ಭಾಗ – 234
ಭರತೇಶ್ ಶೆಟ್ಟಿ,ಎಕ್ಕಾರ್

ಜಯದ್ರಥನ ಸಾಧನೆಯ ಬಗ್ಗೆ ತಿಳಿದು ಹಸ್ತಿನಾವತಿಯಲ್ಲಿ ದುರ್ಯೋಧನನ ಪಾಳಯ ಸಂಭ್ರಮಿಸಿತು. ಅರ್ಜುನನಿಗೆ ಕರ್ಣ, ಉಳಿದವರಿಗೆ ಜಯದ್ರಥ ಎಂದು ಹರ್ಷಪಟ್ಟರು. ವಾಸ್ತವ ಸತ್ಯವೇನೆಂದರೆ ಭೀಷ್ಮಾಚಾರ್ಯ – ದ್ರೋಣಾಚಾರ್ಯರನ್ನು ಮೀರಿಸುವ ವೀರರು ಕೌರವ ಪಾಳಯದಲ್ಲಿ ಇಲ್ಲ. ಇಚ್ಚಾಮರಣಿ ಭೀಷ್ಮರಿಗೆ ಪುರುಷರಿಂದ ಸೋಲು ಇಲ್ಲ, ಶಾಪದಪಿ – ಶರಾದಪಿ ದ್ರೋಣಾಚಾರ್ಯರು ಅಸಮಬಲ ವಿಕ್ರಮಿ. ಅಧ್ಯಾಪನಕ್ಕಾಗಿ ಕ್ಷಾತ್ರ ವಿದ್ಯೆ ಕಲಿತವರು ಅವರಾದರೂ ಅವರ ಧನುರ್ವೇದ, ಶಾಸ್ತ್ರ, ಶಸ್ತ್ರ ಪಾಂಡಿತ್ಯ ಕೌರವ ಪಾಳಯದ ಮಹಾನ್ ಆಸ್ತಿ. ಹಾಗಿದ್ದೂ, ವಿಚಾರ ತಿಳಿದಿದ್ದರೂ ಈ ಈರ್ವರು ದುರ್ಯೋಧನನ ಲೆಕ್ಕಾಚಾರದಲ್ಲಿ ನಗಣ್ಯರು. ನಿಜಾರ್ಥದಲ್ಲಿ ಈ ಇಬ್ಬರನ್ನು ಹೊರತು ಕರ್ಣನೆ ಪರಾಕ್ರಮಿಯಾದರೂ ಕೃಷ್ಣಾರ್ಜುನರ ಸಮಕ್ಷದಲ್ಲಿ ಮೋಕ್ಷ ಪಡೆಯಲೆಂದು ಜನ್ಮ ತಳೆದು ಬಂದ ಸಹಸ್ರ ಕವಚಧರ. ಮೇಲಾಗಿ ಗುರುಮುಖದಿಂದಲೆ ಶಾಪಗ್ರಸ್ಥನಾಗಿ ಅಗತ್ಯ ಕಾಲದಲ್ಲಿ ವಿದ್ಯೆ ಮರೆತು ಹೋಗಿ ಅಸಹಾಯಕನಾಗುವ ದೋಷ ಉಳ್ಳವನಾಗಿದ್ದಾನೆ. ಹಾಗಾಗಿ ಆತನನ್ನೂ ಸೇರಿಸಿ ಉಳಿದವರೆಲ್ಲರನ್ನು ಪಾಂಡವರು ನಿರಾಯಾಸವಾಗಿ ನಿಗ್ರಹಿಸಬಲ್ಲರು ಎನ್ನುವುದು ಮುಕ್ತ ಸತ್ಯ.
