ಭಾಗ 175
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೭೬ ಮಹಾಭಾರತ
ಹೀಗೆ ಧರ್ಮರಾಯ ಯೋಚನಾಮಗ್ನನಾಗಿ ಇರುವುದನ್ನು ಕಂಡು ಶಕುನಿ ಗಾಬರಿಗೊಳಗಾದನು. ಈ ಧರ್ಮರಾಯನೇನಾದರೂ ಈಗಾಗಲೆ ನಡೆದ ದ್ಯೂತದ ಅನರ್ಥ ವಿವರಿಸಿ, ನೆಪ ಹೇಳಿ ದ್ಯೂತ ನಿರಾಕರಿಸಿದರೆ, ಇಲ್ಲಿರುವವರು ಬೆಂಬಲಿಸಿದರೆ, ನಮ್ಮ ಯೋಚನೆಯ ಯೋಜನೆ ಸಾಕಾರಗೊಳ್ಳದು. ಹಾಗಾಗಿ ವೇಳೆ ಕಳೆಯಗೊಡದೆ ಧರ್ಮರಾಯನ ಚಿತ್ತ ಸೆಳೆಯಬೇಕೆಂದು ನಿರ್ಧರಿಸಿದನು. “ಚಕ್ರವರ್ತಿ ಧರ್ಮರಾಯ, ದ್ಯೂತಕ್ಕೆ ಹೆದರಿದಂತೆ ಕಾಣುತ್ತಿದೆ. ಮುಖ ಮನಸ್ಸಿನ ಕನ್ನಡಿ – ಅಂಜಿಕೆ ಎದ್ದು ಕಾಣುತ್ತಿದೆ. ವೀರ ಕ್ಷತ್ರಿಯನಾದವನು ಯುದ್ದ ಮತ್ತು ದ್ಯೂತದ ನಿಮಂತ್ರಣವನ್ನು ಸಮನಾಗಿ ಸ್ವೀಕರಿಸುವುದು ಧರ್ಮ ಎಂದು ನಿನಗೆ ತಿಳಿದಿದೆ ಎಂದು ಭಾವಿಸುವೆ. ಆದರೂ ಶಿಷ್ಟಾಚಾರಕ್ಕಾಗಿ ನಿನ್ನಲ್ಲೊಂದು ಪ್ರಶ್ನೆ – ದ್ಯೂತದ ಆಹ್ವಾನ ನಿನಗೆ ಒಪ್ಪಿಗೆಯೇ? ದ್ಯೂತವಾಡಲು ನೀನು ಸಿದ್ಧನಾಗಿರುವೆಯೊ? ಒತ್ತಾಯವೇನೂ ಇಲ್ಲ, ಭಯವಿದ್ದರೆ ಹೇಳು ನಿನ್ನಲ್ಲಿರಬೇಕಾದ ಕ್ಷಾತ್ರ ಗುಣಕ್ಕೆ ಅಪಚಾರವಾದೀತು. ಆದರೂ ನಾವು ನಮ್ಮ ಪಂಥಾಹ್ವಾನವನ್ನು ಹಿಂಪಡೆಯುತ್ತೇವೆ” ಎಂದು ಹೇಳಿ ಉದ್ರೇಕಿಸಿ ಕೆಣಕುವ ಧಾಟಿಯಲ್ಲಿ ಮಾತನ್ನಾಡಿದನು. ಶಕುನಿಗೆ ಗೊತ್ತಿದೆ ಕಬ್ಬಿಣ ಕಾದಾಗಲೆ ಬಡಿಯಬೇಕು – ಆಗಲೇ ಅದು ನಾವು ಬಯಸಿದ ಆಕೃತಿ ತಳೆಯುತ್ತದೆ ಎಂದು. ಆದರೆ ಯುಧಿಷ್ಠಿರ ಶಕುನಿ ತರ್ಕಿಸಿದಂತೆ ವಿಚಲಿತನಾಗುವ ಚಾಂಚಲ್ಯ ಹೊಂದಿದವನಲ್ಲ. ಧರ್ಮಾಧರ್ಮದ ವಿವೇಚನೆಯಲ್ಲಿ ತನ್ಮಯನಾಗಿ ಉಚಿತಾನುಚಿತ ನಿರ್ಧಾರಕ್ಕಾಗಿ ಯೋಚಿಸುತ್ತಿದ್ದನು. ಇಂದಿನ ದ್ಯೂತದ ಫಲಿತಾಂಶ – ಪರಿಣಾಮ ಏನೆಂದು ಪೂರ್ವದಲ್ಲೇ ತರ್ಕಿಸಿ, ಭವಿಷ್ಯದ ದಿನಗಳ ಕಲ್ಪನೆ ಮಾಡುತ್ತಿದ್ದನು. ಎಲ್ಲವೂ ದೈವೇಚ್ಚೆ, ಮಾನುಷ ಪ್ರಯತ್ನದಿಂದ ಘಟಿಸಬೇಕಾದದ್ದನ್ನು ತಡೆಯಲು ಸಾಧ್ಯವಿಲ್ಲ. ಧರ್ಮಪಥವನ್ನು ಅನುಸರಿಸಿ ಎದುರಾಗಬಹುದಾದ ಸವಾಲನ್ನು ಸ್ವೀಕರಿಸಲು ಸಿದ್ಧನಾಗಿ ಒಪ್ಪಿಗೆ ಸೂಚಿಸಿದನು.
