ಭಾಗ – 207
ಭರತೇಶ್ ಶೆಟ್ಟಿ, ಎಕ್ಕಾರ್

ಮಕ್ಕಳನ್ನು ನೋಡಿ ತನ್ನ ಮನಸಿನ ತುಡಿತ ತಡೆಯಲಾಗದೆ ಬಾಹುಕ ನೇರವಾಗಿ ತನ್ನ ಬಿಡಾರದ ಒಳಗೆ ಹೋದನು. ಅಂದಿನ ದಿನ ತನ್ನ ಕೈಯಾರೆ ಸಿದ್ಧಪಡಿಸಿದ್ದ ಸಿಹಿ ತಿನಸುಗಳೊಂದಿಗೆ ಹೊರಬಂದು ಮಕ್ಕಳನ್ನು ತನ್ನೆಡೆಗೆ ಕರೆದನು. ಮಕ್ಕಳು ಬಾಹುಕನ ವಿಕಾರ ರೂಪ ನೋಡಿಯೂ ಹೆದರಲಿಲ್ಲ. ಇದು ಅವ್ಯಕ್ತ ಕರುಳ ಸಂಬಂಧದ ಮಹಾತ್ಮೆಯೇ ಎಂದೆನ್ನಬಹುದು. ಆ ಮಕ್ಕಳಿಗೆ ತಿನಸುಗಳನ್ನು ನೀಡಿ ಮುದ್ದಿಸಬೇಕೆನ್ನುವಷ್ಟರಲ್ಲಿ ಕೇಶಿನಿ ಓಡಿಬಂದು ಮಕ್ಕಳನ್ನು ಎಳೆದು ದಮಯಂತಿಯತ್ತ ಕರೆದೊಯ್ದಳು.
ಮಕ್ಕಳನ್ನು ಕೇಶಿನಿ ಕರೆದು ತಂದಾಗ ಕೈಯಲ್ಲಿರುವ ತಿಂಡಿಯನ್ನು ನೋಡಿದಳು ದಮಯಂತಿ. ತಕ್ಷಣ ಆ ತಿಂಡಿಗಳನ್ನು ಸ್ವಾದಿಸಿ ರುಚಿ ನೋಡಿ ಇದು ನಳ ಚಕ್ರವರ್ತಿಯ ಕೈಯಡುಗೆಯೇ ಹೌದೆಂದು ಖಚಿತ ಪಡಿಸಿಕೊಂಡಳು.
ಪರಿಚಾರಕರಾದ ಕೇಶಿನಿ ಮತ್ತು ಪರ್ಣಾದ ದಮಯಂತಿಯ ಆಜ್ಞೆಯಂತೆ ಮತ್ತೆ ಬಾಹುಕನಿದ್ದಲ್ಲಿಗೆ ಬಂದು ಮಹಾರಾಣಿಯವರ ಕರೆಯಂತೆ ತಾವು ಬಂದು ಭೇಟಿಯಾಗಬೇಕಂತೆ ಎಂದು ತಿಳಿಸಿದರು. ಅಂತೆಯೇ ಬಾಹುಕ ದಮಯಂತಿಯರಿಗಾಗಿ ಏಕಾಂತವಾಗಿರುವ ಭವನದ ವ್ಯವಸ್ಥೆಯಾಗಿತ್ತು. ಅಲ್ಲಿಗೆ ಬಂದ ಬಾಹುಕನನ್ನು ಕಂಡೊಡನೆ ದಮಯಂತಿ ಉಕ್ಕೇರಿ ಬಂದು ಅಳುವನ್ನು