24.5 C
Udupi
Wednesday, February 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 230

ಭರತೇಶ್ ಶೆಟ್ಟಿ, ಎಕ್ಕಾರ್

ದೂರ್ವಾಸರನ್ನು ಕಳುಹಿಸಿದ ಕೌರವಾದಿಗಳ ನಿರೀಕ್ಷೆ ಪಾಂಡವರು ಶಾಪಗ್ರಸ್ಥರಾಗುತ್ತಾರೆ ಎಂದಾಗಿತ್ತು. ವೈರಿಗಳಾದ ಪಾಂಡವರಿಗೆ ಏನಾದರೂ ಕಷ್ಟ ಅನುಭವಿಸುವಂತಹ ಕೇಡಾಗುತ್ತದೆ. ಆದರೆ ಬಂದಂತಹ ವರ್ತಮಾನ ಬರಸಿಡಿಲಿನಂತೆ ಆಘಾತವನ್ನು ಹೊತ್ತು ತಂದಿದೆ. ಏನು ಮಾಡಿದರೂ ಪಾಂಡವರದ್ದು ಮೇಲುಗೈ ಆಗುತ್ತಲೆ ಇದೆ. ಕೌರವರಿಗೆ ವ್ಯಥೆಯಾದರೆ, ಈ ಸುದ್ದಿ ತಿಳಿದ ಭೀಷ್ಮ, ದ್ರೋಣ ವಿದುರಾದಿಗಳು ದೇವರಿಗೆ ಕೃತಜ್ಞತೆ ಅರ್ಪಿಸಿದರು.

ಪಾಂಡವರನ್ನು ಏನಾದರು ಮಾಡಿ ಸಂಕಷ್ಟಕ್ಕೀಡು ಮಾಡಬೇಕೆಂಬ ದುರ್ಯೋಧನನ ಆಸೆ ಕೈಗೂಡುತ್ತಿಲ್ಲ. ಶಕುನಿ ಹಾಗು ಕರ್ಣನ ಯೋಜನೆಯಂತೆ ತಮ್ಮ ಸಕಲೈಶ್ವರ್ಯ, ಸಂಭ್ರಮ, ಸುಖದ ಪ್ರದರ್ಶನ ಪಾಂಡವರೆದುರು ಮಾಡಬೇಕು. ಹಸ್ತಿನೆಯ ರಾಣಿಯರು, ಸ್ತ್ರೀಯರು ವಸನ, ಭೂಷಣ, ಆಭರಣ ಧರಿಸಿ ದ್ರೌಪದಿಯ ಎದುರು ಬರಬೇಕು. ಇದನ್ನೆಲ್ಲ ಕಂಡು ತಮ್ಮ ದಾರಿದ್ರ್ಯದ ಬದುಕಿಗಾಗಿ ಪಾಂಡವರು ಮತ್ತು ದ್ರೌಪದಿ ಕೊರಗಿ ಕಣ್ಣೀರ್ಗರೆಯಬೇಕೆಂಬ ಯೋಜನೆ ಸಿದ್ಧವಾಯಿತು.

ಅಂತೆಯೆ ಸಿದ್ಧತೆಯಾಗಿ, ಯೋಜನೆಯಂತೆ ಗೊಲ್ಲರ ಹಳ್ಳಿಯಿಂದ ಗೊಲ್ಲರ ಪ್ರಮುಖರು ಬಂದು ಕೃತಕವಾಗಿ ದುರ್ಯೋಧನನನ್ನು ಕಂಡು ಸಹಾಯ ಯಾಚಿಸಿದರು. ಹೇರಳವಾಗಿ ವರ್ಧಿಸಿರುವ ಗೋ ಸಂಪತ್ತಿನ ಪಾಲನೆ ಪೋಷಣೆ ಕಷ್ಟವಾಗಿದೆ. ಅರಮನೆಯಿಂದ ರಾಜ ಪರಿವಾರದವರು ಬಂದು ನೋಡಿ ಸೂಕ್ತ ವ್ಯವಸ್ಥೆ ಮಾಡಿಸಬೇಕೆಂಬ ಬೇಡಿಕೆ ಮುಂದಿಡುವಂತೆ ನಟನೆ ಮಾಡಿದರು. ಭೀಷ್ಮಾಚಾರ್ಯರು ಎಲ್ಲವನ್ನು ಸುಸ್ಥಿತಿಯಲ್ಲಿ ವ್ಯವಸ್ಥಿತವಾಗಿ ನಿಭಾಯಿಸುತ್ತಿದ್ದರಾದರೂ ಕಪಟದ ಈ ಬೇಡಿಕೆಗೆ ತಾನೇ ಹೋಗುತ್ತೇನೆಂದು ಧೃತರಾಷ್ಟ್ರನಲ್ಲಿ ದುರ್ಯೋಧನ ಅನುಮತಿ ಪಡೆದುಕೊಂಡನು.