ದ್ಯೂತಕ್ಕೆ ಧರ್ಮರಾಯ ಸಮ್ಮತಿ ನೀಡಿದ್ದೇ ತಡ ಶಕುನಿಯ ಮುಖ ಹಿಗ್ಗಿತು. ದುರ್ಯೋಧನನತ್ತ ಮಂದಹಾಸ ಬೀರಿ ನಮ್ಮ ತಂತ್ರ ಫಲಿಸಿತು ಎಂಬಂತೆ ಸೂಚಕ ಭಾವ ಪ್ರಕಟಿಸಿದನು. ಧರ್ಮರಾಯನತ್ತ ತಿರುಗಿ “ಆಟದ ನಿಬಂಧನೆ ಮತ್ತೊಮ್ಮೆ ನೆನಪಿಸುವೆ. ನಾವು ಒಂದೇ ಆಟ ಆಡುತ್ತೇವೆ. ಯಾರು ಸೋಲುತ್ತಾರೋ ಅವರು ಹನ್ನೆರಡು ವರ್ಷ ವನವಾಸ ಮತ್ತೊಂದು ವರ್ಷ ಅಜ್ಞಾತವಾಸ ಪೂರೈಸಬೇಕು. ಅಜ್ಞಾತವಾಸದ ಕಾಲವನ್ನು ಒಂದೆಡೆ ನೆಲೆ ನಿಂತು ಮಾರು ವೇಷದಲ್ಲಿ ಕಳೆಯುವಾಗ ಜ್ಞಾತರಾದರೆ ಮತ್ತೆ ಮೊದಲಿನಂತೆ ವನವಾಸ ಪೂರೈಸಿ ಅಜ್ಞಾತರಾಗಬೇಕು. ಈ ಪರಿಭ್ರಮಣೆ ನಿಯಮಬದ್ದ ಹದಿಮೂರು ವರ್ಷ ಸಮಾಪ್ತಿವರೆಗೆ ನಿರಂತರವಾಗಿರುತ್ತದೆ” ಎಂದನು. ಧರ್ಮರಾಯನು ಒಪ್ಪಿ ಆಟ ಆರಂಭವಾಯಿತು – ಸಾಗಿತು ಆಟ- ಶಕುನಿಯ ಪಾಲಿಗೆ ಜಯವಾಯಿತು.
ಪೂರ್ವ ನಿರ್ಧಾರಿತ ನಿಯಮದಂತೆ ಪಾಂಡವರು ರಾಜ ಪೋಷಾಕುಗಳನ್ನು ಬದಲಿಸಿ ವಲ್ಕಲಧಾರಿಗಳಾದರು. ಅನುಸರಿಸಿ ದ್ರೌಪದಿಯೂ ಜೊತೆಯಾಗಿ ಸಿದ್ಧಳಾಗಿ ನಿಂತಳು. ಇವರ ಈ ಸ್ಥಿತಿಯನ್ನು ಕಂಡು ದುಶ್ಯಾಸನನ ಸಂತೋಷ ಅನಿಯಂತ್ರಿತವಾಯಿತು. ಅಪಹಾಸ್ಯ ನಿಂದನೆಯ ಮಾತುಗಳನ್ನಾಡ ತೊಡಗಿದ. “ಕಾಡಿನಲ್ಲೆ ಹುಟ್ಟಿ ಬೆಳೆದ ನಿಮಗೆ ವನವಾಸವೆ ಶ್ರೇಯಸ್ಕರ. ರಾಜಕೀಯದ ಬದುಕು ಒಪ್ಪುವುದಿಲ್ಲ. ಗೆಡ್ಡೆ ಗೆಣಸು ತಿನ್ನುತ್ತಾ ಬೆಳೆದ ನಿಮ್ಮ ಬಾಲ್ಯ ಮತ್ತೆ ನಿಮಗೊದಗಿದೆ. ಕಾಡು ಮನುಷ್ಯರಾಗಿಯೇ ಬದುಕಬೇಕಾದವರು”. ದುಶ್ಯಾಸನನ ಮೂದಲಿಕೆ ಭೀಮನನ್ನು ಕೆರಳಿಸಿತು, ಬದಿಗಿರಿಸಿದ್ದ ಗದೆಯನ್ನೆತ್ತಿ ಬೀಸಿ ಭುಜವೇರೆಸಿದ. ಬಲವಾಗಿ ಭೂಮಿ ಬಿರಿಯುವಂತೆ ಬಲಗಾಲಿಂದ ಅಪ್ಪಳಿಸಿದಾಗ ಉಂಟಾದ ಕಂಪನದಿಂದ ಒಮ್ಮೆಗೆ ನಡುಗಿ ಸುಮ್ಮನಾಗಿ ದುಶ್ಯಾಸನ ಬಾಯಿ ಮುಚ್ಚಿದನು. ಧರ್ಮರಾಯ ಭೀಮನತ್ತ ತಿರುಗಿ ಸುಮ್ಮನಿರು ಎಂದು ಅಸಹನೆಯ ನೋಟ ಬೀರಿದ ಕಾರಣದಿಂದ ಸೈರಿಸಿ ನಿಂತನು. ಯುಧಿಷ್ಠಿರ ಸ್ಥಿತ ಪ್ರಜ್ಞನಾಗಿ ಹಿರಿಯರೆಲ್ಲರ ಆಶೀರ್ವಾದ ಪಡೆದು ವನವಾಸಕ್ಕೆ ಹೊರಡಲನುವಾದಾಗ ಸೋದರರು ಹಾಗೆಯೇ ನಮಿಸಿ ಸಿದ್ದರಾದರು. ಭೀಮನು ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದಾಗ ದುರ್ಯೋಧನ ಹಾಗೆಯೇ ನಡೆದು ಅಣಕಿಸಿ ಗೊಳ್ಳೆಂದು ನಗೆಯಾಡಿದನು. ಆತನ ಸಂಗಡಿಗರಾದ ಕರ್ಣ ದುಶ್ಯಾಸನ ಶಕುನಿಯಾದಿಗಳೆಲ್ಲರೂ ಹರ್ಷಚಿತ್ತರಾಗಿ ಸಂಭ್ರಮಿಸಿದರು.
ಅಣಕವಾಡಿದ ನೀಚತನವನ್ನು ಕಂಡು ಕ್ರೋಧಾವೇಶಕ್ಕೊಳಗಾದ ಭೀಮಸೇನ ಹಿಂದಿರುಗಿ ನಾಲ್ಕು ಹೆಜ್ಜೆ ಮುಂದೆ ಬಂದು ಎಚ್ಚರಿಸಿದ ” ಎಲವೋ ದುಷ್ಟ ದುರ್ಯೋಧನ ನನ್ನನ್ನು ಕೆಣಕುವ ದುಸ್ಸಾಹಸಕ್ಕೆ ಮನಮಾಡಿದೆ. ಅಣ್ಣ ಧರ್ಮರಾಯನ ಸತ್ಯ – ಧರ್ಮಪಾಲನೆಗೆ ನಾವೂ ಬಾಧ್ಯರು ಎಂಬ ಒಂದೇ ಕಾರಣದಿಂದ ನೀವಿಂದು ಉಸಿರಾಡುತ್ತಿದ್ದೀರಿ. ಧರ್ಮಾತ್ಮರಾಗಿ ಬದುಕುವ ನಾವು ಸತ್ಯಸಂಧರೂ ಹೌದು. ನನ್ನ ಪ್ರತಿಜ್ಞಾ ವಾಕ್ಯ ನಿಮ್ಮ ನೆನಪಿನಲ್ಲಿ ಹಸಿಯಾಗಿರಲಿ. ಇಂದಿನಿಂದ ಹದಿಮೂರು ವರ್ಷ ಕಾಲ ನಿರ್ಭಯನಾಗಿ ಬಾಳು. ಅಷ್ಟು ಕಾಲ ಯಮನೂ ನಿನ್ನ ಬಳಿ ಬರಲಾರ – ಕಾರಣ ನನ್ನ ಪ್ರತಿಜ್ಞಾ ವಾಕ್ಯವೇ ನಿನಗೆ ರಕ್ಷಣೆ. ನೀವು ನೂರಕ್ಕೆ ನೂರು ಮಂದಿ ಕೌರವರ ರಕ್ತತರ್ಪಣ ಪಡೆದು ನನ್ನ ಈ ರುಧಿರಮುಖಿ ಗದೆ ಅದರ ಹೆಸರನ್ನುಳಿಸಲಿದೆ. ಒಬ್ಬೊಬ್ಬರನ್ನು ಹಿಡಿದು ಸಿಗಿದು ನಿಮ್ಮ ಪಾತಕವನ್ನು ಪ್ರಮಾಣೀಕರಿಸದಿದ್ದರೆ ವಚನಭ್ರಷ್ಟನಾದ ನನಗೆ ಪುಣ್ಯಲೋಕಗಳೇನಿವೆಯೋ ಅವು ದುರ್ಲಭವಾಗಲಿ” ಎಂದು ಘರ್ಜಿಸಿ ನುಡಿದನು. ಬಳಿಕ ಧೃತರಾಷ್ಟ್ರನೆಡೆಗೆ ತಿರುಗಿ “ಮಹಾರಾಜರೇ ನಿಮ್ಮ ಮಕ್ಕಳು ಇಂದಿನಿಂದ ಹದಿಮೂರು ವರ್ಷ ಮಾತ್ರ ನಿಮ್ಮ ಜೊತೆ ಇರುತ್ತಾರೆ. ಅಲ್ಲಿಯವರೆಗೆ ಚೆನ್ನಾಗಿ ನೋಡಿಕೊಳ್ಳಿ. ಮತ್ತೆ ನಾನು ಬಂದರೆ ಸರ್ವನಾಶದ ಪ್ರತೀಕ್ಷೆಯಷ್ಟೇ ನಿಮಗುಳಿಯುವುದು” ಎಂದು ನುಡಿದು ಮತ್ತೊಮ್ಮೆಆರ್ಭಟಿಸಿ ಅಬ್ಬರಿಸಿದನು.