ದುರಂತವೆಂದರೆ ಸದ್ಭುದ್ದಿ ಇಲ್ಲದಿದ್ದರೆ ಸದವಕಾಶಗಳು ನಿಷ್ಪ್ರಯೋಜಕವಾಗುವುದಲ್ಲವೆ? ದೂರ್ವಾಸರು ಒಲಿದು ನಿಮಗೇನು ವರ ಬೇಕೆಂದು ಕೇಳಿದಾಗ ಸಂಚನ್ನೂಡಿ ಪಾಂಡವರ ಬಳಿ ಊಟಕ್ಕೆ ಕಳುಹಿದರು. ಸಾಕ್ಷಾತ್ ಪರಶಿವ ಮಹಾರುದ್ರನೇ ಮೈದೋರಿದರೂ ಜಯದ್ರಥ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಪಾಂಡವದ್ವೇಷ ಅಡ್ಡಿಯಾಯಿತು. ಸರಳವಾಗಿ ಹೇಳುವುದಾದರೆ ಪರಮಪವಿತ್ರವಾದ ಶ್ರೀಗಂಧ ಕೊಳಚೆಗೆ ಬಿದ್ದಂತಾಯಿತು ಈ ಅವಕಾಶಗಳು.
ಕೆಲದಿನಗಳು ಕಳೆದಾಗ ಜಯದ್ರಥನಿಂದ ಕಾಮ್ಯಕಾವನದಲ್ಲಾದ ದುರ್ನಡತೆ ಬ್ರಾಹ್ಮಣರ ಮುಖೇನ ಮೌಖಿಕವಾಗಿ ಒಬ್ಬರಿಂದ ಒಬ್ಬರಿಗೆ ಪ್ರಚಾರವಾಗಿ ಹಸ್ತಿನಾವತಿಯಲ್ಲೂ ಎಲ್ಲರಿಗೂ ತಿಳಿಯುವಂತಾಯಿತು. ಆತನಿಗೆ ಇಲ್ಲೂ ಛೀ! ಥೂ! ಎಂದು ಉಗಿಸಿಕೊಳ್ಳುವಂತಾಯಿತು. ಕೌರವರು ಈ ಬಗ್ಗೆ ತಲೆಗೆಡಿಸಿಕೊಳ್ಳಲಿಲ್ಲ ಎಂದೇ ಹೇಳಬಹುದು. ಆ ಸಮಯ ಜಯದ್ರಥ ತನ್ನದ್ದಾದ ಸಿಂಧೂ ದೇಶ ಸೇರಿಕೊಂಡಾಗಿತ್ತು.
ಒಂದು ದಿನ ಕರ್ಣ ಎಂದಿನಂತೆ ದಾನ ಧರ್ಮಾದಿ ಕರ್ಮ ಪೂರೈಸಿ ಆ ದಿನದ ಕರ್ತವ್ಯಗಳನ್ನು ಗೈದು ರಾತ್ರಿ ಸುಖನಿದ್ರೆಯಲ್ಲಿದ್ದಾನೆ. ಆ ಸಂದರ್ಭ ಆತನಿಗೊಂದು ಸ್ವಪ್ನ ಗೋಚರಿಸಿತು. ಅತ್ಯಂತ ತೇಜಪೂರ್ಣನಾದ ಓರ್ವ ದಿವ್ಯ ಪುರುಷ ಕನಸಿನಲ್ಲಿ ಕಾಣಿಸಿಕೊಂಡನು. ಕರ್ಣನ ಸನಿಹದಲ್ಲಿ ನಿಂತಿದ್ದ ಆ ಮಹಾತ್ಮ “ಕರ್ಣಾ! ನೀನು ದಾನ ಶೂರನಾಗಿ ಲೋಕ ವಿಖ್ಯಾತನಾಗಿರುವೆ. ಯಾರು ಏನು ಕೇಳಿದರೂ ಇಲ್ಲ ಎನ್ನದೆ ಅದನ್ನು ಕೊಡುತ್ತಾ ಬರುತ್ತಿರುವೆ. ಕೆಲವೊಮ್ಮೆ ಸದ್ಗುಣಗಳು