
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡ ಪರಿಣಾಮ ಮಳೆಗಾಲದಲ್ಲಿಯೂ ಬಿಸಿಲಿನ ತೀವ್ರತೆ ಹೆಚ್ಚಿದ್ದು, 16 ಜಿಲ್ಲೆಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗಿದೆ.
ಜೂನ್ 1ರಿಂದ ಜುಲೈ 14ರವರೆಗೆ ರಾಜ್ಯದಲ್ಲಿ ಶೇ.29ರಷ್ಟು ಮಳೆ ಕೊರತೆ ದಾಖಲಾಗಿದ್ದು, ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಜಿಲ್ಲೆಗಳು ಮಳೆ ಅಭಾವ ಎದುರಿಸುತ್ತಿವೆ. ಬೆಂಗಳೂರಿನಲ್ಲಿ ಗರಿಷ್ಠ 33 ಡಿ.ಸೆ. ತಾಪಮಾನ ದಾಖಲಾಗಿದ್ದು, ಇತರ ಜಿಲ್ಲೆಗಳಲ್ಲಿ ಇದು 38 ಡಿ.ಸೆ.ವರೆಗೆ ಏರಿಕೆಯಾಗಿದೆ. ಬೀದರ್‌ನಲ್ಲಿ ವಾಡಿಕೆಗಿಂತ 7.4 ಡಿ.ಸೆ. ಹಾಗೂ ಕಲಬುರಗಿಯಲ್ಲಿ 5.9 ಡಿ.ಸೆ. ಹೆಚ್ಚಳ ಕಂಡುಬಂದಿದೆ.
ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಚಿಕ್ಕಬಳ್ಳಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲೂ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ದುರ್ಬಲಗೊಂಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿದರೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಾತ್ರ ಅಲ್ಲಲ್ಲಿ ಮಳೆಯಾಗಿದೆ.
ಉತ್ತರ ಭಾರತದಲ್ಲಿ ಮುಂಗಾರು ಮಾರುತಗಳು ಬಲವಾಗಿದ್ದು ಅಲ್ಲಿ ಉತ್ತಮ ಮಳೆಯಾಗುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಮಾರುತಗಳು ದುರ್ಬಲಗೊಂಡಿದ್ದು, ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿಯಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗದ ಕಾರಣ ಮಳೆ ಪ್ರಮಾಣ ಕುಸಿದಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಸಿ ಗಾಳಿ ಹಾಗೂ ತೇವಾಂಶಯುಕ್ತ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು ಮಳೆ ಕ್ಷೀಣಿಸಿರುವುದರಿಂದ ಕರಾವಳಿ ಭಾಗದಲ್ಲಿ ತಾಪಮಾನವೂ ಏರಿಕೆಯಾಗಿದೆ. ವಾಡಿಕೆಗಿಂತ ಗರಿಷ್ಠ ತಾಪಮಾನ 2.8 ಡಿ.ಸೆ. ಮತ್ತು ಕನಿಷ್ಠ ತಾಪಮಾನ 1.6 ಡಿ.ಸೆ. ಹೆಚ್ಚಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಉತ್ತಮ ಮಳೆಯಾಗುತ್ತದೆ. ಆದರೆ ಮುಂಗಾರು ದುರ್ಬಲವಾಗಿರುವ ಕಾರಣ ಈ ಬಾರಿ ಆಟಿ ಮಳೆಯತ್ತ ಜನರ ನಿರೀಕ್ಷೆ ಹೆಚ್ಚಿದೆ. ಕೆಲವೇ ದಿನಗಳಲ್ಲಿ ನಿಮ್ನ ಒತ್ತಡ ನಿರ್ಮಾಣವಾದರೆ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಇಲ್ಲದಿದ್ದರೆ ಬಿಸಿ ವಾತಾವರಣ ಮುಂದುವರಿಯಬಹುದು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕೆಲವೆಡೆ ಸಾಧಾರಣ ಮಳೆಯಾದರೆ ಬಹುತೇಕ ಪ್ರದೇಶಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿದೆ. ಸಂಜೆ ವೇಳೆಯಲ್ಲೂ ಉರಿ ಬೇಗೆ ಅನುಭವವಾಗಿದೆ.














































