
ಬೆಳ್ತಂಗಡಿ: ನಗರದಲ್ಲಿ ಸೋಮವಾರ ಬೆಳಗ್ಗೆ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತರು ಅಪಹರಣಕ್ಕೆ ಯತ್ನಿಸಿ, ಚೂರಿಯಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ.
ಇಂದು ಬೆಳಗ್ಗೆ ಸುಮಾರು 8.30ರ ವೇಳೆ ಈ ಘಟನೆ ಸಂಭವಿಸಿದ್ದು ನಗರದ ಸುದೇಮುಗೇರು ನಿವಾಸಿಯಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಂತಕಟ್ಟೆಗೆ ಬಸ್ ಹಿಡಿಯಲು ತೆರಳುತ್ತಿದ್ದು, ಈ ವೇಳೆ ನಂಬರ್ ಪ್ಲೇಟ್ಗೆ ಬಟ್ಟೆ ಕಟ್ಟಿದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಸ್ಕೂಟಿಯನ್ನು ಅಡ್ಡಗಟ್ಟಿ ಕಾರಿನೊಳಗೆ ಎಳೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಬಾಲಕಿ ಜೋರಾಗಿ ಕೂಗಿಕೊಂಡು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ತಪ್ಪಿಸಿಕೊಂಡಿದ್ದಾಳೆ. ಅದೇ ಸಮಯದಲ್ಲಿ ಹಿಂದಿನಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು, ಚೂರಿಯಿಂದ ಬಾಲಕಿಯ ಕೈ ಮತ್ತು ಬೆರಳಿಗೆ ಗಾಯಗೊಳಿಸಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ವಿದ್ಯಾರ್ಥಿನಿಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯಿಂದ ಹೇಳಿಕೆ ಪಡೆದು ತನಿಖೆಯನ್ನು ಕೈಗೊಂಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.



















