
ಕಾರ್ಕಳ : ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದತ್ತಿನಿಧಿ ಬಹುಮಾನ ವಿತರಣಾ ಕಾರ್ಯಕ್ರಮವು ನೆರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ತಾಂತ್ರಿಕ ಡಿ.ಸಿ.ಎಫ್. ಆಗಿರುವ ಸತೀಶ್ ಎನ್.ಮಾತನಾಡಿ ಪದವಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಯ್ಕೆ ಯಾವುದೇ ಆದರೂ ಆ ಆಯ್ಕೆಯಲ್ಲಿ ವಿಶ್ವಾಸವಿರಿಸಿಕೊಂಡು ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ನನ್ನ ಬದುಕಿಗೆ ಭುವನೇಂದ್ರ ಕಾಲೇಜು,ಭದ್ರ ಬುನಾದಿಯನ್ನು ಹಾಕಿ ಕೊಟ್ಟಿದೆ. ಆಗ ಕಲಿತ ಶೃದ್ಧೆ ಈಗ ಬಹುಮಾನ ವಿತರಣೆ ಮಾಡುವಾಗ ನೆನಪಿಗೆ ಬರುತ್ತಿದೆ. ಬಹುಮಾನ ಪಡೆದ ಎಲ್ಲ ವಿದ್ಯಾರ್ಥಿಗಳನ್ನೂ ಮನಪೂರ್ವಕವಾಗಿ ಗೌರವಿಸುತ್ತಿದ್ದೇನೆ ಎಂದರು. ಮರಗಿಡಗಳ ಕುರಿತ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳು ಈಗಿನಿಂದಲೇ ಅರಿಯಬೇಕಾದ ಅಗತ್ಯವಿದೆ. ಯಾಕೆಂದರೆ ನಾವು ಉಳಿಯುವುದು ಪರಿಸರದಿಂದಲೇ ಆಗಿರುವುದರಿಂದ ಅದನ್ನು ಉಳಿಸಬೇಕಾದ ಅಗತ್ಯತೆ ಹೆಚ್ಚಿದೆ. ಉದ್ಯೋಗ ಸಿಕ್ಕಿದೆ ಅಂತ ಕರ್ತವ್ಯ ನಿರ್ವಹಿಸುವುದಕ್ಕಿಂತಲೂ ಪ್ರಾಕೃತಿಕ ಸಂಪತ್ತನ್ನು ಕಲಿಕೆಯ ಜೊತೆಗೆ ಉಳಿಸುವ ಗುರುತರ ಹೊಣೆ ನಿಮ್ಮ ಮೇಲಿದೆ. ನನ್ನ ವಿದ್ಯಾರ್ಥಿ ದಿನಗಳನ್ನು ಇಲ್ಲಿಯೇ ಕಳೆದುದರಿಂದ ಇವತ್ತು ನನ್ನ ಮನೆಗೆ ಬಂದ ಅನುಭವವಾಯ್ತು ಎನ್ನುತ್ತಾ ಕಾಲೇಜಿನ ತಮ್ಮ ವಿದ್ಯಾರ್ಥಿ ದೆಸೆಯ ದಿನಗಳನ್ನು ನೆನಪಿಸಿಕೊಂಡರು.
