ಭಾಗ 232
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೩೪ ಮಹಾಭಾರತ
‘ಕಾಮಾತುರನಾಂ ನಾ ಭಯಂ ನಾ ಲಜ್ಜಂ’ ಎಂಬ ಶಾಸ್ತ್ರ ವಚನದಂತೆ ಸಂಬಂಧದಲ್ಲಿ ತಂಗಿಯಾದವಳನ್ನು ಬಯಸಿ ದುಡುಕುತ್ತಿದ್ದಾನೆ. ದ್ರೌಪದಿಯ ಕತ್ತನ್ನು ಹಿಡಿದೆಳೆದು ತಂದು ಬಲಾತ್ಕಾರದಿಂದ ತನ್ನ ರಥದಲ್ಲೇರಿಸಿಕೊಂಡು ಹೊರಟನು. ದ್ರೌಪದಿ ಬೊಬ್ಬಿರಿದು ರಕ್ಷಣೆಗಾಗಿ ಕೂಗಿಕೊಂಡಾಗ ದೂರದಲ್ಲಿ ಬರುತ್ತಿದ್ದ ಧೌಮ್ಯರ ಶಿಷ್ಯರಲ್ಲೊಬ್ಬ ನೋಡಿದನು. ಓಡಿ ಹೋಗಿ ಬೇಟೆಯಾಡುತ್ತಿದ್ದ ಭೀಮಾರ್ಜುನರಿಗೆ ಸುದ್ದಿ ತಿಳಿಸಿದನು. ಅವರು ಅಲ್ಲಿಂದಲೆ ಜಯದ್ರಥ ಸಾಗಿದುದಕ್ಕೆ ವಿರುದ್ದ ದಿಕ್ಕಿನಿಂದ ಕಾಡಿನೊಳಗಿಂದಲೆ ಶರವೇಗದಿಂದ ಓಡಿದರು. ದಾರಿಗೆ ಅಡ್ಡವಾಗಿ ನಿಂತು ಜಯದ್ರಥನನ್ನು ತಡೆದರು. ಅಪಹೃತಳಾಗಿ ರೋದಿಸುತ್ತಿರುವ ದ್ರೌಪದಿಯನ್ನು ಬಂಧ ಮುಕ್ತಗೊಳಿಸುವುದಕ್ಕಾಗಿ ಪಾರ್ಥ ಯುದ್ಧಾಹ್ವಾನವಿತ್ತನು.ಬ ಕ್ಷಣಾರ್ಧದಲ್ಲಿ ಸೈಂಧವ ಜಯದ್ರಥನನ್ನು ಸೋಲಿಸಿ ದ್ರೌಪದಿಯನ್ನು ಬಿಡಿಸಿ ಸಮಾಧಾನ ಪಡಿಸಿದರು. ಪಾಪ ಪಾಂಚಾಲೆ ತನ್ನ ಬದುಕಿನಲ್ಲಿ ತನಗೆದುರಾಗುತ್ತಿದ್ದ ಮಾನಹಾನಿಕರ ಪ್ರಕರಣಗಳಿಂದ ನೊಂದು ಬೇಸರಿಸಿಕೊಂಡಳು. ವಸ್ತ್ರಾಪಹಾರ ಯತ್ನ ಈಗ ಅಪಹರಣ ಪ್ರಯತ್ನ. ಜಯದ್ರಥನನ್ನು ಬಂಧಿಸಿದ ಭೀಮಾರ್ಜುನರು ಚೆನ್ನಾಗಿ ಮನಬಂದಂತೆ ಗುದ್ದಿ ಗುದ್ದಿ, ಒದ್ದು, ಹಿಗ್ಗಾ ಮುಗ್ಗ ತಳಿಸಿ ಕೋಪ ಇಳಿಸಿಕೊಂಡರು. ಭೀಮನಿಗೆ ಜಯದ್ರಥನನ್ನು ಅಲ್ಲಿಯೆ ಕೊಂದು ಕಳೆಯುವ ಮನಸ್ಸಿತ್ತು. ಆದರೆ ಅರ್ಜುನ ತಡೆದು ಎಳೆದು ತಂದು ಧರ್ಮರಾಯನ ಎದುರಲ್ಲಿ ಬಿಸಾಡಿದರು.
