ಮಹಾಭಾರತ

ಭಾಗ 416

ಭರತೇಶ ಶೆಟ್ಟಿ,ಎಕ್ಕಾರ್

ಸಂಚಿಕೆ ೪೧೬ ಮಹಾಭಾರತ

ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರ ಸಂಜಯನೆದುರು ಮತಿಭ್ರಮಣೆಗೊಳಗಾಗಿ ಹುಚ್ಚನಂತೆ ವರ್ತಿಸತೊಡಗಿದ್ದಾನೆ. ತನ್ನ ಪ್ರಿಯ ಪುತ್ರರ ಸರಣಿ ಮರಣ, ದುಶ್ಯಾಸನನ ಬರ್ಬರ ಹತ್ಯೆಯ ಸುದ್ದಿಗಳು ಬರಸಿಡಿಲಿನಂತೆ ಅಪ್ಪಳಿಸಿದ ಪರಿಣಾಮ ಬೊಬ್ಬೆ ಹಾಕಿ ಅಳುತ್ತಾ “ಸಂಜಯಾ ಯಾಕಾದರೂ ನಾನಿನ್ನು ಬದುಕುಳಿದಿದ್ದೇನೆ? ನನ್ನ ಹೃದಯ ಇಷ್ಟು ಬಲವಾಗಿರುವಂತೆ ಆ ನಿಷ್ಕರುಣಿ ದೇವರು ಮಾಡಿದ್ದಾನೆ? ಇಷ್ಟು ಆಘಾತಕಾರಿ ಸುದ್ದಿಗಳನ್ನು ಕೇಳಿಯೂ ನನ್ನ ಹೃದಯವಿನ್ನೂ ಅಚಲವಾಗಿ ಯಥಾಸ್ಥಿತಿಯಲ್ಲಿ ಬಡಿಯುತ್ತಿದೆಯಲ್ಲ. ಅದಕ್ಕಾದರು ಆಘಾತವಾಗಿ ನಾನೂ ಸಾಯುತ್ತಿದ್ದರೆ ನನಗದು ಕ್ಷೇಮವಾಗಿರುತ್ತಿತ್ತು” ಎಂದು ಮಾರ್ಮಿಕವಾಗಿ ನುಡಿಯತೊಡಗಿದನು.

