ಯುಗಾದಿ ವಿಶೇಷ ಲೇಖನ
ಪ್ರಜ್ವಲಾ ಶೆಣೈ, ಕಾರ್ಕಳ

“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು” ಎಂಬಂತೆ ಚೈತ್ರ ಮಾಸ ಆರಂಭವಾಗುತ್ತಿದ್ದಂತೆ ಪ್ರಕೃತಿಯೇ ಮೈ ತೆರೆದು ನವ ಚೈತನ್ಯ,ನವ ಉಲ್ಲಾಸಕ್ಕೆ ಸಾಕ್ಷಿಯಾಗುವುದು. ಹೊಸ ಆಸೆ, ಹೊಸ ಕನಸು, ಹೊಸ ಭರವಸೆ ಚಿಗುರುವ ಪ್ರತಿ ದಿನವೂ ಯುಗಾದಿಯೇ. ಚೈತ್ರ ಮಾಸದ ಮೊದಲ ದಿನ ಆಚರಿಸುವ ಯುಗಾದಿ ಹಳೆಯದೆಲ್ಲವ ಕಳೆದು ಹೊಸತನವನ್ನು ಸಂಭ್ರಮದಿಂದ ಸ್ವಾಗತಿಸುವ ದಿನ. ತನ್ನೆಲ್ಲಾ ಎಲೆಗಳನ್ನು ಉದುರಿಸಿ ಬೋಳಾದ ಮರಕ್ಕೆ ಮತ್ತೆ ಚಿಗುರೊಡೆದು ಹಸಿರಾಗಿ ಕಂಗೊಳಿಸಲು ಪ್ರಕೃತಿಯೇ ನಳ ನಳಿಸಿ ಶೃಂಗಾರಗೊಳ್ಳುವ ಸಮಯ. ಶಿಶಿರನ ಚುಮುಚುಮು ಚಳಿಗೆ ಮುದುಡಿದ ಗಿಡಮರಗಳ ಎಲೆಗಳು ಬರಿದಾಗಿ ನಿಂತಾಗ ಚೈತ್ರದ ಆಗಮನ ಆಹ್ಲಾದ ಉಂಟುಮಾಡುವುದು.ಪ್ರಕೃತಿಯ ಸೊಬಗಿಗೆ ಸರಿಸಾಟಿ ಯಾವುದೂ ಇಲ್ಲ. ಚೈತ್ರ ಮಾಸದ ಮೊದಲ ದಿನ ಸೂರ್ಯೋದಯವಾಗುತ್ತಿದ್ದಂತೆ ರವಿಯ ಮೊದಲ ಕಿರಣ ಇಳೆಗೆ ಸೋಕುವುದೇ ಚೆಂದ. ನಿಧಾನವಾಗಿ ಆ ಬೆಳಕು ಬಾನಪಥದಲ್ಲಿ ಸಂಚರಿಸಿ ಹೊಸ ಸಂವತ್ಸರಕ್ಕೆ ಸ್ವಾಗತವನ್ನು ಕೋರುವುದು.
ಯುಗಾದಿಯ ಆಚರಣೆ
ನವ ಸಂವತ್ಸರವನ್ನು ಸ್ವಾಗತಿಸಲು ವಾರದ ಮೊದಲೇ ತಯಾರಿ ನಡೆಯುವುದು. ಯುಗಾದಿ ಬಂತೆಂದರೆ ಹೂವು, ಹಣ್ಣು, ಹೊಸಬಟ್ಟೆ ಖರೀದಿಯ ಕೆಲಸ ಭರದಿಂದ ಸಾಗುವುದು. ಯುಗಾದಿಯ ದಿನ ಮನೆ ಮಂದಿಯೆಲ್ಲ ಅಭ್ಯಂಗ ಸ್ನಾನ ಮಾಡಿ, ಬಾಗಿಲನ್ನು ಮಾವಿನ ಎಲೆ,ಹೂವಿನ ತೋರಣದಿಂದ ಅಲಂಕರಿಸಿ ಮನೆಯ ಮುಂದೆ ಸಗಣಿ ಸಾರಿಸಿ ರಂಗೋಲಿಯನ್ನು ಇಟ್ಟು ಸಂಭ್ರಮಿಸಿದಾಗ, ಅದು ಹಬ್ಬಕ್ಕೆ ವಿಶೇಷವಾದ ಮೆರುಗು ನೀಡುವುದು.