ಮಾರಕವಾಗಿ ಪರಿಣಮಿಸುತ್ತದೆ. ನಿನ್ನ ಶರೀರದಲ್ಲಿ ಚರ್ಮದಂತೆಯೇ ಮೈಗಂಟಿಕೊಂಡು ವಜ್ರ ಸದೃಶವಾದ ಕವಚವೊಂದಿದೆ. ಮಾತ್ರವಲ್ಲ ಕಿವಿಯಲ್ಲಿ ದಿವ್ಯ ಕುಂಡಲಗಳು ಇವೆ. ಅವು ನಿನ್ನ ಪ್ರಾಣ ರಕ್ಷಣೆಗಾಗಿ ಜನ್ಮಕಾಲದಿಂದ ನಿನ್ನಲ್ಲಿವೆ. ದಾನಶೀಲನಿಗೆ ಹಿಂದು ಮುಂದಿನ ವಿವೇಚನೆ ಇರುವುದಿಲ್ಲ. ಕೊಡುವವರಿದ್ದರೆ ಕೇಳುವವರಿಗೂ ದಾಕ್ಷಿಣ್ಯ ಇರುವುದಿಲ್ಲ. ಏನು ಬೇಕಾದರೂ ಕೇಳಿ ಪಡೆದುಕೊಳ್ಳುತ್ತಾರೆ. ನೀನು ಜಾಗೃತನಾಗಿರಬೇಕು. ನಾಳೆಯ ದಿವಸ ದೇವರಾಜ ಇಂದ್ರನು ನಿನ್ನ ಬಳಿ ಬಂದು ಈ ದಿವ್ಯ ವಸ್ತುಗಳನ್ನು ಕೇಳುತ್ತಾನೆ. ಕೊಡುವಲ್ಲಿ ಅದರ ಅಗತ್ಯ ಆತನಿಗಿದೆಯೆ? ಎಂದು ಅರಿತು ವ್ಯವಹರಿಸು” ಎಂದು ಎಚ್ಚರಿಸಿ ಕಾಣದಾದನು. ತಕ್ಷಣ ಎಚ್ಚೆತ್ತ ಕರ್ಣ ಸ್ವಪ್ನ ಸದೃಶ ವಿಚಾರದ ಕುರಿತಾಗಿ ಬಹಳಷ್ಟು ವಿಮರ್ಷಿಸಿದನು. ಹಿಂದೆ ಮುಂದೆಗಳನ್ನು ಗಹನವಾಗಿ ತರ್ಕಿಸತೊಡಗಿದನು. ಅಷ್ಟರಲ್ಲಾಗಲೆ ಬೆಳಗಾಯಿತು.
ಎಂದಿನಂತೆ ನೈಮಿತ್ತಿಕ ಕರ್ಮಗಳನ್ನು ಪೂರೈಸಿ ಸೂರ್ಯೋಪಾಸಕನಾದ ಕರ್ಣ ಅರ್ಘ್ಯವೀಯಲು ಜಲಧಿಯತ್ತ ಸಾಗಿದನು. ಈಗಲೂ ಸ್ವಪ್ನದಲ್ಲಾದ ಸಂಗತಿಯ ಬಗ್ಗೆ ಮನದಲ್ಲಿ ಪ್ರಶ್ನೋತ್ತರಗಳನ್ನು ಕೇಳುತ್ತಾ, ಉತ್ತರಿಸುತ್ತಾ ಹೋಗುತ್ತಿದ್ದಾನೆ. ವಿಧಿ ಅನುಷ್ಠಾನ ಪೂರೈಸಿ ಸೂರ್ಯನಿಗೆ ಅರ್ಘ್ಯವಿತ್ತು ನಮಿಸಿದನು. ಎಲ್ಲಾ ಪ್ರಾತಃವಿಧಿಗಳನ್ನು ಕ್ರಮದಂತೆ ಮಾಡಿಯಾಗುವ ಹೊತ್ತಿಗೆ ಓರ್ವ ಬ್ರಾಹ್ಮಣ ಅವನ ಬಳಿ ಬಂದನು.
ಮುಂದುವರಿಯುವುದು…






















