ಕರ್ಣನ ಅಪೇಕ್ಷೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಯಿತು. ನಮ್ಮ ಜೊತೆ ಭದ್ರತೆಯ ಕಾರಣದಿಂದ ಬಲಿಷ್ಟ ಸೇನೆಯೂ, ಬಹುವಿಧ ಆಯುಧ ಭಂಡಾರವೂ ಇರಲಿ. ನಮ್ಮ ವೈಭವ ನೋಡಿ ಅಸಹನೆಯಿಂದ ತಾಳ್ಮೆ ಕಳಕೊಂಡು ಪಾಂಡವರು ಆಕ್ರಮಣ ಮಾಡಿದರೆ, ಅಲ್ಲೇ ಮುಗಿಸಿ ಬಿಡೋಣ. ತಟಸ್ಥರಾಗಿ ಉಳಿದರೆ ಕೆರಳುವಂತೆ ನಾವು ವ್ಯಂಗ್ಯ ಟೀಕೆಗಳಿಂದ ಪ್ರೇರೇಪಿಸೋಣ ಎಂಬ ಮಾತು ಶಕುನಿಯಿಂದಲೂ ಬಂತು. ಸರಿ ಎಂದು ಅದ್ದೂರಿಯ ವಾದ್ಯ ವಾದನ, ನೃತ್ಯ ಗಾಯನ, ವೇಷ ವಿನೋದಾವಳಿಗಳಿಂದ ತುಂಬಿದ ಘೋಷ ಯಾತ್ರೆ ಹೊರಟಿತು. ರಾಜ ಪರಿವಾರದ ಸ್ತ್ರೀಯರು, ದುರ್ಯೋಧನನ ಪತ್ನಿ ಭಾನುಮತಿ ಹೀಗೆ ಎಲ್ಲರೂ ಸರ್ವಾಂಗಗಳನ್ನೂ ಅಲಂಕರಿಸಿ ಸಖಿ ವೃಂದದ ಜೊತೆ ಹೊರಟರು. ಹಿಂದಿನಿಂದ ಸೈನ್ಯವೂ ಶಸ್ತ್ರ ಸನ್ನದ್ಧವಾಗಿ ಹಿಂಬಾಲಿಸುತ್ತಿದೆ.

ಭೀಷ್ಮಾಚಾರ್ಯರು ವಾಸ್ತವ ಸತ್ಯ ತಿಳಿದು ವಿದುರನೂ ಬುದ್ಧಿ ಮಾತು ಹೇಳಲು ಮುಂದಾದರು. “ನೀವೆಲ್ಲರು ಸೇರಿ ದ್ವೈತ ವನದತ್ತ ಈ ರೀತಿಯ ವೈಭವದಿಂದ ಹೋಗುವುದು ಸರಿಯಲ್ಲ. ನಮ್ಮವರಾದ ಪಾಂಡವರ ಜೊತೆ ವೈರ ಬೆಳೆಸಬೇಡಿ. ಆಗಿರುವುದು ಆಗಿ ಹೋಗಿದೆ, ಧರ್ಮರಾಯನನ್ನು ಪ್ರೀತಿ ಗೌರವದಿಂದ ಕಂಡು ಮಾತನಾಡಿಸಿ, ಆಗ ಆತನೂ ನಿಮ್ಮನ್ನು ಸತ್ಕರಿಸುತ್ತಾನೆ. ಈ ಆಡಂಬರ ಇನ್ನಷ್ಟು ವೈರಕ್ಕೂ, ಭವಿಷ್ಯದಲ್ಲಿ ಆಪತ್ತಿಗೂ ಕಾರಣವಾದೀತು” ಎಂದು ಎಚ್ಚರಿಸಿ ತಿಳಿ ಹೇಳಿದರು. “ಇಲ್ಲಾ ಅಜ್ಜಾ, ನಾವು ಗೊಲ್ಲರ ಸಮಸ್ಯೆ ಪರಿಹರಿಸಿ ತುಸು ಬೇಟೆ ವನವಿಹಾರ ಪೂರೈಸಿ ಬರುತ್ತೇವೆ. ನೀವು ಚಿಂತೆ ಮಾಡಬೇಡಿ” ಎಂದು ಸಂತೈಸಿ ದುರ್ಯೋಧನ ಸಿದ್ಧತೆಗಳೊಂದಿಗೆ ಹೊರಟನು.

