
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ನಿರಂತರ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು ಶೀಘ್ರದಲ್ಲಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿಕೊಡುವದಾಗಿ ಭರವಸೆ ನೀಡಿದರು.
ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಕೆರೆ ಕಟ್ಟೆ, ಸೇತುವೆ, ರಸ್ತೆ ಹಾಗೂ ಮನೆ ಗೋಡೆಗಳ ಕುಸಿತ ಅಲ್ಲದೆ ರೈತರ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ಸೋಯಾಬೀನ್, ಉದ್ದು, ಹೆಸರು, ಹತ್ತಿ, ತೊಗರಿ, ಕಬ್ಬು ಸೇರಿದಂತೆ ತೋಟಗಾರಿಕೆ ಬೇಳೆಗಳು ನೆಲ ಕಚ್ಚಿರುವುದನ್ನು ಸಚಿವ ಈಶ್ವರ ಖಂಡ್ರೆ ಅವರು ಪರಿಶಿಲನೆ ನಡೆಸಿ ಮಾತನಾಡಿದ ಅವರು ಔರಾದ್ ಮತ್ತು ಕಮಲನಗರ ತಾಲೂಕಿನಲ್ಲಿ ಅತಿ ಹೆಚ್ಚು 300 ಮಿಮೀ ದಾಖಲೆ ಮಳೆಯಾಗಿದೆ. ಈಗಾಗಲೇ ಇರುವ ಕೆರೆಗಳ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿತರಿಗೆ ಸೂಚಿಸಲಾಗಿದೆ. ಮಳೆಯಿಂದ ಸಾಕಷ್ಟು ಹಾನಿಯಾಗಿದೆ ಎನ್ ಡಿಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ಅಡಿಯಲ್ಲಿ ಹಾನಿಯ ವಿಸ್ತೃತವಾದ ಯೋಜನಾ ವರದಿ ಆಧರಿಸಿ ಒಣಭೂಮಿಯ ರೈತರಿಗೆ 8500 ರು. ಹಾಗೂ ನೀರಾವರಿ ಜಮಿನಿಗೆ 18000 ರು. ಪರಿಹಾರ ಧನ ನೀಡಲಾಗುವುದು ಎಂದು ಹೇಳಿದರು.
ಹಾನಿಯ ವಿವರಗಳನ್ನು ಸರ್ಕಾರದ ಗಮನಕ್ಕೆ ತಂದು ತ್ವರಿತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ರೈತರಿಗೆ ವಿಮಾ ಕಂಪನಿಗಳ ಮೂಲಕ ಬೆಳೆ ವಿಮೆ ದೊರಕುವಂತೆ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.