ಭಾಗ 20
ಭರತೇಶ್ ಶೆಟ್ಟಿ,ಎಕ್ಕಾರ್
ಹೀಗೆ ಕಾಲ ಚಕ್ರ ತಿರುಗುತ್ತಿರಲು… ಭೂಲೋಕದಲ್ಲಿ ‘ಅಣಿ ಮಾಂಡವ್ಯ’ ರೆಂಬ ಮುನಿಯೊಬ್ಬರು ಮೌನಿಯಾಗಿ ತಪೋ ನಿರತನಾಗಿದ್ದರು. ಒಂದು ದಿನ
ಅರಸನ ಅರಮನೆ ದರೋಡೆ ಮಾಡಿದ ಕಳ್ಳರು ಕಳವು ಮಾಡಿದ ಸ್ವತ್ತುಗಳೊಂದಿಗೆ ಅಣಿ ಮಾಂಡವ್ಯ ಮುನಿಯ ಆಶ್ರಮದಲ್ಲಿ ಅವಿತು ಕುಳಿತರು. ರಾಜಾಜ್ಞೆಯಂತೆ ಶೋಧ ಕಾರ್ಯದಲ್ಲಿ ತೊಡಗಿದ ರಾಜ ಭಟರು ಎಲ್ಲಾ ಕಡೆ ಹುಡುಕಾಡುತ್ತಾ ಈ ಆಶ್ರಮಕ್ಕೂ ಬಂದರು. ಮುನಿಯನ್ನು ಕಂಡು ನಮಿಸಿ ಇತ್ತ ಯಾರಾದರೂ ದರೋಡೆಕೋರರು ಬಂದಿದ್ದಾರೆಯೇ? ಎಂದು ಕೇಳಿದರು. ಮುನಿ ಮೌನಿಯಲ್ಲವೇ? ಮಾತಾಡಲಿಲ್ಲ… ಮತ್ತೆ ಮತ್ತೆ ಕೇಳಿದರೂ ನಿರುತ್ತರವೇ ಉತ್ತರವಾಗಿತ್ತು. ಆಶ್ರಮ ಹೊಕ್ಕ ಭಟರು ಕಳ್ಳರನ್ನು ರಾಜನರಮನೆಯ ಅಮೂಲ್ಯ ಆಭರಣಗಳ ಸಮೇತ ಹಿಡಿದು ಬಂಧಿಸುವಾಗ, ಈ ಋಷಿಯೂ ಕಳ್ಳರ ಬಳಗವೇ ಇರಬೇಕೆಂದು ಭಾವಿಸಿ ಅಣಿ ಮಾಂಡವ್ಯರನ್ನೂ ಬಂಧಿಸಿ ತಂದರು. ರಾಜ ವಿಚಾರಣೆ ಮಾಡಿ ಕಳ್ಳರನ್ನು ಶೂಲಕ್ಕೇರಿಸಿ ಮೃತ್ಯುದಂಡ ಶಿಕ್ಷೆ ವಿಧಿಸಿದ. ಇದನ್ನೆಲ್ಲಾ ನೋಡುತ್ತಿದ್ದ ಈ ಮೌನಿ ಮುನಿಯನ್ನು ವಿಚಾರಿಸಿದ. ಆಗಲೂ ಮರಣಶಿಕ್ಷೆಯಾಗುವುದೆಂದು ಗೊತ್ತಿದ್ದರೂ ಮೌನವೇ ಉತ್ತರವಾಗಿತ್ತು. ಅಣಿ ಮಾಂಡವ್ಯ ಮುನಿಯನ್ನೂ ಶೂಲಕ್ಕೇರಿಸುವ ಆಜ್ಞೆಯಾಯಿತು, ಆಗಲೂ ಮಾತನಾಡಲಿಲ್ಲ, ಅಳಲಿಲ್ಲ. ಶೂಲಕ್ಕೇರಿಸಲ್ಪಟ್ಟ ಕಳ್ಳರು ಕೊಲ್ಲಲ್ಪಟ್ಟರು. ಇಡೀ ದಿನ ಮುನಿ ಶೂಲದಿಂದ ಚುಚ್ಚಿ ನೇತಾಡುತ್ತಿದ್ದರೂ ಅಣಿಮಾಂಡವ್ಯ ಮುನಿ ಜೀವಂತವಾಗಿಯೇ ಇದ್ದರು. ಈ ವಿಷಯ ತಿಳಿದ ರಾಜನಿಗೆ ಮುನಿ ಮಹಿಮಾನ್ವಿತರಿದ್ದಾರೆ ಎಂದು ತಿಳಿಯಿತು. ಅಪಚಾರವಾಯಿತೆಂದು ಹೆದರಿ, ಓಡೋಡಿ ಬಂದು ಮುನಿಯನ್ನು ಶೂಲದಿಂದ ಇಳಿಸಿ, ತನ್ನ ಅಪರಾಧ ಮನ್ನಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡನು. ಆಗಲೂ ಮೌನಿ ಮುನಿ ತುಟಿ ಪಿಟಿಕ್ಕೆನ್ನಲಿಲ್ಲ. ಬದಲಿಗೆ ಆ ಶೂಲವನ್ನು ಮುರಿದು ಕೈಯಲ್ಲಿ ಹಿಡಿದುಕೊಂಡು ಎತ್ತಲೋ ಹೊರಟು ಹೋದರು. ಈ ಘಟನೆಯ ಬಳಿಕ ರಾಜ ವ್ಯಥೆಗೊಳಗಾಗಿ ಪ್ರಾಯಶ್ಚಿತ್ತ ಕರ್ಮಗಳನ್ನು ಮಾಡಿಸಿದನಾದರೂ ಮನದಲ್ಲಿ ಭಯವಿತ್ತು. ಆದರೆ ರಾಜನಿಗಾಗಲೀ, ರಾಜ್ಯಕ್ಕಾಗಲಿ ಯಾವುದೇ ಹಾನಿ ಆಗದಿರುವುದನ್ನು ನೋಡಿ ಮುನಿ ಕ್ಷಮಿಸಿರಬೇಕೆಂದು ಎಲ್ಲರೂ ಭಾವಿಸಿ ನಿರಾಳರಾಗಿದ್ದರು.