ವಿಚಾರವರಿತು ಧರ್ಮರಾಯ ಜಯದ್ರಥನನ್ನು ಕುರಿತು ” ಅಯ್ಯಾ ನೀನು ಬಂಧುವಾಗಿರುವೆ. ಆದರೂ ಎಂತಹ ಕೆಲಸ ಮಾಡಿದೆ? ಕಾಡ ಮೃಗಕ್ಕಿಂತಲೂ ಹೀನನಾಗಿ ವ್ಯವಹರಿಸಿದೆ. ನಮ್ಮಲ್ಲಿ ಯಾರಾದರೂ ಒಬ್ಬರು ಇಲ್ಲಿ ಬರುತ್ತಿದ್ದರೆ ಏನಾದೀತು ಎಂಬ ಭಯವೂ ಆಗಲಿಲ್ಲವೇ? ಕನಿಷ್ಠ ಪಕ್ಷ ಕ್ಷತ್ರಿಯಾನಿ ಆದ ದ್ರೌಪದಿಯ ಕೈಗೆ ಆಯುಧವೇನಾದರೂ ಸಿಗುತ್ತಿದ್ದರೆ ನಿನ್ನ ಕತ್ತಿನಲ್ಲಿ ತಲೆಯುಳಿಯುತ್ತಿತ್ತೇ? ಅದೇನೆ ಇರಲಿ ಎಳೆದು ಕೊಂಡು ಹೋಗುವಾಗಲೂ ಮುಂದೇನಾದೀತು ಎಂಬ ಯೋಚನೆಯೂ ಬರಲಿಲ್ಲವೆ? ನೀನು ಮಾಡಿರುವ ಅಪರಾಧಕ್ಕೆ ಶಿಕ್ಷೆಯಾಗಿ ನೀನು ವಧಾರ್ಹನೇ ಆಗಿರುವೆ. ಆದರೆ ನಮಗೆ ನೂರ ಐದು ಸೋದರರಿಗೆ ಇರುವುದು ಓರ್ವಳೆ ತಂಗಿ ದುಶ್ಯಲೆ. ನಿನ್ನನ್ನು ಕೊಂದರೆ ಆಕೆ ವಿಧವೆಯಾಗುತ್ತಾಳೆ. ಕೇವಲ ಅವಳ ಕಾರಣದಿಂದ ನಿನ್ನ ಜೀವವೊಂದು ಉಳಿಸಬೇಕಾದ ಅನಿವಾರ್ಯತೆ ಬಂದೊದಗಿದೆ. ಮಾಡಿದ ಪಾಪ ಪಾಪಿಯನ್ನು ನಾಶ ಮಾಡುತ್ತದೆ. ತಮ್ಮಂದಿರೇ! ಅಪರಾಧಿಯನ್ನು ಶಿಕ್ಷಿಸದೆ ಬಿಟ್ಟರೆ ಲೋಕಾಪವಾದ ಬರುತ್ತದೆ. ಈ ಪಾಪಿಯ ಮಾನವಧೆಗೈದು ಬಿಡಬೇಕು.” ಎಂದು ವಿಶ್ಲೇಷಿಸಿ ಆಜ್ಞೆ ಮಾಡಿದನು. ಅದರಂತೆಯೆ ನಾಲ್ವರು ಸಹೋದರರು ಸೇರಿ ಆತನ ಕೇಶ, ಮೀಸೆ ಬೋಳಿಸಿ ಮತ್ತೊಂದಾವರ್ತಿ ಮನಬಂದಂತೆ ಬಾರಿಸಿ “ಧರ್ಮರಾಯನಿತ್ತ ಭಿಕ್ಷೆ ನಿನಗೆ. ಹೋಗಿ ಧರ್ಮಾತ್ಮನ ಹೆಸರು ಹೇಳಿ ಕೊಂಡು ಬದುಕಿಕೋ” ಎಂದು ಒದ್ದು ಓಡಿಸಿದರು.
