
ಬೆಂಗಳೂರು: ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರ ಜೊತೆ ಮಾತನಾಡಿ ಮದ್ದೂರು ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಕಿಡಿಗೇಡಿಗಳ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21 ಮಂದಿಯನ್ನು ಬಂಧಿಸಿದ್ದು ಈ ಪ್ರಕರಣದಲ್ಲಿ ಯಾವುದೇ ಜಾತಿ, ಧರ್ಮಗಳ ಪರಿಗಣಿಸದೆ ತಪ್ಪು ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಮದ್ದೂರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾದಯಾತ್ರೆ ಕೈಗೊಂಡಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿ ಸಮಾಜದಲ್ಲಿ ಶಾಂತಿ ಕದಡುವುದೇ ಅವರ ಉದ್ದೇಶವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಾಮರಾಜನಗರದ ಆರ್ ಎಸ್ಎಸ್ ಸಂಘಟನೆಯವರು ಪಾಲ್ಗೊಂಡು ಶಾಂತಿ ಕದಡುವ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ‘ಚಾಮುಂಡಿ ಬೆಟ್ಟ ಚಲೋ’ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಹೇಳಿದರು.



















