ಭಾಗ – 116
ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೧೧೭ ಮಹಾಭಾರತ
ಭಗವಾನ್ ವೇದವ್ಯಾಸರು ಶಿಬಿಯ ಕಥೆ ಹೇಳತೊಡಗಿದರು. ಉಶೀನರ ಪುತ್ರ ‘ಶಿಬಿ’ ಎಂಬವನು ತನ್ನ ಮಗಳ ಸ್ವಯಂವರ ಏರ್ಪಡಿಸಿದ್ದನು. ಆ ಸ್ವಯಂವರದಲ್ಲಿ ಹಲವು ರಾಜರು- ಯುವರಾಜರು ಭಾಗವಹಿಸಿದ್ದರಾದರೂ ಶಿಬಿಯ ಪುತ್ರಿ ಮಾತ್ರ ಅಲ್ಲಿ ಬಂದಿದ್ದ ‘ಭೌಮಾಶ್ವಿ’ ಎಂಬವರ ಪುತ್ರರಾದ ಐವರು ಸಹೋದರರನ್ನು ಮೆಚ್ಚಿ ವರಿಸಿದಳು. ತನ್ನ ಪತಿಗಳಾದ ಐವರನ್ನೂ ಸಮಾನವಾಗಿ ಪ್ರೀತಿಸಿ ಪತಿವ್ರತೆಯೆಂದು ಅನ್ನಿಸಿಕೊಂಡಿದ್ದಾಳೆ. ಐದು ಮಂದಿ ಪತಿಯರಿಂದಲೂ ಪುತ್ರ ಸಂತಾನ ಪಡೆದು ಸುಖ ಜೀವನ ಸಾಗಿಸಿರುವುದು ಪುರಾಣ ಕಥಿತ ಸಂಗತಿಯಾಗಿದೆ.
ದ್ರೌಪದಿ ಪಾಂಡವರ ವಿಚಾರದಲ್ಲಿ ಇನ್ನೂ ಬಲವಾದ ಹಿನ್ನೆಲೆಯಾಗಿ ಪುರಾಕೃತ ಕರ್ಮ ಫಲವಿದೆ. ಹಿಂದಿನ ಕಲ್ಪಗಳ ಐದು ಮಂದಿ ಇಂದ್ರರು ಶಿವಕೋಪಕ್ಕೆ ತುತ್ತಾಗಿ ಜಡ ಸ್ಥಿತಿಯಲ್ಲಿದ್ದರು. ಕಾಲಾಂತರದಲ್ಲಿ ಅವರಲ್ಲಿದ್ದ ಸಂಚಿತ ಪುಣ್ಯ ಫಲದಿಂದ ಶಿವ ತಪಸ್ಸನ್ನು ಮಾಡುವ ಸುಜ್ಞಾನ ಮೂಡಿ ತಪೋನಿರತರಾದರು. ಪರಿಣಾಮ ಶಿವಾನುಗ್ರಹ ಪ್ರಾಪ್ತಿಯಾಗಿ, ಭೂಮಿಯಲ್ಲಿ ದೇವತಾಂಶ ಸಂಭೂತರಾಗಿ ಹುಟ್ಟು ಪಡೆದ ಪಾಂಡವರೇ ಆ ಐದು ಮಂದಿ ಗತ ಕಲ್ಪದ ಇಂದ್ರರು. ದ್ರೌಪದಿಯೂ ದೇವತಾಂಶಿಯಾಗಿ ಮೈದೋರಿದವಳು. ಪಾರ್ವತಿ ದೇವಿಯ ಅನುಗ್ರಹವೇ ದ್ರೌಪದಿಯ ಹುಟ್ಟಿಗೆ ಪೂರಕ ಸಾಧನ. ಇವರ ಈ ವಿವಾಹ ಈಗಿನ ಮಾನವ ರೂಪಿನ ಜನ್ಮಕ್ಕಿಂತ ಮೊದಲೇ ಮಹಾದೇವ ಶಿವ – ಜಗನ್ಮಾತೆ ಪಾರ್ವತಿದೇವಿಯರ ವರಾನುಗ್ರಹ ರೂಪದಲ್ಲೇ ನಿಶ್ಚಿತವಾಗಿದೆ. ದ್ರುಪದರಾಜ ಈಗ ನೀನು ಈ ಪಾಂಡವರಿಗೆ ನಿನ್ನ ಸುತೆಯೊಡನೆ ನಡೆಸುವ ವಿವಾಹವೇನಿದ್ದರೂ ಶಿವ ಶಿವೆಯರ ಆದೇಶಪಾಲನೆಯಷ್ಟೇ ಎಂದರು.
ವೇದವ್ಯಾಸರಿಗೆ ವಂದಿಸಿದ ದ್ರುಪದರಾಜ “ಪೂಜ್ಯರೇ, ತಾವು ಅಸಾಮಾನ್ಯ ದಿವ್ಯ ಚೇತನ ಶಕ್ತಿಯಾಗಿದ್ದೀರಿ. ನಿಮ್ಮ ಮಾತನ್ನು ಕೇಳಿದ ಮೇಲೆ ನನ್ನಲ್ಲಿ ಯಾವ ಸಂದೇಹವೂ ಉಳಿದಿಲ್ಲ. ನನ್ನ ಪಾಲಿಗಿರುವುದು ವಿಧಿಸಲ್ಪಟ್ಟ ಕರ್ತವ್ಯ ಪಾಲನೆಯಷ್ಟೇ ಎಂದನು. ವಿಷಯ ತಿಳಿಯದೆ ಮನಸ್ಸು ವಿಷಮ ಸ್ಥಿತಿ ತಳೆದು, ಮಗಳ ಬದುಕಿನ ಬಗೆಗಿನ ಗೊಂದಲ, ಧರ್ಮಾಧರ್ಮದ ವ್ಯಾಪ್ತಿಯ ಬಗ್ಗೆ ಚಿಂತೆ ತಳೆದಿದ್ದೆನು. ಈಗ ಪರಿಪೂರ್ಣ ತಿಳುವಳಿಕೆ ಅನುಗ್ರಹ ರೂಪದಲ್ಲಿ ಪ್ರಾಪ್ತವಾಗಿದೆ. ನಾನೇ ಮುಂದೆ ನಿಂತು ನನ್ನ ಪುತ್ರಿಯ ವಿವಾಹವನ್ನು ವಿಧಿವತ್ತಾಗಿ ಐವರು ಪಾಂಡುಸುತರಿಗೂ ಪತ್ನಿಯಾಗುವಂತೆ ಮಾಡಿಸುತ್ತೇನೆ” ಎಂದನು. ಹೀಗೆ ನುಡಿದು ವ್ಯಾಸರಿಗೆ ಮತ್ತೆ ನಮಸ್ಕರಿಸಿದನು. ಭಗವಾನರು “ಶ್ರೇಯೋಸ್ತು” ಎಂದು ಆಶೀರ್ವಾದ ಮಾಡಿ ಅದೃಶ್ಯರಾದರು.
ಮುಂದುವರಿಯುವುದು…











