31.9 C
Udupi
Tuesday, February 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 222

ಭರತೇಶ್ ಶೆಟ್ಟಿ ,ಎಕ್ಕಾರ್

ಬೇಟೆಗೆ ಹೊರಟ ಭೀಮಸೇನನ ಪತ್ತೆಯಿಲ್ಲ. ಸಮಯ ಪರಿಪಾಲಕನಾಗಿ ಹೋದ ಕಾರ್ಯ ಪೂರೈಸಿ ವಾಯುಗಮನ ವೇಗವುಳ್ಳ ಭೀಮ ಎಷ್ಟು ದೂರ ಸಾಗಿದ್ದರೂ ಕ್ಲಪ್ತ ಸಮಯಾವಧಿಯ ಒಳಗೆ ಬಂದು ಸೇರುತ್ತಿದ್ದವನುಮ ಇಷ್ಟು ಹೊತ್ತಿಗಾಗಲೆ ಮರಳಿ ಆಶ್ರಮದಲ್ಲಿ ಇರಬೇಕಿತ್ತು. ಹಾಗಿದ್ದರೆ ಈಗ ಏನೋ ತರ್ಕಕ್ಕೆ ನಿಲುಕದ ಆಪತ್ತು ಎದುರಾಗಿರಬಹುದು. ಇಲ್ಲದಿದ್ದರೆ ಭೀಮನನ್ನು ತಡೆದು ನಿಲ್ಲಿಸುವ ಸಾಮರ್ಥ್ಯ ಸಾಮಾನ್ಯವಾಗಿ ಯಾರಿಂದಲೂ ಸಾಧ್ಯವಾಗದ ವಿಚಾರ ಎಂದು ಮನಗಂಡನು ಯುಧಿಷ್ಠಿರ. ಸ್ವಯಂ ತಾನೆ ಎದ್ದು ಭೀಮನನ್ನು ಹುಡುಕುತ್ತಾ ಕಾಡಿನೊಳಗೆ ಹೊರಟನು. ಸಹೋದರ ಭೀಮನನ್ನು ಅರಸುತ್ತಾ ಸಾಗುತ್ತಿದ್ದಂತೆ ನರಳಾಟದ ಧ್ವನಿ ಕೇಳಿಸಿತು. ಆ ಆರ್ತ ಧ್ವನಿಯನ್ನು ಆಧರಿಸಿ, ಜಾಡು ಹಿಡಿದು ಅನುಸರಿಸಿ ಅತ್ತ ಸಾಗಿ ನೋಡಿದರೆ, ಭೀಮನನ್ನು ಹೆಬ್ಬಾವೊಂದು ಪಾದದಿಂದ ಶಿರದವರೆಗೆ ಸುತ್ತಿ ಬಿಗಿದು ಹಿಡಿದಿಟ್ಟಿದೆ. ಭೀಮ ಪ್ರಯತ್ನಿಸಿದರೂ ಹೆಬ್ಬಾವಿನ ಹಿಡಿತದಿಂದ ತಪ್ಪಿಸಿ ಬರಲಾಗುತ್ತಿಲ್ಲ. ಕೂಡಲೆ ಧರ್ಮರಾಯ ತರ್ಕಿಸತೊಡಗಿದ್ದೇನೆಂದರೆ ಬಕ, ಹಿಡಿಂಬ, ಕಿಮ್ಮೀರ, ಜಟಾಸುರಾದಿ ಬಲಾಢ್ಯರನ್ನು ಹೊಸಕಿ ಹಾಕಿದ ಭೀಮ ಸಾವಿರ ಗಂಡಾನೆಯ ಬಲವುಳ್ಳ ವೀರ. ಕೇವಲ ಒಂದು ಹೆಬ್ಬಾವಿನ ಹಿಡಿತಕ್ಕೆ ಸಿಲುಕುವುದು ಸಾಧ್ಯವಿಲ್ಲ. ಇದರಲ್ಲೇನೊ ಮರ್ಮವಿದೆ.

