
ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಭಾವದ ಪರಿಣಾಮ ಇದೀಗ ಅಕ್ಕಿ ದರದ ಮೇಲೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಭತ್ತ ಬಿತ್ತನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಸ್ಟೀಮ್, ಸೋನಾ ಮಸೂರಿ ಸೇರಿದಂತೆ ಬಹುತೇಕ ಎಲ್ಲಾ ವಿಧದ ಅಕ್ಕಿಗಳ ಬೆಲೆ ಭಾರೀ ಏರಿಕೆಯಾಗಿದೆ. ಕೆಲವೆಡೆ ದರವು ಶೇ.35ರಷ್ಟು ಹೆಚ್ಚಳ ಕಂಡಿದ್ದು, ಗ್ರಾಹಕರು ಹಾಗೂ ವ್ಯಾಪಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಳೆದ ಎರಡು ತಿಂಗಳಲ್ಲಿ ಅಕ್ಕಿ ದರ ಏರಿಕೆ (ಕೆಜಿಗೆ):
ಹಿಂದಿನ ದರ. ಈಗಿನ ದರ
ದಪ್ಪ ಅಕ್ಕಿ. ₹37 ₹42
ಬಾಯ್ಲ್ಡ್ ರೈಸ್ ₹30 ₹34
ಸೋನಾ ಸ್ಟೀಮ್ ಅಕ್ಕಿ ₹46 ₹64
ಸೋನಾ ಮಸೂರಿ ₹54 ₹70
ಕೋಲಂ ಅಕ್ಕಿ ₹75 ₹84
ರಾಜ್ಯದಲ್ಲಿ ಸುಮಾರು ಶೇ.50ರಷ್ಟು ಮಳೆ ಕೊರತೆಯಾಗಿರುವುದರಿಂದ ಭತ್ತದ ಬಿತ್ತನೆ ವಿಳಂಬವಾಗಿದೆ. ಇದರಿಂದ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಅಕ್ಕಿ ದರ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ. ಇದೇ ವೇಳೆ ಯಶವಂತಪುರ ಎಪಿಎಂಸಿಗೆ ಆಗಮಿಸುವ ಅಕ್ಕಿಯ ಲೋಡ್ಗಳ ಸಂಖ್ಯೆಯೂ ಕಡಿಮೆಯಾಗಿದ್ದು, ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಹಿಂಗಾರು ಮಳೆಯೂ ನಿರೀಕ್ಷಿತ ಮಟ್ಟದಲ್ಲಿ ಆಗದಿದ್ದರೆ ಅಕ್ಕಿ ಉತ್ಪಾದನೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಪರಿಣಾಮವಾಗಿ ಅಕ್ಕಿ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ವ್ಯಕ್ತವಾಗಿದ್ದು, ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.























































