22.9 C
Udupi
Thursday, December 25, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 179

ಭರತೇಶ ಶೆಟ್ಟಿ ಎಕ್ಕಾರ್

ಸಂಚಿಕೆ ೧೮೦ ಮಹಾಭಾರತ

ಪಾಂಡವರು ವನವಾಸಿಗಳಾದ ಸುದ್ದಿ ಕೇಳಿ ತಿಳಿದ ದುರ್ಯೋಧನ ಮತ್ತಾತನ ಸಂಗಡಿಗರು ಸಂಭ್ರಮಿಸಿದರು. ಹನ್ನೆರಡು ವರ್ಷ ಕಾಲ ಕಾನನ ವಾಸ ಪೂರೈಸಿ ಅಜ್ಞಾತವಾಸದ ಸಿದ್ಧತೆಯಲ್ಲಿರುವಾಗ ಗುಪ್ತಚಾರರನ್ನು ಬಿಟ್ಟು ಪಾಂಡವರೆಲ್ಲಿದ್ದಾರೆಂದು ತಿಳಿದು ಕಂಡು ಹಿಡಿದರಾಯ್ತು. ಮತ್ತೆ ತ್ರಯೋದಶ ವರ್ಷ ನಿರಾಳವಾಗಿರಬಹುದು. ಮತ್ತೆ ಅವರಿಗೆ ವನವಾಸ. ಶಕುನಿಯ ತಂತ್ರದ ಯಶಸ್ಸಿನಿಂದ ದುರ್ಯೋಧನ ಹಿಗ್ಗಿ ಹೋಗಿದ್ದನು.

ಇತ್ತ ವಿದುರ, ಭೀಷ್ಮ, ದ್ರೋಣಾದಿಗಳು ಪಾಂಡವರಿಗಾದ ಅನ್ಯಾಯದ ಬಗ್ಗೆ ಮರುಗುತ್ತಿದ್ದರು. ಕಾಡಿನಲ್ಲಿ ಅನ್ನಪಾನದಿಗಳ ವ್ಯವಸ್ಥೆ, ವಸತಿ, ರಾತ್ರಿ ಹೊತ್ತು ಮಲಗಿ ನಿದ್ರಿಸುವಾಗ ಕ್ರೂರ ಮೃಗ, ಘಟ ಸರ್ಪಗಳು ಹೀಗೆ ಏನೇನೋ ವಿಚಾರಗಳು ಯೋಚನೆಗೆ ಆಹಾರವಾಗಿ ತಲೆತುಂಬಿ ಕೊರೆಯುತ್ತಿದ್ದವು. ಯೋಚಿಸಿ ಭಯಗೊಂಡು ಚಿಂತೆಗೊಳಗಾಗಿದ್ದರು.

ಹೀಗಿರಲು ಕೆಲ ಸಮಯ ಕಳೆದು ಮೈತ್ರೇಯ ಮಹರ್ಷಿಗಳು ಹಸ್ತಿನಾವತಿಗೆ ಬಂದರು. ಮಹಾರಾಜ ಸ್ವಾಗತಕ್ಕೆ ಸುವ್ಯವಸ್ಥೆ ಮಾಡಿಸಿ ಆದರದಿಂದ ಕರೆತಂದು ಸತ್ಕರಿಸಿ, “ಬಂದ ವಿಚಾರ ತಿಳಿಸಬೇಕು. ನಮ್ಮಿಂದ ಏನಾದರು ಸೇವೆ ಆಗಬೇಕಿದ್ದರೆ ಅಪ್ಪಣೆಯಾಗಲಿ. ಶೀಘ್ರವಾಗಿ ನಡೆಸಿಕೊಡುತ್ತೇವೆ” ಎಂದು ಧೃತರಾಷ್ಟ್ರ ಬೇಡಿಕೊಂಡನು.

ಮೈತ್ರೇಯರು ಧೃತರಾಷ್ಟ್ರನ ಆತಿಥ್ಯ- ಸತ್ಕಾರವನ್ನು ಮೆಚ್ಚಿ ಹರಸಿದರು. ಬಳಿಕ ಮಾತಿಗಾರಂಭಿಸಿದ ಅವರು – “ಪಾಂಡವರು ದ್ಯೂತದಲ್ಲಿ ಸೋತು ಒಪ್ಪಂದದಂತೆ ಕಾಡಾಡಿಗಳಾಗಿ ಬದುಕುತ್ತಿರುವ ವಿಷಯ ಕೇಳಿ ತಿಳಿದೆ. ಅಯ್ಯಾ ಧೃತರಾಷ್ಟ್ರ ಮಹಾರಾಜನಾಗಿ ನೀನು ದ್ಯೂತಕ್ಕೆ ಅನುಮತಿಯಾದರೂ ಹೇಗೆ ನೀಡಿದೆ? ಪತನ ಹೇತುವಾದ, ಕುಲನಾಶಕವಾದ ವ್ಯಸನಕ್ಕೆ ಸೋದರರನ್ನೇ ಒಡ್ಡಿ ಆಡಿಸುವ ತಂತ್ರ ಹೂಡಿದೆ. ಪಾಂಡವರು ಪರಮ ಧರ್ಮಿಷ್ಠರು, ಸತ್ಯಾತ್ಮರು. ಮಾತ್ರವಲ್ಲ ವನವಾಸದಲ್ಲೂ ಸ್ವಯಂ ರಕ್ಷಣೆ ಮಾಡಿಕೊಂಡು ಬದುಕಿರಬಲ್ಲ ಸಮರ್ಥರು. ಅಷ್ಟೇ ಅಲ್ಲ ಜಾಣರೂ, ಪ್ರಬಲರೂ ಆಗಿದ್ದು ಪಣದಂತೆ ತ್ರಯೋದಶ ಸಂವತ್ಸರ ಕಳೆದು ವೇಗ ಗಮನದೊಂದಿಗೆ ಧೂಳೆಬ್ಬಿಸುತ್ತಾ ಹಸ್ತಿನೆಗೆ ಬಂದೇ ಬರುತ್ತಾರೆ. ಪಾಂಚಾಲದ ದ್ರುಪದ ಹಾಗು ದ್ವಾರಕೆಯ ರಾಮಕೃಷ್ಣರು ಪಾಂಡವರಿಗೆ ಮಹಾಬಲವಾಗಿದ್ದಾರೆ. ಸಜ್ಜನರಿಗೆ ಅನ್ಯಾಯವೆಸಗಿ ನೀವು ಪಾಪಿಗಳಾಗಿದ್ದೀರಿ. ಪ್ರಬಲರಾದವನ್ನು ಇದಿರು ಹಾಕಿಕೊಂಡು ವಂಶದ ಸರ್ವನಾಶಕ್ಕೆ ಮೂಲ ಕಾರಣನಾದೆ. ರಾಜ ನೀತಿಯಂತೆ ಪ್ರಬಲರೊಡನೆ ಸಖ್ಯವೇ ಸೂಕ್ತವಾಗಿತ್ತು” ಎಂದರು.

ಮತ್ತೆ ಮಾತು ಮುಂದುವರಿಸುತ್ತಾ “ಇನ್ನೂ ಕಾಲ ಮಿಂಚಿಲ್ಲ. ಪಾಂಡವರನ್ನು ಕರೆದು ಅವರ ಸಾಮ್ರಾಜ್ಯ ಅವರಿಗೆ ಹಿಂದಿರುಗಿಸು. ಧರ್ಮರಾಯನಲ್ಲಿ ನಿನ್ನ ಮಕ್ಕಳ ತಪ್ಪಿಗಾಗಿ ಕ್ಷಮೆ ಕೇಳುವುದು ಉತ್ತಮ. ಪಾಂಡವರು ಪ್ರತಿಜ್ಞಾ ಬದ್ದರಾಗಿದ್ದು, ತಪ್ಪಿದರೆ ಮಹಾಪಾತಕವೆ ತಮಗೊದಗಲಿ ಎಂದು ಹೇಳಿದ್ದಾರೆ. ಹೀಗಿದ್ದೂ ಅವರ ವಚನವನ್ನು ಹಿಂಪಡೆಯುವಂತೆ ಮಾಡಿಸಿ, ಅವರನ್ನು ಸಂತೈಸಬಹುದು. ಪ್ರತಿಜ್ಞೆಗೆ ಪ್ರತಿಯಾಗಿ ಪ್ರಾಯಶ್ಚಿತ್ತ ವೈದಿಕ, ಹೋಮ ಹವನಗಳನ್ನು ಮಾಡಿಕೊಳ್ಳಬಹುದು. ಪಾಂಡವರು ಖಂಡಿತಾ ಒಪ್ಪಿಕೊಂಡು, ಹಸ್ತಿನೆಯ ಸಾಮ್ರಾಜ್ಯದ ರಕ್ಷಣೆಗೆ ಸದಾಸಿದ್ದರಾಗುತ್ತಾರೆ. ದ್ರೌಪದಿಯ ಜೊತೆ ನಿಮ್ಮಿಂದಾದ ಅಕ್ಷಮ್ಯ ಅಪರಾಧಕ್ಕೆ ಕ್ಷಮೆಯೆ ಇಲ್ಲ. ಆದರೂ ನಿನ್ನ ಮಕ್ಕಳು ಚಂದ್ರವಂಶದ ಕುಲವಧು ದ್ರೌಪದಿಗೆ ಪಾದಸ್ಪರ್ಶಿ ಪ್ರಣಾಮ ಸಲ್ಲಿಸಿ ಕ್ಷಮೆ ಕೇಳಬೇಕು. ಆಕೆ ಕ್ಷಮಿಸಿದರಷ್ಟೇ ನಿಮಗೆ ಸುಖ ಪ್ರಾಪ್ತವಾದೀತು. ಇಲ್ಲವಾದಲ್ಲಿ ನಿನ್ನ ಮಕ್ಕಳ ಸಹಿತ ನಿನ್ನ ಪರಿವಾರ ಸರ್ವನಾಶವಾದೀತು” ಎಂದು ಎಚ್ಚರಿಸಿದರು.

ಇದನ್ನು ಕೇಳಿದ ದುರ್ಯೋಧನ ತೊಡೆ ತಟ್ಟಿ ಅಪಹಾಸ್ಯ ಮಾಡುತ್ತಾ “ಋಷಿ ಮುನಿಗಳೂ ಪಕ್ಷಪಾತಿಗಳಾಗಿ ಬಿಟ್ಟಿರಾ? ಕಾಡಿನಲ್ಲಿರುವ ಪಾಂಡವರ ದೂತನಾಗಿ ಬೆದರಿಸಲು ಬಂದಿದ್ದೀರಾ? ನಿಮ್ಮ ಇಂತಹ ಮಾತಿಗೆಲ್ಲಾ ಅಂಜಿ ಅಳುಕುವ ಪ್ರಮೇಯವೆ ಇಲ್ಲ. ಕಾಡಿನಲ್ಲಿ ಇದ್ದು ತಲೆಕೆಟ್ಟಿರಬೇಕು ನಿಮಗೆ” ಎಂದು ಹೇಳುತ್ತಾ, ಹೀಯಾಳಿಸಿ, ತೊಡೆ ತಟ್ಟುತ್ತಾ, ಸವರುತ್ತಾ ವ್ಯಂಗ್ಯವಾಗಿ ನುಡಿದನು.

ದುರ್ಯೋಧನನ ಮದಾಂಧತೆಯನ್ನು ಕಂಡು ಕೋಪೋಧ್ರಿಕ್ತರಾದ ಮೈತ್ರೇಯರು ಶಾಪವಾಕ್ಯ ಉಚ್ಚರಿಸತೊಡಗಿದರು…”

ಮುಂದುವರಿಯುವುದ

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page