
ಚಾಮರಾಜನಗರ: ಜು. 10ರಂದು ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸುನೀಲ್ ಬೋಸ್ ಸಂಸತ್ತಿಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಕೃತಜ್ಞತಾ ಸಮಾರಂಭದಲ್ಲಿ ಸಿದ್ದರಾಮಯ್ಯ ಮತ್ತು ಇತರ ಸಚಿವರು ಪಾಲ್ಗೊಂಡಿದ್ದು ಆ ಸಂದರ್ಭದಲ್ಲಿ ಜಲ್ಲೆಯ ರೈತರು ತಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗೆ ಒಂದು ಮನವಿ ಪತ್ರ ಸಲ್ಲಿಸಿದ್ದಾರೆ. ಇದರ ಜೊತೆಗೆ ಬೇರೆ ಮನವಿಗಳನ್ನು ಸಿಎಂಗೆ ಸಲ್ಲಿಸಲಾಗಿದ್ದು ಆದರೆ ಮರುದಿನ ಬೆಳಗ್ಗೆ ಆ ಪತ್ರಗಳೆಲ್ಲ ಕಸದ ಬುಟ್ಟಿಗಳಲ್ಲಿ ಪತ್ತೆಯಾಗಿವೆ.
ಮುಖ್ಯಮಂತ್ರಿಯ ಈ ಉಡಾಫೆ ಧೋರಣೆ ಮತ್ತು ಹೊಣೆಗೇಡಿ ವರ್ತನೆ ರೈತರನ್ನು ಕೆರಳಿಸಿದ್ದು ಸಿದ್ದರಾಮಯ್ಯ ರೈತರಿಗೆ ಕ್ಷಮೆ ಕೇಳದಿದ್ದರೆ ಅವರನ್ನು ಯಾವತ್ತೂ ಚಾಮರಾಜನಗರಕ್ಕೆ ಬರಲು ಬಿಡಲ್ಲ ಮತ್ತು ಬಂದರೂ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮುಖ್ಯಮಂತ್ರಿಯವರಿಗೆ ಹತ್ತಿದ ಏಣಿಯನ್ನು ಒದೆಯುಷ್ಟು ಮದವೇರಿದೆ, ತಮ್ಮ ಸಂಕಷ್ಟಗಳ ಪರಿಹಾರಿ ಕೋರಿ ಜನ ಮನವಿ ಪತ್ರ ಸಲ್ಲಿಸಿದರೆ ಅವುಗಳನ್ನು ಕಸದ ಬುಟ್ಟಿಗೆ ಎಸೆಯುವ ದಾರ್ಷ್ಟ್ಯತೆ ಪ್ರದರ್ಶಿಸಿದ್ದಾರೆ. ಅಧಿಕಾರದ ಮದ ಸಿದ್ದರಾಮಯ್ಯನವರ ರಾಜಕೀಯ ಬದುಕಿಗೆ ಇತಿಶ್ರೀ ಹಾಡಲಿದೆ ಎಂದು ಹೇಳಿದ್ದಾರೆ.





