28 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 98

ಭರತೇಶ ಶೆಟ್ಟಿ, ಎಕ್ಕಾರ್

ನಸು ಬೆಳಕಿನ ಜಾವ, ದಣಿದ ದೇಹದ ಪರಿಣಾಮ ಸುಖ ನಿದ್ರೆಗೆ ಶರಣಾಗಿದ್ದಾರೆ. ಆದರೆ ಭೀಮ ಮಾತ್ರ ಈ ತನಕದ ಜವಾಬ್ದಾರಿಯಿಂದಲೋ ಏನೋ! ನಿದ್ರೆ ಬಾರದೆ ಒಂದು ಮರದ ಬೇರಿಗೆ ಒರಗಿ ಕುಳಿತು, ಒಂದು ಸುತ್ತು ತನ್ನವರನ್ನು ನೋಡಿದ. ಪಾಂಡು ಚಕ್ರವರ್ತಿಯ ಹಿರಿಯ ಮಹಾರಾಣಿ, ಸಾಮ್ರಾಜ್ಞಿ ಕುಂತಿದೇವಿ ತರಗೆಲೆಗಳ ಮೇಲೆ ಆಹಾ! ಎಂತಹ ಸುಖ ನಿದ್ರೆಗೆ ಜಾರಿದ್ದಾಳೆ. ಧರ್ಮ ದುರಂಧರ, ಅಭಿಷಿಕ್ತ ಯುವರಾಜ ಧರ್ಮರಾಯನೂ ಪ್ರಜ್ಞೆಯೇ ಇಲ್ಲದ ಸುಪ್ತ ಸ್ಥಿತಿಯಲ್ಲಿದ್ದಾನೆ. ರಣ ಭಯಂಕರ ಏಕಮೇವ ಧನುರ್ಧರ ನೆಗಳ್ತೆಯ ಅರ್ಜುನನೂ, ಅತಿ ಸುಂದರ ನಕುಲನೂ, ಜ್ಞಾನಿ ಸಹದೇವನೂ ತಮ್ಮ ವಿಶೇಷಣಗಳೇನೇ ಇರಲಿ ದಣಿದ ಶರೀರದಿಂದ ಮಣಿದು ಒರಗಿ ವಿಶ್ರಾಂತರಾಗಿದ್ದಾರೆ. ಒಂದು ವಿಚಾರ ಸ್ಪಷ್ಟವಾಗುತ್ತಿದೆ! ಅರಮನೆ ಸುಪ್ಪತ್ತಿಗೆ, ಮೆತ್ತನೆ ಹಾಸಿಗೆ, ಪರಿಚಾರಕಿಯರ ಸೇವೆ, ಸುಗಂಧ ದ್ರವ್ಯ ಏನೇ ಸಿರಿವಂತಿಕೆ ಇದ್ದರೂ ಬಳಿ ಬರುವಲ್ಲಿ ನಿಧಾನಿಸುತ್ತಿದ್ದ ನಿದ್ರಾದೇವಿ ಇಂದಿನ ಈ ಸ್ಥಿತಿಯಲ್ಲಿ ಎಲ್ಲರನ್ನೂ ಬಿಗಿದಪ್ಪಿ ಆಲಿಂಗಿಸಿ ಬಾಹುಬಂಧಿಯಾಗಿಸಿದ್ದಾಳೋ ಎಂಬಂತಿದೆ. ಹಾಗಿದ್ದರೆ ಸುಖ ನಿದ್ರೆ ಬರಬೇಕಾದರೆ ಸುಪ್ಪತ್ತಿಗೆ, ಸೌಕರ್ಯ ಬೇಕಾಗಿಲ್ಲ. ಶರೀರ ದಣಿಯಬೇಕು ಎಂಬುದು ಸತ್ಯವಾಯಿತು. ಏನೇ ಇರಲಿ ಹೊಸ ಅನುಭವವೇನಲ್ಲ, ಹುಟ್ಟಿದ್ದೇ ಕಾಡಿನಲ್ಲಿ, ಬೆಳೆದಾಡಿದ್ದೇ ಈ ನಿಸರ್ಗದ ಮಡಿಲಲ್ಲಿ. ನಮಗೆ ಈ ಕಾಡು ತವರು ಮನೆಯಿದ್ದ ಹಾಗೆ. ಹಾಗಾಗಿ ಈ ಸುಖಾನುಭವ ಎಂದು ಭೀಮ ಯೋಚಿಸುತ್ತಿದ್ದನು. ಆಗ ಆತನ ಮನಸ್ಸು ತರ್ಕಿಸುತ್ತಾ ಇದಕ್ಕೆಲ್ಲಾ ಕಾರಣಕರ್ತನಾದ ದುರ್ಯೋಧನನನ್ನು ನೆನೆದು ಒಮ್ಮೆಗೆ ಮೈ ಬಿಸಿ ಏರಿತು. ಸ್ವತಃ ನನ್ನನ್ನೇ ಕೊಲ್ಲುವುದಕ್ಕೆ ಪ್ರಯತ್ನಿಸಿ ವಿಫಲನಾದವ ಈಗ ಕುಟುಂಬ ಸಮೇತ ನರಮೇಧಕ್ಕೆ ಕೈ ಹಾಕಿದ ಪಾಪಿ. ಹೀಗೆಲ್ಲಾ ವಿಮರ್ಶಿಸುತ್ತಾ ಕೋಪೋದ್ರೇಕಕ್ಕೊಳಗಾದನು. ತಕ್ಷಣ ಅರಗಿನ ಅರಮನೆ, ಪುರೋಚನ ಸಹಿತ ಬಳಗದ ಬಗ್ಗೆ ಯೋಚಿಸಿದ. ದುಷ್ಟಕೂಟದ ಸಹವಾಸದ ಕಾರಣ ಪುರೋಚನ ಸಹಿತ ಬಳಗ ಮರಣಹೊಂದಿದ್ದಾರೆ. ಆದರೆ ನೆನಪಿಸುತ್ತಾ ಹೋಗುವಾಗ ಬೇಡತಿ ಹಾಗು ಆಕೆಯ ಮಕ್ಕಳೂ ನಮ್ಮಿಂದಾಗಿ ಹತಭಾಗ್ಯರಾಗಿ ಸತ್ತು ಹೋದರಲ್ಲಾ ಎಂದು ಮರುಕಪಟ್ಟನು. ಅವರ ಶವಗಳು ನಾಳೆ ಪಾಂಡವರ ಮರಣಾವಶೇಷಗಳೆಂದು ಪರಿಗಣಿಸಲ್ಪಡಬಹುದೋ ಏನೋ? ನಮ್ಮ ಆಭರಣ ಆಯುಧಗಳು ಮರಣೋತ್ತರ ಪುರಾವೆಗಳಾಗಬಹುದು. ಅಜ್ಜ ಭೀಷ್ಮಾಚಾರ್ಯ, ಗುರು ದ್ರೋಣಾಚಾರ್ಯರು ದುಃಖಿಸಬಹುದು. ಪುರಜನರು ಮರುಗಿ ಕಣ್ಣೀರ್ಗರೆಯುತ್ತಾರೆ. ದುರ್ಯೋಧನನ ಬಳಗ ಸಂತಸಪಡಬಹುದು. ಸುದೀರ್ಘವಾಗಿ ನಾಳಿನ ದಿನದ ಸಾಧ್ಯತೆಗಳನ್ನು ತರ್ಕಿಸುತ್ತಿದ್ದ ಭೀಮ. ವಿದುರನ ವಿವೇಕದಿಂದಾಗಿ ನಾವು ಸುಲಭವಾಗಿ ಪಾರಾಗಿ ಬಂದೆವು. ಎಲ್ಲವೂ ದೇವೇಚ್ಚೆ ಎಂದು ದೇವರ ಸ್ತೋತ್ರ ಮಾಡತೊಡಗಿದನು.