ಹೀಗೆ ಯೋಚಿಸುತ್ತಿರುವಾಗಲೆ ವಿಸ್ಮಯ ಎಂಬಂತೆ ಹೆಬ್ಬಾವು ಮನುಷ್ಯ ಭಾಷೆಯಲ್ಲಿ ಮಾತನ್ನಾಡಿತು. “ಎಲೈ ಧರ್ಮರಾಜನೇ! ನಿನ್ನ ತಮ್ಮನ ಈ ಸ್ಥಿತಿಯನ್ನು ಕಂಡು ನೀನು ಚಿಂತೆಗೊಳಗಾಗಿರುವಂತಿದೆ. ಭಯ ಪಡಬೇಡ ಆತ ನನ್ನ ಬಂಧನದಲ್ಲಿ ಇದ್ದಾನೆ. ಆತನ ಪ್ರಾಣಕ್ಕೆ ಈ ತನಕ ಯಾವ ಬಾಧೆಯೂ ಒದಗಿಲ್ಲ. ನೀನು ಧರ್ಮಜ್ಞಾನ ಸಂಪನ್ನನಾಗಿರುವೆ. ನನ್ನಿಂದ ಕೇಳಲ್ಪಡುವ ಧರ್ಮ ಜಿಜ್ಞಾಸೆಯ ಪ್ರಶ್ನೆಗಳಿಗೆ ನೀನು ಸದುತ್ತರ ನೀಡಬೇಕು. ಅಂತಹ ನಿನ್ನ ಸಮರ್ಥನೆಗಳಿಂದ ನನ್ನ ಮನ ಮೆಚ್ಚಿಸಿದರೆ ನಿನ್ನ ತಮ್ಮನಿಗೆ ಯಾವ ಅಪಾಯವನ್ನೂ ಮಾಡದೆ ಬಿಟ್ಟುಬಿಡುವೆನು” ಎಂದು ಹೇಳಿತು.

ಧರ್ಮರಾಜನಿಗೆ ತನ್ನ ತರ್ಕ ಸಾಧುವಾದದ್ದು ಎಂದು ಸ್ಪಷ್ಟವಾಯಿತು. “ಓ ಮಹಾತ್ಮ! ನೀನು ಕೇವಲ ಹೆಬ್ಬಾವಾಗಿದ್ದರೆ ಭೀಮನನ್ನು ಬಂಧಿಸುವುದು ಕಷ್ಟ ಸಾಧ್ಯವೆ ಆಗುತ್ತಿತ್ತು. ಹಾಗಿದ್ದರೆ ನೀನು ಕಣ್ಣಿಗೆ ಕಾಣಿಸುತ್ತಿರುವ ಒಂದು ಉರಗವಷ್ಟೆ ಅಲ್ಲ ಎಂದು ನಾನು ತರ್ಕಿಸಬಹುದು. ಯಾವುದೋ ಒಂದು ಕಾರಣದಿಂದ ನೀನು ಈ ಸ್ಥಿತಿಯಲ್ಲಿ ಗೋಚರಿಸುತ್ತಾ ನಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತಿರುವಂತಿದೆ. ಆಗಲಿ, ನೀನಂದಂತೆ ಪ್ರಶ್ನಿಸುವವನಾಗು. ನಮ್ಮ ಪರೀಕ್ಷೆ ನಿನ್ನಿಂದ ಆಗಬೇಕಿದ್ದರೆ ಹಾಗೆಯೆ ನಡೆಯಲಿ. ಸಂಸ್ಕಾರ ಬಲ, ಆಚಾರ ಬಲ, ಧರ್ಮ ಮತ್ತು ಜ್ಞಾನಶಕ್ತಿಯನ್ನು ಒಗ್ಗೂಡಿಸಿ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ” ಎಂದನು.

