25 C
Udupi
Wednesday, February 18, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 170

ಭರತೇಶ ಶೆಟ್ಟಿ,ಎಕ್ಕಾರ್

ದುಷ್ಟ ದುಶ್ಯಾಸನ ನಿರ್ದಾಕ್ಷಿಣ್ಯವಾಗಿ ದ್ರೌಪದಿಯ ಸೆರಗನ್ನು ಜಗ್ಗಿ ಹಿಡಿದೆಳೆಯುತ್ತಿದ್ದಾನೆ. ಏಕ ವಸನಧಾರಿಯಾದ ಮಾತೆ ದ್ರೌಪದಿ ಮಾನ ರಕ್ಷಣೆಗಾಗಿ ತನ್ನ ಸಾಮರ್ಥ್ಯದಿಂದ ಸಾಧ್ಯವಿರುವಷ್ಟು ಸ್ವಯಂ ರಕ್ಷಣೆಗಾಗಿ ಹೋರಾಡಿ, ರಕ್ಷಣೆಗಾಗಿ ಕೂಗಾಡಿದಳು. ಯಾರೂ ಬಾರದೇ ಉಳಿದಾಗ ಆರ್ತಳಾಗಿ ಅನಾಥರಕ್ಷಕ ಭಗವಂತನನ್ನು ನೆನೆದು “ತ್ರಾಹಿ, ತ್ರಾಹೀ, ತ್ರಾಹೀ ಕೃಷ್ಣಾ” ಎಂದು ಮೊರೆ ಇಡುತ್ತಾ… ಎರಡೂ ಕೈಯೆತ್ತಿ ನಮಸ್ಕರಿಸಿ ನಿಂತಳು. “ಹೆಗಲ ಮೇಲಿದೆ ಸೆರಗು… ದುರುಳ ದುಶ್ಯಾಸನನ ಸೆಳೆತದಿಂದ ನನ್ನನ್ನು ಇನ್ನು ರಕ್ಷಿಸಿಕೊಳ್ಳಲಾಗದು. ದೇವಾ! ಮಾನ ಉಳಿಸುವೆಯಾದರೆ ನೀನೊಬ್ಬನೇ… ಮಾನ ಕಳೆದುಕೊಂಡ ಮೇಲೆ ಈ ಪ್ರಾಣವೂ ನನಗೆ ಬೇಡ. ನಿನ್ನ ಪಾದಕ್ಕರ್ಪಿಸುವೆ. ಕಾಯುವೆಯಾದರೂ ಅದೂ ನೀನೇ… ಕಾಯವು ಅಳಿದು ಹೋಗುವುದಾದರೂ ಅದೂ ನಿನ್ನ ಸ್ಮರಣೆಯೊಂದಿಗೇ.. ಹೇ! ಭಕ್ತವತ್ಸಲಾ.. ಇನ್ನೂ ಕಾಯುತ್ತಿರುವೆಯಾ… ಕಾಪಾಡು ದೇವಾ…” ಈ ರೀತಿ ಕಣ್ಣುಚ್ಚಿ, ಕೈಯೆತ್ತಿ ಪೂರ್ಣ ಶರಣಾಗತಿಯೊಂದಿಗೆ ಕೃಷ್ಣನ ಮೇಲೆ ಪೂರ್ಣ ವಿಶ್ವಾಸದಿಂದ ನಿಂತಿದ್ದಾಳೆ ದ್ರೌಪದಿ. ದುಶ್ಯಾಸನ ಸೆಳೆಯುತ್ತಿದ್ದಾನೆ. ಈವರೆಗೆ ಇದ್ದ ಸೆಳೆತ ಗೊತ್ತಾಗದಷ್ಟು ತನ್ಮಯಳಾಗಿ ತನ್ನನ್ನೇ ಮರೆತು ಭಗವಂತನ ಮೊರೆ ಹೊಕ್ಕಿದ್ದಾಳೆ ದ್ರೌಪದಿ.

