28.9 C
Udupi
Saturday, February 21, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 167

ಭರತೇಶ್ ಶೆಟ್ಟಿ ಎಕ್ಕಾರ್

ಸಂಚಿಕೆ ೧೬೮ ಮಹಾಭಾರತ

ಪ್ರಶ್ನೆ ಕೇಳಿಸಿಕೊಂಡ ಧರ್ಮರಾಯ ಪತಿಗೆ ಪತ್ನಿಯ ಮೇಲೆ ಯಾವ ಸ್ಥಿತಿಯಲ್ಲಿಯೂ ಸಮಾನ ಅಧಿಕಾರ ಇರುತ್ತದೆ ಎಂಬ ಶಾಸ್ತ್ರ ನಿಯಮ ಗೊತ್ತಿದ್ದರೂ ಉತ್ತರಿಸದೆ ಈ ಹೊತ್ತು ಯೋಚನಾ ಮಗ್ನನಾಗಿ ಮೌನಕ್ಕೆ ಶರಣಾದನು. ಉಳಿದ ಪಾಂಡವರು ಅಣ್ಣ ಏನೆನ್ನುತ್ತಾನೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ದುರ್ಯೋಧನನು ಅಹಂಕಾರದಿಂದ “ಆಕೆಯ ತಕರಾರು ಏನಿದ್ದರೂ ಈ ಸಭೆಗೆ ಬಂದು ಪರಿಹರಿಸಿಕೊಳ್ಳಲಿ. ಅಲ್ಲಿಂದ ದೂತನ ಮುಖೇನ ಹೇಳಿ ಕಳುಹಿಸುವ ದೊಡ್ಡಸ್ತಿಕೆ ಆಕೆಗಿಲ್ಲ. ರಾಜಾಜ್ಞೆಗೆ ಶಿರಬಾಗಿ ಓಡಿ ಬರಬೇಕಂತೆ ಎಂದು ಹೇಳು ಆ ದಾಸಿಗೆ. ಹಾ! ದುರ್ಯೋಧನನ ಅಪ್ಪಣೆ ಎಂದು ಎಚ್ಚರಿಸು” ಎಂದು ಹೇಳಿ ಪ್ರಾತಿಕಾಮಿಯನ್ನು ಕಳುಹಿಸಿದನು.

ಅಂತೆಯೇ ಧರ್ಮಸಂಕಟಕ್ಕೊಳಗಾಗಿ ಪ್ರಾತಿಕಾಮಿ ಬಂದು ವಿಚಾರವೆಲ್ಲವನ್ನು ದ್ರೌಪದಿಗೆ ತಿಳುಹಿಸಿದನು. “ಸರಿ ಆಗಲಿ. ನಾನು ಕೇಳಿರುವ ಪ್ರಶ್ನೆ ಧರ್ಮ ಸಮ್ಮತವಾಗಿಯೇ ಇತ್ತು. ಆ ಸಭೆಯಲ್ಲಿ ಧರ್ಮಾತ್ಮರೂ, ಪ್ರಾಜ್ಞರೂ, ನೀತಿವಂತರೆಲ್ಲಾ ಇದ್ದಾರೆ. ಆದರೂ ನನ್ನ ಪ್ರಶ್ನೆಗೆ ಉತ್ತರಿಸುವ ಧರ್ಮ ಪ್ರಜ್ಞೆ ಯಾವಾಗ ಆ ಸಭೆಯಲ್ಲಿ ಮೂಡಲಿಲ್ಲವೋ! ಅದರ ಸ್ಪಷ್ಟ ಅರ್ಥ ಅಲ್ಲಿ ಅಧರ್ಮವೇ ತಾಂಡವವಾಡುತ್ತಿದೆ, ಧರ್ಮ ಸತ್ತಿದೆ ಎಂದಾಯಿತು. ರಾಜಾಜ್ಞೆಯಾಗಿದ್ದರೂ ಆಸ್ಥಾನ ಪ್ರವೇಶಕ್ಕೆ ಕೆಲವೊಂದು ನಿಯಮಗಳಿವೆ. ಇಂದಿನ ಸ್ಥಿತಿಯಲ್ಲಿ ನನಗೆ ಆ ಯೋಗ್ಯತೆಯಿಲ್ಲ. ಈಗ ಅಲ್ಲಿಗೆ ಬರಲಾಗದು, ಕಾರಣ ಬರಬಹುದಾದ ಮಡಿವಂತಿಕೆ ಎನಗಿಲ್ಲ” ವಿಚಾರವನ್ನು ಸಭೆಗೆ ತಿಳಿಯಪಡಿಸು ಎಂದು ಸೂಚ್ಯವಾಗಿ ಹೇಳಿ ಕಳುಹಿಸಿದಳು.

