ಭಾಗ – 206
ಭರತೇಶ್ ಶೆಟ್ಟಿ, ಎಕ್ಕಾರ್

ದಮಯಂತಿಗೂ ನಳನಿಗೂ ಮದುವೆಯಾಗುವ ಸಂದರ್ಭ ಆ ಸ್ವಯಂವರ ಮಂಟಪಕ್ಕೆ ದೇವತೆಗಳಾದ ಇಂದ್ರ, ಅಗ್ನಿ, ವಾಯು ಮತ್ತು ವರುಣ ಬಂದಿದ್ದರು. ನಳ ಚಕ್ರವರ್ತಿಯ ಬಗ್ಗೆ ಬಹಳಷ್ಟು ವಿಚಾರಗಳನ್ನು ತಿಳಿದವಳಾಗಿದ್ದು, ಆತನನ್ನು ವರಿಸುವ ಬಗ್ಗೆ ಮನದಲ್ಲಿ ಅಪೇಕ್ಷೆಯನ್ನು ದಮಯಂತಿ ವಿವಾಹ ಪೂರ್ವದಲ್ಲಿಯೆ ಹೊಂದಿದ್ದಳು. ಮನದಾಸೆಯಂತೆಯೆ ವಿವಾಹ ಸ್ವಯಂವರ ರೂಪದಲ್ಲಿ ನಿಶ್ಚಯವಾಗಿದ್ದು, ನಳ ಚಕ್ರವರ್ತಿಯ ಆಗಮನ ಅವಳ ಬದುಕಿನ ಸುಯೋಗವಾಗಿತ್ತು. ಹೀಗಿರಲು ನಳನನ್ನು ಮೆಚ್ಚಿಕೊಂಡಿದ್ದ ದಮಯಂತಿಯ ಪೂರ್ವ ನಿರ್ಣಯವನ್ನು ಪರೀಕ್ಷಿಸಬೇಕೆಂದು ದೇವತೆಗಳು ಧರೆಗಿಳಿದು ಬಂದಿದ್ದರು. ಭೂಮಿಯಲ್ಲಿರುವ ಅರಸರಲ್ಲಿ ನಳನೇ ಶ್ರೇಷ್ಟ. ಆತನಿಗಿಂತಲೂ ಅದ್ವಿತೀಯರಾದ ದೇವತೆಗಳು ಬಂದಿರುವ, ಅದರಲ್ಲೂ ದೇವೇಂದ್ರನೇ ಬಯಸಿ ಬಂದಿರುವ ಸುದ್ದಿ ತಿಳಿದು ಮನ ಪರಿವರ್ತನೆ ಮಾಡಿ ಒಪ್ಪುವಳೋ? ಇಲ್ಲ ನಳನನ್ನೆ ಬಯಸಿ ಸ್ಥಿತ ಪ್ರಜ್ಞೆ ಉಳಿಸಿ ತನ್ನ ನಿಜ ಪ್ರೇಮ ಪ್ರಕಟಿಸುವಳೊ ಎಂಬ ಪರೀಕ್ಷೆ ಆಗಬೇಕಿತ್ತು. ಇದಕ್ಕಾಗಿ ನಳ ಚಕ್ರವರ್ತಿಯನ್ನು ಬಳಿ ಕರೆದು ದಿಕ್ಪತಿಗಳೊಡನೆ ದರ್ಶನ ನೀಡಿದರು. ದೇವತಾ ದರ್ಶನ ಪ್ರಾಪ್ತಿಯಿಂದ ಧನ್ಯನಾದ ನಳ ಅವರೆಲ್ಲರಿಗೂ ನಮಿಸಿ “ನನ್ನಿಂದಾಗಬೇಕಾದ ಸೇವೆಯೇನೆಂದು ಅಪ್ಪಣೆಯಾದರೆ ಶಿರಸಾವಹಿಸಿ ನಡೆಸಿ ಕೊಡುವೆ” ಎಂದು ವಾಗ್ದಾನ ನೀಡಿ ಬೇಡಿದನು.
