
ರಾಮನಗರ: ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 8 ರಿಂದ 9ನೇ ಸ್ಥಾನಕ್ಕೆ ಇಳಿಯಲಿದೆ ಎಂಬ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ‘ಭವಿಷ್ಯ ನುಡಿಯಲು ಅವರು ಯಾರು? ರಾಜ್ಯದ ಜನ ನಮ್ಮ ಭವಿಷ್ಯ ತೀರ್ಮಾನ ಮಾಡುತ್ತಾರೆ’ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದ್ದಾರೆ.
ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡುತ್ತಿದ್ದಾರೆ. ಸರ್ಕಾರದ ಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಒಂದು ಲಕ್ಷ ಕೋಟಿ ರೂ. ಆದಾಯ ತರಲು ಹೊರಟಿದ್ದಾರೆ. ಬಡವರ ಹೊಟ್ಟೆ ಮೇಲೆ ಹೊಡೆದು ಆದಾಯ ತರಲು ಹೊರಟಿದ್ದಾರೆ. ಜನರಿಗೆ ಒಳ್ಳೆಯದು ಮಾಡಬೇಕೆಂದರೆ ಅವತ್ತಿನ ಎಸ್‌ಆರ್ ವ್ಯಾಲ್ಯೂ ಮೇಲೆ ದರ ನಿಗದಿ ಮಾಡಿ ಎಂದು ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸಂಪೂರ್ಣ ಶೂನ್ಯ. ಶಾಸಕರಿಗೆ ಅನುದಾನ ಕೊಡುತ್ತೇವೆ ಎಂದು ಹೇಳಿ ಒಬ್ಬ ಶಾಸಕನಿಗೆ 10 ಕೋಟಿ ರೂ. ಅನುದಾನವೂ ಸಿಕ್ಕಿಲ್ಲ. ಬಿಜೆಪಿ-ಜೆಡಿಎಸ್ ಬಿಡಿ ಕಾಂಗ್ರೆಸ್ ಶಾಸಕರೇ ಅನುದಾನ ಸಿಕ್ಕಿಲ್ಲ ಅಂತ ಹೇಳ್ತಾರೆ. ಗುತ್ತಿಗೆದಾರರಿಗೂ ಹಣ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದ ಕಾಲಘಟ್ಟದಲ್ಲಿ ಅಭಿವೃದ್ಧಿ ಆಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.



















































