
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ರಾತ್ರಿ ಸುರಿದ ಭಾರೀ ಮಳೆಯಿಂದ ವ್ಯಾಪಕ ತೊಂದರೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ್ದು ಈ ವೇಳೆ ಭಾರೀ ಮಳೆಯಿಂದಾಗಿ ನಗರದಲ್ಲಿ ಸೃಷ್ಟಿಯಾಗಿರುವ ಅನಾಹುತಕ್ಕೆ ಸಿಲುಕಿರುವ ಜನರ ನೆರವಿಗೆ ಕೂಡಲೆ ಧಾವಿಸಬೇಕು, ಜನರ ಸಮಸ್ಯೆಯನ್ನು ನೀಗಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರವಾಹ ಸೃಷ್ಟಿಯಾಗಿರುವ ಬಡಾವಣೆಗಳಲ್ಲಿ ನೀರು ಹೊರಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಸೂಕ್ತ ಚರಂಡಿ, ರಾಜಕಾಲುವೆ ಹೂಳು ತೆಗೆಯಬೇಕು. ಈ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಮುಂಗಾರು ಆರಂಭಕ್ಕೂ ಮುನ್ನ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಹೂಳು ತುಂಬಿದ್ದರಿಂದ ಇದನ್ನು ಸರಿಪಡಿಸುವಂತೆ ಹಲವು ಬಾರಿ ಸೂಚನೆ ನೀಡಲಾಗಿತ್ತಾದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಪ್ರವಾಹ ಸೃಷ್ಟಿಯಾಗಿದೆ. ಅದಕ್ಕಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ. ನಗರದಲ್ಲಿನ 859.90 ಕಿಮೀ ಉದ್ದದ ರಾಜಕಾಲುವೆ ಪೈಕಿ 491 ಕಿಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಕಿಮೀ ಉದ್ದದ ರಾಜಕಾಲುವೆ ತಡೆಗೋಡೆ ನಿರ್ಮಾಣ ಕಾಮಗಾರಿ ಚಾಲ್ತಿಯಲಿದ್ದು, ಉಳಿದ 173 ಕಿಮೀ ಉದ್ದದ ರಾಜಕಾಲುವೆ ದುರಸ್ತಿಗೆ ವಿಶ್ವ ಬ್ಯಾಂಕ್‌ನಿಂದ ಆರ್ಥಿಕ ನೆರವು ಪಡೆಯಲಾಗುತ್ತಿದೆ ಎಂದರು.