ನಳನ ಪ್ರಾಮಾಣಿಕತೆಯ ಪರೀಕ್ಷೆಯೂ ನಡೆಯಲಿ ಎಂದು ತೀರ್ಮಾನಿಸಿದರು ದೇವತೆಗಳು. ಹಾಗೆಯೆ ಇಂದ್ರ ನಳನನ್ನು ಕರೆದು ” ನಳ, ನೀನು ನಮ್ಮ ದೂತನಾಗಿ ದಮಯಂತಿಯ ಬಳಿ ಹೋಗಬೇಕು. ಹೋಗಿ ದೇವತೆಗಳಾದ ನಾವು ಸ್ವಯಂವರದಲ್ಲಿ ಭಾಗಿಗಳಾಗಿರುವ ವಿಚಾರ ತಿಳಿಸಿ, ನಮ್ಮಲ್ಲಿ ಯಾರನ್ನಾದರು ಆಯ್ಕೆ ಮಾಡಿ ವರಿಸಬೇಕೆಂದು ತಿಳಿಸಿ ಬಾ ” ಎಂದು ಆಜ್ಞೆ ಮಾಡಿದರು.
ಯಾರಾದರು ಪುರುಷ ತಾನು ಮೆಚ್ಚಿದ ಕನ್ಯೆಯಲ್ಲಿ ಅನ್ಯ ಪುರುಷನನ್ನು ವರಿಸು ಎಂದು ಹೇಳುವನೇ? ಆದರೆ ಸ್ವಯಂ ನಳನಿಗೆ ಅಂತಹ ಸತ್ವ ಪರೀಕ್ಷೆ ಈಗ ಎದುರಾಗಿದೆ. ನುಡಿದ ವಚನದಂತೆ ದೇವತೆಗಳಿಗೆ ದೂತನಾಗಿ ದಮಯಂತಿಯ ಬಳಿ ಬಂದು ನಾಲ್ವರು ದೇವತೆಗಳು ಸ್ವಯಂವರದಲ್ಲಿ ಭಾಗಿಯಾಗುವ ವಿಚಾರ ತಿಳಿಸಿ “ದೇವರುಗಳಲ್ಲಿ ಒಬ್ಬನನ್ನು ಆರಿಸಿ ವರಿಸಿ ಸುಖ ಜೀವನ ನಡೆಸು” ಎಂದು ವಿಚಾರ ಮುಟ್ಟಿಸಿದನು.
ಈ ವರೆಗೆ ನಳನ ಧರ್ಮಯುತ ನಡೆ, ಪರಾಕ್ರಮ, ದಕ್ಷ ಆಡಳಿತ, ಪ್ರಜಾ ಪ್ರೇಮ ಇತ್ಯಾದಿ ಸಮರ್ಥ ಸಾಧನೆಗಳನ್ನಷ್ಟೇ ಕೇಳಿ ತಿಳಿದು ಮನಸೋತವಳು ದಮಯಂತಿ. ಇಂತಹ ಧರ್ಮಿಷ್ಟನ ಕರಗ್ರಹಣ ಮಾಡಿ ಆದರ್ಶ ಸತಿಯಾಗಿ ಬದುಕಬೇಕೆಂಬ ಕನಸು ಕಂಡವಳು. ಈಗಲೂ ಬಂದಂತಹ ದೂತನೇ ನಳ ಎಂಬ ಸತ್ಯ ಆಕೆಗೆ ತಿಳಿದಿಲ್ಲ. ದೂತನೋರ್ವ ವಿಷಯವಾಹಕನಾಗಿ ಬಂದಿದ್ದಾನೆ ಎಂದು ಮುಖವನ್ನೂ ನೋಡದೆ “ಅಯ್ಯಾ! ದೇವತೆಗಳೆ ನಿಮಗೆ ಪ್ರಣಾಮಗಳು. ನನ್ನ ವಿವಾಹಕ್ಕೆ ಒಲಿದು ಬಂದಿರುವುದು ಬಹಳ ಸಂತೋಷ. ದಿವ್ಯ ದೇವಾನು ದೇವತೆಗಳಾದ ನಿಮ್ಮ ಅನುಗ್ರಹ ನಮಗೆ ಸದಾ ನಮಗಿರಲಿ. ಭಕ್ತರಾದ ನಮಗೆ ನಿಮ್ಮ ಆಶೀರ್ವಾದ ದಿವ್ಯಾನುಗ್ರಹ ಪ್ರಾಪ್ತಿಯಾಗಲಿ. ಮಾತ್ರವಲ್ಲ ಮನಸಾರೆ ಬಯಸಿರುವ ನಳ ಚಕ್ರವರ್ತಿಯ ಜೊತೆ ನನ್ನ ವಿವಾಹ ಆಗುವಂತಾಗಲಿ ಎಂದು ನಿಮ್ಮಲ್ಲಿ ಬೇಡುತ್ತೇನೆ” ಎಂಬಂತೆ ಹೇಳಿ ಕಳುಹಿಸಿದಳು.