ಮತ್ತೆ ಪ್ರಾತಿಕಾಮಿ ದ್ರೌಪದಿಯ ಮಾತೆಂದು ಸವಿವರವಾಗಿ ತಿಳಿಸಿದಾಗ, ಯಾರೊಬ್ಬರೂ ಮಾತಾಡದೇ ಸುಮ್ಮನಾಗಿಯೇ ಕುಳಿತರು. ಧರ್ಮರಾಯನು ತನ್ನ ಸಹಾಯಕನಾಗಿದ್ದ ಓರ್ವನನ್ನು ಕರೆದು “ದ್ರೌಪದಿಗೆ ಹೇಳು – ವಿಧಿಯನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ಆಕೆ ರಜಸ್ವಲೆಯಾಗಿರುವ ಈ ಹೊತ್ತು ಒಂದೇ ವಸ್ತ್ರವುಟ್ಟು ಏಕಾಂತದಲ್ಲಿದ್ದಾಳೆ. ಆದರೂ ಆಕೆ ಕೇಳುತ್ತಿರುವುದು ಸಾಧುವೇ ಆಗಿದೆ. ಅದನ್ನು ಈ ಸಭಾ ಮಧ್ಯಕ್ಕೆ ಬಂದು ನಿಂತು ಕೇಳಲಿ. ಆ ಸಂದರ್ಭ ಧರ್ಮಾಧರ್ಮ ವಿವೇಚಿಸಬಲ್ಲ ಧರ್ಮಾತ್ಮರು ಧೃತರಾಷ್ಟ್ರ ಮಹಾರಾಜರಿಗೆ ತಿಳಿಹೇಳಿ ಎಚ್ಚರಿಸಿಯಾರು” ಎಂದು ಹೇಳಿ ಕಳುಹಿಸಿದನು.

ಅಷ್ಟಾಗುತ್ತಲೇ ದುರ್ಯೋಧನ ತನ್ನ ತಮ್ಮ ದುಶ್ಯಾಸನನನ್ನು ಕರೆದು ” ನೀನು ಪ್ರಾತಿಕಾಮಿಯ ಜೊತೆ ಹೋಗು. ಈ ನಮ್ಮ ಸೂತ ಪಾಂಡವರ ಬಗೆಗಿನ ಮರ್ಯಾದೆಯಿಂದ ಭಯ, ಅಂಜಿಕೆ ತೋರುತ್ತಿದ್ದಾನೆ. ಆ ನಮ್ಮ ದಾಸಿ ಬರಲೊಪ್ಪದಿದ್ದರೆ ಬಲಾತ್ಕಾರವಾಗಿ ಎಳೆದುಕೊಂಡು ಬಾ” ಎಂದು ಆಜ್ಞಾಪಿಸಿದನು.

ಅಣ್ಣ ಕೌರವನ ಆಜ್ಞೆ ಆದದ್ದೇ ತಡ ಎದ್ದು ನಿಂತ ದುಶ್ಯಾಸನ. ಅಣ್ಣನ ಸಂತೋಷವೇ ಆತನಿಗೆ ಧರ್ಮ. ಅಣ್ಣನಿಗೆ ದುಃಖವಾಗುವ ಕೃತ್ಯವೆಲ್ಲವೂ ಆತನಿಗೆ ಅಧರ್ಮ. ಅಂತಹ ಸ್ವಭಾವದ ದುಶ್ಯಾಸನ ನೇರವಾಗಿ ದ್ರೌಪದಿಯ ಬಳಿಗೆ ಬಂದು, “ಹೇ ಪಾಂಚಾಲಿ ಸಭೆಗೆ ಬಾ. ನಿನಗೆ ಐದು ಮಂದಿ ಪತಿಗಳಿದ್ದರೂ ಈಗ ಅವರೇ ನಿನ್ನನ್ನು ದಾಸಿಯಾಗುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ನಮ್ಮಣ್ಣನ ದಾಸಿಯಾದ ನಿನ್ನನ್ನು ಕರೆತರಲು ನನಗಪ್ಪಣೆಯಾಗಿದೆ” ಎಂದನು.