ಇತ್ತ ವಾರಣಾವತದಲ್ಲಿ ಆಕಾಶದೆತ್ತರಕ್ಕೆ ಬೆಂಕಿ ಹಬ್ಬಿ ಸ್ಪೋಟಗೊಳ್ಳುತ್ತಾ ಉರಿಯುತ್ತಿದೆ. ಉರಿಯಲೆಂದೇ ಪೂರಕ ತಯಾರಿಯಿಂದ ನಿರ್ಮಾಣವಾದ ಭವನ ಅಗ್ನಿ ಸ್ಪರ್ಶ ಯಾರಿಂದಾಗಿದ್ದರೂ ಉರಿಯದೆ ಉಳಿದೀತೆ! ಅಗ್ನಿಯ ಬಿಸಿ, ಸುಡುವ ಸ್ಪೋಟಕ್ಕೆ ಗ್ರಾಮಸ್ಥರಿಗೆ ಎಚ್ಚರವಾಗಿ ಓಡಿ ಬಂದರಾದರೂ ಹತ್ತಿರವೂ ಸುಳಿಯಲಾಗದೆ ಕೇವಲ ನೋಟಕರಾಗಿ, ಭವನದೊಳಗಿದ್ದ ಪಾಂಡವರು ಸುಟ್ಟು ಹೋದರಲ್ಲಾ ಎಂದು ಬೊಬ್ಬಿರಿದು ಅತ್ತರು. ಇನ್ನು ಕೆಲವರು ಈ ಪರಿಯ ಅಗ್ನಿ ದುರಂತಕ್ಕೆ ಕಾರಣ ಏನಿರಬಹುದು ಎಂದು ಅವರವರ ಯೋಚನಾ ಸಾಮರ್ಥ್ಯದಲ್ಲಿ ವಿವಿಧ ಕಾರಣ ನೀಡಿ ವಿವೇಚಿಸತೊಡಗಿದರು. ಆಯುಧ ಶಾಲೆಯಲ್ಲಿದ್ದ ಪುರೋಚನ, ಇತ್ತ ಅರಗಿನ ಭವನದಲ್ಲಿ ಬೇಡತಿಯ ಜೊತೆ ಮಕ್ಕಳು ಇಹ ಲೋಕದ ಯಾತ್ರೆ ಮುಗಿಸಿದ್ದಾರೆ. ವಿಷಯ ಹಸ್ತಿನೆಗೂ ಮುಟ್ಟಿತು. ಪ್ರಜಾ ಜನ ಕೋಟಿ ದುಃಖ ಸಾಗರದಲ್ಲಿ ಮುಳುಗಿತು. ಪೂರ್ಣ ಉರಿದ ಅರಮನೆಯ ಅವಶೇಷಗಳಲ್ಲಿ ಹುಡುಕಿದಾಗ ಸಿಕ್ಕಿದ್ದು ಅಸ್ಥಿ ಪಂಜರ, ಬುರುಡೆಯ ಶೇಷಗಳು. ದುರ್ಯೋಧನ – ಶಕುನಿ ಪರಾಂಬರಿಸಿ ಎಣಿಸಿದರು -ಕಲ್ಪಿಸಿದರು ಇದು ಭೀಮನದ್ದು, ಇದು ಅರ್ಜುನದ್ದಾಗಿರಬಹುದು… ಉಳಿದದ್ದು ನಕುಲ, ಸಹದೇವ, ಕುಂತಿ, ಧರ್ಮರಾಯನದ್ದು ಆಗಿದ್ದಿರಬಹುದು. ಸಂತಸವೇ ಸಂತಸ. ಕಣಿಕನ ತಂತ್ರ, ಉಪಾಯ ಇಷ್ಟು ಬೇಗ, ಸುಲಭದಲ್ಲಿ ಫಲಪ್ರದವಾಗುವುದೆಂದು ಎಣಿಸಿಯೂ ಇರಲಿಲ್ಲ. ದುರ್ಯೋಧನ ಪುರೋಚನನೂ ಸತ್ತನಲ್ಲ ಎಂದು ಮರುಗಿದಾಗ, ಶಕುನಿ ಪೀಡೆ ತೊಲಗಿತು. ಬದುಕಿ ಉಳಿಯುತ್ತಿದ್ದರೆ, ನಾವು ಕೊಡಬೇಕಾದದ್ದು ಈಗ ಉಳಿಯಿತು ಎಂದು ಕೃತಘ್ನನಾಗಿ ಉತ್ತರಿಸಿದ. ಇತ್ತ ಭೀಷ್ಮಾಚಾರ್ಯರು ಮಾತ್ರ ಇದೆಲ್ಲಾ ಹೇಗೆ ಸಾಧ್ಯವಾಯಿತು. ಚತುರರಾದ ಪಾಂಡವರು ತಂತ್ರಕ್ಕೆ ಬಲಿಯಾದರೇ? ಸಾಧ್ಯವೇ? ಎಂಬಿತ್ಯಾದಿ ತರ್ಕ ನಿರತರಾಗಿದ್ದರು. ವಿದುರ ಮಾತ್ರ ನಿರುಮ್ಮಳನಾಗಿ ತನ್ನ ಲೆಕ್ಕಾಚಾರ, ಪ್ರತಿತಂತ್ರ ಸರಿಯಾಗಿಯೇ ಕಾರ್ಯವೆಸಗಿದ ತೃಪ್ತಿಯಿಂದ ಸಂತೃಪ್ತ ಮಾನಸಿಯಾಗಿದ್ದ. ದುರ್ಯೋಧನ – ಶಕುನಿಯರ ಬಳಗದ ಸಂಭ್ರಮ ಅದುಮಿಟ್ಟು ಕಪಟದ ಕಣ್ಣೀರಿನ ದುಃಖ ನಾಟಕ ಪ್ರದರ್ಶನವನ್ನು ಗಮನಿಸುತ್ತಾ ವಿದುರನ ಕಣ್ಮನಗಳು ಅವರ ಕೃತಕತೆಯನ್ನು ಗುರುತಿಸುತ್ತಿದ್ದವು.

ಅಪರ ಕ್ರಿಯೆಗಳು ನಡೆದು ಸದ್ಗತಿಗಾಗಿ ವಿಜ್ರಂಬಣೆಯಿಂದ ಶಾಂತಿ ಹೋಮಗಳೂ ನಡೆದು, ತರ್ಪಣ ಬಿಡುವ ಹೊತ್ತಿಗೆ ಬಂಧುಗಳೆಲ್ಲರೂ ಮುಂದುವರೆದರು. ವಿದುರ ಭೀಷ್ಮನನ್ನು ತಡೆದು ಸನ್ನೆಯಿಂದಲೇ ನಿಲ್ಲಿಸಿದ. ಆಗ ಭೀಷ್ಮನು ಏನೋ ಇದೆ ಎಂದು ಹಿಂದೆ ಸರಿದು ನಿಂತರು. ಇದು ಹೆಚ್ಚು ಯಾರ ಗಮನಕ್ಕೂ ಗೋಚರಿಸಲಿಲ್ಲ. ದುರ್ಯೋಧನಾದಿಗಳಿಂದ ಅತಿಯಾದ ದಾನಗಳು ಜನರಿಗೆ ನೀಡಲ್ಪಟ್ಟವು. ಇದೆಲ್ಲಾ ಮುಗಿದ ಬಳಿಕ ಕೆಲ ದಿನ ಕಳೆದು ನೋಡಿದರೆ ವಿದುರ ವ್ಯಥಿತನಾಗಿಲ್ಲ. ಕೌರವ ಬಳಗ ಸಂಭ್ರಮದಲ್ಲಿದೆ. ತರ್ಪಣ ಬಿಡುವ ಹೊತ್ತಿಗೆ ವಿದುರ ತಡೆದ ಘಟನೆಯನ್ನೇ ಆಧರಿಸಿ ಭೀಷ್ಮಾಚಾರ್ಯರು – ಅದಕ್ಕೆ ಕಾರಣ ಹುಡುಕಿ ಸತ್ಯ ತಿಳಿಯುವ ಪ್ರಯತ್ನ ನಿರತರಾದರು.

