
ಕಳೆದ ವರ್ಷ ಸಿಯಾಚಿನ್‌ನಲ್ಲಿ ಸೇನಾ ಬಂಕರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡ ಹುತಾತ್ಮ ಯೋಧ ಅನ್ಶುಮನ್ ಸಿಂಗ್ ಅವರಿಗೆ ಇತ್ತೀಚೆಗೆ ಅವರ ಜೀವಮಾನದ ಶ್ರೇಷ್ಠ ತ್ಯಾಗಕ್ಕಾಗಿ ಮರಣೋತ್ತರವಾಗಿ ಕೀರ್ತಿಚಕ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಅನ್ಶುಮನ್ ಅವರ ಪತ್ನಿ ಸ್ಮೃತಿ ಅವರಿಗೆ ಪ್ರದಾನ ಮಾಡಿದ್ದರು. ಇದೀಗ ಅವರ ಪೋಷಕರು ಯೋಧನ ಸಾವಿನ ನಂತರ ಸಿಗುವ ಪರಿಹಾರದ ವಾರಸುದಾರರ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ ಯೋಧ ವಿವಾಹಿತರಾಗಿದ್ದರೆ, ಅವರು ಕರ್ತವ್ಯದ ವೇಳೆ ಮಡಿದಿದ್ದರೆ ಅವರ ಪತ್ನಿಗೆ ಸಂಪೂರ್ಣ ಪರಿಹಾರದ ಹಣ ಸೇರುವುದು.
ಇದೀಗ ಅನ್ಶುಮನ್ ಸಿಂಗ್ ಅವರ ಪೋಷಕರಾದ ರವಿ ಪ್ರತಾಪ್ ಸಿಂಗ್ ಹಾಗೂ ಮಂಜು ಸಿಂಗ್, ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಸೊಸೆ ಕುಟುಂಬವನ್ನು ತೊರೆದು ಹೋಗಿದ್ದಾರೆ. ಈಗ ನಮ್ಮ ಮಗನ ನಿಧನದ ನಂತರ ಸಿಗುವ ಎಲ್ಲ ಸವಲತ್ತುಗಳಿಗೆ ಅವರು ಮಾತ್ರ ಅರ್ಹರಾಗಿದ್ದಾರೆ. ನಮಗೆ ಗೋಡೆಯಲ್ಲಿ ನೇತು ಹಾಕಿರುವ ಮಗನ ಫೋಟೋ ಮಾತ್ರ ಈಗ ಆಸರೆಯಾಗಿದೆ ಎಂದು ಹೇಳಿದ್ದಾರೆ.
ಸೇನೆಯ ವಾರಸುದಾರಿಕೆಯ ಮಾನದಂಡ ಸರಿಯಾಗಿಲ್ಲ, ಅನ್ಶುಮನ್ ಸಿಂಗ್ ಅವರ ಪತ್ನಿ ನಮ್ಮೊಂದಿಗೆ ವಾಸ ಮಾಡುತ್ತಿಲ್ಲ, ಮದುವೆಯಾಗಿ ಕೇವಲ 5 ತಿಂಗಳಾಗಿತ್ತಷ್ಟೇ, ಹೀಗಾಗಿ ಮಕ್ಕಳು ಕೂಡ ಆಗಿರಲಿಲ್ಲ, ಹೀಗಾಗಿ ನಮಗೀಗ ಗೋಡೆಯಲ್ಲಿ ಹೂವಿನ ಹಾರದೊಂದಿಗೆ ನೇತು ಹಾಕಿದ ಮಗನ ಫೋಟೋ ಮಾತ್ರ ಉಳಿದಿದೆ. ಹೀಗಾಗಿ ನಾವು ಎನ್‌ಒಕೆಗೆ ಸಂಬಂಧಿಸಿದ ಮಾನದಂಡವನ್ನು ಪರಿಶೀಲಿಸಬೇಕು ಎಂದು ಬಯಸುತ್ತೇವೆ. ಹುತಾತ್ಮನ ಯೋಧನ ಪತ್ನಿ ಕುಟುಂಬದಲ್ಲಿಯೇ ಉಳಿಯಬೇಕೆ ಹಾಗೂ ಯಾರು ಹೆಚ್ಚು ಆತನ ಮೇಲೆ ಅವಲಂಬಿತರಾಗಿದ್ದಾರೆ ಎಂಬುದನ್ನು ನಿರ್ಧರಿಸಬೇಕು ಎಂದು ಅನ್ಶುಮನ್ ಅವರ ತಂದೆ ಹೇಳಿದ್ದಾರೆ.
ಕ್ಯಾಪ್ಟನ್ ಅನ್ಶುಮನ್ ಸಿಂಗ್ ಅವರು ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು. 2023 ರ ಜುಲೈ 19 ರಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಾರದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಜತೆಗಾರರನ್ನು ರಕ್ಷಿಸಲು ಹೋಗಿದ್ದ ಅವರು ಮೂರರಿಂದ 4 ಜನರ ರಕ್ಷಣೆಯನ್ನು ಮಾಡಿದ್ದರು. ಆದರೆ ಅಷ್ಟರಲ್ಲಿ ಬೆಂಕಿ ಶೀಘ್ರವಾಗಿ ಹಬ್ಬಿ ಅನ್ಶುಮನ್ ಅವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಅವರು ಸೇರಿದಂತೆ ಗಾಯಾಳು ಯೋಧರನ್ನು ಕೂಡಲೇ ಏರ್‌ಲಿಫ್ಟ್ ಮಾಡಲಾಯಿತಾದರು ಉಳಿಸಿಕೊಳ್ಳಲಾಗಿರಲಿಲ್ಲ.