ನಿಯಂತ್ರಿಸಲಾಗದೆ ಹೋದಳು. ತನ್ನ ಪತಿದೇವರ ವಿಕಾರ ರೂಪ ನೋಡಿ ಮಮ್ಮಲ ಮರುಗಿ ಪಾದದ್ವಯಗಳಿಗೆರಗಿದಳು. ಪಾದ ಪದ್ಮಗಳಲ್ಲಿ ಶಿರವಿರಿಸಿ ದೇವಾ ಇದೇನು ಇಂತಹ ಸ್ಥಿತಿ ಬಂದೊದಗಿದೆ? ನನ್ನನ್ನು ಬಿಟ್ಟು ಹೋಗುವ ಮನಸ್ಸಾದರೂ ಹೇಗೆ ಬಂತು? ಕಷ್ಟವೊ – ಸುಖವೊ ಅನುಸರಿಸಿ ನಿಮ್ಮೊಡನೆ ನಾನಿರುತ್ತಿದ್ದೆನಲ್ಲವೆ? ಎಂದು ಗೋಗರೆದು ದುಃಖಿಸಿದಳು. ದಮಯಂತಿ ದೀನ ಆರ್ತ ಸ್ಥಿತಿಯನ್ನು ಕಂಡು ಮನಕರಗಿದ ಬಾಹುಕನಿಗೆ ಕಾರ್ಕೋಟಕನ ಮಾತು ನೆನಪಾಯಿತು. ಹಕ್ಕಿಗಳಿಂದ ಅಪಹರಿಸಲ್ಪಟ್ಟು ಈಗ ಪುನರಪಿ ತನ್ನ ಕೈಸೇರಿದ ಧೋತ್ರವನ್ನು ಸುತ್ತಿಕೊಂಡನು. ಬಾಹುಕ ನಳನಾಗಿ ರೂಪ ಹೊಂದಿದನು. ದಮಯಂತಿಯನ್ನು ತೊರೆದ ಬಳಿಕ ನಡೆದ ವೃತ್ತಾಂತಗಳನ್ನೆಲ್ಲಾ ವಿವರಿಸಿ ಸಂತೈಸಿದನು. ಪತ್ನಿಯ ಕ್ಷೇಮಕ್ಕಾಗಿ ತೊರೆದು ಹೋಗುವ ಮನ ಮಾಡಿದೆನೆ ಹೊರತು ಅನ್ಯಥಾ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿ ಸಮಾಧಾನಿಸಿದನು. ದಮಯಂತಿ ತನ್ನ ಪತಿಯ ಸಹಜ ರೂಪವನ್ನು ಮನದಣಿಯೆ ನೋಡಿ ಸಂಭ್ರಮಿಸಿದಳು, ಕೊರಗಿದ ಗತ ದಿನಗಳನ್ನು ನೆನೆದು ಅತ್ತಳು, ಕಣ್ಣೀರ್ಗರೆದು ನಳನ ಪಾದ ತೋಯಿಸಿದಳು. ಇಬ್ಬರೂ ದೇವರ ಮಹಿಮೆಯನ್ನು ಅನುಭವಿಸಿ ಸುಖಾಂತ್ಯವಾದ ಈ ಕ್ಷಣ ಕೃತಜ್ಞತೆ ಅರ್ಪಿಸಿದರು.