ದಮಯಂತಿಯ ಮನದಾಸೆ ತಿಳಿದ ದೇವತೆಗಳು ನಾಲ್ವರು ನಳನಂತೆ ರೂಪ ಧಾರಣೆ ಮಾಡಿಕೊಂಡರು. ಸ್ವಯಂವರ ಮಂಟಪದಲ್ಲೀಗ ತದ್ರೂಪಿ ಐವರು ನಳ ಚಕ್ರವರ್ತಿಗಳು ಎಳ್ಳಷ್ಟೂ ವ್ಯತ್ಯಾಸ ಗೋಚರಿಸದೆ ಶೋಭಿಸುತ್ತಿದ್ದಾರೆ. ಇಡಿ ಸಭೆ ಗೊಂದಲಕ್ಕೀಡಾಗಿದೆ. ಇದೇನು ವಿಚಿತ್ರ ಎಂಬಂತೆ ಬೆಕ್ಕಸ ಬೆರಗಾಗಿದ್ದಾರೆ.
ದಮಯಂತಿ ಪಾರ್ವತಿ ಮಾತೆಯನ್ನು ಅನನ್ಯ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದಳು. “ಅಮ್ಮಾ ನಾನು ಬಯಸಿರುವುದು ನಳ ಚಕ್ರವರ್ತಿಯನ್ನು. ಈ ಕಲ್ಯಾಣ ನಿನ್ನ ಅನುಗ್ರಹದಿಂದ ನಳ ಚಕ್ರವರ್ತಿಯ ಜೊತೆ ಆಗುವಂತೆ ಕೃಪೆದೋರು ತಾಯಿ” ಎಂದು ಬೇಡಿಕೊಂಡಳು. ಸ್ವಯಂವರ ಮಂಟಪಕ್ಕೆ ಬರುವ ಮುಹೂರ್ತ ಸನಿಹವಾಯಿತು. ವರಣ ಮಾಲಿಕೆ ಹಿಡಿದು ಬರುತ್ತಿದ್ದಾಳೆ. ಒಂದೆ ರೀತಿಯ ಐವರು ಸ್ವಯಂವರ ಮಂಟಪದಲ್ಲಿದ್ದಾರೆ. ದೂತ ಬಂದು ಹೇಳಿದ ವಿಚಾರ ಇಂದ್ರ, ಅಗ್ನಿ, ವಾಯು, ವರುಣ ನಾಲ್ವರು ಬಂದಿದ್ದಾರೆಂದು. ಹಾಗಿದ್ದರೆ ಈ ಐವರಲ್ಲಿ ನಾಲ್ವರು ದೇವತೆಗಳು, ಓರ್ವ ನಳನೇ ಹೌದು. ಹೇಗೆ ಗುರುತಿಸಲಿ ತಾಯಿ? ಅಂಬಾ ಭವಾನಿ, ಶಂಕರಿ, ಜಗನ್ಮಾತೆ ನೀನೆ ದಾರಿ ತೋರಿಸಮ್ಮಾ ಎಂದು ಮನಸಾ ಪ್ರಾರ್ಥಿಸುತ್ತಾ ಸ್ತ್ರೀ ಸಹಜ ಲಜ್ಜೆಯ ರೂಪಕವೋ ಇಲ್ಲ ವ್ಯಥೆಯ ಭಾವಾಭಿವ್ಯಕ್ತ ಸ್ಥಿತಿಯೋ ಎಂಬಂತೆ ನೆಲನೋಟಕಳಾಗಿ ಬರುತ್ತಿದ್ದಾಳೆ ದಮಯಂತಿ. ನಿಂತ ಐವರು ನಳರಲ್ಲಿ ನಾಲ್ವರ ಪಾದ ಭೂ ಸ್ಪರ್ಶವಾಗಿಲ್ಲ. ಓರ್ವ ಮಾತ್ರ ಭೂಮಿಯ ಮೇಲೆ ಪಾದವೂರಿ ನಿಂತಿದ್ದಾನೆ. ಹಾಗಿದ್ದರೆ ಈತನೆ ನನ್ನ ಪತಿದೇವನಾಗುವ ನಳ ಚಕ್ರವರ್ತಿ. ಉಳಿದ ನಾಲ್ವರು ಸ್ವರ್ಗದಿಂದಿಳಿದು ಬಂದ ದೇವರುಗಳೆಂದು ಗ್ರಹಿಸಿಕೊಂಡಳು. ಜ್ಞಾನಾನುಗ್ರಹ ನೀಡಿ ಸಂದಿಗ್ಧತೆಯಿಂದ ಪಾರುಮಾಡಿದ ತಾಯಿ ಗಿರಿಜೆಯನ್ನು ಸಂಸ್ತುತಿಸಿ ಪರಶಿವೆಗೆ ವಂದಿಸಿ ನೀನೇ ಕಾಪಾಡಬೇಕಮ್ಮಾ ಎಂದು ಬೇಡಿಕೊಂಡಳು. ವರಣ ಮಾಲಿಕೆಯನ್ನು ನಳ ಚಕ್ರವರ್ತಿಯ ಕೊರಳಿಗೆ ಧರಿಸಿದಳು.
ಪರೀಕ್ಷೆಯಲ್ಲಿ ಗೆದ್ದ ಸಾಧನೆ ದಮಯಂತಿಯದ್ದಾಯಿತು. ನೂತನ ವಧು ವರರಾದ ನಳ ದಮಯಂತಿಯರ ಮುಂದೆ ಸಾಕ್ಷಾತ್ಕರಗೊಂಡು ನಾಲ್ವರು ಸುಮನಸರು ಮೈದೋರಿದರು. ನಳನ ದೇವತಾಭಕ್ತಿ – ನಿಷ್ಠೆಗೆ, ದಮಯಂತಿಯ ಪಾತಿವೃತ್ಯಕ್ಕೆ ಮನಸೋತು ವಿಧವಿಧವಾಗಿ ಅನುಗ್ರಹಿಸಿದರು. ನಳ ಚಕ್ರವರ್ತಿಗೆ ” ನಳಾ, ಇನ್ನು ಅಗ್ನಿಯಾಗಲಿ, ವರುಣ, ವಾಯುವೇ ಆಗಲಿ ನೀನು ಪ್ರಾರ್ಥಿಸಿ ಸಂಕಲ್ಪ ಮಾಡಿದಂತೆ ತಕ್ಷಣ ಒಲಿದು ಪ್ರಭಾವ ಬೀರುವಂತಾಗಲಿ. ಮಾತ್ರವಲ್ಲ, ಪ್ರಜಾಪ್ರಿಯನಾದ ನೀನು ಅಗತ್ಯ ಕಾಲದಲ್ಲಿ ಬಯಸಿದಾಗ ಸುವೃಷ್ಟಿ(ಮಳೆ)ಯನ್ನು ಕರುಣಿಸುವ ವರವನ್ನು ನಿನಗಿತ್ತಿದ್ದೇವೆ” ಎಂದು ಇಂದ್ರಾದಿ ದೇವತೆಗಳು ಅನುಗ್ರಹಿಸಿದರು.