ಇತ್ತ ಭೀಮಸೇನ ಕಾಡಿನಲ್ಲಿ ದೇವರ ನಾಮಸ್ಮರಣೆ ನಿರತನಾಗಿದ್ದಾನೆ. ನೇಸರನೇರಿಬಂದಾಗ ಎಚ್ಚೆತ್ತ ಪಾಂಡವರು ಕುಂತಿಸಮೇತರಾಗಿ ಎದ್ದು ಆರೂ ಮಂದಿಯೂ ಅಲ್ಲಿಂದ ಹೊರಟು ಕಾಡ ದಾರಿಯಲ್ಲಿ ನಡೆಯ ತೊಡಗಿದರು. ಎಲ್ಲಿಗೆ? ಯಾಕೆ? ಒಂದೂ ತಿಳಿಯದೆ ಸಾಗುತ್ತಿದ್ದಾರೆ. ತೊರೆಯೊಂದು ಅಡ್ಡಲಾಗಿ ಸಿಕ್ಕಾಗ ಎಲ್ಲರೂ ಸ್ನಾನಾದಿ ಶೌಚ ಕ್ರಿಯೆ ಪೂರೈಸಿದರು. ಮರವೇರಿ ಮಾಗಿದ ತಾಜಾ ಹಣ್ಣುಗಳನ್ನು ಕಿತ್ತು, ಸಂಭ್ರಮದಿಂದ ತಿಂದು ಹೊಟ್ಟೆ ತುಂಬಿಸಿಕೊಂಡರು. ಮುಂದೊತ್ತಿ ಕಾನನ ಮಾರ್ಗದಲ್ಲಿ ಗಮಿಸಿದರು. ಸಂಜೆಯಾಯಿತು, ಕತ್ತಲಾಯಿತು, ನಡೆದು ಸುಸ್ತಾಗಿತ್ತು, ಮತ್ತೆ ನೀರನ್ನರಸುತ್ತಾ ಜರಿಯೊಂದರ ಬಳಿ ಸಾರಿ ಶುಚಿಯಾಗಿ, ನೀರು ಕುಡಿದು ದಣಿವಾರಿಸಿಕೊಂಡರು. ವಿಶ್ರಾಂತಿಗೆ ಸ್ಥಳವರಸುತ್ತಾ ದೊಡ್ಡದಾದ ಆಲದ ಮರದಡಿಯಲ್ಲಿ ಹಸಿಯೆಲೆಗಳನ್ನು ಹಾಸಿ ಮಲಗಿಕೊಂಡರು. ಎಲ್ಲರಿಗೂ ಮತ್ತೆ ಸುಖ ನಿದ್ರೆ ಬಂದರೂ ಭೀಮನಿಗೆ ಮಾತ್ರ ಕಣ್ಣು ಮುಚ್ಚಿದೊಡನೆ ದುರ್ಯೋಧನ ಕಾಣಿಸುತ್ತಿದ್ದನು. ಏರುತ್ತಿದ್ದ ಕೋಪದ ಆವೇಶದಲ್ಲಿ ನಿದ್ರೆ ಬಳಿ ಸುಳಿಯುತ್ತಿರಲಿಲ್ಲ. ಮತ್ತೆ ನಿದ್ರಿಸದೆ ಹಾಗೇ ಒರಗಿ ಕುಳಿತಿದ್ದನು.

ಹೀಗೆ ವನಸಿರಿಯ ಮಧ್ಯೆ ಚಂದ್ರವಂಶದ ಕುಟುಂಬ ಚಂದ್ರನ ತಂಪಾದ ಬೆಳದಿಂಗಳಿಗೆ ಮೈಯೊಡ್ಡಿ ಮಲಗಿದ್ದಾರೆ. ಇವರ ಮೈಯೊಗರು ಅಲ್ಲೇ ಪಕ್ಕದಲ್ಲಿದ್ದ ಹಿಡಿಂಬಾ ವನದವರೆಗೂ ಹಬ್ಬಿತ್ತು. ಹಿಡಿಂಬನೆಂಬ ರಕ್ಕಸ, ಹಿಡಿಂಬೆ ಆತನ ತಂಗಿ ಸಹಿತ ರಾಕ್ಷಸ ಬಳಗವೇ ಆ ಕಾಡಿನಲ್ಲಿದ್ದರು. ನರಮಾಂಸ, ಹಸಿರಕ್ತದ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆ ಹಿಡಿಂಬಾಸುರ ತಂಗಿಯನ್ನು ಕರೆದು ಈ ನರವಾಸನೆಯ ಜಾಡು ಹಿಡಿದು ಹೋಗಲು ಕಳುಹಿಸಿದ. ಅರಸುತ್ತಾ ಹೊರಟಳು ಹಿಡಿಂಬೆ. ಹುಡುಕುತ್ತಾ ಬಂದಾಕೆಗೆ ಬೆಳದಿಂಗಳ ಬೆಳಕಲ್ಲಿ ಮರದ ಬುಡದಲ್ಲಿ ಕುಳಿತು ಧ್ಯಾನಿಸುತ್ತಿರುವ ಅಜಾನುಬಾಹು ಭೀಮ ಕಾಣಿಸಿದ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page