ಹಾಗೆ ಹೊರಟ ಘೋಷ ಯಾತ್ರೆ ವೈಭವದಿಂದ ಗೊಲ್ಲರ ಕೇರಿಗೆ ಬಂತು. ಗೊಲ್ಲರ ಸಮಸ್ಯೆಗಳಿಗೆ ಪರಿಹಾರದ ಭರವಸೆ ಕೊಟ್ಟು, ಕೆಲವೊಂದು ವ್ಯವಸ್ಥೆಗಳನ್ನು ಮಾಡಿಸಿದನು ದುರ್ಯೋಧನ. ಮುಂದುವರಿದು ದ್ವೈತವನದತ್ತ ಸಾಗುತ್ತಾ ಪಾಂಡವರಿಗೆ ಕಿರುಕುಳ ನೀಡುವ ಉತ್ಸಾಹದಿಂದ ಶಕುನಿ, ದುಶ್ಯಾಸನ, ಕರ್ಣರ ಜೊತೆಯಾಗಿ ದುರ್ಯೋಧನ ಸಾಗುತ್ತಿದ್ದಾನೆ. ವನಸಿರಿಯ ನಿಸರ್ಗದ ಚೆಲುವನ್ನು ಆಸ್ವಾದಿಸುತ್ತಾ ಬರುವಾಗ ದ್ವೈತ ಸರೋವರ ಕಾಣ ಸಿಕ್ಕಿತು. ರಾಜ ಪರಿವಾರದ ಜೊತೆ ಭಾನುಮತಿ ಸಹಿತ ಯುವರಾಣಿಯರು, ಸ್ತ್ರೀಯರು ಜಲಕ್ರೀಡೆಯ ಆಸೆ ವ್ಯಕ್ತ ಪಡಿಸಿದರು. ದುರ್ಯೋಧನ ಸರಿ ಹಾಗೆಯೇ ಆಗಲಿ ಎಂದು ಒಪ್ಪಿಗೆ ನೀಡಿದನು.

ಸರೋವರದ ಸುತ್ತ ಬೆಳೆದಿರುವ ತರುಲತೆ, ಗಿಡಗಂಟಿಗಳನ್ನು ಕಡಿದು ಶುಚಿಗೊಳಿಸಲು ತನ್ನ ಪರಿಚಾರಕರಿಗೆ ದುರ್ಯೋಧನ ಆಜ್ಞೆ ಮಾಡಿದನು. ಅನುವರ್ತಿಗಳಾಗಿ ಅವರು ಮುಂದಾದರೆ ಸರೋವರದ ರಕ್ಷಕರಾದ ಗಂಧರ್ವರು ಅಡ್ಡಿಪಡಿಸಿದರು. ಅವರ ಪ್ರತಿರೋಧ ಘರ್ಷಣೆಯಾಗಿ ನಂತರ ಹೊಡೆದಾಟವೆ ಆರಂಭವಾಯಿತು. ದುರ್ಯೋಧನ ತನ್ನ ಸೇನೆಗೆ ಆ ಕಾವಲು ಭಟರನ್ನು ಹೊಡೆದೋಡಿಸಲು ಅಪ್ಪಣೆ ನೀಡುವಷ್ಟರಲ್ಲಿ ಅತ್ತ ಕಡೆಯಿಂದ ಗಂಧರ್ವ ಸೇನೆಯೂ ಬಂದು ಯುದ್ದವೆ ಆರಂಭವಾಯಿತು. ದುರ್ಯೋಧನ, ದುಶ್ಯಾಸನಾದಿ ಕೌರವ ಸೋದರರು, ಕರ್ಣಾದಿಗಳೂ ಸೇರಿ ಘೋರ ಸಂಗ್ರಾಮ ನಡೆಯಲಾರಂಭವಾಯಿತು. ಕರ್ಣ ಮುಂಚೂಣಿಯಲ್ಲಿ ನಿಂತು ಕಲಿತನದಿಂದ ಗಂಧರ್ವರನ್ನು ಹಿಮ್ಮೆಟ್ಟಿಸತೊಡಗಿದನು.

ಈ ವಿಚಾರ ದೇವೇಂದ್ರನ ಗಮನಕ್ಕೆ ಬಂದು ಸುರ ಗಂಧರ್ವನಾದ ಚಿತ್ರಸೇನನನ್ನು ಕಳುಹಿಸಿ ಕೌರವರನ್ನು ಬಂಧಿಸಿ ಸೆರೆ ಹಿಡಿಯಲು ಆಜ್ಞೆ ಮಾಡಿದನು.