ತೇಜೋವಧೆಗೆ ಒಳಗಾದ ಜಯದ್ರಥ ಅಪಮಾನವನ್ನು ಸಹಿಸಲಾಗದೆ ಅತೀವ ವೇದನೆಗೆ ಒಳಗಾದನು. ಮಾನ ಕಳೆದುಕೊಂಡ ಆತನಿಗೆ ಈಗ ಪ್ರತೀಕಾರ ಭಾವ ಮನಮಾಡಿತು. ಹೇಗಾದರೂ ಮಾಡಿ ಈ ಪಾಂಡವರ ಮೇಲೆ ಹಗೆ ತೀರಿಸಬೇಕು ಎಂದು ನಿರ್ಧಾರ ಮಾಡಿದನು. ರಾಜ್ಯ ಅಧಿಕಾರದ ವ್ಯಾಮೋಹ ಮರೆತು ಹೋಯಿತು. ನೇರವಾಗಿ ಘೋರ ಕಾನನ ಸೇರಿ ತಾಮಸೋಪೇತವಾದ ಮಹೋಗ್ರ ವಿಧಾನದಿಂದ ಮಹಾರುದ್ರನ ತಪಸ್ಸನ್ನಾಚರಿಸಲು ತೊಡಗಿದನು. ಅಸುರಿ ಪ್ರವೃತ್ತಿಯ ತಪಸ್ಸಿಗೆ ಭಗವಂತನೂ ಶೀಘ್ರ ಒಲಿದು ಬರುತ್ತಾನೆ. ಭಕ್ತನ ಸಾಮರ್ಥ್ಯ ಪರೀಕ್ಷಿಸಲು ಹೋಗುವ ಅಗತ್ಯವಿರುವುದಿಲ್ಲ. ಅಂತೆಯೆ ಮೈದೋರಿದ ಮಹಾದೇವ “ನಿನ್ನ ಇಷ್ಟಾರ್ಥವೇನು” ಎಂದು ಕೇಳಿದಾಗ, ಮಹಾದೇವನ ಪಾದಪದ್ಮಗಳಿಗೆ ನಮಿಸಿ “ದೇವಾ ಪಾಂಡವರನ್ನು ನಿರ್ನಾಮ ಮಾಡುವ ಶಕ್ತಿಯನ್ನು ನನಗಿತ್ತು ಅನುಗ್ರಹಿಸು” ಎಂದು ಜಯದ್ರಥ ಬೇಡುತ್ತಾನೆ. ಆಗ ಪರಶಿವ “ವತ್ಸಾ! ನಾನೀಗಾಗಲೆ ನನ್ನ ದಿವ್ಯ ಶಕ್ತ್ಯಾಯುಧವಾದ ಪಾಶುಪತವನ್ನು ಅರ್ಜುನನಿಗೆ ಅನುಗ್ರಹಿಸಿದ್ದೇನೆ. ಗಿರಿಜೆ ಅಂಜಲಿಕಾಸ್ತ್ರವನ್ನೂ, ಗಣೇಶ, ಷಣ್ಮುಗರು ತಮ್ಮ ತಮ್ಮ ದಿವ್ಯಾಯುಧಗಳನ್ನಿತ್ತು ಅನುಗ್ರಹಿಸಿದ್ದಾರೆ. ಹೀಗಿರಲು ಅರ್ಜುನ ಅಜೇಯನೆ ಆಗಿರುತ್ತಾನೆ. ಮೇಲಾಗಿ ವಾಸುದೇವ ಕೃಷ್ಣನ ರಕ್ಷಾಕವಚದಲ್ಲಿ ಸಂರಕ್ಷಿತರಾಗಿದ್ದಾರೆ ಪಾಂಡವರು. ನಿನ್ನ ಈ ಆಸೆ ಈಡೇರದು. ಅಸುರಿ ಪ್ರವೃತ್ತಿಯಿಂದ ನನ್ನನ್ನು ಸಾಕ್ಷಾತ್ಕರಿಸಿದ ನಿನ್ನ ಬಯಕೆಯೂ ನಿನ್ನ ಬುದ್ದಿಗನುಗುಣವಾಗಿಯೆ ಇದೆ. ನಿನ್ನ ತಪಸ್ಸು ವ್ಯರ್ಥವಾಗದು. ಅರ್ಜುನನಿಲ್ಲದ ಕೇವಲ ಒಂದು ದಿನದ ಮಟ್ಟಿಗೆ ನೀನು ಉಳಿದ ಪಾಂಡವರನ್ನು ಗೆಲ್ಲಬಲ್ಲೆ. ಇಷ್ಟನ್ನು ಮಾತ್ರ ಅನುಗ್ರಹಿಸಬಲ್ಲೆ” ಎಂದು ಹರಸಿ ಹರಮಹಾದೇವ ಅಂತರ್ಧಾನಗೊಂಡನು.
ಅಷ್ಟಾದರೆ ಅಷ್ಟು ಒಂದು ದಿನದ ಮಟ್ಟಿಗೆ ನನ್ನ ದ್ವೇಷ ಸಾಧಿಸಿಬಿಡುವೆ ಎಂದು ಸಂತಸಪಟ್ಟು ಈ ವಿಚಾರ ತಿಳಿಸಲು ಹಸ್ತಿನಾವತಿಗೆ ಹೊರಟನು.
ಮುಂದುವರಿಯುವುದು…
















