ಆಗ ಸಂಜಯ “ಮಹಾರಾಜ ನಮ್ಮ ಜೀವನದಲ್ಲಿ ನಾವು ಮಾಡುವ ಪ್ರತಿಯೊಂದು ಕೆಲಸ, ಕಾರ್ಯಗಳೂ ಕರ್ಮವೆಂದು ಪರಿಗಣಿತವಾಗುತ್ತದೆ. ಅಂತಹ ಕರ್ಮಗಳು ಸತ್ಕರ್ಮಗಳಾಗಿದ್ದರೆ ಆದಿಯಲ್ಲಿ ಕಷ್ಟವಾದರೂ, ಭವಿಷ್ಯತ್ತಿನಲ್ಲಿ ಉತ್ತಮ ಫಲ ನೀಡಿ ನೆಮ್ಮದಿ ಮನಶಾಂತಿಯನ್ನು ಕಾಲಾಂತರದಲ್ಲಿ ನೀಡುತ್ತವೆ. ಅದೇ ಕೃತ ಕೃತ್ಯಗಳು ದುಷ್ಕರ್ಮಗಳಾಗಿದ್ದರೆ ಮೊದಲು ತಾತ್ಕಾಲಿಕ ಸಂತೋಷ ನೀಡಬಹುದಾದರೂ ಭವಿಷ್ಯ ಘೋರವಾಗಿರುತ್ತವೆ. ಈಗ ನೀನು ಪರಿತಪಿಸುವುದು ಮಿಂಚಿ ಹೋದ ಕಾಲಕ್ಕೆ ಚಿಂತಿಸಿದಂತಾಗಿದೆ. ಯಾವುದೇ ಫಲವಿಲ್ಲ, ಅರ್ಥಾತ್ ಈಗ ಅನುಭವಿಸ ಬೇಕಾಗಿರುವುದಷ್ಟು ಮಾತ್ರ ಉಳಿದಿರುವ ಭಾಗ್ಯ. ಬದುಕು ಕನ್ನಡಿಯಂತೆ ಏನನ್ನು ಅದರ ಮುಂದಕ್ಕೆ ಹಿಡಿದರೂ ಅದನ್ನೇ ಪ್ರತಿಫಲಿಸುವಂತೆ ಬದುಕೂ ಸಮಾನ ಗುಣ ಹೊಂದಿದೆ. ನಿನ್ನ ಕೈಯಲ್ಲಿ ಅವಕಾಶವಿತ್ತು, ಸರಿಯಾದ ನಿರ್ಣಯ ಆ ಸಮಯ ಕೈಗೊಳ್ಳುವ ಪೂರ್ಣಾಧಿಕಾರ ನಿನಗಿತ್ತು. ನಿನ್ನ ಮಕ್ಕಳಿಗೆ ಸನ್ಮಾರ್ಗ ತೋರುವ ಜವಾಬ್ದಾರಿಯೂ ನಿನ್ನದ್ದಾಗಿತ್ತು. ಅದ್ಯಾವುದನ್ನೂ ಮಾಡದೆ ಈಗ ನಿನಗೊದಗಿರುವ ಈ ಸ್ಥಿತಿಯಲ್ಲಿ ಈ ರೀತಿ ರೋದಿಸುವುದಷ್ಟೇ ನಿನಗಿರುವ ಕರ್ಮಫಲ. ಯಾರೇ ಆದರೂ ನಿನ್ನ ಭಾಗಕ್ಕೆ ಅಸಹಾಯಕರೇ ಆಗಿರುವಾಗ ನೀನು ಪೂರ್ವ ದುಷ್ಕೃತಗಳನ್ನು ಸ್ಮರಿಸಿ ಪಶ್ಚಾತ್ತಾಪ ಪಡುತ್ತಾ ಪರಿಮಾರ್ಜನೆ ಮಾಡಿಕೊಳ್ಳಬೇಕು. ಜೊತೆಗೆ ಇನ್ನೂ ಘನಘೋರ ಸುದ್ದಿಗಳು ರಣಾಂಗಣದಿಂದ ಬರುವ ಪೂರ್ಣ ನಿರೀಕ್ಷೆ ಇದೆ. ಮನಸ್ಸನ್ನು ಅಂತಹ ಕಠೋರ ಕಟು ಸತ್ಯಗಳನ್ನು ಆಲಿಸಿ ಸಹಿಸಿಕೊಳ್ಳಲು ಸಿದ್ಧನಾಗಬೇಕು” ಎಂದನು.