ವಿವಾಹ ಕಾಲದಲ್ಲಿ ನಡೆದಿದ್ದ ಈ ಸೂಕ್ಷ್ಮ ಸತ್ಯ ಅರಿತಿದ್ದ ದಮಯಂತಿ ಋತುಪರ್ಣನ ಬಿಡಾರಕ್ಕೆ ನೀರು – ಬೆಂಕಿಯ ವ್ಯವಸ್ಥೆ ಮಾಡಿಸದೆ ಉಳಿದ ಆಹಾರ ಸಾಮಾಗ್ರಿಗಳೆಲ್ಲವನ್ನು ಕಳುಹಿಸಿದ್ದಳು. ಈಗ ಅವರೆಲ್ಲರು ವಿಶೇಷ ಭೋಜನ ಪೂರೈಸಿದ ಬಗೆಯನ್ನು ತಿಳಿದಾಗ ದಮಯಂತಿಗೆ ಋತುಪರ್ಣನ ಸಾರಥಿಯಾಗಿ ಬಂದ ಬಾಹುಕನೇ ನಳ ಎಂಬ ಸತ್ಯ ದರ್ಶನ ಆಯಿತು. ಸಂದೇಹ – ಸಂಶಯಗಳ್ಯಾವುದೂ ಉಳಿದಿಲ್ಲ.
ಆದರೂ ಇಷ್ಟಕ್ಕೆ ಒಪ್ಪಿಕೊಳ್ಳುವುದೇ? ಬೇಡ, ಇನ್ನೂ ನಿಕಟ ಪರೀಕ್ಷೆ ಮಾಡುವೆನೆಂದು, ದೂತಿಯಾದ ಕೇಶಿನಿಯನ್ನು ಕರೆದು ಸೂಕ್ತ ಸಲಹೆ, ಸೂಚನೆ ಮಾರ್ಗದರ್ಶನ ಮಾಡಿದ ಬಳಿಕ ತನ್ನ ಮುದ್ದು ಮಕ್ಕಳಿಬ್ಬರನ್ನೂ ಕರೆದಳು. ಕೇಶಿನಿಯ ಜೊತೆ ಆ ಮಕ್ಕಳನ್ನು ಋತುಪರ್ಣನ ಬಿಡಾರದತ್ತ ಕಳುಹಿಸಿ ಕೊಟ್ಟಳು. ನಳ ದಮಯಂತಿಯರ ಮಕ್ಕಳು ಋತುಪರ್ಣ -ಬಾಹುಕರು ತಂಗಿದ್ದ ಬಿಡಾರದ ಬಳಿ ಆಡುತ್ತಿದ್ದಾರೆ. ಬಾಹುಕ ಆ ಮಕ್ಕಳನ್ನು ತದೇಕ ಚಿತ್ತದಿಂದ ನೋಡುತ್ತಿದ್ದಾನೆ. ಮಕ್ಕಳನ್ನು ಪಾಲಿಸಿ ಪೋಷಿಸಿದ ಜನಕನಲ್ಲವೆ? ಮನ ಕೇಳುತ್ತಿಲ್ಲ – ತಡೆಯಲಾಗುತ್ತಿಲ್ಲ… ಮುದ್ದಿಸೋಣವೆಂದು ಹಾತೊರೆಯುತ್ತಿದೆ.
ಮುಂದುವರಿಯುವುದು…






















