ಅರ್ಜುನನೂ ತಿರುಗಿ, “ಎಲವೋ ಕರ್ಣ ನಿನಗೆ ನನ್ನ ಪ್ರತಿಕಾರದ ವಿಸ್ಮರಣೆಯಾಗದಿರಲಿ. ಕುತಂತ್ರಕ್ಕೆ ಸಹಚರನಾಗಿ, ಕುಹಕದ ನುಡಿಗಳನ್ನಾಡಿ ಕುಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಾ ಬದುಕಿದ ನಿನ್ನ ಜೀವನಾಂತ್ಯ ನನ್ನ ಕೈಗಳಿಂದಲೇ ಆಗಲಿದೆ ಎಂಬುವುದನ್ನು ಮರೆಯಬೇಡ” ಎಂದು ಚತುರ್ದಿಕ್ಕುಗಳು ಪ್ರತಿಧ್ವನಿಸುವಂತೆ ಘೋಷಿಸಿ ನಿಂತನು.
ನಕುಲ ಸಹದೇವರು ಶಕುನಿಯ ದುಷ್ಕೃತ್ಯಗಳನ್ನು ಹೇಳಿ ಪ್ರಾಯಶ್ಚಿತ್ತ ಅನುಭವಿಸುವ ಕಾಲ ದೂರವಿಲ್ಲ. ಸಮಯದ ನಿಗದಿಯನ್ನು ನೀನೆ ನಿರ್ಧರಿಸಿ ಮುಹೂರ್ತವಿಟ್ಟಂತಾಗಿದೆ. ನಿನ್ನ ಕಣ್ಣೆದುರಲ್ಲೇ ಸಂತತಿ ನಿರ್ವಂಶವಾದ ಬಳಿಕ ಅನಾಥನಾಗಿ ಬದುಕಲು ಓಡುವ ನಿನ್ನನ್ನು ಬೆಂಬತ್ತಿ ಸೀಳಿ ಬಿಸಾಡುವ ಕ್ಷಣಗಳ ಕಲ್ಪನೆ ಘೋರ ಕನಸಾಗಿ ನಿದ್ದೆ ಬೀಳದಂತೆ ನಿನ್ನನ್ನು ಭಯಗ್ರಸ್ಥನನ್ನಾಗಿಸಲಿ” ಎಂದು ಪ್ರತಿಜ್ಞೆ ಪುನರುಚ್ಚರಿಸಿ ಎಚ್ಚರಿಸಿದರು.
ಧೃತರಾಷ್ಟ್ರ ಬಹಳಷ್ಟು ಭಯಗೊಂಡಿದ್ದಾನೆ. ಕಾರಣ ಪಾಂಡು ಪುತ್ರರ ವಿಕ್ರಮ ಮತ್ತು ಧರ್ಮದ ನಡೆಯ ಮೇಲೆ ಆತನಿಗೆ ವಿಶ್ವಾಸವಿತ್ತು. ಆದರೆ ಮತ್ತೆ ಮಾತನಾಡಿದರೆ ಮಕ್ಕಳಿಗೆ ನಿರಾಶೆಯಾದೀತು ಎಂದು ಮೌನಿಯಾಗಿ ನಿಂತು ಪ್ರತಿಕ್ರಿಯೆ ನೀಡದೆ ಸ್ಥಂಭೀಭೂತನಾಗಿ ಉಳಿದನು. ಪಾಂಡವರು ದ್ರೌಪದಿ ಕುಂತಿ ಸಮೇತರಾಗಿ ವನವಾಸಕ್ಕೆ ಹೊರಟರು.
ಮುಂದುವರಿಯುವುದು…..