ಇತ್ತ ಪರ್ಣಾದ – ಕೇಶಿನಿಯರು ಈ ಸತ್ಯ ಸಂಗತಿಯನ್ನು ಭೀಷ್ಮಕನಿಗೂ ರಾಜ ಪರಿವಾರದವರಿಗೂ ತಿಳಿಸಿ ಕರೆತಂದರು. ನಳ ದಮಯಂತಿಯ ಜೋಡಿಯನ್ನು ಕಂಡು ಎಲ್ಲರೂ ಮಹದಾನಂದ ಭರಿತರಾದರು. ರಾಜಾ ಋತುಪರ್ಣನೂ ಸಂತೋಷದಿಂದ ಇವರಿಬ್ಬರಿಗೂ ವಂದಿಸಿ, “ಮಹಾಪ್ರಭು ನೀವು ಕಳೆದುಕೊಂಡಿರುವ ನಿಷಧ ಸಾಮ್ರಾಜ್ಯವನ್ನು ಮರು ಸ್ವಾಧೀನ ಪಡಿಸಲು ಅಪ್ಪಣೆಯಿತ್ತರೆ ಈಗಿಂದೀಗಲೆ ಸಮರ ಮುಖದಲ್ಲಿ ಆ ಪುಷ್ಕರನನ್ನು ಸದೆಬಡಿದು ನಿಮ್ಮ ಪದತಲದಲ್ಲಿ ತಂದು ಕೆಡಹಾಕುವೆ. ಅಪ್ಪಣೆಗಾಗಿ ಕಾಯುತ್ತಿರುವೆ” ಎಂದನು. ಆಗ ನಳ ಚಕ್ರವರ್ತಿ ಋತುಪರ್ಣನನ್ನು ಬಿಗಿದಪ್ಪಿ ತನ್ನ ಕಷ್ಟಕಾಲದಲ್ಲಿ ಆಶ್ರಯವಿತ್ತು ಸಹಕರಿಸಿದ ಉಪಕಾರವನ್ನು ಸ್ಮರಿಸಿ ವಂದಿಸಿದನು. ಪುಷ್ಕರನನ್ನು ನಾನೆ ಮಣಿಸಿ ತನ್ನದಾದುದನ್ನು ವಶ ಪಡಿಸುವೆ ಎಂದುತ್ತರಿಸಿ ಬೀಳ್ಕೊಟ್ಟನು.
ಇದೆಲ್ಲಾ ನಡೆದು ಕೆಲದಿನಗಳು ಆಗುತ್ತಿದ್ದಂತೆ, ನಿಷಧ ಸಾಮ್ರಾಜ್ಯಕ್ಕೆ ಬಂದು ನಳ ಚಕ್ರವರ್ತಿ ಪುಷ್ಕರನನ್ನು ದ್ಯೂತಕ್ಕೆ ಆಮಂತ್ರಿಸಿದನು. ಆತನ ಸರ್ವ ಸಂಪದವನ್ನೂ ಗೆದ್ದುಕೊಂಡನು. ಸೋತು ಶರಣಾದ ಪುಷ್ಕರನಿಗೆ ಹಿತವಚನಗಳನ್ನಾಡಿ ಆತನ ಸ್ವಂತ ಸಾಧಕವಾದದ್ದು ಏನೆಲ್ಲಾ ದ್ಯೂತದಲ್ಲಿ ಗೆದ್ದಿದ್ದನೊ ಅವೆಲ್ಲವನ್ನೂ ಹಿಂದಿರುಗಿಸಿ ಕಳುಹಿಸಿಕೊಟ್ಟನು. ನಳ ದಮಯಂತಿಯರು ತಮ್ಮ ಸಾಮ್ರಾಜ್ಯಕ್ಕೆ ಮತ್ತೆ ಸಾಮ್ರಾಟ – ಸಾಮ್ರಾಜ್ಞಿಗಳಾಗಿ ಭಗವದ್ ಸ್ಮರಣೆ, ಸತ್ಕರ್ಮ ಪಾಲಕರಾಗಿ ಆಳುತ್ತಾ ಮೆರೆಯ ತೊಡಗಿದರು.