ಅನಿವಾರ್ಯತೆ ಇರುವ ಕಾಲದಲ್ಲಿ ನೀಡುವ ದಾನ ಮಹತ್ವದ್ದಾಗುತ್ತದೆಯಂತೆ. ಬಾಲ್ಯದಲ್ಲಿ ಬಡ ಬ್ರಾಹ್ಮಣನೋರ್ವ ಚೋರರಿಂದ ಸರ್ವಸ್ವವೂ ಅಪಹರಣಕ್ಕೊಳಗಾಗಿ ಮಾನ ಮುಚ್ಚಲು ಗೋಳಾಡುತ್ತಿರುವಾಗ ತನ್ನ ಸೀರೆಯ ಸೆರಗನ್ನೇ ತುಂಡಾಗಿ ಕತ್ತರಿಸಿ ಉಡುಗೆಯಾಗಿ ನೀಡಿದ್ದಳಂತೆ ದ್ರೌಪದಿ. ಕೃಷ್ಣನ ಕೈಗೆ ಗಾಯವಾದಾಗ ಸೋರುವ ರಕ್ತ ತಡೆಯಲು ಸೆರಗಿನ ತುದಿಯನ್ನೆ ಹರಿದು ಕಟ್ಟಿದ್ದಳಂತೆ. ಆಪತ್ಕಾಲದಲ್ಲಿ ನೀಡಿದ ಮಹಾದಾನದ ಸಂಚಿತ ಪುಣ್ಯ ಫಲಪ್ರಾಪ್ತಿಯೋ, ಶ್ರೀ ಕೃಷ್ಣನ ಅನುಗ್ರಹ ಮಾಯಾ ಲೀಲೆಯೋ. ದುಶ್ಯಾಸನ ಸೆರಗನ್ನು ಸೆಳೆಯುತ್ತಿದ್ದಾನೆ. ಸೆಳೆದು ಸೆಳೆದು ಮೃಗೀಯವಾಗಿ ನರ್ತಿಸಿ ವರ್ತಿಸುತ್ತಿದ್ದರೂ ಮೈಯ ಮೇಲಿನ ಸೀರೆ ಹಾಗೆಯೇ ಇದೆ. ಸೆಳೆದಷ್ಟು ಉದ್ದವಾಗುತ್ತಿದೆಯೋ ಎಂಬಂತಾಗಿದೆ.

ತನ್ನ ಬಲದ ಜೊತೆ, ಪ್ರಯತ್ನವನ್ನೂ ಸೇರಿಸಿ ಮಾನ ರಕ್ಷಣೆಗೆ ಒದ್ದಾಡುತ್ತಿದ್ದವಳು ದ್ರೌಪದಿ. ಯಾವ ಕ್ಷಣದಲ್ಲಿ ಪೂರ್ಣ ವಿಶ್ವಾಸದಿಂದ ಭಗವಂತಾ ನೀನೇ ಕಾಯಬೇಕೆಂದು ಪರಿಪೂರ್ಣ ಶರಣಾಗತಿಯಿಂದ ಅನ್ಯ ಯಾವ ಭಾವ ವ್ಯತ್ಯಾಸವಾಗಲಿ, ಪ್ರಯತ್ನವನ್ನಾಗಲಿ ಮಾಡದೆ ಮೊರೆ ಹೋದ ಕಾಲಕ್ಕೆ ಅಕ್ಷಯವಾಯಿತು ಸೀರೆ. ಎಳೆದಷ್ಟೂ ಉದ್ದವಾಯಿತು. ಸೆಳೆದಷ್ಟೂ ಬೆಳೆಯಿತು. ಸೆಳೆದು ಹಾಕಿದ ಸೀರೆಯ ರಾಶಿ ಆಳೆತ್ತರಕ್ಕೇರಿತು. ದುಶ್ಯಾಸನನ ಕಾಲುಗಳೆಡೆಯಲ್ಲಿ ಸಿಲುಕಿ ಕಾಲು ಕಟ್ಟಿ ಬಿದ್ದು ಎದ್ದು ಎಳೆದರೂ ಮುಗಿಯದಾಯಿತು. ದಣಿದನು, ಬೇಸತ್ತನು, ಮತ್ತೂ ಎದ್ದು ಎಳೆದನು, ಹಠ ಬಿಡದೆ ಸೆಳೆದರೂ ಮುಗಿಯುತ್ತಿಲ್ಲ. ಇದ್ದ ಬಲ ಕ್ರೋಢಿಕರಿಸಿ ಎಳೆದು ತಿರು – ತಿರುಗಿ ಸೆಳೆದಾಗ ತಲೆತಿರುಗಿ ನಿತ್ರಾಣನಾಗಿ ಬಿದ್ದು ಬಿಟ್ಟನು. ಆತನೆಳೆದು ಹಾಕಿದ ಸೀರೆ ಆತನಿಗೆ ಸುತ್ತಿಕೊಂಡು, ಬಂಧಿಸಲ್ಪಟ್ಟು ಬಿಡುಗಡೆಗಾಗಿ ಪರದಾಡುತ್ತಾ ಒದ್ದಾಡುವಂತಾಯಿತು ಆತನ ದುಸ್ಥಿತಿ.

