾರ್ಥವಾಗಿ ಮಾಡುತ್ತಾ ಬದುಕುವ ವ್ಯಕ್ತಿ ಶಾಶ್ವತ ಜನಪ್ರೀಯತೆ ಗಳಿಸಬಲ್ಲನು.
ಸುಖಿಯಾಗಬೇಕಾದರೆ ಮೊದಲು ತನ್ನನ್ನು ತಾನು ಪರರಿಗೆ ಹೋಲಿಕೆ ಮಾಡುವುದನ್ನು ಬಿಡಬೇಕು. ಹುಟ್ಟಿದ ಮನುಷ್ಯ ಪ್ರತಿಯೊಬ್ಬನೂ ದೇವರ ಸೃಷ್ಟಿ ಎಂದು ಅರಿಯಬೇಕು. ಭಗವಂತ ತನ್ನನ್ನು ಯಾವುದೋ ವಿಶೇಷ ಕಾರಣಕ್ಕಾಗಿ ಸೃಷ್ಟಿಸಿ ಅದಕ್ಕೆ ಬೇಕಾಗುವ ಗುಣಧರ್ಮ, ಜ್ಞಾನ, ಸುಖ, ಸಂಪತ್ತು ನೀಡಿದ್ದಾನೆ ಎಂದು ಮೊದಲು ತಿಳಿದಿರಬೇಕು. ನಂತರದಲ್ಲಿ ತಾನು ಭಗವಂತನಲ್ಲಿ ಬೇಡಿ ಶ್ರಮದ ಸಾಧನೆಗೈದರೆ ಯಾವುದೂ ನಿಲುಕದೆ ಉಳಿಯುವ ವಿಷಯವಿಲ್ಲ ಎಂಬ ಸತ್ಯವನ್ನೂ ಅರಿಯಬೇಕು. ಈ ರೀತಿಯ ಮನಸ್ಥಿತಿ ಬೆಳೆಸಬಲ್ಲ – ಆಚರಿಸಬಲ್ಲ ವ್ಯಕ್ತಿ ಪರರ ಸಂಪತ್ತು, ವಿದ್ಯೆ, ಜ್ಞಾನ, ಕೀರ್ತಿ, ಸುಖ ಭೋಗಗಳನ್ನು ಕಂಡು ಹೋಲಿಕೆ ಮಾಡಿ ಉತ್ಪತ್ತಿಯಾಗಬಲ್ಲ ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹಗಳೆಂಬ ಅರಿಷಡ್ವರ್ಗಳಿಂದ ಮುಕ್ತನಾಗಿ ಪರಮಸುಖಿಯಾಗಬಲ್ಲ. ಸಂತೃಪ್ತಿಯ ಬದುಕು ಪ್ರಾಪ್ತವಾಗುತ್ತದೆ.
ಧನಿಕ ಎಂಬ ವಿಚಾರದ ವ್ಯಾಪ್ತಿ ಕೇವಲ ಐಹಿಕ ಸಂಪತ್ತು ಮಾತ್ರ ಅಲ್ಲ. ಜ್ಞಾನ, ವಿದ್ಯೆ, ಗುಣ, ಶೀಲಗಳೂ ಮಹಾಧನಗಳೇ. ಯಾವಾತ ಮತ್ತಷ್ಟೂ ಇದ್ದರೆ ತನಗೆ ಬೇಕು ಎಂಬ ದುರಾಸೆ ಹೊಂದುತ್ತಾನೊ ಆತನ ಬಳಿ ಎಷ್ಟಿದ್ದರೂ ಅದು ಕಡಿಮೆ ಎಂಬ ಭಾವ ಬೆಳೆಯುತ್ತಾ ಇರುತ್ತದೆ. ಹಾಗಾಗಿ ತೃಪ್ತಿಯನ್ನು ಬಯಸಿ ಸಾಧಿಸುವವನ ಬಳಿ ಸಂಪತ್ತು, ಜ್ಞಾನ ಎಷ್ಟು ಹೆಚ್ಚಿರಲಿ, ಕಡಿಮೆ ಇರಲಿ ಸುಖಿಯಾಗಿ ಇರುತ್ತಾನೆ. ಹಾಗಾಗಿ ಭಾವ ವ್ಯತ್ಯಾಸಕ್ಕೊಳಗಾಗಿ
ಕೊರಗದವನು ನಿಜ ಧನಿಕ.
ಪ್ರಶ್ನೆ : ಮನುಷ್ಯನ ದೊಡ್ಡ ಶತ್ರು ಯಾರು?