ಹೀಗೆ ನಳ ದಮಯಂತಿಯ ಕಥೆಯನ್ನು ವಿವರಿಸಿದ ಬೃಹದಶ್ವ ಮಹರ್ಷಿ, “ಧರ್ಮರಾಯ, ದ್ಯೂತವಾಡಿ ಸೋತ ನಳ ಮತ್ತು ದಮಯಂತಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳೆಷ್ಟು? ನೀನು ಇದೇ ರೀತಿ ಸೋತು ವನವಾಸಿ ಆಗಿರುವೆ. ಆದರೆ ದೇವರದಯದಿಂದ ಅವರಂತೆ ಭೀಕರವಾದ ಕಷ್ಟಗಳ ಸರಮಾಲೆ ಎದುರಿಸುವಂತಾಗಿಲ್ಲ. ಹಾಗೆಂದು ಮನುಷ್ಯನಾದವನಿಗೆ ಕಷ್ಟಗಳು ಎದುರಾದಾಗಲೆ ಸಾಮರ್ಥ್ಯ ಪ್ರಕಟವಾಗುವುದು. ಕಷ್ಟ ಬರುವ ಕಾಲಕ್ಕೆ ಬರುತ್ತದೆ. ಬಂದು ನಿಯತಿಯ ಅವಧಿ ಮುಗಿದಾಗ ಹೋಗುತ್ತದೆ. ಇದನ್ನು ಸಹಿಸಿ ಅನುಭವಿಸಿ ನಿಂತವನು ಶ್ರೇಷ್ಟನಾಗುತ್ತಾನೆ. ನಿನ್ನ ಬದುಕಿನಲ್ಲೂ ಈಗ ಕಷ್ಟದ ದಿನಗಳಿವೆ ಎಂದ ಮಾತ್ರಕ್ಕೆ ಇದುವೆ ಶಾಶ್ವತವಲ್ಲ. ಮತ್ತೆ ಸುಖದಿನಗಳು ಬರಲಿವೆ. ಹಾಗೆಂದು ನಿಮ್ಮ ಶತ್ರುಗಳಾದ ಕೌರವರು ನೀವೈವರ ಶೌರ್ಯಕ್ಕೆ ಹೆದರಿದವರು ಆದ ಕಾರಣ ತಂತ್ರಗಾರಿಕೆಯಿಂದ ನಿಮ್ಮನ್ನು ಸೋಲಿಸಿದ್ದಾರೆ. ನಿಮ್ಮ ಸಾಹಸ – ಶೌರ್ಯ, ಪರಾಕ್ರಮ ಶಕ್ತಿಗೆ ಭೀತರಾದ ಕೌರವರು ಮತ್ತೆ ದ್ಯೂತಕ್ಕೆ ಕರೆಯುವ ಬಗ್ಗೆ ಶಕುನಿ ಯೋಚಿಸಿದರೆ ನೀನು ಅಳುಕದೆ ಧೈರ್ಯದಿಂದ ಹೋಗುವಂತಾಗಬೇಕು. ಧರ್ಮರಾಜಾ, ಅದಕ್ಕಾಗಿ ನಿನಗೆ ಅಕ್ಷ ಹೃದಯ ವಿದ್ಯೆ ಬೋಧಿಸುವೆ. ಒಂದೊಮ್ಮೆಗೆ ಕೌರವರು ದ್ಯೂತದಾಟಕ್ಕೆ ಕರೆದರೂ ಗೆಲ್ಲಬಲ್ಲ ಶಕ್ತಿ ನಿನ್ನದಾಗಿರುತ್ತದೆ. ನೀನು ಅಕ್ಷ ಹೃದಯ ವಿದ್ಯೆ ಕರಗತಗೊಳಿಸಿರುವ ಸತ್ಯ ಸಂಗತಿ ಕೌರವರಿಗೆ ತಿಳಿದರೆ, ಮತ್ತೆಂದೂ ದ್ಯೂತದಾಟಕ್ಕೆ ಕರೆಯಲಾರರು. ಸದ್ಯ ನಿಯಮಬದ್ದವಾಗಿ ಒಪ್ಪಿರುವ ವನವಾಸ – ಅಜ್ಞಾತವಾಸ ಪೂರೈಸುವತ್ತ ಗಮನ ನೀಡು” ಎಂದು ಹೇಳಿ ಅಕ್ಷ ಹೃದಯ ವಿದ್ಯೆಯನ್ನು ಧರ್ಮಜನಿಗೆ ಉಪದೇಶಿಸಿದರು.
ಮುಂದುವರಿಯುವುದು..






















