ಕುರು ಸೇನಾಪತಿ ಕರ್ಣನೂ ಸಮ್ಮಿಶ್ರ ಭಾವದಲ್ಲಿ ಕರಗಿ ಹೋಗಿದ್ದಾನೆ. ಒಂದೆಡೆ ಆಕ್ರೋಶ, ಕ್ರೋಧ, ಪ್ರತಿಕಾರ ಭಾವಗಳು ಮೇಳೈಸಿ ಬರುತ್ತಿದ್ದರೆ, ಮತ್ತೊಂದೆಡೆ ಪುತ್ರ ವಿಯೋಗ, ಸೋದರ ಮೃತ್ಯು, ಮಿತ್ರ ಕೌರವನ ಸೋದರರ ಹತ್ಯಾಕಾಂಡ, ಕುರು ಪಕ್ಷಕ್ಕಾಗುತ್ತಿರುವ ಸೋಲು ನಿಸ್ತೇಜಗೊಳಿಸುತ್ತಿದೆ. ಆದರೂ ಎಲ್ಲವನ್ನೂ ಸಹಿಸಿ ತನ್ನೊಳಗಿನ ಯೋಧಶಕ್ತಿಗೆ ಚೈತನ್ಯ ನೀಡುತ್ತಾ ರೋಷಾವೇಶವನ್ನು ಇಮ್ಮಡಿಗೊಳಿಸಿಕೊಂಡನು. ಪರಿಣಾಮವಾಗಿ “ಅರ್ಜುನಾ ನಿನ್ನನ್ನು ವಧಿಸಬೇಕೆಂದು ನನ್ನ ಮನಸ್ಸು ಹಾತೊರೆಯುತ್ತಿದೆ. ಇನ್ನು ನೀನು ಬದುಕಿರಬಾರದು. ಎಲ್ಲಿ ಅಡಗಿರುವೆ? ಗಂಡಸಾದರೆ ಬಾ ಮುಂದೆ ನನ್ನ ಕಣ್ಮುಂದೆ ಬಂದು ಕಾಣಿಸಿಕೋ. ವೀರನಾದ ನನ್ನ ಮುಂದೆ ನಿನ್ನ ಪೌರುಷ ತೋರಿಸು. ಅಂತ್ಯ ಕಾಲದ ಆಸೆಗಳಿದ್ದರೆ ಯಾರಿಗಾದರು ತಿಳಿಸಿ ಬಾ!” ಎಂದು ಭ್ರಾಂತಿಗೊಳಗಾದವನಂತೆ ಮತ್ತೆ ಮತ್ತೆ ಕೂಗಿ ರೇಗಾಡುತ್ತಾ ಅರ್ಜುನನ್ನು ಯುದ್ದಕ್ಕಾಗಿ ಕರೆಯತೊಡಗಿದನು.

ಕರ್ಣನ ಈ ಬುದ್ಧಿಯನ್ನು ನೋಡಿ ಬೇಸತ್ತ ಶಲ್ಯ ಕ್ರುದ್ಧನಾದನು. “ಹೇ ಮೂರ್ಖ! ನೀನೇಕೆ ಅರ್ಜುನನ್ನು ಕರೆಯುತ್ತಿರುವೆ? ನಿನಗೆ ಸಾಯುವ ಮನಸ್ಸಾಗಿದೆಯೋ? ಅಲ್ಲಾ ಅರ್ಜುನನ ಕೈಯಲ್ಲಿ ಸಾಯಬೇಕೆಂಬ ವ್ರತವಿದೆಯೋ? ನೀನು ಆಹ್ವಾನ ನೀಡುತ್ತಿರುವುದು ಅರ್ಜುನನಿಗಲ್ಲ ನಿನ್ನ ಮೃತ್ಯುವಿಗೆ. ನಿನ್ನ ಅಪೇಕ್ಷೆ ಅದೇ ಆಗಿದೆ ಎಂದಾದರೆ ನೀನು ಪ್ರಯಾಸ ಪಡಬೇಕಾಗಿಲ್ಲ. ರಥವನ್ನು ನಾನು ಪಾರ್ಥನಿಗೆ ಎದುರಾಗಿ ನಡೆಸಿ ನಿಲ್ಲಿಸುತ್ತೇನೆ. ಕೃಷ್ಣಾರ್ಜುನರ ಸಾಮರ್ಥ್ಯದ ಪೂರ್ಣ ಶಕ್ತಿಯ ಅನುಭವ ನಿನಗಾಗಲಿ” ಎಂದನು.

ಕರ್ಣನ ಮನಸ್ಥಿತಿ ಮೊದಲೆ ಆತನ ನಿಯಂತ್ರಣದಲ್ಲಿರಲಿಲ್ಲ. ಮೇಲಿಂದ ಮೇಲೆ ಶಲ್ಯನಿಂದಾಗುತ್ತಿರುವ ಅಪಮಾನ ಅಸಹನೀಯ ವೇದನೆ, ಕೋಪ ಉಂಟು ಮಾಡತೊಡಗಿತು. ತತ್ಪರಿಣಾಮ ಕುಪಿತನಾಗಿ “ಹೇ ಸಾರಥಿ! ನಿನ್ನ ಕೆಲಸವೇನು? ನಾನು ಮಾಡುವ ಆಜ್ಞೆಯನ್ನು ಪಾಲಿಸಿ ರಥ ನಡೆಸು. ಯಾಕಾಗಿಯಾದರೂ ನಾನು ಅರ್ಜುನನ ಎದುರು ಹೋಗಲು ಬಯಸುತ್ತೇನೆ. ನಿನಗದನ್ನು ವಿವರಿಸುವುದು ನನಗೀಗ ಅನಗತ್ಯ. ಮೊದಲು ನನ್ನ ರಥವನ್ನು ಅರ್ಜುನನ ರಥದ ಕಡೆಗೆ ಹಾರಿಸು” ಎಂದನು.