ಕಾಲಾಂತರದಲ್ಲಿ ಅಣಿಮಾಂಡವ್ಯರು ಆಯಸ್ಸು ಮುಗಿದ ಕಾಲ ಇಹಲೋಕದ ಯಾತ್ರೆ ಮುಗಿಸಿದ್ದರು. ಯಮದೂತರು ಶೈಮಿನಿಗೆ ಒಯ್ದು ಯಮನೆದುರು ನಿಲ್ಲಿಸಿದರು. ಯಮರಾಜ ಕರ್ಮಾಕರ್ಮಗಳನ್ನು ಗಣಿಸಿ ಮುನಿಗೆ ನರಕವಾಸ ವಿಧಿಸಿದನು. ಆಗ ಮುನಿ ಮೌನ ಮುರಿದು “ತನಗಾದ ಶಿಕ್ಷೆಗೆ ಕಾರಣ ಹೇಳಿ ನನ್ನ ಮನದ ಸಂಶಯ ಪರಿಹರಿಸು. ಯಾಕೆಂದರೆ ನಾನು ಯಾರಿಗೂ ಅನ್ಯಾಯ ಮಾಡಲಿಲ್ಲ. ಕನಿಷ್ಟ ಮಾತನ್ನಾಡಿದರೂ ಅಪಚಾರವಾಗಿ ಪಾಪ ಬರುವುದೆಂದು ಅರಿತು ಮೌನಿಯಾಗಿಯೇ ಇದ್ದು ತಪೋ ಮುಖನಾಗಿದ್ದೆ. ನನ್ನಿಂದ ಏನು ಅಧರ್ಮವಾಗಿದೆ? ಹೇಳು.” ಎಂದು ಕೇಳಿದರು. ಆಗ ಯಮರಾಜ “ಅಯ್ಯಾ ಮಹಾತ್ಮ, ಯಾರಿಗೇ ಆಗಲಿ ಅವರಿಂದಾದ ಅಪರಾಧದ ಅರಿವು ಇರುವುದಿಲ್ಲ. ಇತರರ ತಪ್ಪು ಸ್ಪಷ್ಟ ಗೋಚರವಾಗುವುದು ಸ್ವಾಭಾವಿಕ. ನೀನು ಚಿಕ್ಕವನಿದ್ದಾಗ ನೊಣಗಳನ್ನು ಹಿಡಿದು ಕೊಲ್ಲುತ್ತಿದ್ದೆ. ಧಾರಾಳವಾಗಿ ಪ್ರಾಣಿ ಹಿಂಸೆ ಮಾಡಿದ್ದೆ. ಆದ ಕಾರಣ ಕೇವಲ ಸ್ವಲ್ಪ ಕಾಲದ ನರಕವಾಸ ನಿನ್ನ ಪಾಲಿಗಿದೆ. ಬಳಿಕ ಪುಣ್ಯ ಫಲ ಸ್ವರೂಪವಾಗಿ ದಿವ್ಯ ಲೋಕ ಪ್ರಾಪ್ತವಾಗಲಿದೆ.” ಎಂದನು.
