ಭಾಗ – 203
ಭರತೇಶ್ ಶೆಟ್ಟಿ, ಎಕ್ಕಾರ್

ಕಿರಾತನ ಮನಸ್ಸು ಮೃಗವಾಗಿ ಪರಿವರ್ತಿತವಾಯಿತು. ಇನ್ನೇನು ಕಾಮದ ಬೇಟೆಯಾಡುವೆ ಎಂದು ಕಣ್ಣೆದುರು ಕಾಣುವ ಸುಂದರಿಯತ್ತ ಮುನ್ನುಗ್ಗಿ ಹಾರಲು ಸಿದ್ದನಾಗುತ್ತಿದ್ದಾನೆ. ದಮಯಂತಿ ದುರುಗುಟ್ಟಿ ನೋಡಿದಳು.. ಈ ದುಷ್ಟನಿಗೆ ಸಾವೇ ಬಂದೊದಗಬಾರದೇಕೆ? ಎಂದು ಮನದಲ್ಲೇ ಹಿಡಿಶಾಪ ಹಾಕಿದಳು. ಪರಮ ಪತಿವೃತಾ ಶಿರೋಮಣಿಯ ಶಕ್ತಿ ಅನಾವರಣಗೊಂಡಿತು. ಆಕೆಯತ್ತ ಜಿಗಿದ ಕಿರಾತ ಹಾರಿದ್ದಲ್ಲಿಂದಲೇ ನೆಲಕ್ಕೆ ಬಿದ್ದು ಹತಪ್ರಾಣನಾದ. ಪಾತಿವೃತ್ಯದ ಶಕ್ತಿ ಅಷ್ಟು ಅತಿಬಲಯುತವಾದದ್ದು.
ಇನ್ನು ಈ ಕಾಡಿನಲ್ಲಿ ನಿಂತರೆ ಅಪಾಯ ಕಟ್ಟಿಟ್ಟ ಬುತ್ತಿ. ಒಂದೋ ಕ್ರೂರ ಮೃಗಗಳಿಗೆ ಆಹಾರವಾಗುವೆ, ಇಲ್ಲ ಇಂತಹ ಮೃಗೀಯ ವರ್ತನೆಯ ದುಷ್ಟರಿಗೆ ಬಲಿಯಾಗುವೆ. ಹೀಗೆ ಹೆದರಿ ಮಸುಕು ಬೆಳಕು ಕಾಣುವತ್ತ ದಾಪುಕಾಲಿಕ್ಕುತ್ತಾ ಸಾಗಿ ಕಾಡಿನಿಂದ ಹೊರಬಂದಳು. ವ್ಯಾಪಾರ ಮುಗಿಸಿ ವರ್ತಕರು ಮರಳಿ ತಮ್ಮ ಮನೆಗಳತ್ತ ಸಾಗುತ್ತಿರುವುದು ಕಾಣಿಸಿತು. ತಾನೂ ಆ ಗುಂಪಿನಲ್ಲಿ ಸೇರಿಕೊಂಡು ಪಟ್ಟಣ ಸೇರಿದಳು. ಅದು ಚೇದೀರಾಜ್ಯ. ಅಲ್ಲಿ ತನ್ನ ಸಂಬಂಧಿ ಚಿಕ್ಕಮ್ಮನೆ ಚೇದಿ ದೇಶದ ಮಹಾರಾಣಿ. ಆ ಅರಮನೆಯ ಬಳಿ ಹೋಗಿ, ತನ್ನ ಗುರುತು ಮರೆಸಿ ಪರಿಚಾರಕಿ ಕೆಲಸಕ್ಕಾಗಿ ಬೇಡಿಕೊಂಡಳು. ರಾಣಿಯ ಪ್ರಮುಖ ಸಖಿ ಈಕೆಗೆ ತಿಳಿದಿರುವ ನಿಪುಣತೆಯ ಕೆಲಸಗಳೇನು ಎಂದು ವಿಚಾರಿಸಿ ಪರೀಕ್ಷಿಸಿ ನಂತರ ಮಹಾರಾಣಿಯ ಅಂತಃಪುರದ ಸೇವಕಿಯರ ಜೊತೆ ನೇಮಿಸಿದಳು. ದಮಯಂತಿಗೆ ನಳ ಪ್ರಾರ್ಥಿಸಿದಂತೆ ಸುರಕ್ಷಿತ ಆಶ್ರಯ ದೊರೆತಂತಾಯಿತು.