ದ್ರೌಪದಿಗೆ ದುಶ್ಯಾಸನ ಮೈದುನ. ಆತನ ಅತ್ತಿಗೆಯಾದ ಕಾರಣದಿಂದ ಮಾತೃ ಸಮಾನಳಾಗಿ, “ಮಗನೇ ದುಶ್ಯಾಸನ ದುಡುಕಬೇಡ. ಅಧರ್ಮಕ್ಕೆ ಒತ್ತಾಯಿಸಬೇಡ” ಎಂದಳು. ದುಶ್ಯಾಸನ ಮುಂದುವರಿದು, ಸ್ವರವೇರಿಸುತ್ತಾ “ರಾಜಾಜ್ಞೆ ಮೀರುವ ಹಕ್ಕು ನಿನಗಿಲ್ಲ ಹೇ ದಾಸಿಯೇ. ಮರ್ಯಾದೆಯಿಂದ ನಡೆ. ಇಲ್ಲವಾದರೆ ನಿನ್ನ ಜುಟ್ಟಿಗೆ ಕೈಯಿಕ್ಕಿ ಧರಧರನೆ ಎಳೆದೊಯ್ಯುವೆ” ಎಂದಾಗ ದ್ರೌಪದಿಯ ಮೈ ನಡುಗಿ ಬೆವತು ಹೋಯಿತು. ಹಣೆ ಹನಿಗಟ್ಟಿತು. ಮುಖವು ಬಿಳುಚಿಕೊಂಡಿತು. ಅಪಾಯವರಿತ ದ್ರುಪದಜೆ ರಾಣಿ ಗಾಂಧಾರಿಯಾದಿ ಸ್ತ್ರೀಯರು ಕುಳಿತಿರುವತ್ತ ಓಡ ತೊಡಗಿ, ಮಾನ ರಕ್ಷಣೆಗಾಗಿ ಗೋಳಿಡುತ್ತಾ ರೋದಿಸಲು ತೊಡಗಿದ್ದಾಳೆ. ಇದನ್ನು ಕಂಡ ದುಶ್ಯಾಸನ ಬೆಂಬತ್ತಿ ಓಡಿ ಕೈಗೆ ಸಿಕ್ಕ ದ್ರೌಪದಿಯ ಕೇಶರಾಶಿಯನ್ನು ಹಿಡಿದೆಳೆದು ಒಂದು ಸುತ್ತು ಮುಷ್ಟಿಗೆ ಸುತ್ತಿಕೊಂಡು ಜಗ್ಗಿದನು. ಆ ರಭಸಕ್ಕೆ ದ್ರೌಪದಿ ನೆಲದ ಮೇಲೆ ಬಿದ್ದು, ತನ್ನೆರಡೂ ಕೈಗಳಿಂದ ತಲೆಗೂದಲನ್ನು ಗಟ್ಟಿಯಾಗಿ ಹಿಡಿದು ಬಿಡಿಸಲು ಹೆಣಗಾಡಿದಳು. ಪುರುಷನ ಬಾಹುಬಲದ ಮುಂದೆ ಸುಕೋಮಲೆ ಪಾಂಚಾಲಿಯ ತ್ರಾಣ ಸಾಕಾದೀತೆ? ಬೊಬ್ಬಿಡುತ್ತಾ, “ಕಂದಾ ದುಶ್ಯಾಸನಾ…. ಪಾಪಿಯಾಗಬೇಡ ನೀನು. ಬಿಡು ನನ್ನನ್ನು. ಇಲ್ಲವಾದರೆ ಅಕ್ಷಮ್ಯ ದೋಷಕ್ಕೆ ನೀನು ಗುರಿಯಾಗಿ ಪಾತಕಿಯಾಗುವೆ. ಆ ದುಸ್ಥಿತಿ ನಿನಗೊದಗಬಾರದು. ಅಯ್ಯಾ ಕರುಣೆದೋರಿ ಬಿಡಯ್ಯಾ ನನ್ನನ್ನು” ಎಂದು ಅಂಗಲಾಚಿ ಬೇಡಿದಳು. ಅಂತಃಪುರದ ಸಖಿಯರು ದುಶ್ಯಾಸನನ ಕಾಲು ಹಿಡಿದು, “ಪ್ರಭುಗಳೇ ಅಮ್ಮನನ್ನು ಬಿಟ್ಟು ಬಿಡಿ…. ಬಿಟ್ಟು ಬಿಡಿ…” ಎಂದು ಗೋಗರೆಯುತ್ತಿದ್ದಾರೆ. ಆದರೆ ಖಳನ ಮನ ಕರುಣೆದೋರಿತೆ? ಕಾಲನ್ನು ಸೆಳೆದು ಒದ್ದ ಏಟಿಗೆ ಪರಿಚಾರಕಿಯರು ಬಿದ್ದು ಗಾಯಾಳುಗಳಾದರು. ಬಿದ್ದಲ್ಲಿಂದ ಎದ್ದು ಮತ್ತೆ ಏಳಲು ನೋಡಿದಾಗ ಎತ್ತಿದ ಕಾಲಿಂದ ಆ ಸೇವಕಿಯರ ತಲೆ ಎದೆಗಳಿಗೆ ರಪ ರಪನೆ ಒದ್ದು ಬೀಳಿಸಿದನು.