ಪರಾಜಿತರಾಗತೊಡಗಿದ್ದ ಗಂಧರ್ವ ಸೇನೆಯನ್ನು ಸೇರಿಕೊಂಡ ಚಿತ್ರಸೇನ ಎದುರಾಳಿಯಾದ ಕರ್ಣನೊಡನೆ ಯುದ್ದ ಮಾಡತೊಡಗಿದ. ಕರ್ಣನೂ ಸಾಹಸ ತೋರತೊಡಗಿದನು. ಸ್ವಲ್ಪ ಹೊತ್ತಿನ ಯುದ್ದ ಸಾಗಿದಾಗ ಗಂಧರ್ವರೆಲ್ಲರಿಗೂ ಅದೃಶ್ಯರಾಗಲು ಚಿತ್ರಸೇನ ಸೂಚನೆ ನೀಡಿದನು. ಕೌರವರಿಗೆ ವಿಜಯೋತ್ಸವ – ಗಂಧರ್ವರು ಸೋತು ಹೋದರೆಂದು ಕುಣಿದು ಕುಪ್ಪಳಿಸಿದರು. ಆದರೆ ಅರೆಕ್ಷಣದಲ್ಲಿ ಚಾಕ್ಷುಷಿ ವಿದ್ಯೆಯ ಪ್ರದರ್ಶನ ಆರಂಭಿಸಿದ ಗಂಧರ್ವರು ಶರವರ್ಷಗೈಯಲಾರಂಭಿಸಿದರು. ಕರ್ಣಾದಿಗಳೂ ಸೇರಿ ಶಕುನಿ, ಕೌರವ ಸಹೋದರರು, ಕೌರವ ಸೇನೆ ಹೀಗೆ ಯಾರಿಗೂ ಎಲ್ಲಿಂದ ಬಾಣಗಳು ಬಂದು ಚುಚ್ಚುತ್ತಿವೆ ಎಂದೇ ಕಾಣದಾಯಿತು. ಸುರಿಮಳೆಯಂತೆ ಬರುತ್ತಿರುವ ಬಾಣಗಳನ್ನು ಕತ್ತರಿಸುವಲ್ಲಿ ಕರ್ಣನೂ ಹೋರಾಡಿ ಕೈಸೋತು ಮಾರಣಾಂತಿಕವಾಗಿ ಗಾಯಾಳಾದನು. ಇನ್ನು ನಿಂತರೆ ಸಾವೆ ಗತಿ ಎಂದು ರಥದಿಂದ ಹಾರಿ ಕಂಡತ್ತ ಓಡಿ ಕಾಡು ಸೇರಿಕೊಂಡು ಬದುಕುಳಿದನು. ಸೈನ್ಯವೂ ಹತವಾಗತೊಡಗಿತು. ಜರ್ಜರಿತರಾದ ದುರ್ಯೋಧನ, ದುಶ್ಯಾಸನಾದಿಗಳು ಗಂಧರ್ವರ ಮಾಯಾ ಯುದ್ದದೆದುರು ಸೋತು ಹೋದರು. ಪ್ರಕಟರಾದ ಚಿತ್ರಸೇನ ಮತ್ತುಳಿದ ಗಂಧರ್ವರು ಇವರೆಲ್ಲರನ್ನು ಸೆರೆ ಹಿಡಿದು ಹೆಡೆಮುರಿ ಕಟ್ಟಿ ಎಳೆದೊಯ್ಯತೊಡಗಿದರು. ಏನೋ ಮಾಡಲು ಬಂದು ಪ್ರಜ್ಞೆ ತಪ್ಪುವ ರೀತಿ ಹೊಡೆಸಿಕೊಂಡು ಗಾಯಾಳಾಗಿ, ಬಂಧಿಯಾಗಿ ಹೋಗುತ್ತಿರುವ ದುರ್ಯೋಧನನಿಗೆ ಇನ್ನಿಲ್ಲದ ಅಪಮಾನವಾಗ ತೊಡಗಿತು. ಭಾನುಮತಿ ಸಹಿತ ಯುವರಾಣಿಯರು ತಮ್ಮ ಪತಿಯ ರಕ್ಷಣೆಗಾಗಿ ಬೊಬ್ಬಿರಿದು ಕೂಗಿ ಕರೆಯುತ್ತಿದ್ದಾರೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page