
ಇಂಫಾಲ್: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಮೈಥಿ ಸಮುದಾಯದ ನಾಯಕರನ್ನು ಬಂಧಿಸಿದ ಬಳಿಕ ಅನೇಕ ಪ್ರದೇಶಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿದೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ರಾಜ್ಯದ 5 ಜಿಲ್ಲೆಗಳಲ್ಲಿ ಶನಿವಾರ ರಾತ್ರಿ 11.45 ರಿಂದ ಐದು ದಿನಗಳವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ವಿಷ್ಣುಪುರ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು 5 ದಿನಗಳವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು ಜೊತೆಗೆ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರುವುದನ್ನು ಸಹ ನಿಷೇಧಿಸಲಾಗಿದೆ.
ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 258 ಜನರು ಪ್ರಾಣ ಕಳೆದುಕೊಂಡಿದ್ದು 5,600 ಕ್ಕೂ ಹೆಚ್ಚು ಸರ್ಕಾರಿ ಶಸ್ತ್ರಾಸ್ತ್ರಗಳು ಮತ್ತು 6.5 ಲಕ್ಷ ಸುತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಸಾವಿರಾರು ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.