ಆಗ ಅಜಗರನು ಧರ್ಮರಾಯನನ್ನು ಪ್ರಶ್ನಿಸಲು ಆರಂಭಿಸಿದನು..

ಹೆಬ್ಬಾವು : “ಬ್ರಾಹ್ಮಣ ಎಂದರೆ ಯಾರು?”

ಧರ್ಮರಾಯ : “ಬ್ರಾಹ್ಮಣ ಎನ್ನುವುದು ಕೇವಲ ವರ್ಣ, ವರ್ಗ, ಪಂಗಡ ಅಥವಾ ಜಾತಿಯಲ್ಲ. ಯಾರ ಜೀವನದಲ್ಲಿ ಸತ್ಯ, ಧರ್ಮ, ತಾಳ್ಮೆ, ಶೀಲ, ಅಹಿಂಸೆ, ದಮ, ದಯೆ, ಪರಹಿತ ಇವು ಯಾರ ಆಚರಣೆಯಲ್ಲಿ ಕಂಡುಬರುತ್ತದೆಯೊ ಅವನನ್ನು ಬ್ರಾಹ್ಮಣ ಎನ್ನಬೇಕು”.

ಹೆ : “ಶೂದ್ರನಲ್ಲಿ ಇಂತಹ ಗುಣಗಳಿದ್ದರೆ?”

ಧ : “ಈ ಗುಣಗಳ ಆಚಾರವಂತನಾಗಿದ್ದರೆ ಆತ ಶೂದ್ರನಾಗುವುದಿಲ್ಲ. ಜನ್ಮ ಜಾತಿಯಿಂದ ಬ್ರಾಹ್ಮಣನಾಗಿದ್ದರೂ ಈ ಗುಣಗಳು ಇಲ್ಲದಿದ್ದರೆ ಆತ ಆಚಾರದಿಂದ ಬ್ರಾಹ್ಮಣನಾಗಲಾರನು”.

ಹೆ : ” ನಡತೆಯಿಂದ ಬ್ರಾಹ್ಮಣನನ್ನು ಗುರುತಿಸುವುದಾದರೆ ಜಾತಿ ಎಂಬುವುದು ವ್ಯರ್ಥವಾಯಿತಲ್ಲಾ? ಇದು ಹೇಗೆ?

ಧ : ” ಹುಟ್ಟಿದವನು ಯಾವ ವಂಶದಲ್ಲಿ ಹುಟ್ಟಿದ್ದಾನೋ ಆ ವಂಶವನ್ನು ಬೆಳೆಸುವುದಕ್ಕಾಗಿ ಹುಟ್ಟಿರುತ್ತಾನೆ. ಹುಟ್ಟಿದವನು ಬ್ರಾಹ್ಮಣನಾಗುವಾಗ ಆತನಿಗೆ ಗಾಯತ್ರಿಯೆ ತಾಯಿ. ಆಚಾರ್ಯನೆ ತಂದೆ. ಹಾಗಾಗಿ ಬ್ರಾಹ್ಮಣ ಎಂಬ ಜಾತಿಯಲ್ಲಿ ಹುಟ್ಟಿದ್ದರೂ ವೇದಾಭ್ಯಾಸ ಆಗುವವರೆಗೆ ಆತ ಶೂದ್ರ ಸಮಾನನೆ ಆಗಿರುತ್ತಾನೆ. ಸಂಸ್ಕಾರ ಪಡೆದು ಶೀಲವಂತನಾಗಿ ಬೆಳೆದು ಬದುಕಲಾರಂಭಿಸಿದ ಮೇಲೆ ಬ್ರಹ್ಮತ್ವ ಪಡೆದು ಬ್ರಾಹ್ಮಣನಾಗುತ್ತಾನೆ. ಸುಖ ದುಃಖ ರಹಿತವಾದ, ಆಸೆ, ಲೋಭಗಳನ್ನು ತೊರೆದ ಬ್ರಹ್ಮವನ್ನೇ ಬ್ರಾಹ್ಮಣನಾದವ ತಿಳಿಯಬೇಕಾದುದು. ಅಲ್ಲದಿದ್ದರೆ ಆತ ಜನ್ಮ ಜಾತ ಮೂಲದಿಂದ ಮಾತ್ರ ಬ್ರಾಹ್ಮಣ ಎಂದು ಕರೆಸಲ್ಪಡಬಹುದು ಹೊರತು ನಿಜ ಭಾವದಲ್ಲಿ ಬ್ರಾಹ್ಮಣನೆಂದು ಅಂಗೀಕೃತನಾಗಲಾರ”.