ಆಗ ತರ್ಕಿಸಿದ ಮುನಿ, ” ಧರ್ಮರಾಜನೇ, ನಿನ್ನ ವಿಚಾರ ಸಾಕಾಗಲಿಲ್ಲ. ನಾನೂ ಧರ್ಮಶಾಸ್ತ್ರ ತಿಳಿದಿರುವೆ. ಮಕ್ಕಳು ಅರಿಯದೆ ಮಾಡುವ ಪಾಪಕೃತ್ಯಕ್ಕೆ ಹೆತ್ತವರು ಹೊಣೆಯಾಗುತ್ತಾರೆ. ಯಾಕೆಂದರೆ ಹಾಗೆ ಮಾಡಗೊಡದೆ ತಿಳಿ ಹೇಳುವ ಜವಾಬ್ದಾರಿ ಹಿರಿಯರು, ಪೋಷಕರೂ ಆಗಿರುವ ಅವರ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ನೀನು ಹೇಳಿದ ಕೃತ್ಯ ನಾನು ಮಾಡಿದ್ದೇ ಹೌದಾದರೂ, ಅದರ ಪಾಪ ಹಾಗು ಶಿಕ್ಷೆ ಅವರ ಪಾಲಿಗೆ ಸಲ್ಲುತ್ತದೆ. ಹಾಗೆಂದು ನಾನೇನೂ ನರಕವಾಸಕ್ಕೆ ಹೆದರುವವನಲ್ಲ. ನಾನು ಹೆದರುವುದಿದ್ದರೆ ಧರ್ಮದ ಅಪಚಾರಕ್ಕೆ ಮಾತ್ರ. ಹಾಗೆಂದು ನಿರಪರಾಧಿಗೆ ಶಿಕ್ಷೆ ವಿಧಿಸುವುದು ಮಹಾಪರಾಧ. ಮಾತ್ರವಲ್ಲ, ಧರ್ಮಾಧಿಕಾರವನ್ನು ದುರುಪಯೋಗ ಪಡಿಸಿದಂತಾಗುತ್ತದೆ. ನಿರಪರಾಧಿಯಾದ ನನಗೆ ಶಿಕ್ಷೆ ವಿಧಿಸಿ ಧರ್ಮಾಧಿಕಾರವನ್ನು ಅತಿಕ್ರಮಿಸಿದ ನೀನೂ ಶಿಕ್ಷಾರ್ಹನಾಗಿದ್ದೀಯ. ಹಾಗಾಗಿ ನೀನು ಕರ್ಮ ಭೂಮಿಯಲ್ಲಿ ವರ್ಣಾಶ್ರಮದಲ್ಲಿ ಶೂದ್ರನಾಗಿ ಹುಟ್ಟಿ ಪಾಡು ಪಡಬೇಕು” ಎಂದು ಶಪಿಸಿದರು.
ಧರ್ಮೋಚಿತ ವಾಕ್ಯವನ್ನಾಡಿದ ಮುನಿಯ ನ್ಯಾಯವನ್ನು ಯಮರಾಜ ಮೆಚ್ಚಿದ. ಸಂತುಷ್ಟನಾಗಿ ಮುನಿಯನ್ನು ಉದ್ದೇಶಿಸಿ ಹೇಳಿದ ” ಮುನಿವರ್ಯ ನಾನು ಆಚಾರ ತಪ್ಪಿದ್ದು ಅರಿವಿಗೆ ಬಂತು. ಹಾಗಾಗಿ ಶಿಕ್ಷಾರ್ಹನಾದ ನನಗೆ ನಿಮ್ಮ ಶಾಪ ವಾಕ್ಯ ಸರ್ವತಾ ಸ್ವೀಕಾರ” ಎಂದನು.
ಯಮರಾಜನ ಮಾತು ಕೇಳಿ ಸಂಪ್ರೀತನಾದ ಅಣಿಮಾಂಡವ್ಯರು “ನೀನು ವರ್ಣದಲ್ಲಿ ಶೂದ್ರನಾಗಿ ಹುಟ್ಟಿದರೂ, ದೈವ ಭಕ್ತಿಯೂ ಧರ್ಮ ಬುದ್ಧಿಯೂ ನಿರಂತರ ನಿನ್ನದ್ದಾಗಿರಲಿ. ಮಕ್ಕಳ ಅಪರಾಧವನ್ನೂ, ಹಿರಿಯರ ಅನಾಧಾರವನ್ನೂ ಒಂದಷ್ಟು ನೋಡಿ, ಸೈರಿಸಿ ಮುಂದೆ ನಿನ್ನದ್ದೇ ಆದ ಶಕ್ತಿಯಲ್ಲೇ ಐಕ್ಯಗೊಂಡು ಶಾಪ ವಿಮುಖನಾಗು” ಎಂದು ಅನುಗ್ರಹಿಸಿದರು. ಧರ್ಮ ವಿವೇಚನೆಯಲ್ಲಿ ಇಷ್ಟು ಕಾಲ ಕಳೆಯುತ್ತಿರುವಾಗ, ಮುನಿಗಿದ್ದ ಯಮಪುರಿಯ ನರಕ ವಾಸದ ಅವಧಿ ಮುಗಿಯಿತು. ಅವರ ಸಂಚಿತ ಪುಣ್ಯ ಫಲದಿಂದ ದಿವ್ಯ ದೇಹ ಪ್ರಾಪ್ತವಾಗಿ ಬ್ರಹ್ಮ ಲೋಕ ಸೇರಿದರು. ಯಮ ಧರ್ಮನು ಕಾಲಗರ್ಭದಲ್ಲಿ ಏನೋ ಮಹತ್ತರವಾದದ್ದು ನಡೆಯಲಿದೆ, ಕಾದು ನೋಡೋಣ ಎಂದು ತನ್ನ ಕಾರ್ಯದಲ್ಲಿ ಪ್ರವೃತ್ತನಾದನು.
ಮುಂದುವರಿಯುವುದು….