ವಿಜಯದ ಸಂಕೇತವಾದ ಬ್ರಹ್ಮಧ್ವಜ
ಯುಗಾದಿಯಂದು ಬಿದಿರಿನ ದೊಡ್ಡ ಕೋಲಿಗೆ ಹಸಿರು ಅಥವಾ ಹಳದಿ ಬಣ್ಣದ ರೇಷ್ಮೆ ಬಟ್ಟೆಯನ್ನು ಕಟ್ಟಿ ಬೇವಿನ ಚಿಗುರು,ಸಕ್ಕರೆಯ ಗಂಟು, ಮಾವಿನ ಟೊಂಗೆ, ಕೆಂಪು ಹೂಗಳಿಂದ ಕಟ್ಟಿದ ಹಾರದಿಂದ ಬೆಳ್ಳಿಯ ಅಥವಾ ತಾಮ್ರದ ಕಳಸವನ್ನು ಅಲಂಕರಿಸಿ ಧ್ವಜವನ್ನು ಕಟ್ಟುವ ಸಂಪ್ರದಾಯವಿದೆ.ಇದಕ್ಕೆ ಬ್ರಹ್ಮ ಧ್ವಜ ಎಂದು ಕರೆಯುವರು. ಹಿಂದೂ ಪುರಾಣದ ಪ್ರಕಾರ ಬ್ರಹ್ಮದೇವರು ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿ ಆರಂಭಿಸಿದನು ಎನ್ನಲಾಗಿದೆ. ಹೀಗಾಗಿ ಯುಗಾದಿಯಂದು ಕಟ್ಟುವ ಧ್ವಜಕ್ಕೆ ಬ್ರಹ್ಮಧ್ವಜ ಎನ್ನುವರು. ವಿಜಯದ ಹಾಗು ಆನಂದದ ಪ್ರತೀಕವಾದ ಈ ಧ್ವಜವನ್ನು ಪ್ರತಿ ಮನೆಯಲ್ಲಿ ಏರಿಸುವುದು ಒಂದು ಸಂಪ್ರದಾಯ. ಹೊಸ್ತಿಲಿನ ಬಳಿ ಅಥವಾ ಮನೆಯ ಮುಖ್ಯದ್ವಾರದ ಬಳಿ ಈ ಧ್ವಜವನ್ನು ಸೂರ್ಯೋದಯದ ಬಳಿಕ ಏರಿಸಿ ನಂತರ ಬೆಲ್ಲದ ನೈವೇದ್ಯವನ್ನು ನೀಡಿ ಸೂರ್ಯಾಸ್ತದ ಬಳಿಕ ಧ್ವಜವನ್ನು ಕೆಳಗಿಳಿಸುವುದು ರೂಢಿಯಲ್ಲಿದೆ.
