ನವದೆಹಲಿ: ಮುಂಗಾರು ಮಳೆಯ ಆರ್ಭಟ ಜೋರಾದ ಹಿನ್ನೆಲೆಯಲ್ಲಿ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣ ಮೇಲ್ಛಾವಣಿ ಕುಸಿದು ಕ್ಯಾಬ್ ಡ್ರೈವರ್ ಓರ್ವ ಮೃತಪಟ್ಟಿದ್ದು, 7 ಜನರಿಗೆ ಗಾಯಗಳಾದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಕಚ್ಚಾಟ ಆರಂಭವಾದ ಬೆನ್ನಲ್ಲೇ ಮೂಲಸೌಕರ್ಯ ಕಂಪನಿ ಎಲ್ ಆಂಡ್ ಟಿ ಕುಸಿದ ರಚನೆಯನ್ನು L&T ನಿರ್ಮಿಸಿಲ್ಲ ಅಥವಾ ಅದರ ನಿರ್ವಹಣೆಗೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕುಸಿದು ಬಿದ್ದ ಭಾಗವನ್ನು ಮತ್ತೊಂದು ಕಂಪನಿಯು 2009 ರಲ್ಲಿ ನಿರ್ಮಿಸಿದೆ. ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಕೋರಿಕೆಯ ಮೇರೆಗೆ, L&T 2019 ರಲ್ಲಿ ಟರ್ಮಿನಲ್ 1ರ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಿತು. ಟರ್ಮಿನಲ್ ವಿಸ್ತೃತ ಭಾಗದಿಂದ ಸರಿಸುಮಾರು 110 ಮೀಟರ್ ದೂರದಲ್ಲಿ ಕುಸಿತವು ಸಂಭವಿಸಿದೆ. ಹೊಸದಾಗಿ ನಿರ್ಮಾಣದ ವಿಸ್ತೃತ ಭಾಗದ ಮೇಲೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದೆ.
ನಾಗರಿಕ ವಿಮಾನ ಸಚಿವ ರಾಮ್‌ಮೋಹನ್ ನಾಯ್ಡು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ್ದು ಈ ವೇಳೆ ವೈಜ್ಞಾನಿಕ ಕಾರಣ ಹುಡುಕಲು ಸೂಚಿಸಿದ್ದೇನೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆಗೆ ನಿರ್ದೇಶಿಸಿದ್ದೇನೆ. ಮೃತನ ಕುಟುಂಬಕ್ಕೆ 20 ಲಕ್ಷ ರೂ. ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.