ಹೆ : “ಧೀರ, ಸುವ್ರತಿ, ಸಜ್ಜನ, ಸಖ ಇವರು ಯಾರು ಯಾರೆಂದು ವಿವರಿಸು?

ಧ : ” ಕಾಮಿನಿಯಾದ ಹೆಣ್ಣಿನ ಕಡೆಗಣ್ಣ ನೋಟ, ಮೋಹದ ಬಲೆಗೆ ಸಿಲುಕದೆ, ಅಳುಕದೆ ಉಳಿಯಬಲ್ಲವನು ಧೀರ.”

“ದ್ವಂದ್ವ ನಿಲುವಿನ ಸ್ಥಿತಿ ಉತ್ಪನ್ನವಾದಾಗ, ಎರಡೂ ವಿಚಾರಗಳೂ ಸಮರ್ಥನೀಯವಾಗುತ್ತದೆ. ಅಂತಹ ಸ್ಥಿತಿಯಲ್ಲಿ ಕಪಟವಿಲ್ಲದೆ ಸಹಿಸಿಕೊಂಡು ನಿಭಾಯಿಸುವವನು ನಿಜವಾದ ಸುವ್ರತಿ”

“ತನಗೆ ಉಪಕಾರ ಮಾಡಿದುದರ ಪ್ರತಿಯಾಗಿ ಕೃತಜ್ಞತೆ ತೋರಬೇಕಾದದ್ದು ಧರ್ಮ. ಹಾಗೆ ಮಾಡದ ಕೃತಘ್ನನಾಗುವವನು ನಿಜವಾದ ಕ್ರೂರಿ”

“ಸಖನಾಗಬೇಕಾದವನು ನಮ್ಮ ಗುಣಗಳನ್ನು ಹೊಂದಿರಬೇಕು. ಅಭಿರುಚಿ, ನಡೆ, ಯೋಚನೆ, ಕರ್ಮ, ಆಚಾರ, ವಿಚಾರ ಹೀಗೆ ಸಮಸ್ತ ವಿಚಾರದಲ್ಲೂ ಅನುಗುಣನಾದವನೇ ಸಖ”

ಹೆ : “ಅಹಿಂಸೆ ಎಂದರೇನು?”
ಧ: ” ಹಿಂಸೆ ಅಂದರೆ ಪರರಿಗೆ ಮಾನಸಿಕ ಯಾ ಶಾರೀರಿಕ ನೋವು ಉಂಟುಮಾಡುವುದು, ಅಥವಾ ಪರೋಕ್ಷವಾಗಿ ಹಾಗಾವುದಕ್ಕೆ ಕಾರಣರಾಗುವುದು. ಹೀಗೆ ಮಾಡದಿರುವುದೆ ಅಹಿಂಸೆ. ಸೂಚ್ಯವಾಗಿ ಹೇಳುವುದಾದರೆ, ನಾವು ಮಾಡುವ ಕೆಲಸದಿಂದ ಪರರಿಗೆ ಆತಂಕ, ಭಯ, ವೇದನೆ ಉತ್ಪತ್ತಿಯಾಗದಂತೆ ವ್ಯವಹರಿಸುವುದೆ ಅಹಿಂಸೆ.”