ಋತು ಪರಿವರ್ತನೆಗೆ ಸಕಾಲ ಯುಗಾದಿ
ಮನೆಯ ಮುಂದಿನ ಮಾವಿನ ಮರದಲ್ಲಿ ಹೂವೆಲ್ಲ ಚಿಗುರಿ, ಕಾಯಾಗಿ ತನ್ನ ಸುತ್ತಲೂ ಸುಗಂಧವನ್ನು ಪಸರಿಸುತ್ತಾ ಬಲಿತು ಹಣ್ಣಾಗಲು ತನ್ನೊಳಗೆ ತಾನೆ ಮಾಡಿಕೊಂಡಿರುವ ಮಾರ್ಪಾಡು ಸುಂದರ ನಾಳೆಗಳಿಗೆ ಮುನ್ನುಡಿಯಾಗುವುದು. ಕ್ಯಾಲೆಂಡರ್ ನ ದಿನಾಂಕವನ್ನು ನೋಡಿ ಆಚರಿಸುವ ಹಬ್ಬಗಳಿಗಿಂತ ಯುಗಾದಿ ಭಿನ್ನ.ಪ್ರಕೃತಿಯಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ,ಅದರ ಸೌಂದರ್ಯವನ್ನು ಅನುಭವಿಸುತ್ತಾ ಆಚರಿಸುವುದು ಈ ಹಬ್ಬದ ವಿಶೇಷ. ಬಿರು ಬಿಸಿಲಿನ ನಡುವೆಯೂ ನಮ್ಮ ಸುತ್ತಲಿನ ಮಾವಿನ ಮರದಲ್ಲಿ ಹೂವು ಬಿಟ್ಟಿರುವುದು, ಗಿಡಗಳು ಚಿಗುರಿ ಹೂ ಅರಳಿರುವುದನ್ನು ಕಂಡಾಗ ಇದೆಂತಹ ಪ್ರಕೃತಿಯ ಬೆರಗು ಎಂದು ಅಚ್ಚರಿಯೂ ಆಗುವುದು.ಇದೆಲ್ಲಾ ಹೇಗೆ ಸಾಧ್ಯ ? ಎಂದು ನಮ್ಮನ್ನು ನಾವೇ ಪ್ರಶ್ನಿಸುವಂತೆ ಆಗುವುದು.
- ಸಿಹಿ ಕಹಿಯ ದ್ಯೋತಕ ಯುಗಾದಿ*
ಯುಗಾದಿಯಂದು ಪೂಜಾ ವಿಧಿ ವಿಧಾನಗಳ ಬಳಿಕ ಪಂಚಾಂಗ ಶ್ರವಣವು ಎಲ್ಲೆಡೆಯೂ ನಡೆಯುವುದು. ಹಿರಿಯರಿಗೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡ ನಂತರ ಬೇವುಬೆಲ್ಲವನ್ನು ಹಂಚುವ ಕ್ರಮವಿದೆ. ಜೀವನದಲ್ಲಿ ಸಿಹಿ, ಕಹಿ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ನೀಡುವ ಸಲುವಾಗಿ ಬೇವು ಬೆಲ್ಲ ಎರಡನ್ನು ಹಂಚಲಾಗುವುದು. ಕಷ್ಟ, ಸುಖ ,ನೋವು ನಲಿವುಗಳು ಹಗಲು ರಾತ್ರಿಗಳಂತೆ ಒಂದರ ನಂತರ ಇನ್ನೊಂದು ಬಂದೇ ಬರುವುದು. ಹಬ್ಬವೆಂದ ಮೇಲೆ ಸಿಹಿ ಇಲ್ಲದೆ ಅದು ಅಪೂರ್ಣ.ಈ ದಿನದಂದು ವಿಶೇಷವಾಗಿ ಸಿಹಿ ಅಡುಗೆ ತಯಾರಿಸಿ ಹಿರಿಯ ಕಿರಿಯರೆಲ್ಲರೂ ಜೊತೆಗೂಡಿ ಮೃಷ್ಟಾನ್ನ ಭೋಜನವನ್ನು ಸವಿಯುವರು. ಅದರಲ್ಲೂ ಯುಗಾದಿಗೆ ಕಾಯಿ ಹೋಳಿಗೆ ಅಥವಾ ಬೇಳೆ ಒಬ್ಬಟ್ಟು ಮಾಡುವ ಪದ್ಧತಿ. ಇದರೊಂದಿಗೆ ವಿಧ ವಿಧವಾದ ಭಕ್ಷ್ಯಗಳು ಬಾಯಿ ತಣಿಸುವುದು.