ಇತ್ತ ಶ್ರೀ ಕೃಷ್ಣನೂ ಅರ್ಜುನನನ್ನು ಎಚ್ಚರಿಸುತ್ತಾ “ಹೇ ಪಾರ್ಥಾ! ನಮ್ಮ ಜೀವನದಲ್ಲಿ ದಾಸ್ಯ ಹಲವು ವಿಧಾನಗಳಿಂದ ಒದಗಿ ಬರುತ್ತದೆ. ಅಂತಹ ಕಾರಣಗಳಲ್ಲಿ ನಮ್ಮ ವಚನವೂ ಪ್ರಮುಖ ಸ್ಥಾನ ಪಡೆಯುತ್ತದೆ. ಆಡದೆ ನಮ್ಮೊಳಗೆ ಉಳಿಸಿದ ಭಾವನೆಗಳಿಗೆ ನಾವು ಯಜಮಾನರು. ನಾವು ಆಡಿ ಹೊರಹಾಕಿದ ಮನದಭಾವನೆಯ ರೂಪವಾದ ಮಾತಿಗೆ ದಾಸರಾಗಬೇಕಾಗುತ್ತದೆ. ನುಡಿದ ವಚನ ಪಾಲನೆಗೆ ಹೊಣೆಗಾರರಾಗಿ ಹೋಗುತ್ತೇವೆ. ಈಗ ನಿನ್ನ ಸ್ಥಿತಿಯೂ ಹಾಗಾಗಿದೆ. ಇಂದಿನ ಸೂರ್ಯಾಸ್ಥಮಾನದ ಒಳಗಾಗಿ ಕರ್ಣನ ವಧೆಗೈಯುವ ವಚನ ನಿನ್ನಿಂದ ಪ್ರತಿಜ್ಞಾ ರೂಪದಲ್ಲಿ ಉಚ್ಚರಿಸಲ್ಪಟ್ಟಿದೆ. ಈಗ ಪಾಲಿಸಲೇ ಬೇಕಾದ ಅನಿವಾರ್ಯತೆಯಲ್ಲಿರುವ ನೀನು ಕರ್ಣನನ್ನು ಎದುರಿಸಬೇಕಾಗಿದೆ. ಏನೇ ಸ್ಥಿತಿ ಬಂದರೂ ಚಿತ್ತ ಚಾಂಚಲ್ಯಕ್ಕೊಳಗಾಗದೆ ವಚನಬದ್ದನಾಗಿ ಪ್ರತಿಜ್ಞೆ ಪೂರೈಸುವ ಮನಸ್ಥಿತಿ ಸಿದ್ಧಗೊಳಿಸಿಕೋ” ಎಂದು ಹೇಳುತ್ತಾ ರಥವನ್ನು ಕರ್ಣನತ್ತ ಹಾರಿಸಿದನು.

ಅತ್ತ ಶಲ್ಯ ಭೂಪತಿಯೂ ಕರ್ಣನ ರಥವನ್ನು ಕೃಷ್ಣಾರ್ಜುನರತ್ತ ಓಡಿಸುತ್ತಾ ಬರುತ್ತಿದ್ದಾನೆ. ಕರ್ಣಾರ್ಜುನರು ಮುಖಾಮುಖಿಯಾಗುವ ಕ್ಷಣ ಬಂದಾಯಿತು.

ಮುಂದುವರಿಯುವುದು…