ಹೀಗೆ ಹೆಬ್ಬಾವು ಪ್ರಶ್ನೆಗಳನ್ನು ನಿರಂತರವಾಗಿ ಕೇಳುತ್ತಾ (ಸುದೀರ್ಘ ಭಾಗವಿದು) ಮೌನವಹಿಸಿ ಯೋಚನಾಮಗ್ನವಾಯಿತು. ಆಗ ಧರ್ಮರಾಯನ ಮನದಲ್ಲಿ ಕೆಲವೊಂದು ಜಿಜ್ಞಾಸೆ ಮೂಡಿತು. ಅಜಗರನ ಅನುಮತಿ ಕೇಳಿ ಧರ್ಮರಾಯ ಹೆಬ್ಬಾವನ್ನು ಪ್ರಶ್ನಿಸಲಾರಂಭಿಸಿದನು.

ಧ :” ಸತ್ಪಾತ್ರರಿಗೆ ದಾನ, ಪ್ರಿಯವಾದ ಮಾತು, ಸತ್ಯ, ಅಹಿಂಸೆ ಇವುಗಳೆಲ್ಲಾ ಉತ್ತಮ. ಆದರೆ ಇವುಗಳಲ್ಲಿ ಯಾವುದರ ಆಚರಣೆಯಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ?” ಹಾಗೂ ಇವುಗಳಲ್ಲಿ ಯಾವುದು ಯಾವುದಕ್ಕಿಂತ ದೊಡ್ಡದು/ ಉತ್ತಮ?

ಹೆ :” ಇವುಗಳಲ್ಲಿ ಉತ್ತಮ ಯಾ ಹಿರಿದಾದುದನ್ನು ನಿರ್ಣಯಿಸುವುದು ಕಷ್ಟ. ದಾನ ಮಾಡುವುದು ಉತ್ತಮ. ಅಪಾತ್ರನಿಗೆ ದಾನ ಮಾಡದಿರುವುದು ಒಳಿತು. ಪ್ರಿಯವಾದ ಮಾತು ಉತ್ತಮ. ಹಾಗೆಂದು ಅಸತ್ಯವನ್ನು ನುಡಿಯದಿರುವುದು ಉತ್ತಮ. ಸತ್ಯ ಯಾವ ಕಾಲಕ್ಕೂ ಶ್ರೇಷ್ಟ. ಹಾಗೆಂದು ಆ ಸತ್ಯವಚನದಿಂದ ಇತರರಿಗೆ ಹಾನಿಯುಂಟಾಗುವುದಾದರೆ ಮೌನವೇ ಉತ್ತಮ. ಅಹಿಂಸೆ ಉತ್ತಮ ಕರ್ಮ. ಹಾಗೆಂದು ಒಬ್ಬಾತನಿಂದ ಅಧರ್ಮವಾಗುತ್ತಿದ್ದರೆ ಅದನ್ನು ತಡೆಯುವಲ್ಲಿ ಹಿಂಸೆಯಾದರೂ ಅದು ಶ್ರೇಷ್ಠ. ಇನ್ನು ಸ್ವರ್ಗ ಪ್ರಾಪ್ತಿಗೆ ಅರಿತು ಆಚರಿಸುವ ಸತ್ಕರ್ಮಗಳು ಹಾದಿಯಾಗುತ್ತದೆ. ಸ್ವಕರ್ಮಗಳನ್ನು ಆಚರಿಸುವಲ್ಲಿ ಉಚಿತ – ಅನುಚಿತಗಳನ್ನು ವಿವೇಚಿಸಿ ನಿರ್ಣಯಿಸಿ ನಡೆಯುವುದರಿಂದ ಆತ್ಮೋನ್ನತಿ ಸಾಧ್ಯ. ಸದ್ಗತಿಗೆ ಜಾತಿಯಾಗಲಿ, ಕುಲವಾಗಲಿ ಕಾರಣವಾಗದು. ಆದರೆ ಲೌಕಿಕವಾದ ಸುವ್ಯವಸ್ಥೆಯಾಗಬೇಕಾದರೆ ಜಾತಿ ಕುಲಗಳು ಮುಖ್ಯ. ಪೂರ್ವ ಸಂಚಿತ ಪುಣ್ಯ ಬಲದಿಂದ ಹುಟ್ಟುವ ಆತ್ಮನ ಕುಲ ನಿರ್ಣಯವಾಗಿರುತ್ತದೆ. ಹುಟ್ಟಿನ ನಂತರದ ಪುಣ್ಯ ಸಂಪಾದನೆಯಿಂದ ಮುಂದಿನ ಗತಿ ನಿರ್ಣಯಗೊಳ್ಳುತ್ತದೆ. ಹಾಗೆಂದು ಕುಲ ಜಾತಿಯೂ ಸಾಮಾಜಿಕ ವ್ಯವಹಾರ ವ್ಯವಸ್ಥಿತವಾಗಿ, ಲೋಕಮಾರ್ಗವು ಅತಿಕ್ರಮಿಸಲ್ಪಡದೆ ಪರಹಿತಕ್ಕೆ ಸಾಧನವಾಗುವಲ್ಲಿ ಪ್ರಧಾನ ಪಾತ್ರವಹಿಸುವ ಕಾರಣ ಕುಲ ಜಾತಿಗಳೂ ಪ್ರಧಾನವಾಗುತ್ತದೆ. ಕುಲದಿಂದಲೆ ವ್ಯಕ್ತಿತ್ವ ನಿರ್ಣಯವಾಗದು. ಆಚಾರ ಮತ್ತು ಶೀಲದಿಂದ ಅದು ಸ್ಥಿತವಾಗುತ್ತದೆ. ಮರ್ತ್ಯಲೋಕದಲ್ಲಿ ಕುಲ – ಶೀಲಗಳೆರಡೂ ಮುಖ್ಯವೇ ಆಗುತ್ತದೆ.