ಮುಖ್ಯ ಅತಿಥಿಯಾಗಿ ಸಭೆಯಲ್ಲಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಎ.ಶಿವಾನಂದ ಪೈ ಇವರು ಮಾತನಾಡುತ್ತಾ ಯಾವುದೇ ಕಾರ್ಯ ಸಫಲತೆಯನ್ನು ಗಳಿಸಬೇಕಾದರೆ ಅದರ ಹಿಂದೆ ಕಠಿಣ ಪ್ರಯತ್ನ, ಛಲ ಇರಲೇಬೇಕು. ಅಂತಹ ಹಟದ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ಇವತ್ತು ಬಹುಮಾನ ಪಡೆದುಕೊಂಡರು. ಬಹುಮಾನ ಪಡೆಯದೆ ಇರುವವರು ತಮ್ಮ ಪ್ರಯತ್ನವನ್ನು ಮತ್ತಷ್ಟು ಮುಂದುವರೆಸಬೇಕೇ ಹೊರತು ನನ್ನಿಂದ ಅಸಾಧ್ಯವೆಂದು ಕುಗ್ಗಿಹೋಗಬಾರದು. ಎಲ್ಲ ವಿದ್ಯಾರ್ಥಿಗಳೂ ನಾನು ಹೆಚ್ಚು ನೀನು ಹೆಚ್ಚು ಎಂದೆಣಿಸದೆ ಸಮಾನವಾಗಿ ಭುವನೇಂದ್ರ ಸಂಸ್ಥೆಯ ಜೊತೆ ಸಾಗಬೇಕು ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ. ಇವರು ಯಶಸ್ಸು ಎನ್ನುವುದು ದಿನಬೆಳಗಾದರೆ ಬರುವುದಿಲ್ಲ. ಕಠಿಣವಾದ ಪ್ರಯತ್ನದಲ್ಲಿ ಸೋಲಾದರೂ ಮತ್ತೆ ಮತ್ತೆ ಪ್ರಯತ್ನಿಸಿದಾಗ ಗೆಲುವು ಶತಸಿದ್ಧ. ಎಲ್ಲ ಸಾಧಕರ ಹಿಂದೆ ಅವಿರತ ಪ್ರಯತ್ನ ಇರುವುದೇ ಅವರ ಗೆಲುವಿಗೆ ಕಾರಣವಾಗಿರುತ್ತದೆ ಎಂದು ಹೇಳಿದರು. ಸಭಾಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಎ ಕೋಟ್ಯಾನ್ ಇವರು ಸಭೆಯನ್ನುದ್ದೇಶಿಸಿ
ಮಾತನಾಡಿದರು.
ವಿದ್ಯಾರ್ಥಿಗಳು ವೇದಿಕೆಯಲ್ಲಿರುವ ಅತಿಥಿಗಳ ವಿದ್ಯಾರ್ಥಿದೆಸೆಯ ಶೃದ್ಧೆಯನ್ನು ಅರಿತುಕೊಂಡು ನಡೆಯಬೇಕಾದ ಅಗತ್ಯವಿದೆ. ಸಮಾಜದಲ್ಲಿ ಮನಸು ಕಟ್ಟುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬೇಕಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಅದನ್ನು ರೂಪಿಸಿಕೊಂಡು ಪರಿಸರವನ್ನು ಉಳಿಸಬೇಕು ಎಂದ ಅತಿಥಿಗಳ ಮಾತಿಗೆ ಮೌಲ್ಯ ಬರುತ್ತದೆ. ಸೋಲು ಗೆಲುವು ಎರಡನ್ನೂ
ಸಮಾನವಾಗಿ ಸ್ವೀಕರಿಸಬೇಕು. ಯಾವ ಸಾಧನೆಯ ಹಿಂದೆ ಏನೇ ಪ್ರಯತ್ನವಿರಲಿ. ಅದೊಂದು ಅನುಭವವಾಗಬೇಕು. ಯಶಸ್ಸು ಕಲಿಸುವ ಪಾಠಕ್ಕಿಂತ ಸೋಲು ಕಲಿಸುವ ಪಾಠವೇ ಬದುಕನ್ನು ಅರ್ಥ ಮಾಡಿಸುವಂಥದ್ದು ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ.ಎಸ್., ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾಗಿರುವ ಡಾ.ಈಶ್ವರ ಭಟ್ ಪಿ., ಸಹ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ನಂದಕಿಶೋರ್ ಕೆ. ಉಪಸ್ಥಿತರಿದ್ದರು.
ಮಹನೀಯ ದಾನಿಗಳು ಕೊಡಮಾಡುವ ಬೇರೆ ಬೇರೆ ದತ್ತಿನಿಧಿಯ ಬಹುಮಾನ ಅಲ್ಲದೆ ಕಲಿಕಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ವಿಜೇತರಾದ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡೆಯಲ್ಲಿ ವಿಜೇತರಾದ ಪದವಿ ಪೂರ್ವ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ವಿತರಿಸಲಾಯಿತು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿದರು. ಅಂತಿಮ ಬಿ.ಕಾಂ.ನ ಅನನ್ಯ ಸ್ವಾಗತಿಸಿದರು. ಪೂರ್ವಿ ವಂದನಾರ್ಪಣೆಗೈದರು.





















































