
‘ಬ್ಯಾಚುಲರ್ ಪಾರ್ಟಿ’ ಕಾಪಿರೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಿಲಿ, ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ರಕ್ಷಿತ್ ಶೆಟ್ಟಿ ಸುದೀರ್ಘ ಪತ್ರ ಬರೆದಿದ್ದು ಅದೇನೆಂದರೆ ನಾವು ಈ ಬಹಿರಂಗ ಪತ್ರವನ್ನು ಎಂಆರ್ಟಿ ಮ್ಯೂಸಿಕ್ ಸಂಸ್ಥೆ ನಮ್ಮ ಮೇಲೆ ಎರಡು ಹಾಡಿನ ಹಕ್ಕು ಉಲ್ಲಂಘನೆಯ ಆರೋಪ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿರುತ್ತೇವೆ. ಮೊದಲಿಗೆ ಸ್ಪಷ್ಟಿಕರಿಸಲು, ಚಿತ್ರದಲ್ಲಿ ಬಳಕೆಯಾಗಿರುವ ತುಣುಕುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಕಾರಣ, ಚಿತ್ರದಲ್ಲಿ ಈ ಹಾಡುಗಳು ಯಾವ ಭಾಗದಲ್ಲಿ, ಯಾವ ರೀತಿಯಲ್ಲಿ ಬಳಕೆಯಾಗಿದೆ ಎಂದು. ಅಲ್ಲದೆ, ಬಳಕೆಯ ರೂಪವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂಬುದಾಗಿ ಪತ್ರವನ್ನು ಹಂಚಿಕೊಳ್ಳಲಾಗಿದೆ.
‘ಬ್ಯಾಚುಲರ್ ಪಾರ್ಟಿ’ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೆ ನಾವು ಎಂ ಆರ್ ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೆವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ, ನಮ್ಮ ಬಜೆಟ್ ಅನ್ನು ಮೀರಿತ್ತು. ಎಂಆರ್ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ತಯಾರಿರರಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘನೆಯ ಆರೋಪ ಬಂದಿದ್ದು, ಎಫ್ ಐ ಆರ್ ದಾಖಲಾಗಿದೆ. ಇದು ನಿಜವಾಗಿಯು ಹಾಡಿನ ಹಕ್ಕು ಉಲ್ಲಂಘನೆಯೆ? ಹೌದಾಗಿದ್ದೇ ಆದಲ್ಲಿ, ನಾವು ತೆರಬೇಕಾದ ದಂಡವಾದರೂ ಎಷ್ಟು? ಏಕೆಂದರೆ ಎಂ ಆರ್ ಟಿ ಸಂಸ್ಥೆಯಿಂದ ಕೇಳಲ್ಪಟ್ಟದ್ದು ಬೃಹತ್ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ, ಈ ತರಹದ ಆರೋಪವನ್ನು ಈಗಾಗಲಿ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು! ಇದೊಂದು ಯಕ್ಷ ಪ್ರಶ್ನೆ! ಇದಕ್ಕೆ ಉತ್ತರ ನಾವು ಹುಡುಕ ಬಯಸುತ್ತೇವೆ.
ಹಾಗಾಗಿ, ನ್ಯಾಯ ಮತ್ತು ಪ್ರಭುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಿಲಿ ಎಂದು ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ. ಇದರಿಂದ ಇನ್ನು ಮುಂಬರುವ ದಿನಗಳಲ್ಲಿ, ನಮಗಷ್ಟೇ ಅಲ್ಲ, ಬೇರೆ ಇನ್ಯಾವ ಸಿಸಿಮಾ ಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು, ನಮ್ಮ ಈ ಪ್ರಾಮಾಣಿಕ ಪ್ರಯತ್ನ ಎಂದು ಪರಂವಃ ಸ್ಟುಡಿಯೋಸ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.