ಇತ್ತ ವಿದರ್ಭ ದೇಶದ ರಾಜ ಭೀಷ್ಮಕ – ದಮಯಂತಿಯ ತಂದೆ, ತನ್ನ ಮಗಳು ಹಾಗೂ ಅಳಿಯ ನಳ ಚಕ್ರವರ್ತಿ ದ್ಯೂತದಲ್ಲಿ ಸೋತು ಕಾಡುಪಾಲಾದ ಸುದ್ದಿ ತಿಳಿದು ಮಮ್ಮಲ ಮರುಗಿದನು. ತಕ್ಷಣ ತನ್ನ ರಾಜ್ಯದ ಗೂಢಾಚಾರರನ್ನೂ, ಬುದ್ಧಿವಂತರಾದ ಆಪ್ತರು ಅನೇಕರನ್ನು, ದಮಯಂತಿಯ ಪರಿಚಯವಿರುವ ಆಸ್ಥಾನ ಬ್ರಾಹ್ಮಣರನ್ನು ಕರೆದು ನಳ – ದಮಯಂತಿಯನ್ನು ಹುಡುಕಿ ಕರೆತರಲು ಆಜ್ಞೆ ಮಾಡಿ ಕಳುಹಿಸಿದನು.
ಚೇದಿರಾಣಿಯ ಮನೆಯಲ್ಲಿ ದಮಯಂತಿ ಕೆಲಸದಾಳಾಗಿ, ರಾಜಕುಮಾರಿಗೆ ಆಪ್ತ ಪರಿಚಾರಕಿಯಾಗಿ ಯಾರಿಗೂ ತಿಳಿಯದಂತೆ ಜಾಗ್ರತೆಯಿಂದ ದಿನ ಕಳೆಯುತ್ತಿದ್ದಾಳೆ. ಭೀಷ್ಮಕ ಮಹಾರಾಜನ ಆಜ್ಞೆ ಹೊತ್ತು ಚೇದಿ ರಾಜ್ಯಕ್ಕೆ ನಳ ಮತ್ತು ದಮಯಂತಿಯನ್ನು ಹುಡುಕುತ್ತಾ ಸುದೇವ ಎಂಬ ಚಾಣಾಕ್ಷ ಬ್ರಾಹ್ಮಣ ಬಂದಿದ್ದಾನೆ. ಆಕಸ್ಮಿಕವಾಗಿ ಅರಮನೆಯ ಉಪವನದಲ್ಲಿ ರಾಜಕುಮಾರಿಯ ಜೊತೆಯಿರುವ ದಮಯಂತಿಯನ್ನು ಕಂಡು ಗುರುತು ಹಿಡಿದನು. ಸೂಕ್ತ ಸಮಯ ಮತ್ತು ಸನ್ನಿವೇಶಕ್ಕಾಗಿ ಕಾದು ದಮಯಂತಿಯ ಬಳಿ ಸಾಗಿ ಆಕೆಯ ಜೊತೆ ಮಾತನಾಡಿ ವಿಷಯ ತಿಳಿದುಕೊಂಡನು. ಅಷ್ಟಾಗುತ್ತಲೆ ಚೇದಿರಾಣಿಗೂ ಸತ್ಯ ಗೊತ್ತಾಯಿತು. ಅನಿರೀಕ್ಷಿತವಾಗಿ ಆಳಿನ ರೂಪದಲ್ಲಿ ಬಂದು ಸೇರಿದ್ದ ದಮಯಂತಿಯನ್ನು ಗುರುತಿಸುವಲ್ಲಿ ವಿಫಲಳಾದ ತನ್ನ ಬುದ್ದಿಯನ್ನು ಹಳಿದು ಕ್ಷಮಾರ್ಥಿಯಾದಳು. ಪ್ರೀತ್ಯಾದರಗಳಿಂದ ಸತ್ಕರಿಸಿ ಆಕೆಯ ತವರು ವಿದರ್ಭ ದೇಶಕ್ಕೆ ಕಳುಹಿಸಿಕೊಟ್ಟಳು.