ಅಕ್ಷಯಾಂಬರವಾಯಿತು ದ್ರೌಪದಿಯದ್ದು. ಶ್ರೀ ಕೃಷ್ಣನ ಅಭಯಪ್ರದ ಕರುಣೆಯ ಕೃಪಾಕಟಾಕ್ಷದೊಳಗೆ ಎಳೆ ಮಗುವಿನಂತೆ ಭದ್ರವಾಗುಳಿದಳು ಯಾಜ್ಞಸೇನೆ. ಅಧರ್ಮಿಯಾಗಿ ಅಕ್ಷಮ್ಯ ಕೃತ್ಯವೆಸಗತೊಡಗಿದ ದುಶ್ಯಾಸನ ಗಂಟಲೊಣಗಿ, ಬಾಯಾರಿ, ಶರೀರ ನಿತ್ರಾಣವಾಗಿ, ತಲೆತಿರುಗಿ, ನಿಸ್ತೇಜನಾಗಿ ಬಿದ್ದು ಏಳಲಾರದೆ ತೊಳಲಾಡುತ್ತಿದ್ದಾನೆ. ಕಾಯುವ ಭಗವಂತನಿಗೆ ಭಕ್ತರನ್ನು ಪಾಲಿಸಲು ಸದ್ಭಕ್ತಿಯ ಕರೆಯೊಂದೆ ಸಾಕು. ಸಭೆಯ ಸಜ್ಜನರು ರೋಮಾಂಚನಗೊಂಡು “ದೇವರು ದೊಡ್ಡವನು, ದ್ರೌಪದಿಯ ಕರೆಗೆ ಕರುಣೆದೋರಿ ಕಾಪಾಡಿದ್ದಾನೆ. ಅಧರ್ಮ ತಡೆಯಲಾಗದೆ, ದೌರ್ಭಾಗ್ಯವಂತರಾಗಿ ನೋಡುತ್ತಾ ಕುಳಿತ ಕಾರಣ ಮನ ಮಾಡಿದ್ದ ಅಪರಾಧಿ ಭಾವವೂ ದೂರವಾಯಿತು. ಅಬಲೆಯ ಮಾನವನ್ನೂ ಉಳಿಸಿ, ಪಾತಕಕ್ಕೆ ಗುರಿಯಾಗಬೇಕಿದ್ದ ನಮ್ಮನ್ನೂ ರಕ್ಷಿಸಿದೆ ದೇವಾ… ನಿನ್ನ ಲೀಲೆ ಅಪಾರ ಭಕ್ತವತ್ಸಲಾ” ಎಂದು ಪ್ರಾರ್ಥಿಸಿ ಸ್ತುತಿಸತೊಡಗಿದರು.