ಕಟುಕನಿಗೆ ಕರುಣೆಯಿದೆಯೆ? ಕೂದಲನ್ನು ಸುರುಳಿ ಸುತ್ತಿ ಸೆಳೆದೆಳೆದು ಬೀಸಿದನು. ರಾಜಾಸೂಯಾಧ್ವರದ ಪೂರ್ಣಾಹುತಿಯಾದ ಬಳಿಕ ಪವಿತ್ರ ಮಂತ್ರೋದಕದ ಅವಭೃತ ಸ್ನಾನದಿಂದ ಸೇಚನಗೊಂಡಿದ್ದ ಚಕ್ರವರ್ತಿಣಿಯ ಪುಣ್ಯ ಕೇಶರಾಶಿ ದುರುಳನ ಕೈಯೊಳಗೆ ಸಿಲುಕಿ ಸೆಳೆದ ರಭಸಕ್ಕೆ ದೇಹವೇ ಬೀಸಲ್ಪಟ್ಟಿತು. ದ್ರೌಪದಿಯ ತನು ಅಲಂಕಾರಕ್ಕಿಟ್ಟ ಹೂದಾನಿಗಪ್ಪಳಿಸಿತು. ಕಂಚಿನ ದಾನಿ ಈಕೆಯ ಶರೀರಾಘಾತದಿಂದ ಹೊಡೆದುರಿಸಲ್ಪಟ್ಟು, ಹೊರಳಿ ದಡಾರನೆ ಬಿದ್ದು ಬಿಟ್ಟಿತು. ಮೇಲಂತಸ್ತಿನಿಂದ ಇಳಿಯುವ ಮೆಟ್ಟಿಲುಗಳಲ್ಲಿ ಎಳೆಯುತ್ತಾ, ಡಬ ಡಬ ಡಬನೆ ಸೆಳೆದೆಳೆದು ಬರುತ್ತಿದ್ದಾನೆ ಕ್ರೂರಿ ದುಶ್ಯಾಸನ. ಅಲ್ಲಿಂದಲೂ ದ್ರೌಪದಿ ಬೇಡುತ್ತಿದ್ದಾಳೆ ” ಎಲಾ ದುಶ್ಯಾಸನಾ…. ನಾನು ರಜಸ್ವಲೆಯಾಗಿ ಏಕವಸನದಲ್ಲಿದ್ದೇನೆ. ಹೆಣ್ಣಾದವಳನ್ನು ಈ ರೀತಿ ನೋಯಿಸಿ ಕಣ್ಣೀರು ಹರಿಸಬಾರದು. ನನ್ನ ಮೈಮೇಲೆ ಒಂದೇ ವಸ್ತ್ರವಿದೆ. ಹೆಣ್ಣಿಗೆ ಮಾನವೇ ಜೀವಕ್ಕಿಂತ ಹೆಚ್ಚಿನದ್ದು. ಈ ರೀತಿ ಸೆಳೆಯಲು ನಾಚಿಗೆಯಾಗದೋ ನಿನಗೆ?” ಎಂದು ಗೋಗರೆದಳು. ಆಗ ದುರುಳ ದುಶ್ಯಾಸನ “ಎಲೆ ದಾಸಿಯೇ, ನೀನು ಒಂದು ವಸ್ತ್ರ ಧರಿಸಿರು, ಇಲ್ಲಾ ವಸ್ತ್ರವನ್ನು ಧರಿಸದೇ ಹಾಗೇ ಇರು, ನನಗೇನೂ ವ್ಯತ್ಯಾಸವಾಗದು” ಎನ್ನುತ್ತಾ ಎಳೆಯತೊಡಗಿದನು. ದ್ರೌಪದಿ ತನ್ನ ಸೆರಗನ್ನು ಎದೆಗವಚಿ ಹಿಡಿದುಕೊಂಡು ಕಣ್ಣೀರಧಾರೆ ಸುರಿಸುತ್ತಾ…. “ಎಲಾ ಪಾತಕಿಯೇ ಪರಮ ಪವಿತ್ರವೂ, ಅತಿ ಶ್ರೇಷ್ಟವೂ ಆದ ಚಂದ್ರವಂಶದಲ್ಲಿ ಹುಟ್ಟಿ ರಾಕ್ಷಸ ಪ್ರವೃತ್ತಿ ತೋರುವೆಯಾ? ಈ ಕೃತ್ಯದ ಮುಖೇನ ನಿನ್ನ ಹಾಗು ನಿನ್ನವರ ಸರ್ವನಾಶಕ್ಕೆ ಕೈಯಾರೆ ಬೆಂಕಿ ಹಚ್ಚುತ್ತಿರುವೆ” ಎಂದು ಎಚ್ಚರಿಸಿದಳು.