ಉತ್ತರ : ಶತ್ರು ಎಂದಾಕ್ಷಣ ಬಾಹ್ಯ ವೈರತ್ವದ ವಿಚಾರವೇ ಗಣನೆಗೆ ಬರುತ್ತದೆ. ಆದರೆ ಮನುಷ್ಯನ ದೊಡ್ಡ ಶತ್ರು ಆತನ ಕೋಪ. |”ಕ್ರೋಧಾದ್ಭವತಿ ಸಮ್ಮೋಹಃ, ಸಮ್ಮೋಹಾತ್ ಸ್ಮೃತಿ ವಿಭ್ರಮಃ, ಸ್ಮೃತಿ ಭ್ರಂಶಾತ್ ಬುದ್ದಿನಾಶೋ, ಬುದ್ದಿ ನಾಶಾತ್ಪ್ರಣಶ್ಯತಿ”| ವಿವರಿಸಿ ಮುಗಿಯಲಾರದಷ್ಟು ಅಗಾಧ ಸತ್ಯ ವಿಚಾರವುಳ್ಳ ಉಕ್ತಿಯಿದು. ಕ್ರೋಧದಿಂದ ಮೂಢ ಭಾವ ತಳೆಯುತ್ತದೆ. ಆ ಮೂಢತೆಯಿಂದ ಸ್ಮೃತಿಯಲ್ಲಿ ಭ್ರಮೆ ಉತ್ಪತ್ತಿಯಾಗುತ್ತದೆ. ಭ್ರಮೆಯ ಕಾರಣ ಜ್ಞಾನದ ಶಕ್ತಿ ನಾಶವಾಗುತ್ತದೆ. ಜ್ಞಾನದ ಶಕ್ತಿ ಕುಂದಿದಾಗ ಆ ಮನುಷ್ಯ ತನ್ನ ಸ್ಥಾನದಿಂದ ಭ್ರಷ್ಟನಾಗುತ್ತಾನೆ – ಕಳೆದುಕೊಳ್ಳುತ್ತಾನೆ. ಹಾಗಾಗಿ ಅತ್ಯಂತ ದೊಡ್ಡ ಶತ್ರುವೇ ಕೋಪ.
ಪ್ರಶ್ನೆ : ಪ್ರಪಂಚದಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿ ಯಾವುದು?
ಉತ್ತರ : ಹುಟ್ಟು ಸಾವು ಮತ್ತು ಸಾವಿನ ಅರಿವಿಲ್ಲದಿರುವುದು ಅತ್ಯಂತ ಆಶ್ಚರ್ಯಕರ ಸಂಗತಿ. ತಾನೂ ಒಂದು ದಿನ ಸಾಯುತ್ತೇನೆ ಎಂಬುವುದನ್ನು ಮರೆತು ಬದುಕುವುದು ವಿಚಿತ್ರ. ದಿನನಿತ್ಯ ಸಾವು ಎಂಬ ಸತ್ಯ ಕಣ್ಣೆದುರು ಕಾಣಿಸಿದರೂ ತಾನು ಮಾತ್ರ ಶಾಶ್ವತ ಎಂಬ ರೀತಿ ಲೋಭಿಯಾಗಿ ವೃಥಾ ಕಾರಣ ಕಲಹ, ಕಂಟಕ, ವಿಘ್ನಕಾರಕನಾಗಿ ಬದುಕುವುದು ಆಶ್ಚರ್ಯದ ಸಂಗತಿ. ‘ಜಾತಸ್ಯ ಮರಣಂ ಧ್ರುವಂ’ ಹುಟ್ಟಿದ ಯಾರಿಗೇ ಆಗಲಿ ಮರಣ ಎಂಬುವುದು ನಿಶ್ಚಿತ. ಸಾವಿನ ದವಡೆಯಲ್ಲಿದ್ದರೂ ತಾನು ತನ್ನದು ಎಂಬ ನಶ್ವರ ಬಯಕೆ ತೊರೆಯಲಾಗದೆ ಉಳಿಯುವುದೇ ಅತ್ಯಾಶ್ಚರ್ಯ. “ಜಾತಸ್ಯ ಹಿಧ್ರುವೋ ಮೃತ್ಯುಃ, ಧ್ರುವಂ ಜನ್ಮ ಮೃತಸ್ಯಚ| ತಸ್ಮಾ ದಪರಿ ಹಾರ್ಯೇರ್ಥೆ, ನತ್ವಂ ಶೋಚಿತು ಮರ್ಹಸಿ|. ಅಂದರೆ ಹುಟ್ಟಿದ ಶರೀರಿಗೆ ಸಾವು ನಿಶ್ಚಿತ. ಮತ್ತೆ ಆತ್ಮದ ಹುಟ್ಟೂ ಸತ್ಯ. ಇದನ್ನರಿತೂ ಈಗಿನ ಸಾವಿನ ಬಗೆಗೆ ಭಯ ತೊರೆದು ಮತ್ತು ಮುಂದಿನ ಜನ್ಮದ ಶ್ರೇಷ್ಟತೆಗಾಗಿ ಸತ್ಕರ್ಮ ಮಾಡಿದರೆ ಅತ್ಯುತ್ತಮ. ತಿಳಿದೂ ಬಹು ಅಂಶ ಜನ ಇದನ್ನು ಮಾಡಲಾರದೆ ಉಳಿದಿರುವುದೇ ಮಹದಾಶ್ಚರ್ಯವಾಗಿದೆ.
ಮುಂದುವರಿಯುವುದು…