ಪಾಂಡವರು ಕೃಷ್ಣನಿಗೆ ವಂದಿಸುತ್ತಾ ಪ್ರಸನ್ನವದನರಾದರು. ಸಭೆಯಲ್ಲಿ ಜನರ ಉದ್ಘಾರ ಕೇಳಿ ಧೃತರಾಷ್ಟ್ರ ಏನೂ ಅರ್ಥವಾಗದೆ ಕೇಳತೊಡಗಿದ್ದಾನೆ “ಏನಾಗುತ್ತಿದೆ ಇಲ್ಲಿ? ಯಾಕೆ ಈ ಬದಲಾವಣೆ? ಯಾರ ಸ್ತುತಿ ಮಾಡುತ್ತಿದ್ದೀರಿ? ವ್ಯತ್ಯಾಸದ ಸ್ವರಗಳು ಯಾರಿಂದಾಗಿ?” ಮಹಾರಾಜನ ಪ್ರಶ್ನೆಗಳಿಗೆ ಯಾರೂ ಉತ್ತರಿಸುತ್ತಿಲ್ಲ.

ಕೌರವನ ಪಾಳಯದಲ್ಲಿ ಆತಂಕ, ಭಯ ಮೂಡಿದರೂ ತೋರಗೊಡಲಿಲ್ಲ. ದುರ್ಯೋಧನನ ಮುಖಭಾವ ನೋಡಿ ಅರಿತ ಕರ್ಣ ಮಾತಿಗಾರಂಭಿಸಿದ “ಎಲೌ ದ್ರೌಪದಿ! ಈಗಾಗಲೇ ನೀನು ಸೋತು ದಣಿದಿರುವೆ. ಪಾಂಡವರು ಐವರನ್ನು ವರಿಸಿಯೂ ನಿನಗೆ ಸುಖವಿಲ್ಲ, ರಕ್ಷಣೆಯಿಲ್ಲ ಎಂದು ಗೊತ್ತಾಯಿತಲ್ಲ ಈಗ. ನಿನ್ನ ಮೇಲೆ ಕರುಣೆದೋರಿ ಮುಕ್ತಗೊಳಿಸುತ್ತಿದ್ದೇವೆ. ಇನ್ನು ನೀನು ದುರ್ಯೋಧನನಿಗೆ ಅಧೀನಳು. ಆತನ ಅಂತಃಪುರದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೇಕಾದರೂ ಬದುಕಬಹುದು. ಕೌರವನ ತೊಡೆಯೇರಿಯೂ ಕುಳಿತು ಕೊಳ್ಳುವ ಅವಕಾಶ ನಿನಗೆ ನೀಡುತ್ತಿದ್ದೇವೆ” ಎಂದನು. ಕರ್ಣನ ಮಾತುಗಳು ದುರ್ಯೋಧನನಿಗೆ ಹಿತವಾಗಿ ಮನಸ್ಸಿಗೆ ಸಮಾಧಾನ ನೀಡಿತು. ಮೀಸೆ ತಿರುವುತ್ತಾ ತನ್ನ ತೊಡೆಯ ವಸ್ತ್ರ ಸರಿ ಪಡಿಸುತ್ತಾ “ಭಲೇ ಕರ್ಣ ಭಲೇ! ಸರಿಯಾದ ವಿಚಾರವನ್ನೇ ಪ್ರಸ್ತಾಪಿಸಿದೆ.” ಹೀಗೆ ಹೇಳುತ್ತಾ ದ್ರೌಪದಿಯತ್ತ ನೋಡಿ ಬಾಯಿ ಚಪ್ಪರಿಸುತ್ತಾ ತೊಡೆ ತಟ್ಟ ತೊಡಗಿದನು.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page