ಚಿಗುರುವ ಮುನ್ನ ಬಾಡದಿರಲಿ ಕನಸು
ಹಿಂದೆಲ್ಲಾ ಮನೆಯ ಮುಂದೆ ಮಾವು ಬೇವಿನ ಮರವಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ,ಅದರಲ್ಲೂ ನಗರ ಪ್ರದೇಶಗಳಲ್ಲಿ ಮಾವು ಬೇವಿನ ಮರಗಳೇ ಕಾಣ ಸಿಗದು. ಹೀಗಾಗಿ ಮಾವು, ಬೇವಿನ ಮಾರಾಟ ಎಗ್ಗಿಲ್ಲದೇ ಸಾಗುತ್ತದೆ.ಹಬ್ಬವನ್ನು ಹಿಗ್ಗಿನಿಂದ ಆಚರಿಸುವ, ಸಂಭ್ರಮಿಸುವ ನೆಪದಲ್ಲಿ ಮಾವು ಬೇವಿನ ಮರಗಳು ತನ್ನ ರೆಂಬೆ ಕೊಂಬೆಗಳನ್ನು ಕಳಚಿಕೊಂಡು ಬೋಳಾಗಿ ನಿಂತಿರುವುದು ಮಾತ್ರ ಕಲ್ಲು ಹೃದಯವನ್ನು ಕರಗಿಸುವುದು. ಹಕ್ಕಿಗಳ ಬೀಡಾಗಬೇಕಿದ್ದ ಕೊಂಬೆಗಳು, ಗೂಡು ಕಟ್ಟುವ ಮೊದಲೇ ಅನಾಥವಾಗುವುದು. ವರವಾಗಬೇಕಾಗಿದ್ದ ಯುಗಾದಿ,ಈ ಮರಗಳಿಗೆ ಶಾಪವಾಗಿ ಕಾಡುತ್ತಿರುವುದಂತೂ ಸತ್ಯ.ಸಂಭ್ರಮದ ಸೋಗಿನಲ್ಲಿ ಚಿಗುರಬೇಕಾಗಿದ್ದ ಕನಸು ಬಾಡದಿರಲಿ.
ಅರ್ಥ ಕಳೆದುಕೊಳ್ಳದಿರಲಿ ಯುಗಾದಿ
ಹಬ್ಬದ ನೈಜ ಆಚರಣೆಯ ಮಹತ್ವ ಕಾಲ ಕಳೆದಂತೆಲ್ಲ ಅರ್ಥ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಹಬ್ಬವೆಂದರೆ ಬಗೆ ಬಗೆಯ ಸೀರೆ ಬಟ್ಟೆ ಖರೀದಿ, ರಿಯಾಯಿತಿ ಮೇಳಗಳು, ಝಗಮಗಿಸುವ ಕೃತಕ ಬೆಳಕಿನ ಅಲಂಕಾರ, ಬಣ್ಣ ಬಣ್ಣದ ಬೆಳಕಿನ ಚಿತ್ತಾರ, ಚಂದದ ಬಟ್ಟೆ ತೊಟ್ಟು ತೆಗೆಯುವ ಭಾವಚಿತ್ರಗಳು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಎದುರು ನೋಡುವ ಕಾಮೆಂಟ್ ಲೈಕ್ ಗಳಿಗಷ್ಟೇ ಸೀಮಿತವಾಗುತ್ತಿದೆ ಎಂದು ಅನ್ನಿಸುವುದು ಸುಳ್ಳಲ್ಲ. ನಮ್ಮ ಪೂರ್ವಿಕರು ಆಚರಿಸಿಕೊಂಡು ಬಂದಿರುವ ಹಬ್ಬದ ಆಚರಣೆ ಆಧುನಿಕತೆಯ ಸೋಗಿನಲ್ಲಿ ಮರೆಯಾಗುತ್ತಿದೆ.ಹಿಂದೆ ದೀಪಾವಳಿ,ಯುಗಾದಿ ಇತ್ಯಾದಿ ಹಬ್ಬ ಬಂದಾಗ ಮಾತ್ರ ಹೊಸ ಬಟ್ಟೆ ಖರೀದಿ ಯಾಗುತ್ತಿತ್ತು.