ದುಶ್ಯಾಸನ ದ್ರೌಪದಿಯ ತುರುಬಿನ ಮೇಲಿನ ಹಿಡಿತ ಬಲಪಡಿಸುತ್ತಾ, ಜಗ್ಗಿ ಸೆಳೆದೆಳೆಯುತ್ತಾ ಸಭಾ ಮಧ್ಯಕ್ಕೆ ಬಂದು ನಿಂತನು. ದ್ರೌಪದಿಯ ಕೂದಲು ಬಿಚ್ಚಿ, ಕೆದರಿ ಹೋಗಿದೆ. ಕಂಗಳು ಕೆಂಪಡರಿ ಬೆಂಕಿಯ ಕೆನ್ನಾಲಿಗೆ ಸೂಸುತ್ತಿರುವಂತಿದೆ. ಮೈಮೇಲಿನ ಬಟ್ಟೆ ಸಡಿಲಗೊಳ್ಳುತ್ತಿದೆ. ದ್ರೌಪದಿಗೆ ಒಂದೆಡೆ ಮಾನ ರಕ್ಷಣೆಯೆ ಪ್ರಾಣಕ್ಕಿಂತ ಮಿಗಿಲಾಗಿ ಲಜ್ಜೆಯೂ, ಈ ದುರ್ನಡತೆಗೆ ದುಃಖ ಪರಿಣಾಮವನ್ನು ಕಲ್ಪಿಸುತ್ತಿದೆ. ಶೋಕವೂ, ಕ್ರೌರ್ಯವನ್ನು ಕಂಡು ಕ್ರೋಧವೂ ಉಕ್ಕೇರುತ್ತಿದೆ. ತನ್ನನ್ನು ಮುಟ್ಟಿ ಮಾರಣಹೋಮಕ್ಕೆ ಹವಿಸ್ಸಾಗಲಿ ಈ ಪಾಪಿಗಳ ದೋಷಿ ಪಡೆ ಎಂಬಂತೆ ರೋಷದ ತಾಪವೇರಿ, ಶಾಪದ ರೂಪದಲ್ಲಿ ಕೋಪಯುಕ್ತ ಮಾತುಗಳು ಹೊರಬರತೊಡಗಿತು.

ಬಲಿ ಅರ್ಪಿಸಲ್ಪಡುವ ಆಡೋ ಕುರಿಯೋ ಬಲಿಗಂಬದ ಬಳಿ ನಿಂತು ನೆರೆದವರನ್ನು ನೋಡುವ ತೆರನಾಗಿ ಅಬಲೆ ಒಂದು ಸುತ್ತು ಸಭಾಸದರನ್ನು ನೋಡುತ್ತಿದ್ದಾಳೆ.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page