ಭಾಗ 151
ಭರತೇಶ್ ಶೆಟ್ಟಿ ,ಎಕ್ಕಾರ್

ಜರಾಸಂಧನ ಪ್ರಶ್ನೆಗಳಿಗೆ ನಸುನಗುತ್ತಾ ಶ್ರೀಕೃಷ್ಣ “ಜರಾಸಂಧ, ನಿನ್ನ ಪ್ರಕಾರ ನೀನು ಮಾಡುತ್ತಿರುವುದು ಧರ್ಮ ಕಾರ್ಯ ಎಂದು ನಿನಗೆ ಅನಿಸಿರಬಹುದು. ಆದರೆ ಕ್ಷತ್ರಿಯ ಕುಲದ ರಕ್ಷಣೆಯ ಹೊಣೆಗಾರಿಕೆ ವಹಿಸಿ ಧರ್ಮಪ್ರಭುವೇ ನಮ್ಮನ್ನು ಇಲ್ಲಿ ಕಳುಹಿಸಿದ್ದಾನೆ. ನಿನ್ನ ತಪ್ಪನ್ನು ತಿಳಿಸಿ ತಿದ್ದಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು, ಒಪ್ಪದಿದ್ದರೆ ನಿಗ್ರಹಿಸುವ ಪೂರ್ಣಾಧಿಕಾರ ಹೊಂದಿದವರು ನಾವಾಗಿ ಬಂದಿದ್ದೇವೆ. ನಿನ್ನ ಭಾವನೆಯಂತೆ ನೀನು ನಿರ್ದೋಷಿ ಎಂದು ತರ್ಕಿಸಿರುವೆ. ಯುದ್ದ ಮಾಡಿ ಗೆಲ್ಲುವುದು ಕ್ಷಾತ್ರ ಧರ್ಮ. ಹಾಗೆಂದು ಪ್ರಬಲನೆದುರು ಸೋಲುವುದು ಅಪರಾಧವಲ್ಲ. ಸೋತವರು ಸೋಲಿನ ದೌರ್ಬಲ್ಯಕ್ಕಾಗಿ ಕಪ್ಪ ಕಾಣಿಕೆಯಿತ್ತು ಶರಣಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಅವರೆಲ್ಲರನ್ನೂ ಬಂಧ ಮುಕ್ತಗೊಳಿಸಿ ಅವರವರ ರಾಜ್ಯಕ್ಕೆ ಕಳುಹಿಸಿದರೆ ನಿನಗೆ ಶ್ರೇಯಸ್ಕರ. ಹೀಗೆಂದು ನಾನು ತಿಳಿ ಹೇಳಿ ಸರಿದಾರಿ ತೋರಿಸಿದ ಮೇಲೂ ಅಹಂಕಾರಿಯಾಗಿ ಮುಂದುವರಿದರೆ ನಿನ್ನನ್ನು ನಾನೇ ನಿಗ್ರಹಿಸಿ ಅವರ ರಕ್ಷಣೆ ಮಾಡಬಲ್ಲಷ್ಟು ಸಮರ್ಥನಿದ್ದೇನೆ” ಎಂದನು.
ಕೃಷ್ಣನ ಮಾತುಗಳು ಕರ್ಣಕಟೋರವಾಗಿ ಜರಾಸಂಧನ ಕ್ರೋಧಕ್ಕೆ ಕಾರಣವಾದರೂ, ಸೈರಿಸಿಕೊಂಡು ” ನಾನು ಗೆದ್ದು ಸೆರೆಯಾಳಾಗಿ ತಂದಿರುವ ರಾಜಪುತ್ರರು ಇವರು. ಯುದ್ದದಲ್ಲಿ ಕ್ಷತ್ರಿಯನಿಗೆ ಗೆಲುವು ಇಲ್ಲಾ ಸಾವು ಇದೆರಡೇ ಭೂಷಣ. ಸೋತು ಬದುಕುವುದು ಪಶುಗಳಿಗಿಂತ ಹೀನ ಜೀವನ. ಹಾಗಾಗಿ ಇವರೇನಿದ್ದರೂ ಸಾಯುವುದಕ್ಕೇ ಉತ್ತಮರಾಗಿದ್ದಾರೆ. ಅದಿರಲಿ, ನನ್ನಲ್ಲಿ ಇವರೆಲ್ಲರನ್ನೂ ಬಿಟ್ಟು ಬಿಡು ಎಂದು ಆದೇಶ ಮಾಡುವ ನೀನಗೆ ಅಷ್ಟು ದೊಡ್ಡ ಅಧಿಕಾರ ಕೊಟ್ಟವರಾರು? ಅವರ ಬಂಧನ ಬೇರೆ ವಿಚಾರ ಬಿಡು, ಈಗ ನೀವು ಮೂವರೂ ನನ್ನ ಬಂಧನಕ್ಕೊಳಗಾಗಿದ್ದೀರಿ. ಜೀವಂತ ಹೊರ ಹೋಗಬಹುದೆಂಬ ಧೈರ್ಯವಿದ್ದರೆ ಅದು ಬಂಡತನವಾದೀತು. ಆದರೂ ನಿಮಗೆ ಒಂದು ಅವಕಾಶ ಕೊಡುತ್ತೇನೆ. ನೀವು ಬಂದು ಬಂಧಿತರ ಬಿಡುಗಡೆ ಬಯಸುತ್ತಿದ್ದೀರಲ್ಲ? ಅವರಲ್ಲಿ ನಿಮ್ಮವರು ಯಾರಾದರು ಇದ್ದಾರೆಯೇ? ಇದ್ದರೆ ಹೇಳಿ ಗೌರವದಿಂದ ಬಂಧಮುಕ್ತ ಗೊಳಿಸುವೆ. ಅದು ಬಿಟ್ಟು ಎಲ್ಲರನ್ನೂ ಬಿಡುವಂತೆ ಆದೇಶಿಸಿದರೆ ನನ್ನ ಮೇಲೆ ಅಧಿಕಾರ ಚಲಾವಣೆ ಮಾಡಿದಂತಾಗುತ್ತದೆ. ಅಂತಹ ಹಿರಿಮೆ, ಹೆಚ್ಚುಗಾರಿಕೆ ತೋರಿಸಲು ನೀವ್ಯಾರು ಎಂದಾಗಬೇಕಲ್ಲ!. ಯಾರೇ ಆಗಿದ್ದರೂ ಈ ಮಾಗಧನಿಗೆ ನಗಣ್ಯರೇ ಆಗಿದ್ದೀರಿ.” ಎಂದು ಅಹಂಕಾರದಿಂದ ನುಡಿದನು.
ಜರಾಸಂಧನ ಉದ್ಧಟತನ ಮಿತಿ ಮೀರಿತು. ಕೃಷ್ಣ ಮತ್ತೆ ಜರಾಸಂಧನಿಗೆ ಸಾರಿ ಹೇಳಿದ ” ಜರಾಸಂಧ, ನಿನ್ನ ಬಂಧನದಲ್ಲಿರುವವರು ಈಗ ಸೋತಿದ್ದಾರೆ ನಿಜ. ಕಾಲಾಂತರದಲ್ಲಿ ಸಾಧಿಸಿ ಮತ್ತೆ ಹೋರಾಡಿ ಗೆಲ್ಲುವ ಅಥವಾ ಗೆಲುವಿಗಾಗಿ ಪ್ರಯತ್ನಿಸುವ ಅಧಿಕಾರ ಅವರಿಗಿದೆ. ನೀನು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಿರುವೆ. ಸೋಲಿಸಿದ ರಾಜ್ಯದ ರಾಜಕುಮಾರರನ್ನು ಬಂಧಿಸಿ ಸೆರೆಯಲ್ಲಿಟ್ಟು ಬಲಿ ನೀಡಲು ಮುಂದಾಗಿರುವೆ. ಯಾರದ್ದೇ ಆಗಲಿ ಬದುಕುವ ಹಕ್ಕನ್ನು ಬಲವಂತವಾಗಿ ಕಿತ್ತುಕೊಳ್ಳುವುದು ಧರ್ಮವಲ್ಲ. ನೀನು ಗೆದ್ದ ರಾಜ್ಯದ ರಾಜಕುಮಾರರನ್ನು ಬಂಧನದಲ್ಲಿಟ್ಟಿರುವುದು ಹೇಡಿಯಾಗಿ ನಿನ್ನ ರಕ್ಷಣೆಗೆ. ಸೋತವರು ತಮ್ಮ ಮಿತ್ರ ರಾಜ್ಯಗಳೊಂದಿಗೆ ಒಗ್ಗಟ್ಟಾಗಿ ನಿನ್ನ ಮೇಲೆ ಆಕ್ರಮಣ ಮಾಡದಂತೆ ತಡೆಯಾಗಿ ಆಯಾ ರಾಜ್ಯದ ಕುಮಾರರನ್ನು ಈ ರೀತಿ ಪಶು ಸಮಾನರಾಗಿ ಸೆರೆಯಲ್ಲಿಡುವ ಉದ್ಧಟತನ ತೋರುತ್ತಿರುವೆ. ವೀರನಾದ ನಿನಗೆ ಈ ರೀತಿಯ ಪ್ರಾಣ ಭಯ, ಹೇಡಿಯಾಗಿ ಬದುಕುವ ಜೀವನ ಶೋಭೆ ಎನಿಸದು. ಮಾತ್ರವಲ್ಲ ಈಗ ನಿನ್ನ ಯೋಜನೆಯಂತೆ ಅವರೆಲ್ಲರನ್ನು ಕೊಲೆಗೈಯುವ ನಿನ್ನ ಯೋಜನೆ ಧರ್ಮವಲ್ಲ. ಈ ಪಾಪಕೃತ್ಯವನ್ನು ತಡೆದು, ಆರ್ತರಾದ ಕ್ಷಾತ್ರ ಕುಮಾರರ ರಕ್ಷಣೆಗಾಗಿ ನಮ್ಮನ್ನು ಇಂದ್ರಪ್ರಸ್ಥದ ಮಹಾರಾಜನಾದ ಧರ್ಮರಾಯ ಕಳುಹಿಸಿದ್ದಾನೆ. ಜೀವನರಂಗದ ಯುದ್ಧ ಗಳಾದ – ಧರ್ಮಪಾಲನೆ, ನ್ಯಾಯದಾನ, ದಂಡನೆ, ಮತ್ತು ರಣರಂಗದ ಯುದ್ಧ ವಾದ ಸಮರ ಸಾಹಸ ಇವೆರಡರಲ್ಲೂ ಸ್ಥಿತವೂ ಸ್ಥಿರ ವೂ ಆದ ಪ್ರಜ್ಞೆ ಹೊಂದಿರುವ ಕಾರಣ ಯುಧಿಷ್ಠಿರ ಎಂಬ ನೆಗಳ್ತೆ ಹೊಂದಿರುವಾತ ಧರ್ಮರಾಯ. ಆತನೆ ತೀರ್ಮಾನಿಸಿ ಆದೇಶಿಸಿದ್ದರಿಂದ ನಿನ್ನ ನಡೆ ಧರ್ಮಯುತವಲ್ಲ ಎಂಬುವುದು ಸಾಬೀತಾಗಿದೆ. ಬಂದ ಮೂವರಲ್ಲಿ ಇವರಿಬ್ಬರು ಚಂದ್ರವಂಶದ ಪಾಂಡು ಪುತ್ರರಾದ ಭೀಮಾರ್ಜುನರು, ನಾನು ಕಂಸಾಂತಕನಾದ ಶ್ರೀ ಕೃಷ್ಣನೇ ಆಗಿದ್ದೇನೆ. ನಿನ್ನಲ್ಲಿ ಶಕ್ತಿಯಿದ್ದರೆ ನಾವು ಮೂವರಲ್ಲಿ ಯಾರನ್ನೇ ಆಗಲಿ ಮುಕ್ತವಾಗಿ ಆರಿಸಿ ಯುದ್ದ ಮಾಡು. ಅದೇ ನಮ್ಮ ಅಭೀಷ್ಟವಾಗಿದೆ” ಎಂದನು.