ಆದರೆ ಈಗ ಮನಸ್ಸಿಗೆ ತೋಚಿದಾಗೆಲ್ಲಾ ಹೊಸ ಬಟ್ಟೆ ಖರೀದಿಸುವ ಸಂಸ್ಕೃತಿ ಆರಂಭವಾಗಿದೆ. ಹಿಂದೆ ಹಬ್ಬವೆಂದರೆ ಮನೆಯ ಹೆಂಗಳೆಯರೆಲ್ಲಾ ಜೊತೆಗೂಡಿ ಹಬ್ಬದಡುಗೆ ತಯಾರಿಸುವುದೇ ಒಂದು ಸಂಭ್ರಮವಾಗಿತ್ತು.ಆದರೆ ಈಗ ಹಬ್ಬದ ಅಡುಗೆಯನ್ನೂ ಹೋಟೆಲ್ ಗಳಿಂದ ತರಿಸುವ ಸಂಪ್ರದಾಯ ಹೆಚ್ಚಾಗಿದೆ.ಇದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದು.ಹಬ್ಬದ ಮಹತ್ವ, ವಿಶೇಷತೆ ಅರಿತು ಅದರಂತೆ ಆಚರಿಸಿದರೆ ನಮ್ಮ ಮುಂದಿನ ಪೀಳಿಗೆಗೂ ಈ ಸಂಸ್ಕೃತಿ ವರ್ಗಾವಣೆಯಾಗುವುದು.
ಬಾಂಧವ್ಯದ ಬೆಸುಗೆ ಯುಗಾದಿ
ಯುಗಾದಿಯ ಆಚರಣೆ ವಿಧಿ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿದ್ದರೂ ಹಬ್ಬದ ಆಶಯ ಒಂದೇ ಆಗಿದೆ. ಯುಗಾದಿ ಬದುಕಿಗೆ ಸಂದೇಶ ಸಾರುವ ಹಬ್ಬ. ಹಿರಿಯರಲ್ಲಿ ಗೌರವ, ಕಿರಿಯರೊಂದಿಗೆ ಪ್ರೀತಿ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವುದೇ ಈ ಹಬ್ಬದ ಮೂಲ ಆಶಯ. ಕೂಡು ಕುಟುಂಬದ ಸವಿ ಇಂದು ಮರೆಯಾಗಿದ್ದರೂ ಹಬ್ಬದ ನೆಪದಲ್ಲಿ ಕುಟುಂಬದವರೆಲ್ಲಾ ಒಂದೆಡೆ ಸೇರುವುದರಿಂದ ಸಂಬಂಧಗಳ ಬೆಸುಗೆ ಇನ್ನಷ್ಟು ಗಟ್ಟಿಯಾಗುವುದು.ಈ ಬಾರಿಯ ವೈಶಿಷ್ಟ್ಯತೆ ಎಂದರೆ ಈ ವರ್ಷ ಹಿಂದುಗಳ ಪಾಲಿಗೆ ಹೊಸ ವರ್ಷವಾದ ಯುಗಾದಿ ಬಂದರೆ, ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಹಬ್ಬವು ಜೊತೆಯಾಗಿ ಬಂದಿದೆ.ಎರಡೂ ಧಾರ್ಮಿಕ ಹಬ್ಬಗಳು ಜೊತೆಯಾಗಿ ಬಂದಿದ್ದು ಎರಡೂ ಧರ್ಮಗಳೂ ಸಾಮರಸ್ಯದಿಂದ ಹಬ್ಬ ಆಚರಿಸುತ್ತಿದೆ. ಸಿಹಿಗೆ ಹಿಗ್ಗದೆ, ಕಹಿಗೆ ಕುಗ್ಗದೆ, ನೋವು ನಲಿವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯೋಣ.ಈ ಬಾರಿಯ ಯುಗಾದಿಯ ವಿಶ್ವಾವಸು ನಾಮಸಂವತ್ಸರ ಸರ್ವರಿಗೂ ಶುಭವನ್ನು ಹೊತ್ತು ತರಲಿ.




