ಹೀಗೆ ಪರಸ್ಪರ ಧರ್ಮ ಜಿಜ್ಞಾಸೆಯ ಪ್ರಶ್ನೋತ್ತರಗಳು ಸುದೀರ್ಘವಾಗಿ ವಿನಿಮಯವಾಗುತ್ತಾ ಇಬ್ಬರೂ ಸಂದೇಹ ಪರಿಹರಿಸಿಕೊಳ್ಳುತ್ತಿದ್ದರು. ಹೆಬ್ಬಾವು ಧರ್ಮರಾಯನ ಉತ್ತರಗಳಿಂದ ಸಂತೃಪ್ತವಾಯಿತು. ಹಾಗೆಯೆ ಯುಧಿಷ್ಠಿರನ ಧರ್ಮ ಜಿಜ್ಞಾಸೆಯ ಆಳವಾದ ಜ್ಞಾನಸಂಪನ್ನ ಸಂದೇಹಗಳನ್ನು ಮೆಚ್ಚಿ ಉತ್ತರಿಸುತ್ತಾ, ಇನ್ನೇನಾದರೂ ಪ್ರಶ್ನೆಗಳಿವೆಯೆ ಎಂದು ಕೇಳಿತು

ಧರ್ಮರಾಯನು “ಅಯ್ಯಾ ಧರ್ಮಜ್ಞಾನಿಯೆ, ನೀನು ಮಹಾತ್ಮನು ಹೌದು. ನನ್ನ ಕಟ್ಟ ಕಡೆಯ ಒಂದು ಸಂದೇಹ ಪರಿಹರಿಸಿದರೆ ನಾನೂ ತೃಪ್ತನಾಗುತ್ತೇನೆ. ನೀನು ಯಾರು ಎಂಬುವುದನ್ನು ತಿಳಿಯದೆ ಅದು ಪೂರ್ಣವಾಗಲಾರದು” ಎಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page