ಕೃಷ್ಣನ ಮಾತು ಕೇಳಿ ಗಹಗಹಿಸಿ ನಕ್ಕು, ಹೇ! ರಣ ಹೇಡಿ ಗೊಲ್ಲ ಯಾದವ! ನೆಪವಾಗಿ ರಾಜಕುಮಾರರ ರಕ್ಷಣೆಯ ವಿಚಾರವಿಟ್ಟುಕೊಂಡು, ಏನೂ ಅರಿಯದ ಈ ಇಬ್ಬರು ಹುಡುಗರ ಪ್ರಾಣದ ಜೊತೆ ಚೆಲ್ಲಾಟ ಆಡಲು ಬಂದಿರುವೆಯಾ? ನಿನ್ನಂತಹ ಅಧಮನಿಂದ ನನಗೆ ಧರ್ಮ ಬೋಧನೆ ಬೇರೆ ಕೇಡು!ವ ನನ್ನನ್ನು ರಣರಂಗದಲ್ಲಿ ಎದುರಿಸಲಾಗದೆ ಎಷ್ಟು ಭಾರಿ ರಣಮುಖಕ್ಕೆ ಬೆನ್ನು ಹಾಕಿ ಓಡಿ ಹೋಗಿದ್ದಿಯೋ ಹೇ ರಣ ಹೇಡಿ. ಧರ್ಮೋಪದೇಶ ಮಾಡಲು ನಿನಗಿರುವ ಅರ್ಹತೆಯಾದರು ಏನೋ? ಸರಿಯಾಗಿ ಗುರುಮುಖದಿಂದ ಪೂರ್ಣಕಾಲಿಕ ಶಿಕ್ಷಣ ಪಡೆಯದೆ ಅರ್ಧಂಬರ್ಧ ಕಲಿತು ಬಂದವನೇ, ಹಿರಿಯರನ್ನು ಗೌರವಿಸದೆ ಕೊಂದ ಕೊಲೆಪಾತಕಿಯೇ, ಹೆತ್ತವರನ್ನು ಸಲಹದೆ ವೃದ್ದಾಪ್ಯದಲ್ಲಿ ಬಿಟ್ಟು ಬಿಟ್ಟವನೇ, ಸ್ತ್ರೀ ಕಾಮಚಾರಿ, ಚೋರ, ಗೊಲ್ಲರ ಸಂಸ್ಕಾರದಲ್ಲಿ ಬೆಳೆದವನೆ, ಬೊಗಳೆ ಧರ್ಮೋಪದೇಶ ಬಿಟ್ಟರೆ ನಿನ್ನಿಂದ ಇನ್ನೇನು ಹೆಚ್ಚು ನಿರೀಕ್ಷಿಸಬಹುದು? ನಿನ್ನ ಸ್ವಾರ್ಥ ಸಾಧನೆಯಾಗಬೇಕಿದ್ದರೆ ಬಂದು ಹೊಡೆದಾಡಿ ಸತ್ತು ಹೋಗು. ಬದಲಿಗೆ ಆ ಮಕ್ಕಳಾದ ಭೀಮಾರ್ಜುನರನ್ನು ಕೊಳಲನ್ನೂದಿ ಪಶುಗಳನ್ನು ಮರಳು ಮಾಡಿದಂತೆ ಮತಿಭ್ರಮಣೆಗೊಳಿಸಿ ಸಾವಿನ ಕೂಪಕ್ಕೆ ತಳ್ಳ ಬೇಡ. ಹೇ! ಮಕ್ಕಳೇ, ನಿಮ್ಮಜ್ಜ ಭೀಷ್ಮರಲ್ಲಿಗೆ ಹೋಗಿ ಜರಾಸಂಧ ಏನು ಎಷ್ಟೆಂದು ಕೇಳಿ ತಿಳಿದು ಮತ್ತೆ ಯುದ್ಧಕ್ಕೆ ಬನ್ನಿ. ಈ ಕೃಷ್ಣನ ಕುತಂತ್ರಕ್ಕೆ ಮೈಮರೆತು ಸಾಯಬೇಡಿ. ಈ ಕಪಟಿಯ ಮೋಸಕ್ಕೆ ನೀವು ಸುಮ್ಮನೆ ಉಜ್ವಲ ಭವಿಷ್ಯ ಕಳೆದುಕೊಳ್ಳುವುದು ಉಚಿತವಾಗದು” ಎಂದು ತಿಳಿ ಹೇಳಿದನು. ಆಗ ಜರಾಸಂಧನು ಕ್ರೋಧಿತನಾಗಿ “ದುಷ್ಟ ಕೃಷ್ಣ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಆತ ಇಂದು ನನ್ನ ಕೈಯಲ್ಲಿ ಸತ್ತು ಹೋಗಲಿ. ಅದು ಅವನ ಕರ್ಮ, ಹಾಗೇ ಸಾಯಬೇಕೆಂದಿದ್ದರೆ ಸತ್ತು ಮಗಧದ ಮಣ್ಣಲ್ಲಿ ಧೂಳಾಗಿ ಹೋಗಲಿ. ನೀವು ಅವನ ಜೊತೆ ನಿಲ್ಲಬೇಡಿ ನಿಮ್ಮನ್ನು ಸತ್ಕಾರ ಗೌರವಾದರಗಳಿಂದ ಕೆಲ ದಿನಗಳ ಇಲ್ಲೇ ಉಳಿಸಿ ಉಡುಗೊರೆಗಳನ್ನಿತ್ತು ಇಂದ್ರಪ್ರಸ್ಥಕ್ಕೆ ಕಳುಹಿಸುವೆ. ಅದೇ ನಿಮ್ಮ ದಿವ್ಯ ಬದುಕಿಗೆ ದಾರಿಯಾಗಲಿದೆ. ಸುಖಾಸುಮ್ಮನೆ ಅಕಾರಣವಾಗಿ ಬೆಳೆಯಬೇಕಾದ ಹುಡುಗರು ನೀವು ನನ್ನ ಕೈಯಲ್ಲಿ ಸಾಯಬೇಡಿ.” ಎಂದು ಎಚ್ಚರಿಸಿದನು.
ಭೀಮಸೇನನಿಗೆ ಕೃಷ್ಣ ನಿಂದನೆ ಅಸಹನೀಯ ಕೋಪ ಉಕ್ಕೇರುವಂತೆ ಮಾಡಿತು. “ಹೇ ಮಾಗಧ! ಪ್ರಾಯ ನಿನಗಾಗಿದೆ ಎಂಬ ಕಾರಣಕ್ಕೆ ನಿನ್ನನ್ನು ನೀನು ಶ್ರೇಷ್ಠ ಅಂದುಕೊಳ್ಳಬೇಡ. ಅಧರ್ಮಿಯಾದ ನೀನು ಅಧಮನೇ ಹೌದು. ಏನು ಕೃಷ್ಣ ಅರ್ಧಂಬರ್ಧ ಕಲಿತವನೇ? ಕೃಷ್ಣನ ಜ್ಞಾನದೆದುರು ನೀನು ಧೂಳಿಗೂ ಸಮನಾಗಲಾರೆ. ಮತ್ತೆ ನಾವು ಕೃಷ್ಣನನ್ನು ಸಾಯಗೊಟ್ಟು ನಿನ್ನ ಆದರಾತಿಥ್ಯ ಸ್ವೀಕರಿಸಬೇಕೇ? ಕೃಷ್ಣ ಸಾಯುವುದಕ್ಕೆ ಕೊಲ್ಲುವ ಸಮರ್ಥರಾರಿದ್ದಾರೆ? ನಮ್ಮನ್ನು ಹೆದರಿಸಿ ವಿಭಜಿಸುವ ಭೇದೋಪಾಯ ಮಾಡುವೆಯಾ? ಅದು ಸಫಲವಾಗದು. ಕೃಷ್ಣನನ್ನು ಬಿಟ್ಟು ನಾವು ಇರಲಾರೆವು. ಶ್ರೀ ಕೃಷ್ಣ ಸೂಚಿಸಿದಂತೆ ತಪ್ಪು ಒಪ್ಪಿಕೊಂಡು ರಾಜಕುವರರನ್ನು ಬಂಧನದಿಂದ ಬಿಟ್ಟು ಬಿಡು. ಆಗುವುದಿಲ್ಲವಾದರೆ – ಕ್ಷತ್ರಿಯರಿಗೆ ಪಂಥಾಹ್ವಾನ ಸ್ವೀಕಾರ ಆದ್ಯ ಕರ್ತವ್ಯವೂ ಯುಕ್ತವೂ ಆಗಿದೆ. ಹಾಗೇ ತೊಡಗುವೆಯಾದರೆ ತಕ್ಷಣ ಯುದ್ದ ಸನ್ನದ್ಧನಾಗು” ಎಂದು ಭೀಮಸೇನ ಅಬ್ಬರಿಸಿದ.
ಮುಂದುವರಿಯುವುದು….



