ಏಕಾಂಗಿಯಾಗಿ ತಿರುಗುತ್ತಿದ್ದ ನಳ ಚಕ್ರವರ್ತಿಗೆ ಆಹಾರ ಸೇರುತ್ತಿಲ್ಲ, ನೀರೂ ಕುಡಿಯಲಿಲ್ಲ. ದಮಯಂತಿಯನ್ನು ತೊರೆದು ಬಂದ ಅಪರಾಧಕ್ಕಾಗಿ ಮಮ್ಮಲ ಮರುಗುತ್ತಾ, ಕೊರಗುತ್ತಾ ಮನ ಬಂದೆಡೆ ಅಲೆಯುತ್ತಿದ್ದಾನೆ. ಹೀಗೆ ಹೋಗುತ್ತಿರಬೇಕಾದರೆ ಒಂದು ಕಡೆ ಕಾಡ್ಗಿಚ್ಚು ಹಬ್ಬಿ ಹತ್ತಿ ಉರಿಯುತ್ತಿತ್ತು. ನೋಡುತ್ತಿದ್ದಂತೆ ಒಂದು ಘಟ ಸರ್ಪ ಅದರೊಳಗೆ ಸಿಲುಕಿ ಅಗ್ನಿಗಾಹುತಿ ಆಗುವುದರಲ್ಲಿತ್ತು. ಮರಗಿಡ, ಖಗ ಮೃಗ ಹೀಗೆ ಸಕಲ ಸಂಕುಲದ ಭಾಷೆ ಅರ್ಥೈಸಬಲ್ಲ ದಿವ್ಯ ಶಕ್ತಿ ಪ್ರಾಪ್ತವಾಗಿದ್ದ ನಳನಿಗೆ ಉರಗನ ಆಕ್ರಂದನ ಕೇಳಿಸಿತು. ಅತ್ತ ಓಡಿ, ಬಿದಿರ ಪೊದೆಯೆಡೆಯಲ್ಲಿ ಸಿಲುಕಿ ಇನ್ನೇನು ಬೆಂಕಿಯಲ್ಲಿ ಬೆಂದು ಸುಟ್ಟು ಹೋಗಲಿದ್ದ ಘೋರ ಸರ್ಪನನ್ನು ಹಿಡಿದೆತ್ತಿ ಹೊರ ತಂದು ರಕ್ಷಿಸಿದನು. ನೆರಳಿನ ಸುಸ್ಥಳದಲ್ಲಿ ಬಿಡೋಣವೆಂದು ಎತ್ತಿಕೊಂಡು ನಳ ಬರುತ್ತಿದ್ದಾನೆ. ಅಧೋಮುಖವಾಗಿ ತಲೆ ನೇತಾಡುತ್ತಾ, ಪ್ರಾಣಸಂಕಟದಿಂದ ನೊರೆ ಕಾರುತ್ತಾ, ಅರೆ ಸುಟ್ಟು ಹೋಗಿದ್ದ ಆ ಘಟಸರ್ಪ ಚೇತರಿಸಿ ಕೊಂಡಿತು. ನಳ ತಂಪುನೀರ ತೊರೆಯ ಬಳಿ ಇಳಿಸಿ ಅದರ ತಲೆಯನ್ನೆತ್ತಿ ಆಧರಿಸುತ್ತಿರುವಾಗ ನಳನ ಕೈಗೆ ಕಚ್ಚಿಯೇ ಬಿಟ್ಟಿತು. ವಿಷದುರಿ ತಾಳಲಾರದೆ ನಳ ಒದ್ದಾಡಿದನು. ನಖಶಿಖಾಂತ ವಿಷಾಗ್ನಿಯ ಜ್ವಾಲೆ ಹಬ್ಬಿತು. ತಾಳಲಾರದೆ ಬೊಬ್ಬಿರಿದು ಬಿದ್ದು ಮೂರ್ಚಿತನಾದನು.
ಮುಂದುವರಿಯುವುದು…






















































